Advertisement

ಎತ್ತಿನಹೊಳೆ ಶಂಕುಸ್ಥಾಪನೆಗೆ ಆಹ್ವಾನಿಸದಿದ್ದಕ್ಕೆ ಆಕ್ರೋಶ

08:47 PM Jan 12, 2020 | Lakshmi GovindaRaj |

ತಿಪಟೂರು: ತಾಲೂಕಿನ ಕೊನೇಹಳ್ಳಿ ಕಾವಲಿನಲ್ಲಿ ಜ.8ರಂದು ನಡೆದ ಎತ್ತಿನಹೊಳೆ ಯೋಜನೆ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮ ಸರಕಾರಿ ಕಾರ್ಯಕ್ರಮವೋ ಅಥವಾ ಖಾಸಗಿ ಕಾರ್ಯಕ್ರಮವೊ ತಿಳಿಯದಾಗಿದೆ. ಈ ಸಂಬಂಧ ಅಧಿಕಾರಿಗಳು ಮಾಹಿತಿ ನೀಡದೇ ತಾಲೂಕು ಆಡಳಿತ ಅವಮಾನ ಮಾಡಿದೆ ಎಂದು ತಾಪಂ ಅಧ್ಯಕ್ಷ ಜಿ.ಎಸ್‌. ಶಿವಸ್ವಾಮಿ ಹಾಗೂ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ತಾಪಂ ಸಭಾಂಗಣದಲ್ಲಿ ನಡೆದ 2019-20ನೇ ಸಾಲಿನ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷರು ಹಾಗೂ ಸದಸ್ಯರು ಅಧಿಕಾರಿಗಳ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಮಾಹಿತಿಗೆ ಆಗ್ರಹಿಸಿದರು. ಸದಸ್ಯರಿಗೆ ಪ್ರತಿಕ್ರಿಯಿಸಿದ ಎತ್ತಿನಹೊಳೆ ಯೋಜನೆ ಅಧಿಕಾರಿ ಎಇಇ ಈಶ್ವರಪ್ಪ, ಕಾರ್ಯಕ್ರಮದ ಕುರಿತು ನನಗೆ ಹೆಚ್ಚಿನ ಮಾಹಿತಿ ಇಲ್ಲ. ಸಚಿವರು, ಶಾಸಕರು, ನೀರಾವರಿ ಇಲಾಖೆ ಉನ್ನತ ಅಧಿಕಾರಿಗಳು ಬಂದಿದ್ದರು.

ನನಗೆ ತಿಳಿದಿರುವಂತೆ, ಇದು ಸರ್ಕಾರಿ ಕಾರ್ಯಕ್ರಮವಲ್ಲ. ಕಾಮಗಾರಿಗೆ ಶಂಕುಸ್ಥಾಪನೆ ಮಾಡಿಸಿರುವುದು ಗುತ್ತಿಗೆದಾರರು. ಅವರೇ ನಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರೇ ವಿನಾ ನಮ್ಮ ಮಟ್ಟದಲ್ಲಿ ಇದು ನಡೆದಿಲ್ಲ ಎಂದರು. ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ ಅಧ್ಯಕ್ಷರು, ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಇ ಈಶ್ವರಪ್ಪ, ಸದ್ಯ 0.3 ಟಿಎಂಸಿ ನೀರು ಅಧಿಕೃತವಾಗಿ ಲಭ್ಯವಿದೆ. ಹೆಚ್ಚಿನ ನೀರಿಗೆ ಸಚಿವರು, ಶಾಸಕರು ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಪ್ರಯತ್ನ, ಮಾತುಕತೆ ನಡೆಸಿದ್ದಾರೆ.

3 ತಾಲೂಕುಗಳಿಂದ 1.70 ಟಿಎಂಸಿ ನೀರು ನಿಗದಿಯಾಗಿರುವ ವಿಷಯ ತಿಳಿಸಿದ್ದಾರೆ. ಉಳಿದಂತೆ ಯಾವ ಕೆರೆಗಳಿಗೆ ಎಷ್ಟು ನೀರು ಎಂಬುದನ್ನು ಶಾಸಕರೇ ತಿಳಿಸುತ್ತಾರೆ. ನಮ್ಮದ ಕಾಮಗಾರಿಯಷ್ಟೇ. ಭೂ ಸ್ವಾಧೀನ, ಭೂ ಪರಿಹಾರ ಸೇರಿ ಎಲ್ಲವನ್ನೂ ಸರ್ಕಾರ, ಜಿಲ್ಲಾಡಳಿತ, ತಾಲೂಕು ಆಡಳಿತ ನಿರ್ವಹಿಸುತ್ತವೆ ಎಂದು ಹೇಳಿದರು. ಸದಸ್ಯ ಎಂ.ಡಿ.ರವಿಕುಮಾರ್‌ ಹಾಗೂ ನಾಗರಾಜು ಮಾತನಾಡಿ, ಆಲ್ಬೂರು, ನೊಣವಿನಕೆರೆ ರಸ್ತೆ ಮತ್ತು ನಗರದ ಗೋವಿನಪುರದ ಹಾಲ್ಕುರಿಕೆ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಎಂದರು.

ಇದಕ್ಕೆ ಉತ್ತರಿಸಿದ ಪಿಡಬ್ಲೂಡಿ ಸಹಾಯಕ ಸಿಬ್ಬಂದಿ ದೊಡ್ಡಯ್ಯ ಮಾತನಾಡಿ, ಪ್ರವಾಸಿ ಮಂದಿರದ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ಅವರನ್ನು ವಿಚಾರಿಸಿ ಮುಂದಿನ ಕ್ರಮಕೈಗೊಳ್ಳುತ್ತೇವೆ. ರಸ್ತೆಗೆ ಸರಿಯಾದ ಡಾಂಬರು ಹಾಕದೇ ಕಾಟಾಚಾರಕ್ಕೆ ಮಾಡಿರುವುದರಿಂದ ರಸ್ತೆ ಹಾಳಾಗಿದೆ. ಟ್ಯಾಂಕರ್‌ನಿಂದ ನೀರು ಹಾಕಿದರೂ ವಾಹನ ದಟ್ಟಣೆ ಇರುವುದರಿಂದ ಧೂಳು ಹೆಚ್ಚಾಗುತ್ತದೆ ಎಂದರು.

Advertisement

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಂದೀಶ್‌ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ, ಸದಸ್ಯ ರವಿಕುಮಾರ್‌ ಮಾತನಾಡಿ, ತಾಲೂಕಿಗೆ ತೆಂಗು ಜೀವನಾಧಾರ ಬೆಳೆ. ಇದಕ್ಕೆ ನೂರಾರು ತರಹದ ರೋಗಗಳು ಹರಡುತ್ತಿರುವುದರಿಂದ ಬೆಳೆಗೆ ಹಾನಿಯಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇಲಾಖೆಯಲ್ಲಿ ಯೋಜನೆ, ಸೌಲಭ್ಯಗಳನ್ನು ಕರಪತ್ರ ಮುದ್ರಿಸಿ ಗ್ರಾಪಂ ಹಂತದಲ್ಲಿ ಮಾಹಿತಿ ನೀಡಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ತಾಪಂ ಇಒ ಸುದರ್ಶನ್‌, ಉಪಾಧ್ಯಕ್ಷ ನೊಣವಿನಕೆರೆ ಶಂಕರ್‌, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿ ಕುಮಾರ್‌ ಸೇರಿದಂತೆ ಇಲಾಖೆ ಅಧಿಕಾರಿಗಳು ಹಾಗೂ ಸದಸ್ಯರು ಇದ್ದರು.

ನಿಮ್ಮ ಹಣದಿಂದ ನಿರ್ಮಿಸಿದ್ದರೆ ಫ‌ಲಕ ಹಾಕಿಕೊಳ್ಳಿ: ಲೋಕೋಪಯೋಗಿ ಮತ್ತು ಒಳನಾಡು ಬಂದರು ಇಲಾಖೆ ಅಧಿಕಾರಿ ಗೈರಾಗಿದ್ದ ಕಾರಣ, ಅಧೀನ ಸಿಬ್ಬಂದಿ ಎಇ ದೊಡ್ಡಯ್ಯನವರ ಬಳಿ ಮಾಹಿತಿ ಪಡೆದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ನ್ಯಾಕೇನಹಳ್ಳಿ ಸುರೇಶ್‌ ಮಾತನಾಡಿ, ಪ್ರವಾಸಿ ಮಂದಿರಕ್ಕೆ ಸಾರ್ವಜನಿಕರು ಹಾಗೂ ಜನಪತ್ರಿನಿಧಿಗಳಾಗಲಿ ಹೋಗುವಂತಿಲ್ಲ ಎಂಬ ಆದೇಶ ನೀಡಿದ್ದೀರಿ.

ಕಳೆದ ವಾರ ನಾನು ಹಾಗೂ ದಸಂಸ ಜಿಲ್ಲಾಧ್ಯಕ್ಷ ಕುಂದೂರು ತಿಮ್ಮಯ್ಯ ಮಾತನಾಡಲು ಹೋದರೆ ಅಲ್ಲಿನ ಸಿಬ್ಬಂದಿ ಒಳಗಡೆ ಬಿಡಲಿಲ್ಲ. ಕೇಳಿದರೆ ಅಧಿಕಾರಿಗಳು ಬಿಡಬೇಡಿ ಎಂದಿದ್ದಾರೆ ಎಂದು ಹೇಳುತ್ತಾರೆ. ಇದು ಯಾರ ಮನೆ ಆಸ್ತಿ. ನಿಮ್ಮ ಹಣದಿಂದ ಪ್ರವಾಸಿ ಮಂದಿರವನ್ನು ಕಟ್ಟಿಸಿದ್ದರೆ ಫ‌ಲಕ ಹಾಕಿಕೊಳ್ಳಿ. ಯಾರು ಅಡ್ಡ ಬರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭತ್ತ, ರಾಗಿ ಗುಣಮಟ್ಟದ್ದಾಗಿರಲಿ: ಕೃಷಿ ಇಲಾಖೆಯಿಂದ ಮಾಹಿತಿ ನೀಡಿದ ಸಹಾಯಕ ನಿರ್ದೇಶಕ ಜಗನ್ನಾಥ್‌, ಈ ವರ್ಷ ರಾಗಿ ಬೆಳೆಯು ಉತ್ತಮವಾಗಿ ಫ‌ಸಲು ನೀಡಿದ್ದು, ಈಗಾಗಲೇ ಎಪಿಎಂಸಿ ಯಾರ್ಡ್‌ನಲ್ಲಿ ರಾಗಿ ಖರೀದಿ ಕೇಂದ್ರ ತೆರೆಯಲಾಗಿದ್ದು, ಕ್ವಿಂಟಲ್‌ಗೆ 3,150 ರೂ. ಬೆಂಬಲ ಬೆಲೆ ನೀಡಲಾಗುತ್ತಿದೆ. ರಾಗಿ ಕಪ್ಪಾಗಿದ್ದರೂ ಗುಣಮಟ್ಟದಿಂದ ಇರಬೇಕು. ಒಬ್ಬ ರೈತರಿಂದ ಒಂದು ಎಕರೆಗೆ 15 ಕ್ವಿಂಟಾಲ್‌ನಂತೆ ಗರಿಷ್ಠ 75 ಕ್ವಿಂಟಲ್‌ವರೆಗೆ ರಾಗಿ ಖರೀದಿಸಲಾಗುತ್ತದೆ. ಸೂಕ್ತ ದಾಖಲೆ ನೀಡಿದರೆ 1 ವಾರದಲ್ಲಿ ರೈತರ ಖಾತೆಗೆ ಹಣ ಜಮಾ ಆಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next