ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಜೂ.1 ರಿಂದ 20ರ ವರೆಗೂ ಕೇಂದ್ರ ಪುರಸ್ಕೃತ ಯೋಜನೆಯಡಿ ಕಾಲುಬಾಯಿ ಜ್ವರದ ವಿರುದ್ಧ ಜಿಲ್ಲೆಯ ಒಟ್ಟು 2,27,262 ಜಾನುವಾರುಗಳಿಗೆ 14ನೇ ಸುತ್ತಿನ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆಂದು ಡಿಸಿ ದೀಪ್ತಿ ಆದಿತ್ಯ ಕಾನಡೆ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಬುಧವಾರ ಕಾಲು ಬಾಯಿ ಜ್ವರ ಲಸಿಕಾ ಅಭಿಯಾನಕ್ಕೆ ಕೈಗೊಂಡಿರುವ ಪೂರ್ವ ಸಿದ್ಧತೆಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಹಮ್ಮಿಕೊಂಡಿದ್ದ 13ನೇ ಸುತ್ತಿನ ಲಸಿಕಾ ಅಭಿಯಾನದಲ್ಲಿ ಜಿಲ್ಲಾದ್ಯಂತ ಶೇ.94 ರಷ್ಟು ಪ್ರಗತಿ ಸಾಧಿಸಿ 2,13,909 ಜಾನುವಾರುಗಳಿಗೆ ಲಸಿಕೆ ಹಾಕಿ ಉಳಿದ ರಾಸುಗಳಿಗೆ ಕೂಂಬಿಂಗ್ ಲಸಿಕಾ ಕಾರ್ಯಕ್ರಮದಡಿ ಲಸಿಕೆ ಹಾಕಿಸಿ ಶೇ.100 ರಷ್ಟು ಪ್ರಗತಿ ಸಾಧಿಸಲಾಗಿತ್ತು. ಕಾಲುಬಾಯಿ ಜ್ವರ ನಿಯಂತ್ರಿಸಲು ಪ್ರತಿ ಆರು ತಿಂಗಳಗೊಮ್ಮೆ ನಿರಂತರವಾಗಿ ಲಸಿಕೆ ಹಾಕಬೇಕಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಪಶು ಪಾಲನಾ ಇಲಾಖೆ ಹಾಗೂ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವತಿಯಿಂದ 14ನೇ ಸುತ್ತಿನ ಲಸಿಕಾ ಅಭಿಯಾನವನ್ನು ನಾಳೆಯಿಂದ 20 ದಿನಗಳ ಕಾಲ ಹಮ್ಮಿಕೊಂಡಿದ್ದು, ಜಿಲ್ಲೆಯ ರೈತರು ತಮ್ಮ ಬಳಿ ಇರುವ ದನ, ಎಮ್ಮೆ, ಹಂದಿ ಮತ್ತಿತರ ರಾಸುಗಳಿಗೆ ತಪ್ಪದೇ ಲಸಿಕೆ ಹಾಕಿಸಿ ಎಂದು ಮನವಿ ಮಾಡಿದರು.
ಅಭಿಯಾನಕ್ಕೆ 26 ತಂಡಗಳ ರಚನೆ: ಜಿಲ್ಲೆಯಲ್ಲಿ ಒಟ್ಟು ಗುರುತಿಸಲಾಗಿರುವ 2,27,262 ರಾಸುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕಲು ಒಟ್ಟು 26 ತಾಂತ್ರಿಕ ಲಸಿಕಾ ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡಕ್ಕೆ ಪಶು ವೈದ್ಯಾಧಿಕಾರಿಯು ಮುಖ್ಯಸ್ಥರಾಗಿದ್ದು, ಲಸಿಕಾ ಅಭಿಯಾನದಲ್ಲಿ ರೈತರಿಗೆ ರೋಗದ ಬಗ್ಗೆ ಅರಿವು ಮೂಡಿಸಲು ಪೋಸ್ಟರ್, ಕರಪತ್ರಗಳನ್ನು ಈಗಾಗಲೇ ಜಿಲ್ಲೆಯ ಪ್ರತಿ ಹಳ್ಳಿಗೆ ಹಾಲು ಉತ್ಪಾದಕ ಸಹಕಾರ ಸಂಘಗಳ ಮೂಲಕ ಹಾಗೂ ಪಶು ಆಸ್ಪತ್ರೆಗಳ ಮೂಲಕ ಪ್ರಚುರಪಡಿಸಲಾಗಿದೆ.
ರಾಸುಗಳಿಗೆ ಲಸಿಕೆ ಹಾಕುವ ಕುರಿತು ಒಂದು ದಿನ ಮೊದಲು ಪ್ರತಿ ಹಳ್ಳಿಯಲ್ಲಿ ಟಾಂಟಾಂ ಹಾಕಿಸಿ ಪ್ರಚಾರ ನಡೆಸಲಾಗುವುದು. ಪ್ರತಿ ಲಸಿಕಾ ತಂಡದ ವಾಹನಕ್ಕೆ ಧ್ವನಿವರ್ಧಕಗಳನ್ನು ಅಳವಡಿಸಿಕೊಂಡಿದ್ದು, ಇವುಗಳ ಮುಖಾಂತರವು ರೈತರಲ್ಲಿ ಪ್ರಚಾರ ನಡೆಸಲಾಗುವುದು, ಜಿಲ್ಲೆಯ ಬಾಗೇಪಲ್ಲಿ 4, ಚಿಕ್ಕಬಳ್ಳಾಪುರ 5, ಚಿಂತಾಮಣಿ 5, ಗೌರಿಬಿದನೂರು 6, ಗುಡಿಬಂಡೆ 2 ಹಾಗೂ ಶಿಡ್ಲಘಟ್ಟ4 ಸೇರಿ ಒಟ್ಟು 26 ತಂಡಗಳನ್ನು ರಚಿಸಲಾಗಿದೆ. ಆರು ತಾಲೂಕುಗಳಲ್ಲಿ 2,014 ಬ್ಲಾಕ್‌ಗಳನ್ನು ಗುರುತಿಸಲಾಗಿದೆ ಎಂದರು.
ಪ್ರತಿ ದಿನವು ಪ್ರಗತಿ ವರದಿ: ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಡಾ.ಪಾಡುರಂಗಪ್ಪ ಮಾತನಾಡಿ, ಕಳೆದ ಸುತ್ತಿನಂತೆ ಈ ಬಾರಿಯು ಅನ್‌ಲೈನ್ ಮೂಲಕ ಪ್ರತಿ ದಿನದ ಲಸಿಕಾ ಪ್ರಗತಿಯನ್ನು ಅಯಾ ತಾಲೂಕುಗಳ ಪಶುಆಸ್ಪತ್ರೆಗಳಲ್ಲಿ ದಾಖಲಿಸಲಾಗುವುದು. ಇದಕ್ಕೆ ಪೂರ್ವಕವಾಗಿ ಎಲ್ಲಾ ಆರು ತಾಲೂಕುಗಳಲ್ಲಿ ಆನ್ ಲೈನ್ ವಿಲೇಜ್ ಮ್ಯಾಪಿಂಗ್ ಅನ್ನು ಪೂರ್ಣಗೊಳಿಸಲಾಗಿದೆ ಎಂದರು. ಅಲ್ಲದೇ ಜಿಲ್ಲಾದ್ಯಂತ ಲಸಿಕಾ ಅಭಿಯಾನಕ್ಕೂ ಮೊದಲ ದಿನ ಹಾಗೂ ಲಸಿಕೆ ಹಾಕಿದ 28 ದಿನಗಳ ನಂತರ ಪ್ರತಿ ತಾಲೂಕಿನ ನಿರ್ದಿಷ್ಟ ಗ್ರಾಮಗಳ ರಾಸುಗಳಲ್ಲಿ ರಾಸುಗಳ ಸೀರಂ ಮಾದರಿ ಸಂಗ್ರಹಿಸಿ ಪ್ರಯೋಗ ಶಾಲೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗುವುದು ಎಂದರು. ಜಿಲ್ಲಾ ಪಶು ಪಾಲನಾ ಹಾಗೂ ಪಶು ವೈದ್ಯ ಸೇವಾ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಡಾ.ಪಾಡುರಂಗಪ್ಪ, ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ.ಎಂ. ರವಿಶಂಕರ ಇತರರು ಹಾಜರಿದ್ದರು.