ಚಿತ್ರದುರ್ಗ: ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆಗಟ್ಟಿ ಪ್ರತಿಭಟನೆ ನಡೆಸಲಾಯಿತು.
ಚಿತ್ರದುರ್ಗ ತಾಲೂಕಿನ ಗುಡ್ಡದರಂಗವ್ವನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ-13ರಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ರೈತರು, ಕೇಂದ್ರ ಸರ್ಕಾರದ 2013ರ ಭೂಸ್ವಾಧಿಧೀನ ಕಾಯ್ದೆ ತಿದ್ದುಪಡಿ ಮಸೂದೆಗೆ ತಿದ್ದುಪಡಿ ಮಾಡಲಾಗಿದೆ. ಕೂಡಲೇ ಆ ಮಸೂದೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ರೈತರ ಅನುಮತಿ ಇಲ್ಲದೆ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ರೈತ ವಿರೋಧಿ ಮಸೂದೆಯಾಗಿದೆ. ರೈತರು ಮತ್ತು ಜನಪರ ಸಂಘಟನೆಗಳ ಹೋರಾಟದ ಫಲವಾಗಿ 1894ರ ಭೂಸ್ವಾಧಿಧೀನ ಕಾಯ್ದೆಯನ್ನು ರದ್ದುಪಡಿಸಿ 2013ರಲ್ಲಿ ಹೊಸ ಕಾಯ್ದೆಯನ್ನು ರೂಪಿಸಲಾಯಿತು. ಇದರಲ್ಲಿ ಒಂದಷ್ಟು ಸಮಾಧಾನಕರವಾದ ಅಂಶಗಳಿದ್ದವು. ಆದರೆ ಈ ಮಸೂದೆಯಲ್ಲಿನ ಮೂಲ ಉದ್ದೇಶಕ್ಕೆ ವಿರುದ್ಧವಾಗಿ ಕೆಲವು ತಿದ್ದುಪಡಿ ತರಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾದಾಗ ಅದರ ವಿರುದ್ಧ ವಿರೋಧ ವ್ಯಕ್ತವಾಗಿತ್ತು. ಜತೆಗೆ ಎರಡು ಬಾರಿ ಮೇಲ್ಮನೆಯಲ್ಲಿ ಬಿಲ್ ಮಂಡನೆಯಾಗದ ಹಿನ್ನೆಲೆಯಲ್ಲಿ ತಿದ್ದುಪಡಿ ಸಾಧ್ಯವಾಗಲಿಲ್ಲ. ಆದರೆ ಆಯಾ ರಾಜ್ಯ ಸರ್ಕಾರಗಳಿಗೆ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಕರ್ನಾಟಕ 2013ರ ಕಾಯ್ದೆಗೆ ಇತ್ತೀಚಿಗೆ ನಡೆದ ವಿಧಾನ ಮಂಡಲ ಅಧಿವೇಶನದದಲ್ಲಿ ತಿದ್ದುಪಡಿ ಬಿಲ್ ಮಂಡಿಸಿ ಚರ್ಚೆಯೇ ಇಲ್ಲದೆ ಅಂಗೀಕಾರ ಪಡೆದು ರಾಜ್ಯಪಾಲರ ಸಹಿಗೆ ಕಳುಹಿಸಲಾಗಿದೆ. ಈ ತಿದ್ದುಪಡಿ ಬಿಲ್ 2013ರ ಕಾಯ್ದೆಯ ಮೂಲ ಉದ್ದೇಶಕ್ಕೆ ವ್ಯತಿರಿಕ್ತವಾಗಿದೆ. ಈಗ ತಿದ್ದುಪಡಿಗೆ ಮುಂದಾಗಿರುವ ರಾಜ್ಯ ಸರ್ಕಾರ ಕ್ರಮ ಖಂಡನೀಯ. ಇದು ಬ್ರಿಟಿಷರು ರೂಪಿಸಿದ್ದ ಕಾಯ್ದೆಯ ಮುಂದುವರೆದ ಭಾಗವಾಗಿದ್ದು ಬಂಡವಾಳಶಾಹಿಗಳ ಪರವಾಗಿದೆ. ಆದ್ದರಿಂದ ಕೂಡಲೇ ತಿದ್ದುಪಡಿ ಕಾಯ್ದೆ ಆದೇಶ ವಾಪಸ್ ಪಡೆಯಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬೆಳೆ ವಿಮೆ ಪರಿಹಾರ, ಇನ್‌ಪುಟ್ ಸಬ್ಸಿಡಿ ಹಣವನ್ನು ಕೂಡಲೇ ರೈತರ ಖಾತೆಗಳಿಗೆ ಜಮಾ ಮಾಡಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾನೂನು ಮೀರಿ ವಂತಿಕೆ ವಸೂಲಿ ಮಾಡುತ್ತಿದ್ದು ಅದಕ್ಕೆ ಕಡಿವಾಣ ಹಾಕುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಕೂಡಲೇ ಅಕ್ರಮವಾಗಿ ವಸೂಲಿ ಮಾಡಿರುವ ವಂತಿಕೆಯನ್ನು ವಾಪಸ್ ಕೊಡಿಸಬೇಕು ಎಂದರು.
ಭದ್ರಾ ಮೇಲ್ದಂಡೆ ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಜಿಲ್ಲೆಯ ರೈತರನ್ನು ರಕ್ಷಿಸಬೇಕು. ಅಕ್ರಮ-ಸಕ್ರಮ ಯೋಜನೆಯಡಿ ಹಣ ಕಟ್ಟಿರುವ ರೈತರಿಗೆ ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕ ಅಳವಡಿಸಿ ಮೂಲ ಸೌಲಭ್ಯ ಕಲ್ಪಿಸಬೇಕು. ಜಿಲ್ಲೆ ಕಳೆದ ಹತ್ತು ವರ್ಷಗಳಿಂದ ಸತತ ಬರಕ್ಕೆ ತುತ್ತಾಗುತ್ತಿದೆ. ಈ ಜಿಲ್ಲೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದತ್ತು ಪಡೆದು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ರೈತರನ್ನು ಉಳಿಸಬೇಕು ಎಂದು ಆಗ್ರಹಿಸಿದರು.
ಪ್ರಧಾನಮಂತ್ರಿಗಳ ಫಸಲ್ ಬಿಮಾ ಯೋಜನೆ ಮೂಲಕ ಸರ್ಕಾರ ವಿಮಾ ಕಂಪನಿಗಳಿಗೆ ರತ್ನಗಂಬಳಿ ಹಾಸಿದೆ. ಇದು ರೈತರಿಗೆ ಅದರಲ್ಲೂ ಸತತ ಬರಕ್ಕೆ ತುತ್ತಾಗುವ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಮಾರಕವಾಗಿದೆ. ಐದು ವರ್ಷಗಳ ಸರಾಸರಿ ಇಳುವರಿಯನ್ನು ಲೆಕ್ಕ ಹಾಕಿ ಬೆಳೆ ವಿಮೆ ನೀಡುವುದರಿಂದ ಭಾರೀ ಅನ್ಯಾಯ ಆಗುತ್ತಿದೆ. ಕಳೆದ ಹತ್ತು ವರ್ಷಗಳಿಂದ ಮಳೆ ಬೀಳದೆ ತೀವ್ರ ಬರ ಆವರಿಸಿದ್ದು ಉಳುವರಿ ಶೂನ್ಯವಾಗಿದೆ. ಇಂತಹ ಸಂದರ್ಭದಲ್ಲಿ ಐದು ವರ್ಷಗಳ ಇಳುವರಿ ಲೆಕ್ಕಾಚಾರ ಅವೈಜ್ಞಾನಿಕವಾಗಿದ್ದು ಚಿತ್ರದುರ್ಗ ಜಿಲ್ಲೆಗೆ ಪ್ರತ್ಯೇಕ ಬೆಳೆ ವಿಮೆ ನಿಯಯಗಳನ್ನು ರೂಪಿಸಬೇಕು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಈಚಘಟ್ಟ ಸಿದ್ದವೀರಪ್ಪ, ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಪ್ರಧಾನ ಕಾರ್ಯದರ್ಶಿ ದೊಡ್ಡಸಿದ್ದವ್ವನಹಳ್ಳಿ ಮಲ್ಲಿಕಾರ್ಜುನ ಹಾಗೂ ನೂರಾರು ರೈತರು ಭಾಗವಹಿಸಿದ್ದರು.