ರಾಮನಗರ: ಜೈಶ್ ರಕ್ಕಸರ ಆಟ್ಟಹಾಸಕ್ಕೆ 43 ಯೋಧರು ಬಲಿಯಾದ ಘಟನೆಗೆ ಜಿಲ್ಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಜನಪರ ಸಂಘಟನೆಗಳು ಹುತಾತ್ಮರಾದ ಯೋಧರ ಪರ ಶ್ರದ್ಧಾಂಜಲಿ ಸಭೆಗಳನ್ನು ಅಯೋಜಿಸಿದ್ದರು. ಈ ವೇಳೆ ಉಗ್ರರ ಕೃತ್ಯವನ್ನು ತೀವ್ರವಾಗಿ ಖಂಡಿಸಿದರು. ಕೇಂದ್ರ ಸರ್ಕಾರ ಇದಕ್ಕೆ ತಕ್ಕ ಉತ್ತರ ನೀಡಬೇಕು ಎಂದು ನಾಗರೀಕರು ಆಗ್ರಹಿಸಿದರು.
ರಾಮನಗರದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಾಲದಯ ಮುಂದೆ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಹುತಾತ್ಮ ಯೋಧರ ಆತ್ಮಗಳಿಗೆ ಶಾಂತಿ ಕೋರಿದರು. ನಗರದ ಮುಖ್ಯ ರಸ್ತೆಯಲ್ಲಿ ವ್ಯಾಪಾರಿ ಉದಯ್ ಸೇರದಿಂತೆ ನಗರದ ಕೆಲವೆಡೆ ಅಂಗಡಿಗಳ ಮಾಲೀಕರು ಫಲಕಗಳನ್ನು ಪ್ರದರ್ಶಿಸಿ ವೀರ ಯೋಧರಿಗೆ ನುಡಿ ನಮನ ಸಲ್ಲಿಸಿದರು. ಮಂಡ್ಯ ಮೂಲದ ಯೋಧ ಗುರು ಅವರ ಭಾವಚಿತ್ರವನ್ನು ಪ್ರದರ್ಶಿಸಿ ನಮನ ಅರ್ಪಿಸಿದರು.
ಬಿ.ಎಸ್.ಯಡಿಯೂರಪ್ಪ ಭಾಗಿ: ಸಂಜೆ ವಿವೇಕಾನಂದ ನಗರದ ಬಳಿ ಇರುವ ವಿವೇಕಾನಂದ ಪ್ರತಿಮೆಯ ಬಳಿ ಕೆಲವು ಸಂಘಟನೆಗಳು ಆಯೋಜಸಿದ್ದ ನುಡಿ ನಮನ ಸಭೆಗೆ ಮೈಸೂರು ಕಡೆಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೊಂಬತ್ತಿ ಹಚ್ಚಿ ವೀರ ಯೋಧರ ಕೆಲಕಾಲ ಮೌನ ಆಚರಿಸುವುದರ ಮೂಲಕ ಮೃತ ಯೋಧರ ಆತ್ಮಕ್ಕೆ ಶಾಂತಿ ಕೋರಿದರು.
ಈ ವೇಳೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ರುದ್ರೇಶ್, ಪ್ರಮುಖರಾದ ಎಸ್.ಆರ್.ನಾಗರಾಜ್, ಜಿ.ವಿ.ಪದ್ಮನಾಭ, ಚಂದ್ರಶೇಖರ ರೆಡ್ಡಿ, ಪ್ರವೀಣ್ ಗೌಡ, ಚಂದನ್ ಮತ್ತು ಪ್ರಮುಖರು ಭಾಗವಹಿಸಿದ್ದರು.
ವ್ಯಾಪಾರಿಗಳಿಂದಲೂ ಯೋಧರಿಗೆ ನಮನ: ಶುಕ್ರವಾರ ಸಂಜೆ ನಗರದ ಮುಖ್ಯರಸ್ತೆಯ ವೃತ್ತದಲ್ಲಿ ಜಮಾಯಿಸಿದ ನಗರದ ವ್ಯಾಪಾರಿ ಮಳಿಗೆಗಳ ಮಾಲೀಕರು ಮೋಂಬತ್ತಿ ಬೆಳಗಿಸಿ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಿದರು. ಇದೇ ವೇಳೆ ಮಾಲೀಕರು ಪಾಕ್ ಪ್ರಚೋದಿತ ದಾಳಿಗೆ ಕೇಂದ್ರ ಸರ್ಕಾರ ತಕ್ಕ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಶಾಲೆಗಳಲ್ಲಿ ಮೌನಾಚರಣೆ: ನಗರದ ವಾಸವಿ ವಿದ್ಯಾನಿಕೇತನ ಶಾಲೆ, ಬಿಜಿಎಸ್ ಅಂಧರ ಶಾಲೆ ಸೇರಿದಂತೆ ಜಿಲ್ಲೆ ವಿವಿಧ ಶಾಲೆ, ಕಾಲೇಜುಗಳು ವಿದ್ಯಾರ್ಥಿಗಳು ಹುತಾತ್ಮ ಯೋಧರಿಗಾಗಿ ಒಂದು ನಿಮಿಷಿದ ಮೌನವನ್ನು ಆಚರಿಸಿದರು.