ಕುಕನೂರು: ತಹಶೀಲ್ದಾರ್ ರವಿರಾಜ ದೀಕ್ಷಿತ ವರ್ಗಾವಣೆ ಖಂಡಿಸಿ ಕನ್ನಡ ಸೇನೆ ಕರ್ನಾಟಕ ಘಟಕ, ಕನ್ನಡ ಸಾಹಿತ್ಯ ಸಂಸ್ಕೃತಿ ಮತ್ತು ಅಭಿವೃದ್ಧಿ ಟ್ರಸ್ಟ್, ಕರ್ನಾಟಕ ವಿಶ್ವ ನಿರ್ಮಾಣ ಸೇನೆ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ರುದ್ರಮುನೀಶ್ವರ ಹಮಾಲರ ಹಾಗೂ ಕಾರ್ಮಿಕರ ಸಂಘ, ಕಾರ್ಯನಿರತ ಪತ್ರಕರ್ತರ ಸಂಘದವರು ಗುರುವಾರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಹಾಗೂ ಜಿಲ್ಲಾಧಿಕಾರಿಗೆಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಎಪಿಎಂಸಿ ರಾಜ್ಯ ತೂಕರವರ ಸಂಘದ ಉಪಾಧ್ಯಕ್ಷ ಬಸವರಾಜ ಕೊಡ್ಲಿ, ತಹಶೀಲ್ದಾರ್ ರವಿರಾಜ ದೀಕ್ಷಿತ ಅವರ ಆಡಳಿತ ಅಚ್ಚುಕಟ್ಟಾಗಿತ್ತು. ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ಸಹ ಜರುಗಿವೆ. ತಹಶೀಲ್ದಾರ್ ಕಚೇರಿ ನಿರ್ವಹಣೆ ಸಹ ಸಾರ್ವಜನಕ ವಲಯಕ್ಕೆ ಹಿಡಿಸಿದೆ. ಸಾರ್ವಜನಿಕ ಸಮಸ್ಯೆಗಳನ್ನು ಶೀಘ್ರ ಪರಿಹಾರ ಮಾಡುತ್ತಿದ್ದ ತಹಶೀಲ್ದಾರ್ ವರ್ಗಾವಣೆ ಖಂಡನೀಯ ಎಂದರು.
ಕನ್ನಡ ಸಾಹಿತ್ಯ ಸಂಸ್ಕೃತಿ ಮತ್ತು ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ರುದ್ರಪ್ಪ ಭಂಡಾರಿ ಮಾತನಾಡಿ, ತಹಶೀಲ್ದಾರ್ ವರ್ಗಾವಣೆ ಹಿಂದೆ ರಾಜಕಾರಣಿಗಳ ಕೈವಾಡವಿದೆ ಎಂಬ ವದಂತಿ ಕೇಳಿಬಂದಿದೆ. ಉತ್ತಮ ಆಡಳಿತಗಾರರಿಗೆ ನ್ಯಾಯ ಇಲ್ಲದ ಪರಿಸ್ಥಿತಿ ಬರತೊಡಗಿದೆ. ಇದು ಸಮಾಜಕ್ಕೆ ಕಳಂಕ. ಉತ್ತಮ ಆಡಳಿತ ನಿರ್ವಹಿಸುತ್ತಿದ್ದ ರವಿರಾಜ್ ದೀಕ್ಷಿತ್ ಅವರ ವರ್ಗಾವಣೆ ಆದೇಶ ಕೂಡಲೇ ರದ್ದು ಪಡಿಸಬೇಕು. ಉತ್ತಮ ಆಡಳಿತ ನೀಡುತ್ತಿರುವ ರವಿರಾಜ ದೀಕ್ಷಿತ್ ಅವರು ಮತ್ತೆ ಕುಕನೂರು ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದರು.
ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಅಂದಪ್ಪ ಕೋಳೂರು ಮಾತನಾಡಿ, ರೈತ ಪರ ಕಂದಾಯ ಕೆಲಸಗಳನ್ನು ರವಿರಾಜ ದೀಕ್ಷಿತ್ ಅವರು ರೈತರನ್ನು ಅಲೆದಾಡಿಸದೇ ಕಡಿಮೆ ಮೀತಿ ಸಿಬ್ಬಂದಿ ಗಳಿದ್ದರೂ ತುರ್ತಾಗಿ ಮಾಡಿಕೊಡುತ್ತಿದ್ದರು. ದೀಕ್ಷಿತ್ ಅವರ ವರ್ಗಾವಣೆ ಪ್ರಾಮಾಣಿಕ ಆಡಳಿತ ವೈಖರಿಯನ್ನು ಬುಡಮೇಲು ಮಾಡಿದಂತೆ ಎಂದರು. ಕನ್ನಡ ಸೇನೆ ಕರ್ನಾಟಕ ಘಟಕದ ತಾಲೂಕಧ್ಯಕ್ಷ ಅಲ್ಲಾಭಕ್ಷಿ ಕಲ್ಲೂರು, ಕರಿಯಪ್ಪ ಭಜಂತ್ರಿ, ರುದ್ರಮುನೀಶ್ವರ ಹಮಾಲರ ಹಾಗೂ ಕಾರ್ಮಿಕರ ಸಂಘದ ಅಧ್ಯಕ್ಷ ನಿಂಗಪ್ಪ ಗೊರ್ಲೆಕೊಪ್ಪ ಇತರರಿದ್ದರು.