ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಬಂದಿರುವ ಅಂಕ ತೃಪ್ತಿ ಕಾಣದೇ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ, ಯಶಸ್ಸು ಕಂಡ ವಿದ್ಯಾರ್ಥಿಗಳಿಗೆ ಹಣ ಮರುಪಾವತಿ ಇನ್ನೂ ಆಗಿಲ್ಲ.
ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ, ಅಂಕದಲ್ಲಿ ಯಾವುದೇ ಬದಲಾವಣೆ ಆಗದೆ ಇದ್ದರೆ ಅಂತಹ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಮಾಡುವುದಿಲ್ಲ. ಆರಂಭದಲ್ಲಿ ಬಂದಿರುವ ಅಂಕದಲ್ಲಿ ಹೆಚ್ಚಳವಾದರೆ ವಿದ್ಯಾರ್ಥಿಗಳು ಪಾವತಿಸಿದ್ದ ಹಣ ಮರುಪಾವತಿ ಆಗುತ್ತದೆ.
ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಅಪ್‌ಡೇಟ್‌ಗೆ ಅವಕಾಶ ನೀಡಲಾಗಿದೆ. ಅಲ್ಲದೇ,ಪಪೂ ಶಿಕ್ಷಣ ಇಲಾಖೆಯ ವೆಬ್‌ಸೈಟ್
//www.pue.kar.nic.in ನಲ್ಲಿ ವಿದ್ಯಾರ್ಥಿಗಳ ಹೆಸರಿನ ಪಟ್ಟಿ ಪ್ರಕಟಿಸಲಾಗಿದೆ.
2018ರ ಮಾರ್ಚ್‌ನಲ್ಲಿ ನಡೆದ ವಾರ್ಷಿಕ ಪರೀಕ್ಷೆ ಹಾಗೂ ಜೂನ್‌ನಲ್ಲಿ ನಡೆದ ಪೂರಕ ಪರೀಕ್ಷೆಯಲ್ಲಿಬಂದಿರುವ ಅಂಕಗಳಿಂದ ತೃಪ್ತಿಕಾಣದ ಲಕ್ಷಾಂತರ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಇಲಾಖೆ ಸೂಚಿಸಿದಂತೆ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಸ್ಕ್ಯಾನ್ ಕಾಪಿಗಾಗಿ 530 ಹಾಗೂ ಮರು ಮೌಲ್ಯಮಾಪನಕ್ಕಾಗಿ 1670 ರೂ. ಪಾವತಿಸಿದ್ದಾರೆ. ಪ್ರಾಯೋಗಿಕ ಪರೀಕ್ಷೆ ಉತ್ತರ ಪತ್ರಿಕೆಯ ಮರು ಮೌಲ್ಯಮಾಪನದಲ್ಲಿ 4ಕ್ಕಿಂತ ಅಧಿಕ ಹಾಗೂ ಥಿಯರಿ ಉತ್ತರ ಪತ್ರಿಕೆಯ ಮರು ಮೌಲ್ಯಮಾಪನದಲ್ಲಿ 6ಕ್ಕಿಂತ ಅಧಿಕ ಅಂಕ ಬಂದಿರುವ ಸಾವಿರಾರು ವಿದ್ಯಾರ್ಥಿಗಳು ಶುಲ್ಕ ಮರುಪಾವತಿಗಾಗಿ ಕಾದು ಕುಳಿತಿದ್ದಾರೆ.
ಬ್ಯಾಂಕ್ ಖಾತೆಯ ಸಂಖ್ಯೆ ಅಥವಾ ಇನ್ನಾವುದೇ ಮಾಹಿತಿ ಬಗ್ಗೆ ವಿದ್ಯಾರ್ಥಿಗಳು ತಪ್ಪಾಗಿ ಮಾಹಿತಿ ನೀಡಿದರೆ ಅದಕ್ಕೆ ವಿದ್ಯಾರ್ಥಿಗಳೇ ಜವಾಬ್ದಾರಿ ಯಾಗಿರುತ್ತಾರೆ. ಒಮ್ಮೆ ಸಲ್ಲಿಸಿದ ಅರ್ಜಿಯನ್ನು ಮತ್ತೆ, ಮತ್ತೆ ಬದಲಾಯಿಸಲು ಅವಕಾಶ
ಇರುವುದಿಲ್ಲ. ತಾಂತ್ರಿಕ ಕಾರಣ ಹೊರತುಪಡಿಸಿಬೇರೆ ಯಾವುದೇ ಸಮಸ್ಯೆಯಾಗಿಲ್ಲ. ದೋಷವಿಲ್ಲದ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಶುಲ್ಕ ಮರುಪಾವತಿ ಮಾಡಿದ್ದೇವೆ. ವಿದ್ಯಾರ್ಥಿಗಳು ಯಾವುದೇ ಸಮಸ್ಯೆಯಿದ್ದರೂ, ಇಲಾಖೆಯ ಕಚೇರಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಪಿಯು ಇಲಾಖೆ ಜಂಟಿ ನಿರ್ದೇಶಕ ವಿಜಯಾನಂದ ಸ್ಪಷ್ಟಪಡಿಸಿದ್ದಾರೆ.