Advertisement
ನಗರದ ಎಂ.ಜಿ.ರಸ್ತೆ, ಐ.ಜಿ.ರಸ್ತೆ ಮತ್ತು ಡಾ| ಅಂಬೇಡ್ಕರ್ ರಸ್ತೆಯಲ್ಲಿ ನಾಲ್ಕು ಚಕ್ರಗಳ ವಾಹನ ನಿಲುಗಡೆಗೆ ಶುಲ್ಕ ವಿಧಿಸಲು ಬುಧವಾರ ಟೆಂಡರ್ ನಡೆಸಲು ಮುಂದಾಗಿತ್ತು. ಆದರೆ ಇದನ್ನು ವಿರೋಧಿಸಿ ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಗರಸಭೆಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Related Articles
Advertisement
ಸಿಪಿಐ ಮುಖಂಡ ಬಿ.ಅಮ್ಜದ್,ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ಮಾತನಾಡಿದರು.
ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್ ಮನವಿ ಆಲಿಸಿ ನಗರಸಭಾ ಸಾಮಾನ್ಯ ಸಭೆಯಲ್ಲಿ ಎಲ್ಲ ಸದಸ್ಯರ ಒಮ್ಮತದ ಅಭಿಪ್ರಾಯದ ಹಿನ್ನೆಲೆಯಲ್ಲಿ ವಾಹನ ನಿಲುಗಡೆಗೆ ಶುಲ್ಕ ವಿಧಿಸಲು ಮುಂದಾಗಿದ್ದೆವು. ಆದರೆ ಈಗ ಸಾರ್ವಜನಿಕರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆ ಮುಂದೂಡಿರುವುದಾಗಿ ಹೇಳಿದರು. ಆದರೆ ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಲಿಖೀತವಾಗಿ ಆದೇಶ ನೀಡಬೇಕು. ಆದೇಶವನ್ನು ನಗರಸಭೆ ಆಯುಕ್ತರೇ ನೀಡಬೇಕಿರುವುದರಿಂದ ಅವರು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲವೆಂದು ಪಟ್ಟು ಹಿಡಿದರು.
ಸ್ಥಳಕ್ಕೆ ಆಗಮಿಸಿದ ನಗರಸಭೆ ಆಯುಕ್ತೆ ತುಷಾರಮಣಿ, ಪ್ರತಿಭಟನಾಕಾರರ ಮನವಿ ಸ್ವೀಕರಿಸಿ, ವಾಹನ ನಿಲುಗಡೆಗೆ ಶುಲ್ಕ ವಿಧಿಸುವ ಕುರಿತು ಕಳೆದ ಒಂದೂವರೆ ವರ್ಷದಿಂದ ಚರ್ಚೆ ನಡೆಯುತ್ತಿತ್ತು. ಹಿಂದಿನ ಜಿಲ್ಲಾಧಿಕಾರಿ ಜಿ.ಸತ್ಯವತಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಕೆ.ಅಣ್ಣಾಮಲೈ ಅವರೂ ಈ ಕುರಿತು ನಗರಸಭೆಯೊಂದಿಗೆ ಚರ್ಚೆ ನಡೆಸಿದ್ದರು. ವಾಹನ ನಿಲುಗಡೆಗೆ ಶುಲ್ಕ ವಿಧಿಸುವ ಕುರಿತು ಡಿಸೆಂಬರ್ ತಿಂಗಳಲ್ಲಿ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿದೆ. ಸಭೆಯಲ್ಲಿ ಆಡಳಿತ, ವಿರೋಧ ಪಕ್ಷದ ಸದಸ್ಯರುಗಳೆಲ್ಲರೂ ಇದಕ್ಕೆ ಸರ್ವಾನುಮತದ ಒಪ್ಪಿಗೆ ನೀಡಿದ್ದಾರೆ ಎಂದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನಗರಸಭೆ ಸದಸ್ಯ ರೂಬಿನ್ ಮೋಸೆಸ್, ಎಲ್ಲ ಸದಸ್ಯರೂ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಬೇಡಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಆಯುಕ್ತರು ಮತ್ತು ರೂಬಿನ್ ಮೋಸೆಸ್ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಮಾತು ಮುಂದುವರೆಸಿದ ಆಯುಕ್ತರು, ಬಜೆಟ್ ಪೂರ್ವಭಾವಿ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆಯಾಗಿತ್ತು. ಆಗ ಯಾರೂ ಸಹ ವಿರೋಧ ವ್ಯಕ್ತಪಡಿಸಿರಲಿಲ್ಲ. ಇಂದು ಟೆಂಡರ್ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ಸಾರ್ವಜನಿಕರು, ಸಂಘಸಂಸ್ಥೆಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಧ್ಯಕ್ಷರು ಟೆಂಡರ್ ಪ್ರಕ್ರಿಯೆ ಮುಂದೂಡುವಂತೆ ಆದೇಶಿಸಿದ್ದಾರೆ. ಅವರ ಆದೇಶದಂತೆ ಟೆಂಡರ್ ಪ್ರಕ್ರಿಯೆ ಮುಂದೂಡಲಾಗಿದೆ. ನಗರಸಭೆ ಸಾಮಾನ್ಯ ಸಭೆಯಲ್ಲಿ ವಾಹನ ನಿಲುಗಡೆಗೆ ಶುಲ್ಕ ವಿಧಿಸಲು ತೀರ್ಮಾನವಾಗಿದೆ. ಆ ತೀರ್ಮಾನವನ್ನು ಬದಲಿಸುವ ಅಧಿಕಾರ ಸಾಮಾನ್ಯ ಸಭೆಗೆ ಮಾತ್ರ ಇದೆ. ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಟೆಂಡರ್ ಪ್ರಕ್ರಿಯೆ ಮುಂದೂಡಿರುವ ಕುರಿತು ಆಯುಕ್ತರು ಲಿಖೀತವಾಗಿ ಆದೇಶ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ಪ್ರತಿಭಟನೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳ ಮುಖಂಡರುಗಳೊಂದಿಗೆ ಸಂಘಪರಿವಾರದ ಕಾರ್ಯಕರ್ತರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ವಿಶ್ವನಾಥ್, ರಂಜಿತ್ ಶೆಟ್ಟಿ, ತುಡಕೂರು ಮಂಜು, ಸಂತೋಷ್ ಕೋಟ್ಯಾನ್, ಮಂಜೇಗೌಡ, ಕಾರ್ತಿಕ್ ಚೆಟ್ಟಿಯಾರ್, ಎ.ಎನ್.ಮಹೇಶ್, ಶ್ಯಾಮ್, ಭರತ್, ಶಿವಪ್ರಕಾಶ್, ಗುರುಶಾಂತಪ್ಪ, ಜೀವನ್, ನಾಗೇಶ್ ಇತರರು ಪಾಲ್ಗೊಂಡಿದ್ದರು.