ದಾವಣಗೆರೆ: ಫಸಲ್ ಬಿಮಾ ಯೋಜನೆಯಡಿ ರೈತರ ಹಣ ದೋಚಲು ಅವಕಾಶ ಮಾಡಿಕೊಟ್ಟ ಕೀರ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಕಿಸಾನ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಟೀಕಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ 2016-17, 2017-18ರ ಭಾಗಶಃ ಕಾಲಾವಧಿಗೆ ತಮ್ಮ ಗೆಳೆಯ ಗೌತಮ್ ಅದಾನಿ ನೇತೃತ್ವದ ವಿಮಾ ಕಂಪನಿಗೆ ಫಸಲ್ ಬಿಮಾ ಯೋಜನೆ ಹೊಣೆ ನೀಡಿದ್ದರು. ಕೇವಲ 6 ರಿಂದ 8 ತಿಂಗಳಲ್ಲಿ 88 ಸಾವಿರ ಕೋಟಿಯಷ್ಟು ಆ ಕಂಪನಿ ಲಾಭ ಮಾಡಿಕೊಂಡಿತ್ತು. ಇದು ರಫೆಲ್ ಹಗರಣಕ್ಕಿಂತಲೂ 100 ಪಟ್ಟು ದೊಡ್ಡ ಹಗರಣ ಎಂದು ಆರೋಪಿಸಿದರು.
ಕರ್ನಾಟಕದಲ್ಲಿನ ರೈತರು 20 ಸಾವಿರ ಕೋಟಿಯಷ್ಟು ಪ್ರೀಮಿಯಂ ಕಟ್ಟಿದ್ದರು. ಬೆಳೆ ಹಾನಿಯಾದವರಿಗೆ ಕಂಪನಿ ನೀಡಿದ ಪರಿಹಾರ 4,900 ಕೋಟಿ ಮಾತ್ರ. ರಾಜ್ಯವೊಂದರಲ್ಲೇ 15,100 ಕೋಟಿ ರೂ.ಲಾಭವಾಗಿದೆ. ದೇಶವ್ಯಾಪಿ ರೈತರು ಕಟ್ಟಿದ ಪ್ರೀಮಿಯಂ ಮೊತ್ತ 1 ಲಕ್ಷ 8 ಸಾವಿರ ಕೋಟಿ ರೂ., ಪರಿಹಾರವಾಗಿನೀಡಿದ್ದು 20 ಸಾವಿರ ಕೋಟಿ ರೂ. ಮಾತ್ರ. ಕೇವಲ 6 ರಿಂದ 8 ತಿಂಗಳಲ್ಲಿ 88 ಸಾವಿರ ಕೋಟಿ ಲಾಭ ಮಾಡಿಕೊಳ್ಳಲಾಯಿತು ಎಂದರು.
ರಾಜ್ಯದ 25 ಜನ ಬಿಜೆಪಿ ಸಂಸದರು ಈಗಿನ ಬೆಳೆ ವಿಮಾ ಕಾಯ್ದೆ ಬದಲಾವಣೆಗೆ ಮುಂದಾಗಬೇಕು. ಶೇ. 40 ರಷ್ಟು ಬೆಳೆ ಹಾನಿಯಾದರೆ ಮಾತ್ರ ಪರಿಹಾರ ಎಂಬುದನ್ನು ಸರಿಪಡಿಸಬೇಕು. ಮೋಟಾರ್ ಕಾಯ್ದೆ ಮಾದರಿಯಲ್ಲಿ ಸ್ವಲ್ಪವೇ ಹಾನಿಯಾದರೂ ರೈತರಿಗೆಪರಿಹಾರ ನೀಡುವಂತಾಗಬೇಕು. 3 ವರ್ಷದ ನಂತರ ಬೋನಸ್ ಹಣ ನೀಡುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಬೆದರಿಕೆಯ ರೀತಿಯ ಪತ್ರ ಬರೆಯುವ ಮೂಲಕ ಎಪಿಎಂಸಿ ಕಾಯ್ದೆಗೆ ಸುಗ್ರೀವಾಜ್ಞೆ ತರುವಂತೆ ಮಾಡಿದೆ. ಪ್ರಾರಂಭಿಕ ಹಂತದಲ್ಲಿ ಈ ಕಾಯ್ದೆಯಿಂದ ರೈತರಿಗೆ ಸ್ವಲ್ಪ ಲಾಭ ದೊರೆಯಲಿದೆ. ಕೊನೆಗೆ ಎಪಿಎಂಸಿಗಳು ಸಂಪೂರ್ಣವಾಗಿ ನನೆಗುದಿಗೆ ಬಿದ್ದ ನಂತರ ಎಲ್ಲಾ ರೈತರು ತೀರಾ ಅನಿವಾರ್ಯವಾಗಿ ವಿದೇಶಿ ಕಂಪನಿಗಳು ನಿಗದಿಪಡಿಸಿದ ದರಕ್ಕೇ ಬೆಳೆಗಳ ಮಾರಾಟ ಮಾಡಬೇಕಾಗುತ್ತದೆ. ಗುಲಾಮಗಿರಿಗೆ ಒಳಗಾಗಬೇಕಾಗುತ್ತದೆ. ಹಾಗಾಗಿ ಕಿಸಾನ್ ಕಾಂಗ್ರೆಸ್ ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರಬಲ ಹೋರಾಟ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಎಪಿಎಂಸಿ, ಭೂ ಸುಧಾರಣೆ, ವಿದ್ಯುತ್ ಹಾಗೂ ಎಫ್‌ಎಸ್‌ಡಿಆರ್ ಕಾಯ್ದೆ ಜಾರಿ ವಿರೋಧಿಸಿ ಕಿಸಾನ್ ಕಾಂಗ್ರೆಸ್ ಸಹಿ ಸಂಗ್ರಹ ಚಳವಳಿ ಹಮ್ಮಿಕೊಂಡಿದೆ. ಎಲ್ಲಾ ಕಡೆ ಚಳವಳಿ ನಡೆಸಿದ ನಂತರ ರಾಷ್ಟ್ರಪತಿಯವರಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಕಿಸಾನ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಬಸವರಾಜ್ ವಿ. ಶಿವಗಂಗಾ, ಪ್ರಮೋದ್, ಪ್ರವೀಣ್ ಕುಮಾರ್, ಶಿವಕುಮಾರ್ ಬಾತಿ ಇತರರಿದ್ದರು.
ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ್ ಬಿಜೆಪಿ ಏಜೆಂಟರಂತೆ ಎಪಿಎಂಸಿ ಕಾಯ್ದೆ ಪರವಾಗಿ ಹೇಳಿಕೆ ನೀಡಿರುವುದು ಸರಿಯಲ್ಲ. ಅವರ ಹೇಳಿಕೆ ರಾಜ್ಯದ ರೈತರನ್ನು ಅಪಮಾನಿಸಿದಂತಾಗಿದೆ. –
ಸಚಿನ್ ಮೀಗಾ ಕಿಸಾನ್ ಕಾಂಗ್ರೆಸ್ ರಾಜ್ಯಾಧ್ಯಕ್ಷ