ಪಾಂಡವಪುರ: ತಾಲೂಕಿನ ಆನುವಾಳು ಗ್ರಾಮದ ಪರಿಶಿಷ್ಟರ ಕಾಲೋನಿಯಲ್ಲಿ ನಡೆಯುತ್ತಿರುವ ಚರಂಡಿ ಮತ್ತು ರಸ್ತೆ ಕಾಮಗಾರಿ ಕಳಪೆ ಯಿಂದ ಕೂಡಿದೆ ಎಂದು ಆರೋಪಿಸಿ ದಲಿತ ಮುಖಂಡರು ಕಾಮಗಾರಿ ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.
ವಿಶೇಷ ಘಟಕ ಯೋಜನೆ(ಎಸ್‌ಸಿಪಿ)ಯಡಿ ಕೆಆರ್‌ಐಡಿಎಲ್ ಇಲಾಖೆ ಸುಮಾರು 5 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿ ಕೈಗೆತ್ತುಕೊಂಡಿದ್ದು, ಅಂದಾಜು ಪಟ್ಟಿ ಪ್ರಕಾರ ಬಾಕ್ಸ್ ಚರಂಡಿ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಆದರೆ, ಕಾಮಗಾರಿ ಪಡೆದಿರುವ ಗುತ್ತಿಗೆದಾರರು ಮೊದಲು ಚರಂಡಿ ನಿರ್ಮಿಸದೆ ರಸ್ತೆ ನಿರ್ಮಾಣ ಮಾಡಲು ಮುಂದಾಗಿರುವುದನ್ನು ವಿರೋಧಿಸಿದರು.ನಿಯಮದಂತೆ ಸಿಮೆಂಟ್ ಮಿಶ್ರಿತ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಕಬ್ಬಿಣದ ಸರಳುಗಳನ್ನು ಹಾಕಬೇಕು. ಆದರೆ, ಇದಾವುದನ್ನು ಬಳಸದೆ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಅಭಿವೃದ್ಧಿ ಕಾಮಗಾರಿ ಯೋಜನೆಯ ಪ್ರಕಾರವೇ ಕಾಮಗಾರಿ ಮಾಡಬೇಕು. ಇಲ್ಲವಾದರೆ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಜತೆಗೆ ಕೆಆರ್‌ಐಡಿಎಲ್ನ ಅಧಿಕಾರಿಗಳು ಗುತ್ತಿಗೆದಾರರಿಂದ ಕಮಿಷನ್ ಹಣ ಪಡೆಯಲು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಒಮ್ಮೆಯೂ ಭೇಟಿ ನೀಡದೆ ಹೇಗೋ ಕಾಮಗಾರಿ ಮುಗಿದರೆ ಸಾಕು ಎನ್ನುವ ಮನಸ್ಥಿತಿಯಲ್ಲಿದ್ದಾರೆ ಎಂದು ಕಿಡಿಕಾರಿದರು.
ಕಾಮಗಾರಿಯನ್ನು ಮಾಡಬೇಡಿ ಎಂದು ತಡೆಯುತ್ತಿಲ್ಲ. ಕಾಮಗಾರಿಯನ್ನು ಅಂದಾಜು ಪಟ್ಟಿ ಯೋಜನೆ ಪ್ರಕಾರ ಮಾಡಿ ಎಂದು ಕೇಳುತ್ತಿದ್ದೇವೆ ಅಷ್ಟೇ. ನಾನೊಬ್ಬ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯನಾಗಿ ಗುಣಮಟ್ಟದ ಕಾಮಗಾರಿ ಮಾಡಿ ಎಂದು ಮನವಿ ಮಾಡಿದರೂ ನನ್ನ ಮಾತಿಗೂ ಬೆಲೆ ಕೊಡದೆ ನಿಮ್ಮ ಇಷ್ಟ ಬಂದಂತೆ ಕಾಮಗಾರಿ ನಿರ್ವಹಿಸುತ್ತಿದ್ದೀರಿ ಎಂದು ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಮಂಜು ನಾಥ್, ಕುಮಾರ, ಕಾಂತರಾಜು, ಚಂದ್ರಶೇಖರ್, ಪಾಪಯ್ಯ ಮತ್ತಿತರರು ಹಾಜರಿದ್ದರು.