Advertisement

ನೆರೆ ಪರಿಹಾರದಲ್ಲಿ ತಾರತಮ್ಯಕ್ಕೆ ಆಕ್ರೋಶ

11:02 AM Sep 14, 2019 | Team Udayavani |

ಬಾಗಲಕೋಟೆ: ಯೋಜನಾಬಾಧಿತ ಪ್ರದೇಶ ವ್ಯಾಪ್ತಿಯಲ್ಲಿ ಮನೆ ಮುಳುಗಡೆಗೊಂಡು, ಪರಿಹಾರ ಪಡೆದವರಿಗೆ ನೆರೆ ಪರಿಹಾರ ನೀಡಲು ಅವಕಾಶವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದು, ಒಂದು ವೇಳೆ ಯೋಜನಾಬಾಧಿತರಿಗೆ ನೆರೆ ಪರಿಹಾರ ನೀಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ವಿವಿಧ ಸಂಘಟನೆಗಳ ಪ್ರಮುಖರು ಎಚ್ಚರಿಕೆ ನೀಡಿದ್ದಾರೆ.

Advertisement

ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಪಂ ಉಪಾಧ್ಯಕ್ಷ, ರೈತ ಸಂಘದ ಮುಖಂಡ ಮುತ್ತಪ್ಪ ಕೋಮಾರ, ಸಾಮಾಜಿಕ ಹೋರಾಟಗಾರ ನಾಗರಾಜ್‌ ಹೊಂಗಲ್, ಕರವೇ ಅಧ್ಯಕ್ಷ ರಮೇಶ ಬದ್ನೂರ, ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಮೊದಲು, ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ನಿಯಮಗಳ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಸಂತ್ರಸ್ತರಲ್ಲಿ ತಾರತಮ್ಯ ಬೇಡ: ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿ ಪ್ರವಾಹದಿಂದ ಜಿಲ್ಲೆಯ 195 ಹಳ್ಳಿಗಳು ಮುಳುಗಡೆಗೊಂಡಿವೆ. ಇದರಲ್ಲಿ 98 ಹಳ್ಳಿಗಳು ಯುಕೆಪಿ, ಆಸರೆ ಹಾಗೂ ನಾರಾಯಣಪುರ ಡ್ಯಾಂ ಹಿನ್ನೀರ ವ್ಯಾಪ್ತಿಯಲ್ಲಿ ಈ ಹಿಂದೆಯೇ ಮುಳುಗಡೆಗೊಂಡಿದ್ದು, ಮನೆಗಳಿಗೆ ಪರಿಹಾರ ಕೊಡಲಾಗಿದೆ. ಆದರೂ ಜನರು ಅಲ್ಲೇ ವಾಸಿಸುತ್ತಿದ್ದು ಅವರಿಗೆ ಸದ್ಯ ಪರಿಹಾರ ಕೊಡಲ್ಲ ಎನ್ನುತ್ತಿದ್ದಾರೆ. ಜನರು, ಮುಳುಗಡೆಗೊಂಡ ಗ್ರಾಮದಲ್ಲೇ ಮಜಾ ಮಾಡಲು ವಾಸಿಸುತ್ತಿಲ್ಲ. ಅವರ ಮನೆ ಮುಳುಗಿದ್ದು, ಹೊಲಗಳು ಸ್ವಾಧೀನಗೊಂಡಿಲ್ಲ. ಹೀಗಾಗಿ ಕೃಷಿಯನ್ನೇ ನಂಬಿ ಜೀವನ ನಡೆಸುವ ಜನರು, ಮೂಲ ಗ್ರಾಮದಿಂದ ದೂರ ಇರುವ ಪುನರ್‌ವಸತಿ ಕೇಂದ್ರಗಳಿಗೆ ಹೋಗಿಲ್ಲ. ಈಗ ಪ್ರವಾಹ ಬಂದಾಗ ಅವರ ಮನೆ, ಬೆಳೆ ಎಲ್ಲವೂ ಮುಳುಗಿದೆ. ಅವರನ್ನು ಪರಿಹಾರದಿಂದ ವಂಚಿತರನ್ನಾಗಿ ಮಾಡಬಾರದು. ಎಲ್ಲಾ ಸಂತ್ರಸ್ತರನ್ನು ಒಂದೇ ರೀತಿ ಪರಿಗಣಿಸಿ ಪರಿಹಾರ ನೀಡಬೇಕು. ಒಂದು ವೇಳೆ ತಾರತಮ್ಯ ಮಾಡಿದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ವಾಸ್ತವದ ಪರಿಹಾರ ಕೊಡಿ: ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್‌ ಹಾಗೂ ರಾಜ್ಯದ ಎಸ್‌ಡಿಆರ್‌ಎಫ್‌ ನಿಯಮಗಳ ಪ್ರಕಾರ ಪರಿಹಾರ ನೀಡಿದರೆ, ಜಿಲ್ಲೆಯ ಯಾವ ರೈತರು, ಸಣ್ಣಪುಟ್ಟ ವ್ಯಾಪಾರಸ್ಥರು ಬದುಕುವುದಿಲ್ಲ. 15ರಿಂದ 20 ಎಕರೆ, ಕೆಲವು ದೊಡ್ಡ ರೈತರ ಬೆಳೆಹಾನಿಯಾಗಿದ್ದರೂ ಅವರಿಗೆ ನಿಯಮಗಳ ಪ್ರಕಾರ ಕೇವಲ 2 ಹೆಕ್ಟೇರ್‌ಗೆ ಪರಿಹಾರ ನೀಡುವುದಾಗಿ ಹೇಳುತ್ತಿದ್ದಾರೆ. ಅದೂ ಒಂದು ಹೆಕ್ಟೇರ್‌ಗೆ ಕೇವಲ 5 ಸಾವಿರ ಪರಿಹಾರ ನೀಡಲು ಈಗಿರುವ ನಿಯಮಗಳಲ್ಲಿ ಅವಕಾಶವಿದೆ. ಈ ಪರಿಹಾರ ಯಾವುದಕ್ಕೂ ಸಾಕಾಗಲ್ಲ. ವಾಸ್ತವದಲ್ಲಿ ಎಷ್ಟು ಹಾನಿಯಾಗಿದೆಯೋ ಅಷ್ಟು ಪರಿಹಾರ ಕೊಡಬೇಕು. ಒಂದು ಎಕರೆ ಕಬ್ಬು ಬೆಳೆಲು ಗರಿಷ್ಠ 1.50 ಲಕ್ಷ ಖರ್ಚಾಗುತ್ತದೆ. ಆದರೆ, ರೈತರು ಕೇಳುತ್ತಿರುವ 1 ಲಕ್ಷ ಪರಿಹಾರ ಮಾತ್ರ. ಈ ಪರಿಹಾರ ನೀಡಲೇಬೇಕು ಎಂದು ಆಗ್ರಹಿಸಿದರು.

ಬಹಿರಂಗ ಅಧಿವೇಶನ: ನೆರೆ ಸಂತ್ರಸ್ತರ ಹಲವು ಸಮಸ್ಯೆಗಳ ಕುರಿತು ಬಹಿರಂಗ ಅಧಿವೇಶನದಲ್ಲಿ ಚರ್ಚಿಸಿ, ಸರ್ಕಾರಕ್ಕೆ ಹಕ್ಕೋತ್ತಾಯ ಸಲ್ಲಿಸಲು ನಿರ್ಧರಿಸಲಾಗಿದೆ. ಸೆ.15ರಂದು ಕಾಳಿದಾಸ ಕಾಲೇಜು ಆವರಣದಲ್ಲಿ ನಡೆಯುವ ಅಧಿವೇಶನಕ್ಕೆ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಜಿಲ್ಲೆಯ ಸಂಸದ ಪಿ.ಸಿ. ಗದ್ದಿಗೌಡರ ಅವರಿಗೆ ಆಹ್ವಾನ ನೀಡಲಾಗಿದೆ. ನೆರೆ ಪೀಡಿತ 8 ಜಿಲ್ಲೆಗಳ ಜನಪ್ರತಿನಿಧಿಗಳು, ಸಂತ್ರಸ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

Advertisement

ರೈತ ಸಂಘದ ಚಾಮರಸ ಮಾಲಿಪಾಟೀಲ, ಭಾರತೀಯ ಕಿಸಾನ್‌ ಸಂಘದ ವಿ.ಜಿ. ರೇವಡಿಗಾರ, ಸಂತ್ರಸ್ತರ ಹೋರಾಟ ಸಮಿತಿಯ ಪ್ರಕಾಶ ಅಂತರಗೊಂಡ, ನಭಿ ಅನಗವಾಡಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next