ಶಿವಮೊಗ್ಗ : ಆಸ್ಪತ್ರೆಯಲ್ಲಿ ದಾಖಲಾಗಿರುವ ಕೋವಿಡ್ ಸೋಂಕಿತರ ಆರೈಕೆಗೆ ಈವರೆಗೂ ಸಂಬಂಧಿಯೊಬ್ಬರನ್ನು ಬಿಡಲಾಗುತ್ತಿತ್ತು. ಪಿಪಿಇ ಕಿಟ್ ಧರಿಸಿಕೊಂಡು ಸಂಬಂಧಿಗಳು ವಾರ್ಡ್ನ ಒಳಗೆ ಹೋಗಬಹುದಾಗಿದೆ. ಆದರೆ ಇವತ್ತು ಮಧ್ಯಾಹ್ನ ಸೋಂಕಿತರ ಜೊತೆಗಿದ್ದ ಸಂಬಂಧಿಗಳನ್ನು ದಿಢೀರನೆ ವಾರ್ಡಿನಿಂದ ಹೊರಗೆ ಕಳುಹಿಸಲಾಗಿದ್ದು ಸೋಂಕಿತರ ಸಂಬಂಧಿಗಳು ನಗರದ ಮೆಗ್ಗಾನ್ ಆಸ್ಪತ್ರೆ ಬಳಿ ಆಕ್ರೋಶ ಹೊರ ಹಾಕಿದ್ದಾರೆ.
ಸಂಬಂಧಿಗಳ ಆರೋಪ ಏನು?
ಮೆಗ್ಗಾನ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಸರಿಯಾಗಿ ಆರೈಕೆ ಸಿಗುತ್ತಿಲ್ಲ. ಔಷಧೋಪಚಾರವು ಸರಿಯಾಗಿಲ್ಲ. ಮನೆಯವರೊಬ್ಬರು ಇದ್ದರೆ ಎಲ್ಲವು ಸರಿಯಾಗಿ ನಡೆಯಲಿದೆ. ಈಗ ಎಲ್ಲರನ್ನು ದಿಢೀರನೆ ಹೊರಗೆ ಕಳುಹಿಸಿ, ನಮ್ಮ ಜೀವಕ್ಕೆ ಕುತ್ತು ತರುವ ಪ್ರಯತ್ನ ನಡೆಯತ್ತಿದೆ ಎಂದು ಆರೋಪಿಸಿದರು.
ಎಮರ್ಜನ್ಸಿ ವಾರ್ಡ್ ಬಳಿ ಪ್ರತಿಭಟನೆ
ರೋಗಿಗಳ ಸಂಬಂಧಿಗಳು ಎಮರ್ಜನ್ಸಿ ವಾರ್ಡ್ ಕಡೆ ಇರುವ ಗೇಟ್ ಮುಂಭಾಗ ಪ್ರತಿಭಟನೆ ನಡೆಸಿದರು. ತಮ್ಮನ್ನು ವಾರ್ಡ್ನ ಒಳಗೆ ಬಿಡಬೇಕು ಎಂದು ಆಗ್ರಹಿಸಿದರು. ವಿಚಾರ ತಿಳಿಯುತ್ತಿದ್ದಂತೆ ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ರೋಗಿಗಳ ಸಂಬಂಧಿಗಳನ್ನು ಸಮಾಧಾನಪಡಿಸಿದರು. ಆದರೆ ಆಸ್ಪತ್ರೆ ಆಡಳಿತ ತಮ್ಮನ್ನು ಒಳಗೆ ಬಿಡಬೇಕು. ಇಲ್ಲವಾದಲ್ಲಿ ತಮ್ಮ ಸಂಬಂಧಿಗಳ ಜೀವಕ್ಕೆ ತೊಂದರೆಯಾದರೆ ಆಸ್ಪತ್ರೆ ಆಡಳಿತವೇ ಹೊಣೆ ಎಂದು ಎಚ್ಚರಿಸಿದರು.