Advertisement

ಅನುದಾನ ಕಡಿತಕ್ಕೆ ಆಕ್ರೋಶ್ರ

11:01 AM Sep 30, 2019 | Suhan S |

ಬೆಂಗಳೂರು: ಬಿಟಿಎಂ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಈ ಹಿಂದಿನ ಸಮ್ಮಿಶ್ರ ಸರ್ಕಾರ ನೀಡಿದ್ದ ಅನುದಾನವನ್ನು ರಾಜ್ಯ ಸರ್ಕಾರ ಕಡಿತಗೊಳಿಸಿದೆ ಎಂದು ಆರೋಪಿಸಿ ಜಯನಗರ ಶಾಪಿಂಗ್‌ ಕಾಂಪ್ಲೆಕ್ಸ್‌ ಎದುರು ಕಾಂಗ್ರೆಸ್‌ ನಾಯಕರು ಭಾನುವಾರ ಪ್ರತಿಭಟನಾ ರ್ಯಾಲಿ ನಡೆಸಿದರು.

Advertisement

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಈ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ಬಿಡುಗಡೆ ಮಾಡಲಾಗಿದ್ದ ಅನುದಾನವನ್ನು ಕಡಿತ ಮಾಡುವ ಮೂಲಕ, ಯಡಿಯೂರಪ್ಪ ನೇತೃತ್ವದ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಅನುಸರಿಸುತ್ತಿದೆ. ಹಿಂದಿನ ಸರ್ಕಾರಗಳು ಪ್ರತಿಪಕ್ಷ ಶಾಸಕರ ಕ್ಷೇತ್ರಗಳ ಅನುದಾನ ಕಡಿತ ಮಾಡುವ ಮಟ್ಟಕ್ಕೆ ಇಳಿದಿರಲಿಲ್ಲ. ರಾಜ್ಯ ಸರ್ಕಾರದ ಧೋರಣೆ ಹೀಗೇ ಮುಂದುವರಿದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈಗಾಗಲೇ ಈ ಎರಡೂ ಕ್ಷೇತ್ರಗಳಲ್ಲಿ ಅನುದಾನ ಹಂಚಿಕೆಗೆ ಅನುಗುಣವಾಗಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಇದೀಗ ಅನುದಾನ ಕಡಿತ ಮಾಡಿರುವುದರಿಂದ ಕಾಮಗಾರಿಗಳು ನಿಲ್ಲುವ ಹಂತ ತಲುಪಿವೆ ಎಂದು ಹೇಳಿದರು.

ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಹಿಂದಿನ ಸಮ್ಮಿಶ್ರ ಸರ್ಕಾರ 316.55 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 194.55 ಕೋಟಿ ರೂ. ಅನುದಾನ ಕಡಿತಗೊಳಿಸಿ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದರು. ಈಗ ಮಾಡುತ್ತಿರುವುದು ಏನು? ದ್ವೇಷದ ರಾಜಕಾರಣಕ್ಕೆ ಇದಕ್ಕಿಂತ ನಿದರ್ಶನ ಬೇಕಾ? ಎಂದು ಪ್ರಶ್ನೆಮಾಡಿದರು.

ಬಿಬಿಎಂಪಿಯಿಂದ ಈ ವರ್ಷ ನಿಗದಿಮಾಡಿದ್ದ ಅನುದಾನದಲ್ಲಿಯೂ ಶೇ.50 ರಷ್ಟು ಕಡಿತ ಮಾಡಲಾಗಿದ್ದು, ಮಾದರಿ ಕ್ರೀಡಾಂಗಣ ಎಂದೇ ಗುರುತಿಸಿಕೊಂಡಿರುವ ಜಯನಗರ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣಕ್ಕೆ ನಿಗದಿಮಾಡಿದ್ದ ಐದು ಕೋಟಿ ರೂ. ಅನುದಾನವನ್ನು ವಾಪಸ್‌ ಪಡೆದಿದ್ದಾರೆ. ಅದೇ ರೀತಿ ಜಯನಗರ ಶಾಪಿಂಗ್‌ ಕಾಂಪ್ಲೆಕ್ಸ್‌ ಅಭಿವೃದ್ಧಿಗೆ ಮೀಸಲಿರಿಸಿದ್ದ 50 ಕೋಟಿ ರೂ. ಅನುದಾನದಲ್ಲಿ 35 ಕೋಟಿ ರೂ. ಕಡಿತಮಾಡಲಾಗಿದೆ ಎಂದು ಆರೋಪಿಸಿದರು. ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next