Advertisement

ಟಿಕೆಟ್‌ ತಪ್ಪುವ ಸುದ್ದಿ ತಂದ ಆಕ್ರೋಶ

12:15 PM Apr 20, 2018 | |

ದಾವಣಗೆರೆ: ಮಾಯಕೊಂಡ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿರುವ ಮಾಜಿ ಶಾಸಕ ಎಂ. ಬಸವರಾಜ ನಾಯ್ಕರಿಗೆ ಟಿಕೆಟ್‌ ಸಿಗಲ್ಲ ಎಂಬ ಸುದ್ದಿ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಗುರುವಾರ ಬೆಳಗ್ಗೆ ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌ ರ ಶಿರಮಗೊಂಡನಹಳ್ಳಿ ಮನೆ ಮುಂದೆ ಜಮಾಯಿಸಿ, ಪ್ರತಿಭಟಿಸಿದರು.

Advertisement

ಚನ್ನಗಿರಿ ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ, ಕೆಲ ಹೊತ್ತು ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ್‌ ವಿರುದ್ಧ ಘೋಷಣೆ ಕೂಗಿದರು. ಕೆಲ ಕಾರ್ಯಕರ್ತರು ಕಣ್ಣೀರಿಟ್ಟರು. 

ಬುಧವಾರ ರಾತ್ರಿ ಸಂಸದ ಜಿ.ಎಂ. ಸಿದ್ದೇಶ್ವರ್‌ ಮಾಯಕೊಂಡ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಎಂ. ಬಸವರಾಜ ನಾಯ್ಕರಿಗೆ ಫೋನ್‌ ಮೂಲಕ ನಿಮಗೆ ಟಿಕೆಟ್‌ ಸಿಗುವುದು ಅನುಮಾನ. ಯಡಿಯೂರಪ್ಪನವರು ಪ್ರೊ| ಲಿಂಗಣ್ಣನವರ ಬಗ್ಗೆ ಒಲವು ಹೊಂದಿದ್ದಾರೆ ಎಂದು ಹೇಳಿದ್ದಾಗಿ ಬಸವರಾಜ ನಾಯ್ಕ ತಮ್ಮ ಕೆಲ ಆಪ್ತರಿಗೆ ತಿಳಿಸಿದ್ದಾರೆ. ವಿಷಯ ತಿಳಿಯುತ್ತಲೇ ರಾತ್ರಿಯೇ ತಮ್ಮ ಮನೆ ಮುಂದೆ ಜಮಾಯಿಸಿದ ಅಭಿಮಾನಿಗಳನ್ನು ಸಮಾಧಾನಪಡಿಸಿದ ಬಸವರಾಜ ನಾಯ್ಕ ತಮ್ಮ ನಾಯಕರ ಜೊತೆ ಮಾತುಕತೆ ಮಾಡಿದ್ದರಂತೆ.

ಗುರುವಾರ ಬೆಳಗ್ಗೆ ಬಸವರಾಜ ನಾಯ್ಕರ ಬೆಂಬಲಿಗರು, ಅಭಿಮಾನಿಗಳು ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌ ಮನೆ ಮುಂದೆ ಜಮಾಯಿಸಿ, ತಮ್ಮ ನಾಯಕರಿಗೆ ಟಿಕೆಟ್‌ ಕೊಡಿಸಬೇಕೆಂದು ಪಟ್ಟು ಹಿಡಿದು, ಚನ್ನಗಿರಿ ರಸ್ತೆಯಲ್ಲಿ ಟೈರ್‌ ಸುಟ್ಟು ಕೆಲ ಕಾಲ ರಸ್ತೆ ತಡೆದರು.

ವಿಷಯ ತಿಳಿದು ತಮ್ಮ ಪ್ರಚಾರ ಕೈಬಿಟ್ಟು ಸ್ಥಳಕ್ಕೆ ಆಗಮಿಸಿದ ಎಸ್‌.ಎ. ರವೀಂದ್ರನಾಥ, ವಿಧಾನ ಪರಿಷತ್‌ ಮುಖ್ಯ ಸಚೇತಕ ಡಾ| ಎ.ಎಚ್‌. ಶಿವಯೋಗಿ ಸ್ವಾಮಿ ಇತರರು, ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು. ಮುಖಂಡರ ಜೊತೆ ಮಾತುಕತೆ ನಡೆಸಿ, ಪಕ್ಷ ಅಧಿಕೃತವಾಗಿ ಅಭ್ಯರ್ಥಿ ಘೋಷಿಸುವ ತನಕ ಯಾವುದೇ ನಿರ್ಧಾರ ಕೈಗೊಳ್ಳದಿರಲು ಸಲಹೆ ನೀಡಿದರು.

Advertisement

ಜಿಪಂ ಸದಸ್ಯ ನಟರಾಜ್‌, ತಾಪಂಉಪಾಧ್ಯಕ್ಷ ಸಂಗಜ್ಜ ಗೌಡ, ಮುಖಂಡರಾದ ಶಾಮನೂರು ಲಿಂಗರಾಜ, ಬಿ.ಎಸ್‌.ಜಗದೀಶ್‌, ಕಡ್ಲೆàಬಾಳು ಧನಂಜಯ, ಗಂಗಾನಾಯ್ಕ ಇತರರು ಈ ಸಂದರ್ಭದಲ್ಲಿದ್ದರು. ತಕ್ಷಣ ಬಸವರಾಜ ನಾಯ್ಕರ ಉಚ್ಛಾಟಿಸಿ 
ದಾವಣಗೆರೆ: ಹಿರಿಯ ಮುಖಂಡರನ್ನೇ ಬಹಿರಂಗವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಪಕ್ಷದ ವರ್ಚಸ್ಸಿಗೆ ಕುಂದು ಉಂಟು ಮಾಡಿರುವ ಮಾಜಿ ಶಾಸಕ ಎಂ. ಬಸವರಾಜನಾಯ್ಕ ಅವರನ್ನು ತಕ್ಷಣವೇ ಉಚ್ಛಾಟಿಸಬೇಕೆಂದು ಮಾಯಕೊಂಡ ಕ್ಷೇತ್ರದ ಬಿಜೆಪಿ
ಟಿಕೆಟ್‌ ಆಕಾಂಕ್ಷಿ, ವಕೀಲ ಕೆ.ಎಚ್‌.ವೆಂಕಟೇಶ್‌ ಒತ್ತಾಯಿಸಿದ್ದಾರೆ.

ಮಾಯಕೊಂಡ ಕ್ಷೇತ್ರದ ಟಿಕೆಟ್‌ ಇನ್ನೂ ಅಂತಿಮವಾಗಿಯೇ ಇಲ್ಲ. ಆದರೂ, ತಮ್ಮ ಬೆಂಗಲಿಗರ ಮೂಲಕ ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌ ಮನೆ ಮುಂದೆ ಪ್ರತಿಭಟನೆ ನಡೆಸಿ, ಟಿಕೆಟ್‌ಗಾಗಿ ಪರೋಕ್ಷ ಒತ್ತಡ ಹಾಕಿದ್ದಾರೆ. ಅಲ್ಲದೆ
ತಮಗೆ ಟಿಕೆಟ್‌ ನೀಡದೇ ಹೋದಲ್ಲಿ ಶಿಕಾರಿಪುರ ಕ್ಷೇತ್ರದಲ್ಲಿ ಪಕ್ಷದ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರನ್ನೇ ಸೋಲಿಸುವುದಾಗಿ ಬೆದರಿಕೆ ಹಾಕಿರುವ ಅವರನ್ನು ಮುಖಂಡರು ತಕ್ಷಣವೇ ಉಚ್ಛಾಟಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

2008ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್‌ನಲ್ಲಿದ್ದ ಎಂ. ಬಸವರಾಜನಾಯ್ಕ ಏಕಾಏಕಿ ಬಿಜೆಪಿ ಟಿಕೆಟ್‌ ಪಡೆದು, ಶಾಸಕರಾಗಿಯೂ ಆಯ್ಕೆಯಾದರು. ನಂತರ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿದ್ದರು. ಆಗ ಯಾರೂ ಸಹ ಅವರ ವಿರುದ್ಧ ಪ್ರತಿಭಟನೆ ಮಾಡಿರಲಿಲ್ಲ. ಆಗ ನಾನು ಸಹ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ಪಕ್ಷ ಹಾಗೂ ಮುಖಂಡರ ತೀರ್ಮಾನಕ್ಕೆ ಬದ್ಧರಾಗಿ ಕೆಲಸ ಮಾಡಿದ್ದೆವು.
 
ಬಿಜೆಪಿಯ ತತ್ವ, ಸಿದ್ಧಾಂತಗಳೇ ಗೊತ್ತಿಲ್ಲದ ಬಸವರಾಜ ನಾಯ್ಕ ಬೆಂಬಲಿಗರ ಮೂಲಕ ಪ್ರತಿಭಟನೆ ನಡೆಸಿ, ಹಿರಿಯ ಮುಖಂಡರ ಬಗ್ಗೆಯೇ ಅತ್ಯಂತ ಅಶ್ಲೀಲ ಪದಗಳಲ್ಲಿ ನಿಂದಿಸಲು ಕಾರಣವಾಗಿದ್ದಾರೆ. ರಾಜ್ಯ ಅಧ್ಯಕ್ಷ ಯಡಿಯೂರಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ್‌ ವ್ಯಕ್ತಿತ್ವಕ್ಕೆ ಕುಂದು ಉಂಟು ಮಾಡಿರುವ ಅವರ ವಿರುದ್ಧ ತಾವು ಮಾನಹಾನಿ ಮೊಕದ್ದಮೆ ದಾಖಲಿಸುವುದಾಗಿ ಹೇಳಿದರು.

ಈ ಬಾರಿ ನಾನು ಸಹ ಟಿಕೆಟ್‌ ಆಕಾಂಕ್ಷಿ. ಪಕ್ಷದ ಮುಖಂಡರು ಒಂದೊಮ್ಮೆ ಬಸವರಾಜ ನಾಯ್ಕರಿಗೆ ಟಿಕೆಟ್‌ ಕೊಟ್ಟರೂ ಅವರ ಪರವಾಗಿಯೇ ಕೆಲಸ ಮಾಡುತ್ತೇವೆ. ನಮಗೆ ವ್ಯಕ್ತಿಗಿಂತ ಪಕ್ಷವೇ ಮುಖ್ಯ. ಆದರೆ, ಪಕ್ಷವೇ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳದ ಬಸವರಾಜ ನಾಯ್ಕ, ಟಿಕೆಟ್‌ ತಪ್ಪಲಿದೆ ಎಂಬ ಲೆಕ್ಕದಲ್ಲಿ ಯಡಿಯೂರಪ್ಪ, ಸಿದ್ದೇಶ್ವರ್‌ ವಿರುದ್ಧ ಕೆಟ್ಟ ರೀತಿಯಲ್ಲಿ ಮಾತನಾಡಿದ್ದು ಸರಿಯಲ್ಲ ಎಂದು ದೂರಿದರು.

ಜೆಡಿಎಸ್‌ ಟಿಕೆಟ್‌ಗೆ ಯತ್ನಿಸಿ ಬಿಜೆಪಿ ಟಿಕೆಟ್‌ ತಪ್ಪಿದರೆ ಜೆಡಿಎಸ್‌ ಟಿಕೆಟ್‌ಗೆ ಯತ್ನಿಸಿ. ಯಾವುದೇ ಶ್ರಮ ಇಲ್ಲದೆ ಟಿಕೆಟ್‌ ಸಿಗಲಿದೆ. ಪಕ್ಷದ ನಾಯಕರು ಕೆಲವರು ಕರೆ ಮಾಡಿ, ಆಹ್ವಾನ ಸಹ ಮಾಡಿದ್ದಾರೆ. ಈಗಲೇ ನೀವು ಅತ್ತ ಗಮನ ಹರಿಸಿ ಎಂದು ಕೆಲ ಕಾರ್ಯಕರ್ತರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು. ಎಲ್ಲವನ್ನೂ ಕೇಳುತ್ತಿದ್ದ ಬಸವರಾಜ ನಾಯ್ಕ ಕೆಲಹೊತ್ತು ಭಾವುಕರಾಗಿ ಕಣ್ಣೀರಿಟ್ಟರು. ರಾಯಣ್ಣ ಬ್ರಿಗೇಡ್‌ ಜೊತೆಗೆ ಗುರುತಿಸಿಕೊಂಡಿದ್ದೇ ಈ ಎಲ್ಲಾ ಗೊಂದಲಕ್ಕೆ ಕಾರಣ ಎಂದು ಆರೋಪಿಸಿದ ಕಾರ್ಯಕರ್ತರು, ರವೀಂದ್ರನಾಥ್‌ ಈಶ್ವರಪ್ಪ ಮತ್ತಿತರೆ ಹಿರಿಯರ ಮಾತುಕತೆ ನಡೆಸಬೇಕು. ಪಕ್ಷಕ್ಕಾಗಿ ದುಡಿದವರಿಗಿಂತ ಕೆಜೆಪಿಗೆ ಹೋದವರಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಸ್ಪರ್ಧೆಯಿಂದ ಹಿಂದೆ ಸರಿಯಲ್ಲ ಮಾಜಿ ಶಾಸಕ ಎಂ. ಬಸವರಾಜ ನಾಯ್ಕಗೆ ಟಿಕೆಟ್‌ ನೀಡದೆ ಇದ್ದರೆ ದಾವಣಗೆರೆ ಉತ್ತರ ಕ್ಷೇತ್ರದಿಂದ ಟಿಕೆಟ್‌ ಪಡೆದಿರುವ ಮಾಜಿ ಸಚಿವ ರವೀಂದ್ರನಾಥ್‌ ಸಹ ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರೆ ಎಂಬ ವದಂತಿ ಹರಡಿತ್ತು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಉತ್ತರಿಸಿದ ರವೀಂದ್ರನಾಥ್‌, ನಾನು ಅಂತಹ ಯಾವ ತೀರ್ಮಾನ ತೆಗೆದುಕೊಂಡಿಲ್ಲ. ವರಿಷ್ಠರ ಜೊತೆ ಮಾತುಕತೆ ಮಾಡುತ್ತೇನೆ ಎಂದಷ್ಟೇ ಹೇಳಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next