ಸುಮಾರು ಮೂವತ್ತು ವರ್ಷಗಳ ಹಿಂದಿನ ಮಾತು. ಆ ಕಾಲದಲ್ಲಿ ಶಾಲೆಗಳು ಎಂದರೆ ಸರ್ಕಾರಿ ಶಾಲೆಗಳು ಮಾತ್ರ. ಖಾಸಗಿ ಶಾಲೆಗಳು ಬೆರಳೆಣಿಕೆಯಷ್ಟಿದ್ದವೇನೋ. ಅಂತೆಯೆ, ನಾನು ಸಂಪೂರ್ಣ ಶಿಕ್ಷಣವನ್ನು ಪಡೆದದ್ದು ಸರ್ಕಾರಿ ಶಾಲೆಯಲ್ಲಿಯೇ. ಆಗಿನ ದಿನಗಳಲ್ಲಿ ಗುರು- ಶಿಷ್ಯರ ಬಾಂಧವ್ಯ ವಿಶೇಷ ಬಗೆಯದ್ದು. ಶಿಕ್ಷಕರು ಹೇಳಿದ ಮಾತುಗಳೆಂದರೆ ನಮಗೆ ವೇದ ವಾಕ್ಯ. ಅವುಗಳನ್ನೆಂದೂ ನಾವು ಮೀರುತ್ತಿರಲಿಲ್ಲ. ನಾನಾಗ ಏಳನೇ ತರಗತಿಯಲ್ಲಿ ಓದುತ್ತಿದ್ದೆ. ನನ್ನ ಶಾಲೆಯ ಶಿಕ್ಷಕರಿಗೆಲ್ಲ ನಾನು ಬಹಳ ಅಚ್ಚುಮೆಚ್ಚು. ಆ ಶಾಲೆಯಲ್ಲಿ ನಮಗೆ ಕನ್ನಡವನ್ನು ಬೋಧಿಸುತ್ತಿದ್ದುದು ರವೀಂದ್ರ ಮಾಸ್ಟ್ರೆ. ಅವರು ಬಹಳ ಶಿಸ್ತಿನ ಶಿಕ್ಷಕರಾಗಿದ್ದರು.
ವಿದ್ಯಾರ್ಥಿಗಳ ಅಶಿಸ್ತಿನ ವರ್ತನೆಯನ್ನು ಅವರೆಂದೂ ಸಹಿಸುತ್ತಿರಲಿಲ್ಲ. ಅವರ ವೈಶಿಷ್ಟ್ಯವೆಂದರೆ ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಲಕ್ಕಿ ಗಿಡದ ಬೆತ್ತದಲ್ಲಿ ಅಂಗೈ ಮೇಲೆ ಸರಿಯಾಗಿ ಹೊಡೆಯುತ್ತಿದ್ದರು. ಹಾಗಾಗಿ ವಿದ್ಯಾರ್ಥಿಗಳಾದ ನಾವು ಅವರನ್ನು ಕಂಡರೆ ಬಹಳವೇ ಭಯ ಪಡುತ್ತಿದ್ದೆವು.
ಕೆಲವೊಂದು ವಿಚಾರಗಳಲ್ಲಿ ನಮ್ಮ ರವೀಂದ್ರ ಮಾಸ್ಟ್ರದ್ದು ವಿಭಿನ್ನ ಶೈಲಿ. ಆಗ ಎಲ್ಲಾ ಶಾಲೆಗಳಲ್ಲಿಯೂ ನಾಲ್ಕು ಕಿರು ಪರೀಕ್ಷೆಗಳು, ಒಂದು ಮಧ್ಯವಾರ್ಷಿಕ ಪರೀಕ್ಷೆ ಹಾಗೂ ಒಂದು ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದವು. ಕಿರುಪರೀಕ್ಷೆಗಳಲ್ಲಿ ನಾವು ಪಡೆದ ಅಂಕಗಳನ್ನು ಹೇಳುವಾಗ ಅವರು ಅನುಸರಿಸುತ್ತಿದ್ದ ರೀತಿಯೇ ಬೇರೆ. ಕಡಿಮೆ ಅಂಕಗಳನ್ನು ಪಡೆದವರಿಗೆಲ್ಲಾ ಚೆನ್ನಾಗಿ ಪೆಟ್ಟು ಕೊಡುತ್ತಿದ್ದರು. ಪೆಟ್ಟುಗಳ ಸಂಖ್ಯೆಯೂ ನಮ್ಮ ಅಂಕಗಳ ಮೇಲೆ ನಿರ್ಧಾರವಾಗುತ್ತಿತ್ತು. ಉತ್ತರ ಪತ್ರಿಕೆಗಳನ್ನು ಕೊಡುವ ದಿನದಂದು ನಾವೆಲ್ಲರೂ ನಮ್ಮ ಅಂಗೈಗಳನ್ನು ಮುಂಚಾಚಿ ನಿಲ್ಲಬೇಕಿತ್ತು. ನಾವು ಗಳಿಸಿದ ಅಂಕಗಳು ಗರಿಷ್ಠ ಅಂಕಗಳಿಗಿಂತ ಎಷ್ಟು ಕಡಿಮೆ ಇರುತ್ತಿದ್ದವೋ ಅಷ್ಟು ಪೆಟ್ಟುಗಳು ನಮಗೆ ಬೀಳುತ್ತಿದ್ದವು. ಉದಾಹರಣೆಗೆ, ಇಪ್ಪತ್ತೆ„ದಕ್ಕೆ ಇಪ್ಪತ್ತು ಅಂಕ ಪಡೆದವರಿಗೆ ಐದು ಪೆಟ್ಟಾದರೆ, ಹತ್ತು ಅಂಕಗಳಿಸಿದವರಿಗೆ ಹದಿನೈದು ಪೆಟ್ಟು!!
ನಾನು ಹಾಗೂ ನನ್ನ ಕೆಲವು ಸಹಪಾಠಿಗಳು ಇಪ್ಪತ್ತೆ„ದಕ್ಕೆ ಇಪ್ಪತ್ತೆ„ದು ಅಂಕಗಳನ್ನು ತೆಗೆದಿದ್ದರೂ ನಮಗೂ ಒಂದು ಪೆಟ್ಟು ಬಿದ್ದೇ ಬೀಳುತ್ತಿತ್ತು. ಅಂತಹ ಒಂದು ದಿನ, ಪೆಟ್ಟು ತಿಂದ ನಾನು ಧೈರ್ಯ ಮಾಡಿ “ಸಾರ್, ಪೂರ್ತಿ ಅಂಕಗಳನ್ನು ಪಡೆದವರಿಗೂ ಏಕೆ ಪೆಟ್ಟು ಕೊಡುತ್ತೀರ?’ ಎಂದು ಎದ್ದು ಕೇಳಿಯೇ ಬಿಟ್ಟೆ. ಅದಕ್ಕೆ ನನ್ನ ಗುರುಗಳು, ಇದೊಂದು ಕಿರು ಪರೀಕ್ಷೆಯಲ್ಲಿ ಅಂಕಗಳನ್ನು ಪಡೆದರೆ ನಿಮ್ಮ ಶೈಕ್ಷಣಿಕ ಜೀವನದ ಸಾಧನೆ ಆಯಿತೇನು ? ಈ ಬಾರಿ ಹೆಚ್ಚು ಅಂಕ ಬಂದಿದೆಯೆಂಬ ಗರ್ವದಿಂದ ನೀವು ಅಭ್ಯಾಸ ಕಡಿಮೆ ಮಾಡಿ,ಮುಂಬರುವ ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳನ್ನು ಗಳಿಸಿದರೆ..? ಆ ರೀತಿ ಆಗಬಾರದಿಂದೂ, ಮುಂದಿನ ಪರೀಕ್ಷೆಗೂ ನೀವು ಚೆನ್ನಾಗಿ ಓದಬೇಕೆಂಬುದನ್ನು ನೆನಪಿಸಲೆಂದೇ ಈ ಪೆಟ್ಟು ಎಂದಿದ್ದರು. ಆ ಕ್ಷಣದಲ್ಲಿ ಗುರುಗಳ ಉತ್ತರ ನಮಗೆ ಏನೋ ಒಂದು ಬಗೆಯ ಸಮಾಧಾನವನ್ನು ನೀಡಿದ್ದರೂ ಗುರುಗಳ ಮೇಲಿನ ಕೋಪ ಕಡಿಮೆಯಾಗಿರಲಿಲ್ಲ.
ಆದರೆ, ಇಂದು ಆ ಘಟನೆಯನ್ನು ಮತ್ತು ಆ ಗುರುಗಳನ್ನು ನೆನಪಿಸಿಕೊಂಡಾಗ ಅಂದಿನ ಅವರ ಮಾತುಗಳಲ್ಲಿದ್ದ ಒಳ ಅರ್ಥ
ಗೋಚರವಾಗುತ್ತದೆ. ನಮ್ಮ ಎಂತಹ ಸಾಧನೆಯೂ ಪರಿಪೂರ್ಣವಲ್ಲ, ವ್ಯಕ್ತಿ ಎಷ್ಟೇ ಎತ್ತರಕ್ಕೆ ಏರಿದರೂ ನಮ್ರನಾಗಿರಬೇಕು, ಗರ್ವಪಡಬಾರದು ಎಂಬ ಜೀವನ ಮೌಲ್ಯವನ್ನು ಗುರುಗಳು ಅಂದು ಕಲಿಸಿದ್ದರಲ್ಲವೇ ಅನ್ನಿಸುತ್ತದೆ.
– ಡಾ. ವಿನಯ ಶ್ರೀನಿವಾಸ್, ಶಿವಮೊಗ್ಗ