Advertisement

ಸ್ವತಂತ್ರ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ಪರ ಶೇ.71 ಮತದಾರರು: ಪ್ರಮೋದ್‌

07:20 AM May 03, 2018 | Team Udayavani |

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.71ರಷ್ಟು ಮತಗಳು ಕಾಂಗ್ರೆಸ್‌ಗೆ ದೊರೆಯಲಿವೆ ಎಂಬ ಮಾಹಿತಿ ಸ್ವತಂತ್ರ ಸಮೀಕ್ಷೆಯಿಂದ ಗೊತ್ತಾಗಿದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ತಿಳಿಸಿದ್ದಾರೆ.

Advertisement

ಮೇ 2ರಂದು ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಮನೆ ಮನೆ ಭೇಟಿ ನಡೆಸುತ್ತಿದ್ದೇನೆ. ಜನತೆ ಉತ್ತಮ ಪ್ರತಿಕ್ರಿಯೆ ತೋರಿಸುತ್ತಿದ್ದಾರೆ. ಇದಲ್ಲದೆ ನಾನೇ ಸ್ವತಂತ್ರವಾಗಿ ಸಮೀಕ್ಷೆಯೊಂದನ್ನು ನಡೆಸಿದ್ದೇನೆ. ಅದರಂತೆ ಶೇ.90ರಷ್ಟು ಮಂದಿ ತಮ್ಮ ಮತ ಯಾರಿಗೆ ಹಾಕಬೇಕು ಎಂಬುದನ್ನು ನಿರ್ಧರಿಸಿ ಆಗಿದೆ. ಅದರಲ್ಲಿ ಶೇ.71ರಷ್ಟು ಮತದಾರರ ಕಾಂಗ್ರೆಸ್‌ ಪರ, ಶೇ.22ರಷ್ಟು ಮತದಾರರು ಮಾತ್ರ ಬಿಜೆಪಿ ಪರ ಮತ ಹಾಕಲಿದ್ದಾರೆ ಎಂಬ ಅಂಶ ಗೊತ್ತಾಗಿದೆ ಎಂದು ಪ್ರಮೋದ್‌ ತಿಳಿಸಿದರು.

ಭಾಷಣದಿಂದ ಬದಲಾಗುತ್ತಾರಾ?
ನರೇಂದ್ರ ಮೋದಿಯವರ ಉಡುಪಿ ಸಭೆಯ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಮೋದ್‌ “ಭಾಷಣ ಕೇಳಿ ಯಾರಿಗೆ ಓಟ್‌ ಹಾಕಬೇಕೆಂದು ಜನರು ನಿರ್ಧಾರ ಮಾಡುತ್ತಾರಾ?’ ಎಂದು ಮರುಪ್ರಶ್ನಿಸಿದರು. ಶೀರೂರು ಶ್ರೀಗಳು ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಕುರಿತು ಪ್ರಶ್ನಿಸಿದಾಗ “ಶೀರೂರು ಶ್ರೀಗಳ ರಾಜಕೀಯ ಆಸಕ್ತಿಯನ್ನು ಮೆಚ್ಚುತ್ತೇನೆ’ ಎಂದಷ್ಟೆ ಹೇಳಿದರು. 

ಬಿಜೆಪಿಗರಿಗೆ 
ಅರ್ಥವಾಗುವುದಿಲ್ಲ

ನರೇಂದ್ರ ಮೋದಿಯವರು ಸಮಯದ ಅಭಾವದಿಂದ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿಲ್ಲ ಎಂಬುದು ನಮಗೆ ಅರ್ಥವಾಗುತ್ತದೆ. ಆದರೆ ಸಿದ್ದರಾಮಯ್ಯನವರು ಶ್ರೀಕೃಷ್ಣ ಮಠಕ್ಕೆ ಯಾಕೆ ಭೇಟಿ ಕೊಟ್ಟಿಲ್ಲ ಎಂಬ ವಿಚಾರ ಬಿಜೆಪಿಗರಿಗೆ ಅರ್ಥವಾಗುತ್ತಿಲ್ಲ. ಸಿದ್ದರಾಮಯ್ಯನವರು ದೇವಸ್ಥಾನ, ದೇವರ ವಿರೋಧಿಯಲ್ಲ. ಅವರು ಸಾಂಪ್ರದಾಯಿಕವಾಗಿ ಕೆಲವು ದೇವಸ್ಥಾನಗಳಿಗೆ ಹೋಗುತ್ತಿರುತ್ತಾರೆ. ಶ್ರೀಕೃಷ್ಣ ಮಠವನ್ನೇ ಮುಂದಿಟ್ಟುಕೊಂಡು ಮಾತನಾಡುವುದು ಸರಿಯಲ್ಲ. ಹಾಗೆ ನೋಡಿದರೆ ನರೇಂದ್ರ ಮೋದಿಯವರು ಧರ್ಮಸ್ಥಳಕ್ಕೆ ಮಾತ್ರ ಯಾಕೆ ಭೇಟಿ ನೀಡಿದರು? ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಯಾಕೆ ಭೇಟಿ ಕೊಟ್ಟಿಲ್ಲ? ಎಂಬುದನ್ನು ಕೂಡ ಪ್ರಶ್ನಿಸಬಹುದಲ್ಲವೆ ಎಂದು ಪ್ರಮೋದ್‌ ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.

ಅಭಿವೃದ್ಧಿ ಕಾರ್ಯಗಳ ಮುಂದೆ ಅಸತ್ಯ ಗೆಲ್ಲದು : ಪ್ರಮೋದ್‌
ಉಡುಪಿ:
ಕಳೆದೈದು ವರ್ಷಗಳಲ್ಲಿ ಸಚಿವನಾಗಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು ಜನರ ಮುಂದಿದ್ದು, ಸತ್ಯವೇನೆಂದು ಜನರಿಗೆ ತಿಳಿದಿದೆ. 

Advertisement

ವಿಪಕ್ಷಗಳು ನಡೆಸುವ ಸುಳ್ಳಿನ ಪ್ರಚಾರಗಳು ಯಶಸ್ವಿಯಾಗಲಾರದು. ಪಕ್ಷಗಳು ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಕಾರ್ಯ ಮಾಡುತ್ತಿವೆ. ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ವಸತಿ ಯೋಜನೆಗಳ ಸಹಿತ ಮೂಲ ಸೌಕರ್ಯಗಳು ಅನುಷ್ಠಾನಗೊಂಡಿವೆ. ಜಾತಿ ಧರ್ಮ ನೋಡದೆ ಎಲ್ಲರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಹೇಳಿದರು. 

ಉಡುಪಿ ಕಾಂಗ್ರೆಸ್‌ ಭವನದಲ್ಲಿ ಜರಗಿದ ಬ್ಲಾಕ್‌ ಹಾಗೂ ವಿವಿಧ ಘಟಕಗಳ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಸಿದ್ಧರಾಮಯ್ಯ ನೇತೃತ್ವದ ಸರಕಾರದ ಸಾಧನೆಯೇ ಮತದಾರರನ್ನು ಸಂಪರ್ಕಿಸಲು ಬಹುದೊಡ್ಡ ಮಾನದಂಡ. ಬೂತ್‌ ಮಟ್ಟದ ಕಾರ್ಯಕರ್ತರು ತಮ್ಮ ಮತಗಟ್ಟೆಗಳನ್ನು ಕೇಂದ್ರೀಕರಿಸಿ, ಅಭಿಯಾನ ಹಮ್ಮಿಕೊಳ್ಳಬೇಕು. ಮನೆ ಮನೆಗೆ ಪಕ್ಷದ ಕಾರ್ಯಕರ್ತರು ಭೇಟಿ ನೀಡಿ ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ ಕಾರ್ಯದ ವಿವರಗಳನ್ನು ಮತದಾರರಿಗೆ ಮನವರಿಕೆ ಮಾಡಿ ಪಕ್ಷದ ಗೆಲುವಿಗೆ ಕಂಕಣಬದ್ಧರಾಗಬೇಕೆಂದರು. 

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕರೆ ಮಾತನಾಡಿ, ವಿಧಾನಸಭಾ ಚುನಾವಣೆ ಕರ್ನಾಟಕದ ಭವಿಷ್ಯಕ್ಕೆ ಎಷ್ಟು ಪ್ರಾಮುಖ್ಯವೋ, ಹಾಗೆಯೇ ಮುಂಬರುವ ನಗರಸಭೆ, ಜಿ.ಪಂ. ಹಾಗೂ ಸಾರ್ವತ್ರಿಕ ಚುನಾವಣೆಗೆ ಸ್ಪಷ್ಟ ದಿಕ್ಸೂಚಿಯಾಗಲಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಸಮರೋಪಾದಿಯಲ್ಲಿ ತೊಡಗಿಸಿಕೊಳ್ಳಬೇಕೆಂದರು. 

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜನಾರ್ದನ ತೋನ್ಸೆ, ಪಕ್ಷದ ಮುಖಂಡರಾದ ದಿನೇಶ್‌ ಪುತ್ರನ್‌, ಬಿ. ನರಸಿಂಹಮೂರ್ತಿ, ಕಿಶನ್‌ ಹೆಗ್ಡೆ ಕೊಳ್ಕೆಬೈಲ್‌, ವಿಜಯ ಹೆಗ್ಡೆ, ದಿವಾಕರ ಕುಂದರ್‌, ಪ್ರಖ್ಯಾತ್‌ ಶೆಟ್ಟಿ, ಹರೀಶ್‌ ಕಿಣಿ, ಭಾಸ್ಕರ್‌ ರಾವ್‌ ಕಿದಿಯೂರು, ಮನೋಜ್‌ ಕರ್ಕೇರ, ಅಮೃತ್‌ ಶೆಣೈ, ಕುಶಲ್‌ ಶೆಟ್ಟಿ, ಚಂದ್ರಿಕಾ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ಸಂಧ್ಯಾ ತಿಲಕ್‌ರಾಜ್‌, ಜ್ಯೋತಿ ಹೆಬ್ಟಾರ್‌, ಹರ್ಮಿಸ್‌ ನೊರೊನ್ಹಾ, ನವೀನ್‌ ಶೆಟ್ಟಿ, ರಮೇಶ್‌ ಕಾಂಚನ್‌, ಗಣೇಶ್‌ ನೇರ್ಗಿ, ನಾರಾಯಣ ಕುಂದರ್‌, ಸದಾಶಿವ ಅಮೀನ್‌ ಕಟ್ಟೆಗುಡ್ಡೆ, ಶೇಖರ್‌ ಜಿ. ಕೋಟ್ಯಾನ್‌, ಶಶಿರಾಜ್‌ ಕುಂದರ್‌, ಯಜ್ಞೆàಶ್‌ ಆಚಾರ್ಯ, ಆಕಾಶ್‌ ರಾವ್‌, ಪ್ರಶಾಂತ್‌ ಪೂಜಾರಿ, ವೆಂಕಟೇಶ್‌ ಪೆರಂಪಳ್ಳಿ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next