Advertisement

ತೆಲಂಗಾಣಕ್ಕೆ ರಾಯಚೂರು ವಿಲೀನ ಹೇಳಿಕೆಗೆ ಆಕ್ರೋಶ

11:49 AM Aug 20, 2022 | Team Udayavani |

ಕಲಬುರಗಿ: ತೆಲಂಗಾಣಕ್ಕೆ ಕರ್ನಾಟಕದ ರಾಯಚೂರು ಸೇರಿಸಲು ಅಲ್ಲಿನ ಜನ ಬಯಸಿದ್ದಾರೆ ಎನ್ನುವ ಹೇಳಿಕೆಯನ್ನು ಅಲ್ಲಗಳೆದಿರುವ ಮತ್ತು ಈ ಕುರಿತು ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್‌ ನೀಡಿರುವ ಹೇಳಿಕೆ ಖಂಡನೀಯ ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್‌. ಪಾಟೀಲ ನರಿಬೋಳ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕರುನಾಡಿನ ಭಾಗವನ್ನು ತೆಲಂಗಾಣ ದವರು ಕೇಳುತ್ತಿದ್ದಾರೆ ಎನ್ನುವ ಕುರಿತು ಅಲ್ಲಿನ ಮುಖ್ಯಮಂತ್ರಿ ಹೇಳಿಕೆ ನೀಡಿದರೂ ನಮ್ಮ ರಾಜಕಾರಣಿಗಳು ಇನ್ನೂ ಖಂಡಿಸದೇ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅಲ್ಲದೇ, ನಮ್ಮ ಮುಖ್ಯಮಂತ್ರಿಗಳು ಈ ಕುರಿತು ಇನ್ನೂ ತುಟಿ ಬಿಚ್ಚಿಲ್ಲ. ವಿಪಕ್ಷದ ರಾಜಕಾರಣಿಗಳು, ಜನಪ್ರತಿನಿಧಿಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಆಡಳಿತ ಪಕ್ಷದ ಶಾಸಕರು, ರಾಯಚೂರು ಶಾಸಕ ಡಾ|ಶಿವರಾಜ ಪಾಟೀಲ ಅವರಿಗೂ ಈ ಹೇಳಿಕೆ ಕೇಳಿಸಿ ಲ್ಲವೇ? ಎಂದು ಪ್ರಶ್ನಿಸಿದರು.

ಕುತಂತ್ರ ಅಡಗಿದೆ: ಒಂದು ರಾಜ್ಯದ ಮುಖ್ಯಮಂತ್ರಿ ಇನ್ನೊಂದು ರಾಜ್ಯದ ಒಂದು ಜಿಲ್ಲೆಯನ್ನು ತಮ್ಮ ರಾಜ್ಯಕ್ಕೆ ಸೇರಿಸಿಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿ ಎರಡು ದಿನವಾದರೂ ಕರ್ನಾಟಕ ಸರ್ಕಾರ ಉತ್ತರಿಸುವುದಿಲ್ಲ ಎಂದರೆ, ಒಳಗೊಳಗೆ ಏನೋ ಕುತಂತ್ರ ಅಡಗಿದೆ. ಬೆಳಗಾವಿ ವಿಷಯದಲ್ಲಿ ಅಬ್ಬರಿಸಿ, ಬೊಬ್ಬಿರಿಯುವ ರಾಜಕಾರಣಿಗಳು, ರಾಯಚೂರಿನ ವಿಷಯ ಬಂದಾಗ ಯಾಕೆ ಸುಮ್ಮನಿದ್ದಾರೆ ಎಂದು ಜನತೆಗೆ ಉತ್ತರಿಸಬೇಕು ಎಂದು ಒತ್ತಾಯಿಸಿದರು.

ರಾಯಚೂರು ಕಲ್ಯಾಣ ಕರ್ನಾಟಕದ ಅವಿಭಾಜ್ಯ ಅಂಗ. ಕೆಸಿಆರ್‌ ಹೇಳಿಕೆ ಹಿಂದಕ್ಕೆ ಪಡೆಯುವ ವರೆಗೂ ತೆಲಂಗಾಣಕ್ಕೆ ಹೈದ್ರಾಬಾದ್‌ ಸೇರಿದಂತೆ ಪ್ರಮುಖ ನಗರಗಳಿಂದ ಕರ್ನಾಟಕ ಸಾರಿಗೆ ಸಂಚಾರ ಬಂದ್‌ ಮಾಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಸಾದ ಜೋಶಿ, ಶ್ರೀದೇವಿ ಕಾಲೆಬಾಗ, ಅನಿಲ ಪವಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next