ಹಾವೇರಿ: ಕೋಲ್ಕತ್ತಾದ ಕಾರ್ಯನಿರತ ವೈದ್ಯ ಡಾ. ಮುಖರ್ಜಿಯ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಮಂಡಳಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಸೋಮವಾರ ಹೊರರೋಗಿಗಳ ಸೇವೆ ಬಂದ್ ಮಾಡಿ ಪ್ರತಿಭಟಿಸಿದವು.
ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು ಸೇವೆ ಸ್ಥಗಿತಗೊಳಿಸಿ, ಸಿಬ್ಬಂದಿ, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳೊಂದಿಗೆ ಕೈಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಗರದ ಪ್ರವಾಸಿಗೃಹದಿಂದ ಆರಂಭಿಸಿದ ಪ್ರತಿಭಟನಾ ಮೆರವಣಿಗೆ ಜೆ.ಪಿ. ವೃತ್ತ, ಮೈಲಾರ ಮಹಾದೇವಪ್ಪ ವೃತ್ತದ ಮೂಲಕ ಹಾದು ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸಮಾವೇಶಗೊಂಡಿತು. ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಐಎಂಎ ಜಿಲ್ಲಾಧ್ಯಕ್ಷ ಡಾ. ಮೃತ್ಯುಂಜಯ ತುರಕಾಣಿ ಹಾಗೂ ಕಾರ್ಯದರ್ಶಿ ಡಾ. ಬಸವರಾಜ ಕೊಳ್ಳಿ, ದೇಶದಲ್ಲಿ ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವುದು ದುರಂತದ ಸಂಗತಿ. ಹಲ್ಲೆಗೊಳಗಾಗಿರುವ ಕೋಲ್ಕತ್ತಾದ ವೈದ್ಯ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಕಾರಣ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮೇಲೆ ನಡೆಸುವ ಹಲ್ಲೆಗಳನ್ನು ತಡೆಗಟ್ಟಲು ಕೇಂದ್ರ, ರಾಜ್ಯ ಸರ್ಕಾರಗಳು ಕಠಿಣ ಕಾನೂನು ಜಾರಿಗೊಳಿಸಬೇಕು ಹಾಗೂ ವೈದ್ಯರು ಮುಕ್ತವಾಗಿ ಕಾರ್ಯನಿರ್ವಹಿಸಲು ಸೂಕ್ತ ಭದ್ರತೆ ಒದಗಿಸಬೇಕೆಂದು ಎಂದರು.
ಪ್ರತಿಭಟನೆಯಲ್ಲಿ ಡಾ. ಜೆ.ಆರ್. ಗುಡಿ, ಡಾ. ರೋಹನ್ ಕಾಮತ, ಡಾ. ಕೆ. ವಿನಾಯಕ, ಡಾ. ಎಸ್.ಆರ್. ಗೊಡ್ಡೆಮ್ಮಿ, ಡಾ. ಎಸ್.ಎಲ್. ಬಾಲೆಹೊಸೂರು, ಡಾ. ಸಂಜಯ ಡಾಂಗೆ, ಡಾ. ಬಿ. ಕಾಂತೇಶ, ಡಾ. ಎಚ್. ಉಮೇಶ, ಡಾ. ಪ್ರಮೋದ ಹೆಗ್ಗೇರಿ, ಡಾ. ಸುದೀಪ ಪಂಡಿತ, ಡಾ. ಶ್ರವಣ ಪಂಡಿತ, ಡಾ. ಬಿ.ಜಿ. ವೀರಾಪುರ, ಡಾ. ಗೌತಮ ಲೋಡಾಯ, ಡಾ. ನಿರಂಜನ ಹಳ್ಳಿಕೇರಿ, ಡಾ. ಗಿರೀಶ ಮಲ್ಲಾಡದ, ಡಾ. ಚಿನ್ಮಯ ಕುಲಕರ್ಣಿ, ಡಾ. ಆನಂದ ನೀರಲಗಿ, ಡಾ. ಬಸವರಾಜ ಹಿಪ್ಪರಗಿ, ಡಾ. ಎಸ್.ಡಿ. ಶಿಗೀಹಳ್ಳಿ, ಡಾ. ವಿರೇಂದ್ರ ಬಾಲಿ ಸೇರಿದಂತೆ ನೂರಾರು ವೈದ್ಯರು ಹಾಗೂ ಸಿಬ್ಬಂದಿಗಳು, ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.