Advertisement

ಹಳೇ ಮೈಸೂರಲ್ಲಿ ಜೆಡಿಎಸ್‌ ವಿರುದ್ಧ ಕೈ ಮುಖಂಡರ ಸಿಟ್ಟು

01:00 AM Feb 01, 2019 | |

ಬೆಂಗಳೂರು: ಹಳೇ ಮೈಸೂರು ಭಾಗದಲ್ಲಿ ಎಲ್ಲ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಈ ಭಾಗದಲ್ಲಿ ಕಾಂಗ್ರೆಸ್‌ ಸಂಪೂರ್ಣ ಮುಳುಗಿ ಹೋಗುತ್ತದೆ ಎಂದು ಹಳೇ ಮೈಸೂರು ಭಾಗದ ಕಾಂಗ್ರೆಸ್‌ ಮುಖಂಡರು ಪಕ್ಷದ ನಾಯಕರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.

Advertisement

ಗುರುವಾರ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಮೈಸೂರು, ಮಂಡ್ಯ, ಹಾಸನ, ತುಮಕೂರು ಜಿಲ್ಲೆಗಳ ಮುಖಂಡರು ಪಾಲ್ಗೊಂಡು ಜೆಡಿಎಸ್‌ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಜೆಡಿಎಸ್‌ನವರು ಹಳೇ ಮೈಸೂರು ಭಾಗದಲ್ಲಿ ಹೊರಗಡೆ ಮಾತನಾಡುವುದೇ ಬೇರೆ, ಸ್ಥಳೀಯವಾಗಿ ಅವರು ಮಾಡುವುದೇ ಬೇರೆ. ಜಿಲ್ಲಾಡಳಿತವನ್ನು ಸಂಪೂರ್ಣ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.

‘ಜೆಡಿಎಸ್‌ ಪ್ರಾಬಲ್ಯವಿದ್ದಲ್ಲಿ ಅವರು ಲೋಕಸಭಾ ಕ್ಷೇತ್ರಗಳನ್ನು ಕೇಳುತ್ತಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ಇದೆ ಹೊರತು ಬಿಜೆಪಿ ಇಲ್ಲ. ಹೀಗಿರುವಾಗ ಎಷ್ಟು ದಿನ ಕಾಂಗ್ರೆಸ್‌ ಕಾರ್ಯಕರ್ತರು ಜೆಡಿಎಸ್‌ಗೆ ಮತ ಹಾಕುತ್ತಾರೆ. ಪ್ರತಿಯೊಂದು ಕ್ಷೇತ್ರದಲ್ಲಿ ಕಾರ್ಯಕರ್ತರು ಕಾಂಗ್ರೆಸ್‌ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಪಕ್ಷದ ಕಾರ್ಯಕರ್ತರನ್ನು ಉಳಿಸಿಕೊಳ್ಳುವುದು ಕಷ್ಟವಾಗಲಿದೆ. ಈ ಜಿಲ್ಲೆಗಳಲ್ಲಿ ಪಕ್ಷವನ್ನು ಉಳಿಸುವುದು ಹೇಗೆ? ನೀವೇ ಸಲಹೆ ನೀಡಿ,’ ಎಂದು ಪಕ್ಷದ ನಾಯಕರಿಗೆ ಜಿಲ್ಲಾ ಮುಖಂಡರು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಂಡ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕುಮಾರಸ್ವಾಮಿ ಪುತ್ರ ನಿಖೀಲ್‌ ಕುಮಾರ್‌ ಅವರನ್ನು ಕರೆದು ಭತ್ತ ಖರೀದಿ ಕೇಂದ್ರದ ಉದ್ಘಾಟನೆ ಮಾಡಿಸುತ್ತಾರೆ. ನಿಖೀಲ್‌ ಕುಮಾರ್‌ ಯಾರು? ಅವರೇನು ಜನಪ್ರತಿನಿಧಿಯೇ ಎಂದು ಮಂಡ್ಯ ಜಿಲ್ಲಾ ಮುಖಂಡರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ತುಮಕೂರಿನಲ್ಲಿ ಉಪ ಮುಖ್ಯಮಂತ್ರಿ ಪರಮೇಶ್ವರ್‌ ಇದ್ದಾರೆ. ರಾಮನಗರದಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಇದ್ದಾರೆ. ಮೂರು ನಾಲ್ಕು ಜಿಲ್ಲೆಗಳಿಗಾಗಿ ಅವರಿಗೆ ಇಡೀ ರಾಜ್ಯವೇ ಬಿಟ್ಟು ಕೊಡಬೇಕಾ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ವಿಷಕಂಠರಾಗಿ: ಜಿಲ್ಲಾ ನಾಯಕರ ಆಕ್ರೋಶವನ್ನು ಆಲಿಸಿರುವ ಪಕ್ಷದ ನಾಯಕರು ಸಧ್ಯದ ಪರಿಸ್ಥಿತಿ ಹೈ ಕಮಾಂಡ್‌ ಗಮನಕ್ಕೂ ಇದೆ. ಆದರೆ, ರಾಜ್ಯದಲ್ಲಿ ಮೈತ್ರಿ ಮುಂದುವರೆಸಿದರೆ, ರಾಷ್ಟ್ರಮಟ್ಟದಲ್ಲಿ ಬೇರೆ ಸಂದೇಶ ಹೋಗುತ್ತದೆ. ಅದೇ ಕಾರಣಕ್ಕೆ ಎಲ್ಲವನ್ನೂ ನುಂಗಿಕೊಂಡು ವಿಷಕಂಠರಾಗಿ ಎಂದು ನಾಯಕರು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸಲು ಬೇಡಿಕೆ
ದಿ.ಅಂಬರೀಶ್‌ ಅವರ ಪತ್ನಿ ಸುಮಲತಾ ಮಂಡ್ಯದಿಂದ ಸ್ಪರ್ಧೆ ಮಾಡಬೇಕೆಂಬ ಬೇಡಿಕೆ ಸ್ಥಳೀಯ ಮಟ್ಟದಲ್ಲಿದೆ ಎನ್ನುವುದನ್ನು ಮಂಡ್ಯ ಜಿಲ್ಲಾ ಮುಖಂಡರು ರಾಜ್ಯ ನಾಯಕರ ಗಮನಕ್ಕೆ ತಂದಿದ್ದಾರೆ. ಅವರು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಬೇಕೆಂಬ ಬೇಡಿಕೆ ಇದೆ. ಈ ಬಗ್ಗೆ ಪಕ್ಷದ ಹೈ ಕಮಾಂಡ್‌ ತೀರ್ಮಾನ ತೆಗೆದುಕೊಳ್ಳಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಸುಮಲತಾ ಅವರು ಅಧಿಕೃತವಾಗಿ ಸ್ಪರ್ಧೆ ಮಾಡುವ ಬಗ್ಗೆ ಪಕ್ಷದ ಯಾವುದೇ ನಾಯಕರನ್ನು ಸಂಪರ್ಕಿಸಿಲ್ಲ. ಹೀಗಾಗಿ ಅವರಿಂದ ಬೇಡಿಕೆ ಬಂದರೆ, ಹೈಕಮಾಂಡ್‌ ಮಟ್ಟದಲ್ಲಿ ಪರಿಗಣಿಸಲಾಗುವುದು ಎಂದು ನಾಯಕರು ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಬೇರೆಯವರು ಸ್ಪರ್ಧಿಸಿದರೆ ವಿರೋಧ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರೇ ಸ್ಪರ್ಧೆ ಮಾಡಿದರೆ, ಬಿಟ್ಟುಕೊಡಲು ಹಾಸನ ಜಿಲ್ಲಾ ಮುಖಂಡರು ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ, ಅವರ ಬದಲು ಅವರ ಕುಟುಂಬದ ಬೇರೆ ಯಾರನ್ನೇ ಕಣಕ್ಕಿಳಿಸಿದರೂ, ವಿರೋಧಿಸುವುದಾಗಿ ನಾಯಕರಿಗೆ ತಿಳಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next