Advertisement

ಅಧಿಕಾರಿಗಳ ಅಸಹಕಾರಕ್ಕೆ ಆಕ್ರೋಶ

11:18 AM Aug 28, 2019 | Suhan S |

ಹಾವೇರಿ: ಒಂದೆಡೆ ಜಿಲ್ಲೆಯ ಜನರ ಬದುಕು ತಲ್ಲಣಗೊಳಿಸಿದ ನೆರೆ ಇಳಿಮುಖವಾಗಿದ್ದರೆ, ಇನ್ನೊಂದೆಡೆ ಸಂತ್ರಸ್ತರಿಗೆ ಸೌಲಭ್ಯ-ಪರಿಹಾರ ಕಲ್ಪಿಸುವಲ್ಲಿ ಅಧಿಕಾರಿಗಳು ಅಸಹಕಾರ ತೋರುತ್ತಿರುವುದರ ವಿರುದ್ಧ ಸಂತ್ರಸ್ತರಿಂದ ಆಕ್ರೋಶ ಹೆಚ್ಚುತ್ತಿದೆ.

Advertisement

ಸಂತ್ರಸ್ತರು ಅಗತ್ಯ ಸೌಲಭ್ಯ, ಪರಿಹಾರಕ್ಕಾಗಿ ನಿತ್ಯ ಪರಿತಪಿಸುತ್ತಿದ್ದು ಸಕಾಲಕ್ಕೆ, ಸಕಾರಾತ್ಮಕವಾಗಿ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕೆಂಡ ಕಾರುತ್ತಿದ್ದಾರೆ. ರಾಜ್ಯದ ವಿವಿಧ ಮೂಲೆಗಳ ಸಾವಿರಾರು ಜನರು ಸಂತ್ರಸ್ತರಿಗೆ ಧನ-ಧಾನ್ಯ ಸಹಿತ ವಿವಿಧ ವಸ್ತುಗಳನ್ನು ಕಳುಹಿಸಿ ಮಾನವೀಯತೆ ಮೆರೆದರೆ, ಇಲ್ಲಿಯೇ ಇದ್ದ ಅಧಿಕಾರಿಗಳು ಮಾತ್ರ ಸಂತ್ರಸ್ತರ ಬವಣೆಯನ್ನು ಕಣ್ಣಾರೆ ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ. ಸರ್ಕಾರದಿಂದ ಸಿಗಬಹುದಾದ ಸೌಲಭ್ಯ, ಪರಿಹಾರ ಸರಿಯಾಗಿ ಕಲ್ಪಿಸುತ್ತಿಲ್ಲ.

ಪ್ರಾಕೃತಿಕ ವಿಪತ್ತು ಯೋಜನೆಯಡಿ ಸಹಾಯ ಮಾಡಲು ಅವಕಾಶವಿದ್ದರೂ ಅಧಿಕಾರಿಗಳು ಮಾತ್ರ ಸೌಲಭ್ಯ ಕಲ್ಪಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ನೆರೆಯಂಥ ಪ್ರಾಕೃತಿಕ ವಿಪತ್ತು ಸಂದರ್ಭದಲ್ಲಿ ಅಧಿಕಾರಿಗಳು ಕಾನೂನು, ನಿಯಮಾವಳಿಗಳಿಗಿಂತ ಮಾನವೀಯತೆ ಮೆರೆಯಬೇಕು. ಜನರ ಸಂಕಷ್ಟಕ್ಕೆ ಸಕಲ ರೀತಿಯಲ್ಲಿ ಸ್ಪಂದಿಸಬೇಕೆಂದು ಜನಪ್ರತಿನಿಧಿಗಳು ಸಲಹೆ ನೀಡುತ್ತಲೇ ಇದ್ದಾರೆ. ಆದರೆ, ಈ ಸಲಹೆಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಇತ್ತ ಕಾನೂನು ಪಾಲನೆಯೂ ಇಲ್ಲ. ಅತ್ತ ಮಾನವೀಯತೆ ಪ್ರದರ್ಶನವೂ ಇಲ್ಲವೆಂಬಂತೆ ನಿಲುವು ತೋರುತ್ತಿರುವುದು ಸಂತ್ರಸ್ತರನ್ನು ಕೆರಳಿಸಿದೆ. ಸಚಿವರ ಆದೇಶ ನಂತರ ಮರು ಸಮೀಕ್ಷೆ: ಮನೆಯಲ್ಲಿ ಕೇವಲ ನೀರು ನಿಂತರೆ ಸಾಕು. ಆ ಮನೆಯಲ್ಲಿದ್ದ ಆಹಾರಧಾನ್ಯ, ನಿತ್ಯೋಪಯೋಗಿ ವಸ್ತುಗಳು ಹಾಳಾಗಿರುತ್ತವೆ. ಹಾಗಾಗಿ ಅವರಿಗೆ ಜೀವನ ಕಟ್ಟಿಕೊಳ್ಳಲು ತಕ್ಷಣ 10,000 ರೂ. ಪರಿಹಾರ ನೀಡಬೇಕು ಎಂದು ನಿಯಮವಿದ್ದರೂ ಅಧಿಕಾರಿ ವರ್ಗ ಅದನ್ನು ಪಾಲಿಸಲು ಹಿಂದೇಟು ಹಾಕಿದೆ.

•ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ;ಪರಿಹಾರ ಕಲ್ಪಿಸುತ್ತಿಲ್ಲ

•ಸೌಲಭ್ಯ ಕಲ್ಪಿಸಲು ಮೀನಾಮೇಷ, ಕಾನೂನು ಪಾಲನೆಯಾಗುತ್ತಿಲ್ಲ

Advertisement

•ಜನಪ್ರತಿನಿಧಿಗಳ ಸಲಹೆ-ಆದೇಶಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ

•ಸಚಿವರ ಕಟ್ಟುನಿಟ್ಟಿನ ಆದೇಶವಾದ ನಂತರ ಮತ್ತೆ ಮರು ಸಮೀಕ್ಷೆ

•ವಸ್ತುನಿಷ್ಠ ವರದಿ ಸಿಗದೆ ಇರುವುದಕ್ಕೆ ಹಿರಿಯ ಅಧಿಕಾರಿಗಳಿಗೆ ತಲೆನೋವು

•ಸರಿಯಾದ ಮಾಹಿತಿ ನೀಡದ ಹಾವೇರಿ ತಹಸೀಲ್ದಾರ್‌ಗೆ ಶೋಕಾಸ್‌ ನೋಟಿಸ್‌

ಜಿಲ್ಲೆಯಲ್ಲಿ ಇಷ್ಟೊಂದು ನೆರೆ ಹಾನಿಯಾದರೂ ಕೇವಲ 49 ಮನೆಗಳಿಗೆ ತಕ್ಷಣ 10,000ರೂ. ಪರಿಹಾರ ಕೊಡಬಹುದೆಂದು ತೀರ್ಮಾನಿಸಿ ವರದಿ ನೀಡಿತ್ತು. ಈ ವರದಿಯಿಂದ ಆಕ್ರೋಶಗೊಂಡ ಸಚಿವ ಬಸವರಾಜ ಬೊಮ್ಮಾಯಿ, ನುಗ್ಗಿದ ಎಲ್ಲ ಮನೆಗಳಿಗೆ ಕೂಡಲೇ 10 ಸಾವಿರ ರೂ. ಪರಿಹಾರ ನೀಡಬೇಕು. ತಕ್ಷಣ ಮರು ಸಮೀಕ್ಷೆ ಮಾಡಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಿದರು. ಸಚಿವ ಬೊಮ್ಮಾಯಿ ಅವರ ಆದೇಶವಾದ ಕೂಡಲೇ ತಕ್ಷಣ 10,000ರೂ.ಪರಿಹಾರ ನೀಡಬಹುದಾದ ಮನೆಗಳ ಸಂಖ್ಯೆ 49ರಿಂದ 3924ಕ್ಕೆ ಏರಿತು. ಮೊದಲ ವರದಿಯಲ್ಲಿ 14,302 ಮನೆಗಳಿಗೆ ಪರಿಹಾರ ನೀಡಬೇಕಾಗುತ್ತದೆ ಎಂದು ತಿಳಿಸಲಾಗಿತ್ತು. ಈಗ ನೀಡಿದ ಮರುಸಮೀಕ್ಷೆ ವರದಿಯಲ್ಲಿ ಈ ಸಂಖ್ಯೆ 13,590ಕ್ಕೆ ಏರಿದೆ. ಅಂದರೆ ಅಧಿಕಾರಿಗಳು ಯಾವ ರೀತಿ ಕೆಲಸ ಮಾಡುತ್ತಾರೆ ಎಂಬುದಕ್ಕೆ ಮೊದಲ ಹಾಗೂ ಎರಡನೇ ವರದಿ ಕೈಗನ್ನಡಿಯಾಗಿದೆ. ಎರಡನೇ ಸಮೀಕ್ಷೆ ವರದಿಯಲ್ಲೂ ಹಲವು ಹಾನಿಯಾದ ಮನೆಗಳು ಬಿಟ್ಟು ಹೋಗಿವೆ ಎಂಬ ಆರೋಪ ಕೇಳಿ ಬಂದಿದ್ದು, ವಸ್ತುನಿಷ್ಠ ವರದಿ ಸಿಗದೆ ಇರುವುದು ಹಿರಿಯ ಅಧಿಕಾರಿಗಳಿಗೂ ದೊಡ್ಡ ತಲೆನೋವಾಗಿದೆ.

ಶುದ್ಧ ಕುಡಿವ ನೀರು ಸಿಗುತ್ತಿಲ್ಲ: ನೆರೆಯಿಂದ ಜಲಾವೃತವಾದ ಗ್ರಾಮಗಳ ಜನರು ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಬಹುಗ್ರಾಮ ಯೋಜನೆಯ 10ಕ್ಕೂ ಹೆಚ್ಚು ಪಂಪ್‌ಗ್ಳು, ವಿದ್ಯುತ್‌ ಪರಿವರ್ತಕಗಳು, ವಿದ್ಯುತ್‌ ಬೋರ್ಡ್‌ಗಳು ಎಲ್ಲವೂ ನೀರಲ್ಲಿ 8-10 ದಿನ ಮುಳುಗಿ ಹಾಳಾಗಿದ್ದು ದುರಸ್ತಿ ಕಾರ್ಯ ಆಗಿಲ್ಲ. ಇನ್ನು ಕೆಲವು ಕಡೆಗಳಲ್ಲಿ ಪಂಪ್‌, ವಿದ್ಯುತ್‌ ಬೋರ್ಡ್‌ ಎಲ್ಲವೂ ನೀರಲ್ಲಿ ಕೊಚ್ಚಿ ಹೋಗಿದ್ದು ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲದಂತಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್‌ ಆಗಿವೆ. ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಯ 30ಕ್ಕೂ ಹೆಚ್ಚು ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದರಿಂದ ಜನರು ನದಿಯಲ್ಲಿ ಹರಿಯುತ್ತಿರುವ ಅಶುದ್ಧ ನೀರನ್ನೇ ಕುಡಿಯುತ್ತಿದ್ದಾರೆ. ಅಶುದ್ಧ ನೀರು ಸೇವನೆಯಿಂದ ಹಲವು ಗ್ರಾಮಗಳಲ್ಲಿ ಜನರು ಸಾಂಕ್ರಾಮಿಕ ರೋಗಗಳಿಗೂ ತುತ್ತಾಗುತ್ತಿದ್ದಾರೆ. ಹಲವರು ಅಸ್ವಸ್ಥಗೊಂಡಿದ್ದಾರೆ. ಶೀಘ್ರ ಶುದ್ಧ ಕುಡಿಯುವ ನೀರು ಪೂರೈಸುವ ದಿಸೆಯಲ್ಲೂ ಅಧಿಕಾರಿ ವರ್ಗ ನಿರಾಸಕ್ತಿ ತೋರುತ್ತಿದ್ದು, ಜನರು ಆಡಳಿತ ಯಂತ್ರದ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಒಟ್ಟಾರೆ ನೆರೆ ನಿಂತ ಮೇಲೆ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಸಂತ್ರಸ್ತರ ಆಕ್ರೋಶ ಭುಗಿಲೆದ್ದಿದೆ. ಹಿರಿಯ ಅಧಿಕಾರಿಗಳು, ಸಚಿವರು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

 

•ಎಚ್.ಕೆ.ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next