Advertisement

ಫ‌ಲಿತಾಂಶದ ದಿನ ಮೈತ್ರಿ ಅಸಮಾಧಾನ ಸ್ಫೋಟ

12:27 AM Apr 20, 2019 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ಫ‌ಲಿತಾಂಶ ಬರುತ್ತಿದ್ದಂತೆ ರಾಜ್ಯ ಮೈತ್ರಿ ಸರ್ಕಾರದ ಅಸಮಾಧಾನ ಸ್ಫೋಟಗೊಂಡು, ಹಲವಾರು ಶಾಸಕರು ರಾಜೀನಾಮೆ ನೀಡಿದರೂ ಅಚ್ಚರಿ ಇಲ್ಲ ಎಂದು ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು.

Advertisement

ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ, ಬೆಂಗಳೂರಿನಲ್ಲಿ ವಾಸವಾಗಿರುವ ಉತ್ತರ ಕರ್ನಾಟಕದವರ ಸ್ನೇಹ ಮಿಲನ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ಮೇ 23ರಂದು ಚುನಾವಣಾ ಫ‌ಲಿತಾಂಶ ಬರುತ್ತಿದ್ದಂತೆ ರಾಜ್ಯ ಮೈತ್ರಿ ಸರ್ಕಾರದಲ್ಲಿ ಅಸಮಾಧಾನ ಸ್ಫೋಟವಾಗುತ್ತದೆ. ಮೈತ್ರಿ ಪಕ್ಷದಲ್ಲಿನ ಹಲವಾರು ಶಾಸಕರು ಹೊರಗೆ ಬರುತ್ತಾರೆ ಎಂದರು.

ಅಂದು ಸಂಜೆಯೊಳಗೆ ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿದರೂ ಆಶ್ಚರ್ಯವಿಲ್ಲ. ನಂತರ ಬಿಜೆಪಿ ಸರ್ಕಾರ ರಚನೆಯಾಗುತ್ತದೆ. ನಮ್ಮದು ಟೆನ್‌, ಟ್ವೆಂಟ್‌ ಪರ್ಸೆಂಟೇಜ್‌ ಸರ್ಜಾರ ಆಗಲ್ಲ, ಅಭಿವೃದ್ಧಿ ಪರ ಸರ್ಕಾರ ರಚನೆ ಮಾಡುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ರಮೇಶ್‌ ಜಿಗಜಿಣಗಿ ವಿರುದ್ಧ ಯಾವುದೇ ಅಸಮಾಧಾನ ಇಲ್ಲ. ನಮ್ಮ ರಾಷ್ಟ್ರೀಯ ಅಧ್ಯಕ್ಷರು ದೆಹಲಿಗೆ ಕರೆಸಿಕೊಂಡು ಸಂಧಾನ ನಡೆಸಿದ್ದಾರೆ. ಬಹಿರಂಗ ಪ್ರಚಾರ ಅಂತ್ಯಗೊಳ್ಳುವ ಕೊನೆ ಎರಡು ದಿನಗಳು ವಿಜಯಪುರ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.

ಉತ್ತರ ಕರ್ನಾಟಕ ಬಿಜೆಪಿಯ ಭದ್ರಕೋಟೆ. ಹಾಗಾಗಿ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ನೆಲೆಸಿರುವ ಉತ್ತರ ಕರ್ನಾಟಕದ ಜನರಿಗೆ ಎರಡನೇ ಹಂತ ಮತದಾನಕ್ಕೆ ತಮ್ಮ ಸ್ಥಳಗಳಿಗೆ ತೆರಳಿ ಮತದಾನದಲ್ಲಿ ಪಾಲ್ಗೊಳ್ಳಲು ಮನವಿ ಮಾಡಲಾಗಿದೆ.

Advertisement

ಮತದಾನ ಪ್ರಮಾಣ ಶೇ.70ಕ್ಕಿಂತ ಹೆಚ್ಚಾದಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿಗಳ ಗೆಲುವು ಸಾಧ್ಯ. ಈ ನಿಟ್ಟಿನಲ್ಲಿ ಮತದಾರರಲ್ಲಿ ಅರಿವು ಮೂಡಿಸುತ್ತಿದ್ದೇವೆ. ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next