Advertisement

ವೀರಶೈವ-ಲಿಂಗಾಯತ ಗೊಂದಲ ಸೃಷ್ಟಿಗೆ ಆಕ್ರೋಶ

10:23 AM Jul 31, 2017 | Team Udayavani |

ದಾವಣಗೆರೆ: ವೀರಶೈವ- ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನದ ನೆಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾತೆ ಮಹಾದೇವಿ ಸಮಾಜ ಒಡೆಯುವ ಕೆಲಸಮಾಡುತ್ತಿದ್ದಾರೆ ಎಂದು ಆರೋಪಿಸಿ ವೀರಶೈವ ಸಂಘರ್ಷ ಸಮಿತಿ ಕಾರ್ಯಕರ್ತರು ಭಾನುವಾರ ಶ್ರೀ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

Advertisement

ರಾಜ್ಯದ ಅತಿದೊಡ್ಡ ಸಮಾಜ ವೀರಶೈವ-  ಲಿಂಗಾಯತ ಸಮಾಜ ಒಡೆಯುವ ಹುನ್ನಾರ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯತ್ನ ಅತ್ಯಂತ ಖಂಡನೀಯ ಎಂದು ದೂರಿದ ಪ್ರತಿಭಟನಾಕಾರರು ಮಾತೆ ಮಹಾದೇವಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವಚಿತ್ರಕ್ಕೆ ಅಣಕು ಶ್ರದ್ಧಾಂಜಲಿ ಅರ್ಪಿಸಿ, ಆಕ್ರೋಶ ಹೊರಹಾಕಿದರು. ಸಿದ್ದರಾಮಯ್ಯ ಕೇವಲ ಕಮಿಷನ್‌ ಮಠ, ವೀರಶೈವ ಲಿಂಗಾಯಿತ ಸಮಾಜಕ್ಕೆ ಸೇರದ ಮಾತೆ ಮಹಾದೇವಿಯರನ್ನು ಸೇರಿಸಿಕೊಂಡು ವೀರಶೈವ ಲಿಂಗಾಯತರನ್ನು ಒಡೆಯುವ ಕಾರ್ಯ ಮಾಡುತ್ತಿದ್ದಾರೆ.  ಅವರಿಗೆ ನಿಜವಾಗಲೂ ಲಿಂಗಾಯತ, ವೀರಶೈವರ ಮೇಲೆ ಅನುಕಂಪ ಇಲ್ಲ ಎಂದರು. 

ರಾಜ್ಯದಲ್ಲಿ ಭೀಕರ ಬರಗಾಲವಿದೆ. ನೀರಿಗಾಗಿ ಹಾಹಾಕಾರ ಇದೆ. ಬೆಳೆ ಇಲ್ಲದೆ ರೈತರು ಸಾವಿನ ಹಾದಿ ತುಳಿಯುತ್ತಿರುವ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಜಾತಿ ರಾಜಕೀಯದ ಮೂಲಕ ಎಲ್ಲವನ್ನೂ ಮರೆಮಾಚುವ ಯತ್ನ ಮಾಡುತ್ತಿದ್ದಾರೆ. ಮಂಗಳೂರು ಕೋಮು ಗಲಭೆ ಮತ್ತು ಕಾರಾಗೃಹ ಹಗರಣಗಳ ವಿಷಯ ತಣ್ಣಗಾಗಿಸಲು ಈಗ ವೀರಶೈವ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡುವ ವಿಷಯ ತೂರಿಬಿಟ್ಟಿದ್ದಾರೆ ಎಂದು ಆರೋಪಿಸಿದರು.

ಸಮಿತಿಯ ಎಂ. ಪ್ರಶಾಂತ್‌, ಉಮೇಶ್‌ ಕತ್ತಿ, ಮಹಾತೇಂಶ ಒಣರೊಟ್ಟಿ, ಬಿ.ಬಿ. ಗಣೇಶ್‌, ಮಲ್ಲಿಕಾರ್ಜುನ, ಕೆ.ವಿ. ಗುರು, ದಯಾನಂದ, ಬದ್ರಿನಾಥ್‌, ವಿರೂಪಾಕ್ಷ ಬೇಕರಿ, ಮಂಜುನಾಥ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next