Advertisement

ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

04:32 PM Sep 14, 2017 | |

ತಾಳಿಕೋಟೆ: ರಾಜ್ಯಾದ್ಯಂತ ಸರ್ಕಾರಿ, ಖಾಸಗಿ ಹಾಗೂ ಡಿಮ್ಡ್ ವಿಶ್ವ ವಿದ್ಯಾಲಯ ಒಳಗೊಂಡಂತೆ ವಿವಿಗಳ ಕುಲಪತಿ ನೇಮಕಾತಿ ಮಾಡುವಲ್ಲಿ ರಾಜ್ಯ ಸರ್ಕಾರವು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಸಂಘಟನೆ ವತಿಯಿಂದ
ವಿದ್ಯಾರ್ಥಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ವಿಶೇಷ ತಹಶಿಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಎಬಿವಿಪಿ ನಗರ ಕಾರ್ಯದರ್ಶಿ ಕಿರಣ ಬಡಿಗೇರ ಮಾತನಾಡಿ, ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಮುಖ್ಯಪಾತ್ರ ವಹಿಸುವ ಅನೇಕ ಚಿಂತಕರು, ಆಧ್ಯಾಪಕರು, ಸಂಶೋಧಕರನ್ನು ಸೃಷ್ಟಿಸುವ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳೇ ಇಲ್ಲದಂತ ಪರಿಸ್ಥಿತಿ ಬಂದಿದೆ. ಅಲ್ಲದೇ ರಾಜ್ಯದ ಒಟ್ಟಾರೆ ವಿಶ್ವವಿದ್ಯಾಲಯದ ಕಾಯಂ ಉಪನ್ಯಾಸಕರ ಸಂಖ್ಯೆ ಶೇ. 50ಕ್ಕಿಂತಲೂ ಹೆಚ್ಚು ಖಾಲಿ ಹುದ್ದೆಗಳಿವೆ.

ವಿಶ್ವವಿದ್ಯಾಲಯಗಳು ಮೂಲಭೂತ ಸೌಲಭ್ಯಗಳಿಂದ ವಂಚಿತಗೊಂಡಿವೆ. ಇದರಿಂದ ಉನ್ನತ ವ್ಯಾಸಂಗದ ಗುಣಮಟ್ಟ ಕ್ಷೀಣಿಸುವ ವಾತಾವರಣವಿದೆ. ವಿಶ್ವವಿದ್ಯಾಲಯಗಳು ಶಿಕ್ಷಣ ಮತ್ತು ಜ್ಞಾನ ಕೇಂದ್ರಗಳಾಗಬೇಕಿದೆ. ಆದರೆ ಅಂತಹ ವಿಶ್ವವಿದ್ಯಾಲಯಗಳು ಇಂದು ಜಾತಿ, ರಾಜಕೀಯ ಮತ್ತು
ಭ್ರಷ್ಟಾಚಾರದ ತಿಕ್ಕಾಟದ ಕೇಂದ್ರಗಳಾಗಿವೆ.

ದೇಶದ ಅನೇಕ ಖಾಸಗಿ ವಿಶ್ವವಿದ್ಯಾಲಯಗಳು ಆಧುನಿಕ ತಂತ್ರಜ್ಞಾನದೊಂದಿಗೆ ತಲೆ ಎತ್ತುತ್ತಿರುವ ಸಂದರ್ಭದಲ್ಲಿ ನಮ್ಮ ಸರ್ಕಾರಿ ವಿವಿಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವುದಕ್ಕೆ ಸರ್ಕಾರದ ನಿರ್ಲಕ್ಷ್ಯ ಧೋರಣೆಯೇ ಕಾರಣವೆನ್ನಲಾಗುತ್ತಿದೆ. ಬಡ ಮತ್ತು ಮಧ್ಯಮ ವರ್ಗದ
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ದೊರಕಿಸಲು ಇರುವ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವತ್ತ ಸರ್ಕಾರ ಕೂಡಲೇ ಗಮನ ಹರಿಸಬೇಕಿದೆ ಎಂದರು.

ಎಬಿವಿಪಿ ಸಹ ಕಾರ್ಯದರ್ಶಿ ರಾಜೇಶ ಮಸರಕಲ್ಲ ಮಾತನಾಡಿ, ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರು ಮತ್ತು ಮೈಸೂರು ವಿಶ್ವವಿದ್ಯಾಲಯಗಳಿಗೆ ಕುಲಪತಿಗಳು ಇಲ್ಲದೇ ವರ್ಷಗಳೇ ಕಳೆದಿವೆ. ಹುಬ್ಬಳ್ಳಿಯ ಕಾನೂನು ವಿಶ್ವವಿದ್ಯಾಲಯಕ್ಕೆ ಯಾವುದೇ ಪೂರ್ಣಕಾಲಿಕ ಕುಲಪತಿಗಳು, ಕುಲಸಚಿವರು, ಮತ್ತು ಮೌಲ್ಯಮಾಪನ ಕುಲಸಚಿವರ ಹುದ್ದೆಗಳು ಎರಡು ವರ್ಷಗಳಿಂದ ಖಾಲಿ ಉಳಿದುಕೊಂಡಿವೆ.

Advertisement

ಜಾನಪದ ವಿಶ್ವವಿದ್ಯಾಲಯದ ಕುಲಪತಿ ರಾಜೀನಾಮೆ ನೀಡಿ 3 ತಿಂಗಳಾಗಿವೆ. ರಾಜೀವ್‌ ಗಾಂಧಿ  ವೈದ್ಯಕೀಯ ವಿಶ್ವವಿದ್ಯಾಲಯ ಹಾಗೂ ತುಮಕೂರು ವಿವಿ ಕುಲಪತಿಗಳ ಅವಧಿ ಮುಗಿದು ತಿಂಗಳು ಕಳೆಯುತ್ತಿವೆ. ಬೆಂಗಳೂರು ವಿವಿಯನ್ನು ವಿಭಜಿಸಿ ವರ್ಷ ಕಳೆದರು ಹೊಸ ವಿವಿಗಳಿಗೆ ಕುಲಪತಿ, ಆಡಳಿತ ಮಂಡಳಿ, ಭೋದಕ, ಭೋದಕೇತರ ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ. ಕೂಡಲೇ ರಾಜ್ಯ ಸರ್ಕಾರ ರಾಜ್ಯದ ವಿವಿಗಳಲ್ಲಿ ಖಾಲಿಯಿರುವ ಕುಲಪತಿಗಳನ್ನು ನೇಮಕ ಮಾಡಬೇಕು ಹಾಗೂ ಖಾಲಿ ಇರುವ ಭೋದಕ ಮತ್ತು ಬೋಧಕೇತರ
ಹುದ್ದೆಗಳನ್ನು ತುಂಬಲು ರಾಜ್ಯ ಸರ್ಕಾರವು ತನ್ನ ರಾಜಕೀಯ ಸ್ವಹಿತಾಸಕ್ತಿ ಮರೆತು ವಿವಿ ಅಭಿವೃದ್ಧಿಗಾಗಿ ಮತ್ತು ವಿದ್ಯಾರ್ಥಿಗಳ ಮುಂದಿನ ಉತ್ತಮ ಭವಿಷ್ಯತ್ತಿಗಾಗಿ ಕಾರ್ಯೋನ್ಮುಖರಾಗಿ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಿ ಜಾಗತಿಕ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕು. ರಾಜ್ಯಸರ್ಕಾರವು ನಿರ್ಲಕ್ಷ್ಯ  ಧೋರಣೆ ಮುಂದುವರಿಸಿದರೆ ರಾಜ್ಯಾದ್ಯಂತ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಎಸ್‌.ಕೆ. ಪದವಿ ಮಹಾವಿದ್ಯಾಲಯದಿಂದ ಪ್ರಾರಂಭಗೊಂಡ ಪ್ರತಿಭಟನೆ ತಹಶೀಲ್ದಾರ್‌ ಕಾರ್ಯಾಲಯದವರೆಗೆ ಜರುಗಿ ತಹಶೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆ ನೇತೃತ್ವವನ್ನು ಎಬಿವಿಪಿ ನಗರ ಕಾರ್ಯದರ್ಶಿ ಕಿರಣ ಬಡಿಗೇರ,ಫಿರಸಾಬ ಮುಲ್ಲಾ, ಅರುಣ ಕಟಗೇರಿ, ಬಸವರಾಜ ಬಿಜಾಪುರ, ದೇವರಾಜ ನಾಯ್ಕಲ್‌, ಕೇತನ ಗಣಾಚಾರಿ, ಅಭಿಷೇಕ ಸ್ಥಾವರಮಠ, ನಾಗರಾಜ ಬಳಿಗಾರ, ಸಂಗನಗೌಡ ಬಿರಾದಾರ, ನಿತೀಷ ತೀವಾರಿ, ವಿಶ್ವನಾಥ ಚಿನಗುಡಿ, ಆಕಾಶ ಹಿರೇಮಠ, ಭೀಮನಗೌಡ ಕಕ್ಕೇರಿ, ಆನಂದ ಬಿರಾದಾರ, ಹನುಮೇಶ ಪೂಜಾರಿ, ಸಾಹೇಬಗೌಡ ಪಾಟೀಲ, ಸಂತೋಷ ಚಳ್ಳಗೇರ, ನಿಂಗಣ್ಣ ಮಾಳೂರ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next