ವಿಜಯಪುರ: ಮಂಗಳೂರಿನ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ರಾಜ್ಯದಲ್ಲಿ ಬಿಜೆಪಿ ಪ್ರಮುಖರು ಪಕ್ಷದ ಪದಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮದೇ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದು, ವಿಜಯಪುರ ಜಿಲ್ಲೆಗೂ ಹಬ್ಬಿದೆ.
ಬಿಜೆಪಿ ಸಾಮಾಜಿಕ ಜಾಲತಾಣ ವಿಜಯಪುರ ನಗರ ಘಟಕದ ಸಹ ಸಂಚಾಲಕರಾಗಿದ್ದ ಗಣೇಶ ಹಜೇರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ: ತೃಣಮೂಲ ಕಾಂಗ್ರೆಸ್ ಪಕ್ಷದ 38 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ: ಮಿಥುನ್ ಚಕ್ರವರ್ತಿ
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಬಿಜೆಪಿ ನಗರ ಸಾಮಾಜಿಕ ಜಾಲತಾಣ ಸಹ ಸಂಚಾಲಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾಗಿ ಫೇಸ್‌ಬುಕ್ ನಲ್ಲಿ ಪೋಸ್ಟ್ ಹಾಕಿ ಆಕ್ರೋಶ ಹೊರಹಾಕಿದ್ದಾರೆ.
ಇದಲ್ಲದೇ ಸರಣಿ ಪೋಸ್ಟ್ ಹಾಕಿರುವ ಹಜೇರಿ, ರಾಜೀನಾಮೆ ನೀಡಿರುವ ಬಿಜೆಪಿ ಜವಾಬ್ದಾರಿಯುತ ಕಾರ್ಯಕರ್ತರು ಹತ್ಯೆಗೆ ನ್ಯಾಯ ಸಿಗುವವರೆಗೆ ರಾಜೀನಾಮೆ ವಾಪಸ್ ಪಡೆಯಬೇಡಿ. ಒಂದು ತಿಂಗಳಕಾಲ ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಡಿ. ಆಗ ಪಕ್ಷದ ನಾಯಕರಿಗೆ ಕಾರ್ಯಕರ್ತರ ಬೆಲೆ ಗೊತ್ತಾಗಲಿದೆ. ಬಿಜೆಪಿ ನಾಯಕರಿಗೆ ಬುದ್ದಿ ಕಲಿಸಲು ಈ ಕ್ರಮ ಅನಿವಾರ್ಯ ಎಂದು ಅರಿಕೆಯನ್ನೂ ಮಾಡಿದ್ದಾರೆ.