Advertisement

ನಮ್ಮ ಊರುಗಳೂ ದಿಲ್ಲಿಯಾಗದಂತೆ ತಪ್ಪಿಸಬೇಕಾದ ಹೊತ್ತಿದು

06:00 AM Nov 10, 2018 | Team Udayavani |

ನಮ್ಮೆದುರು ಇರುವ ಮಿಲಿಯನ್‌ ಡಾಲರ್‌ ಪ್ರಶ್ನೆಯೆಂದರೆ ಆದಾಯವೆಂದು ತೆರಿಗೆಯನ್ನು ಸ್ವೀಕರಿಸಬೇಕೋ ಅಥವಾ ಅದಕ್ಕೆ ಪ್ರತಿಯಾಗಿ ಜವಾಬ್ದಾರಿ ನಿರ್ವಹಿಸುವ ನೆಲೆಯನ್ನು ಅರ್ಥ ಮಾಡಿಕೊಳ್ಳಬೇಕೋ ಎಂಬುದು. ಇದು ನಮ್ಮ ಸರಕಾರಗಳು, ಸ್ಥಳೀಯ ಸರಕಾರಗಳು ಬಹು ಮುಖ್ಯವಾಗಿ ಅರ್ಥ ಮಾಡಿಕೊಳ್ಳಬೇಕಾದದ್ದು.

Advertisement

ಜಗತ್ತಿನ ಪ್ರತಿ ಮಹಾನಗರಗಳು ಯೋಚಿಸುತ್ತಿರುವುದೂ ಒಂದನ್ನೇ. ನಮ್ಮ ರಸ್ತೆಗಳನ್ನು ವಾಹನಗಳ ಒತ್ತಡದಿಂದ ಹೇಗೆ ಕಾಪಾಡುವುದು? ನಮ್ಮ ನಾಗರಿಕರಿಗೂ ಒಂದಿಷ್ಟು ನಡೆದಾಡಲು ಹೇಗೆ ಅವಕಾಶ ಕಲ್ಪಿಸುವುದು? ಇತ್ಯಾದಿ. ನಮ್ಮ ದೇಶದ ಮಹಾನಗರಗಳಲ್ಲೂ ಇದೇ ಆಲೋಚನೆ ಹಲವು ವರ್ಷಗಳಿಂದ ನಡೆಯುತ್ತಿದೆ. ಅದರ ಪರಿಣಾಮವಾಗಿ ಮೇಲ್ಸೇತುವೆ, ಗ್ರೇಡ್‌ ಸಪರೇಟರ್‌ಗಳಂಥ ಹತ್ತಾರು ಉಪಾಯಗಳು ರೂಪು ತಳೆಯುತ್ತವೆ. ಜತೆಗೆ ಸುಗಮ ವಾಹನ ಸಂಚಾರಕ್ಕಾಗಿ ಲಕ್ಷಾಂತರ ಸಂಚಾರಿ ಪೊಲೀಸ್‌ ಸಿಬಂದಿ, ಸಾವಿರಾರು ಸಿಗ್ನಲ್‌ ಲೈಟ್‌ಗಳು-ಹೀಗೆ ಒಂದೇ ಎರಡೇ, ಲೆಕ್ಕಕ್ಕೆ ಸಿಗದಷ್ಟು ವ್ಯವಸ್ಥೆಗಳು ಜಾರಿಗೆ ಬರುತ್ತಲೇ ಇವೆ. ಹಾಗೆಂದು ಯಾವುದೂ ಸಮಸ್ಯೆಯ ಮೂಲಕ್ಕೆ ಪರಿಹಾರವಾಗಿ ಮುಟ್ಟುತ್ತಿಲ್ಲ. ಬದಲಾಗಿ ಉರಿಯುವ ಅಗ್ನಿಗೆ ಒಂದು ಚಮಚ ತುಪ್ಪ ಹಾಕಿದಂತಾಗುತ್ತಿದೆ, ಕಾವು ಹೆಚ್ಚುತ್ತಿದೆ. 

ವಿಶ್ವದ ಬೇರೆ ನಗರಗಳಲ್ಲಿ ಈ ವಾಹನಗಳ ನಿಯಂತ್ರಣಕ್ಕೆ, ಅದರಲ್ಲೂ ವೈಯಕ್ತಿಕ ಬಳಕೆಯ ವಾಹನಗಳ (ಕಾರು ಇತ್ಯಾದಿ) ನಿಯಂತ್ರಣಕ್ಕೆ ಹೆಚ್ಚು ಮುತುವರ್ಜಿ ವಹಿಸಲಾಗುತ್ತಿದೆ. ಒಂದೆಡೆ ವೈಯಕ್ತಿಕ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸದಿರುವುದು, ಮತ್ತೂಂದು ಕಡೆ ನಾಗರಿಕರಿಗೆ ಪರ್ಯಾಯ ಸಂಚಾರ ವ್ಯವಸ್ಥೆಯಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದು. ಇಲ್ಲಿ ಬಲಪಡಿಸುವುದೆಂದರೆ ಬರೀ ವಾಹನಗಳ ಸಂಖ್ಯೆಯನ್ನು ಹೆಚ್ಚಳ ಮಾಡುವುದಲ್ಲ; ಬದಲಾಗಿ ಮೂಲ ಸೌಕರ್ಯವನ್ನು ಹೆಚ್ಚಿಸುವುದು. ಜನರ ಅಗತ್ಯ ಹಾಗೂ ಅನಿವಾರ್ಯತೆಗಳನ್ನು ಕಂಡುಕೊಂಡು ಸೌಲಭ್ಯ ಕಲ್ಪಿಸುವುದು ಇತ್ಯಾದಿ.

ಎಲ್ಲಿಯವರೆಗೆ ಎಂದರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಪಡಿಸುವ ಮೂಲಕ ವೈಯಕ್ತಿಕ ಸಾರಿಗೆ ಕ್ರಮಕ್ಕೆ ಕಡಿವಾಣ ಹಾಕಬೇಕೆಂಬ ವಿಷಯದಲ್ಲಿ ದ್ವಂದ್ವ ನಿಲುವಿಗೆ ಎಂದೂ ಜಾರುವುದಿಲ್ಲ. ಕೆಲವು ಜನರಿಗೆ ಅದು ಕಠಿಣ ಎನಿಸಿದರೂ, ಅಪ್ರಿಯವೆನಿಸಿದರೂ ಅದು ಜಾರಿಗೊಳ್ಳುತ್ತದೆ. ಹಾಗಾಗಿಯೇ ನಿಧಾನವಾಗಿ ಯುರೋಪ್‌ ಸೇರಿದಂತೆ ಹಲವೆಡೆ ಸಾರ್ವಜನಿಕ ವ್ಯವಸ್ಥೆ ಜನಪ್ರಿಯವಾಗುತ್ತಿದೆ. ಜರ್ಮನಿಯನ್ನೇ ತೆಗೆದುಕೊಳ್ಳಿ. ಅಲ್ಲಿ ಓಡಾಡಿದವರೂ ಹೇಳುವ ಮಾತಿದೆ. ಅಲ್ಲಿನ ಮಹಾನಗರಗಳಲ್ಲಿ ಕಾರು ಇಲ್ಲದೇ ಬದುಕಬಹುದು. ತಮ್ಮ ಅಗತ್ಯ ಕೆಲಸಗಳಿಗಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ನಂಬಬಹುದು. ಬಹುತೇಕ ನಗರ ಪ್ರದೇಶಗಳಲ್ಲಿ ಈ ವ್ಯವಸ್ಥೆ ಇದೆ. ಹಾಗೆ ಯೋಚಿಸಿದರೆ ಅಮೆರಿಕಕ್ಕೆ ಹೋಲಿಸಿದರೆ ಯುರೋಪ್‌ನಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬೆಳೆಯುತ್ತಿರುವುದು ಸ್ಪಷ್ಟ. ಅಮೆರಿಕದಲ್ಲಿ ಅಂಥದೊಂದು ಶಿಸ್ತಿನ ವ್ಯವಸ್ಥೆಯಿನ್ನೂ ರೂಪುಗೊಂಡಿಲ್ಲ. ಹಾಗಾಗಿಯೇ ಅಮೆರಿಕ ಎಂದರೆ ಕಾರುಗಳ ಲೋಕ ಎಂಬ ಅಭಿಪ್ರಾಯ ಇರುವಂಥದ್ದು.

ನಮ್ಮ ದೇಶದ ಕಥೆ
ನಮ್ಮ ದೇಶದ ಕಥೆ ಕುರಿತು ವಿವರಿಸಿ ಹೇಳಬೇಕಿಲ್ಲ. ಪ್ರತಿ ನಗರಗಳ ನಾಗರಿಕರೂ ನಿತ್ಯವೂ ಅನುಭವಿಸುತ್ತಿದ್ದಾರೆ. ನಮ್ಮ ವಾಹನಗಳ ಮೇಲಿನ ಪ್ರೀತಿ ಎಷ್ಟು ಬೆಳೆಯುತ್ತಿದೆ ಎಂದರೆ ಜನಸಂಖ್ಯೆಗಿಂತ ವೇಗದಲ್ಲಿ. 2001 ರಿಂದ 2011 ರವರೆಗೆ ನಮ್ಮ ನಗರ ರಸ್ತೆ ಮೂಲ ಸೌಕರ್ಯವನ್ನು ಅಭಿವೃದ್ಧಿ ಪಡಿಸಿದ ಬಗೆ ಲೆಕ್ಕ ಹಾಕಿ. 2001 ರಲ್ಲಿ ಸುಮಾರು 2.52 ಲಕ್ಷ ಕಿಮೀ ರಸ್ತೆ ನಗರ ಪ್ರದೇಶಗಳಲ್ಲಿ ಇತ್ತು. 2011 ರ ಹೊತ್ತಿಗೆ ಅದು 4. 11 ಲಕ್ಷಕ್ಕೇರಿತು. ಆದರೆ ಇದೇ ದಶಕದಲ್ಲಿ ಅಂದರೆ ಹತ್ತು ವರ್ಷಗಳ ಕಾಲದಲ್ಲಿ ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಶೇ. 219 ರಷ್ಟು ವಾಹನಗಳು ಹೆಚ್ಚಾದವು. ಅದಕ್ಕೆ ಪ್ರತಿಯಾಗಿ ನಮ್ಮ ರಸ್ತೆ ಮೂಲ ಸೌಕರ್ಯ ಅದೇ ಹತ್ತು ಲಕ್ಷ ಜನಸಂಖ್ಯೆಗೆ ಶೇಕಡಾ 124 ರಷ್ಟು ಹೆಚ್ಚಳವಾಯಿತು. ಅಲ್ಲಿಗೆ ನಮ್ಮ ಮೂಲ ಸೌಕರ್ಯ ಅಭಿವೃದ್ಧಿಗಿಂತ ದುಪ್ಪಟ್ಟು ವೇಗದಲ್ಲಿ ವಾಹನಗಳು ರಸ್ತೆಗಿಳಿಯುತ್ತಿವೆ ಎಂದಂತಾಯಿತು. ಅಂದ ಮೇಲೆ ನಮ್ಮ ರಸ್ತೆಗಳು ಕಿಕ್ಕಿರಿದು ತುಂಬಲಾರವೇ?

Advertisement

ಈಗ ಫ್ರಾನ್ಸ್‌ನ  ಸರದಿ
ಫ್ರಾನ್ಸ್‌ ದೇಶದ ಮಹಾನಗರಗಳಲ್ಲಿ ವೈಯಕ್ತಿಕ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸದಿರಲು ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ವಾಹನ ದಟ್ಟಣೆ ಹೆಚ್ಚಿರುವ ನಗರಗಳಲ್ಲಿ ಪ್ರವೇಶಿಸಲೇ ನಿರ್ದಿಷ್ಟ ಮೊತ್ತವನ್ನು ಶುಲ್ಕವಾಗಿ ಪಾವತಿಸಬೇಕು. ಇಲ್ಲವಾದರೆ ಆ ದಟ್ಟಣೆ ಹೆಚ್ಚಿರುವ ರಸ್ತೆಗಳಿಗೆ ಹೋಗುವಂತಿಲ್ಲ. ಈಗಾಗಲೇ ಈ ಸಂಬಂಧ ಕರಡು ನಿಯಮ ರೂಪಿಸಲಾಗಿದ್ದು, ಜನರ ಅಭಿಪ್ರಾಯವನ್ನು ಕೇಳಲಾಗುತ್ತಿದೆ. ಎಲ್ಲವೂ ಸರಿ ಹೋಗಿ ಒಂದುವೇಳೆ ಜನರು ಬೆಂಬಲಿಸಿದರೆಂದುಕೊಳ್ಳಿ. ಶೀಘ್ರವೇ ಹೊಸ ನಿಯಮ ಜಾರಿಗೆ ಬರುತ್ತದೆ. 

ಬಹಳ ಮುಖ್ಯವಾಗಿ ಮಹಾನಗರಗಳಲ್ಲಿ ಮೊದಲ ಹಂತದಲ್ಲಿ ಈ ನಿಯಮ ಜಾರಿಗೆ ಫ್ರಾನ್ಸ್‌ ಸರಕಾರ ಆಸಕ್ತಿ ತಳೆದಿದೆ. ಅದರಂತೆ ಒಂದು ಲಕ್ಷ ಜನಸಂಖ್ಯೆ ಇರುವ ನಗರಗಳ ಸ್ಥಳೀಯ ಸಂಸ್ಥೆಗಳು ತಮ್ಮ ನಾಗರಿಕರಿಗೆ ಈ ಶುಲ್ಕ ವಿಧಿಸುವ ಅಧಿಕಾರವನ್ನು ಹೊಂದಲಿವೆ. ಈ ಹೆಚ್ಚುವರಿ ಶುಲ್ಕ ಪದ್ಧತಿಯಿಂದ ಜನರ ಅಭ್ಯಾಸವನ್ನು ಬದಲಿಸಬಹುದಾಗಿದೆ ಹಾಗೂ ವಾಯುಮಾಲಿನ್ಯ ಒತ್ತಡವನ್ನು ಗಣನೀಯವಾಗಿ ತಗ್ಗಿಸಬಹುದಾಗಿದೆ ಎಂಬುದು ಸರಕಾರದ ಆತ್ಮವಿಶ್ವಾಸದ ಮಾತು. ಅದರಂತೆ ಇಂಥ ಸ್ಥಳೀಯ ಸಂಸ್ಥೆಗಳು ಪ್ರತಿ ಕಾರಿಗೆ ತಲಾ 2.50 ಯುರೋಗಳನ್ನು ಶುಲ್ಕವಾಗಿ ವಿಧಿಸಬಹುದು. ಇದು ಪ್ರತಿ ಬಾರಿ ಆ ನಿರ್ದಿಷ್ಟ ವಾಹನ ದಟ್ಟಣೆ ಹೆಚ್ಚಳವಿರುವ ರಸ್ತೆಗೆ ಪ್ರವೇಶಿಸುವಾಗಲೂ ಪಾವತಿಸಬೇಕಾದ ಮೊತ್ತ. ಕಾರಿಗಿಂತ ದೊಡ್ಡ ವಾಹನಗಳಿಗೆ (ಟ್ರಕ್‌) 10 ಯುರೋಗಳು. ಎಲ್ಲವೂ ಆನ್‌ಲೈನ್‌ ಮೂಲಕವೇ ಪಾವತಿಸಬೇಕು. ಹಾಗೆಯೇ 5 ಲಕ್ಷ ಮತ್ತು ಅದಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಈ ಶುಲ್ಕ ಮೊತ್ತ ಅನುಕ್ರಮವಾಗಿ 5 ಯುರೋ ಹಾಗೂ 20 ಯುರೋಗಳಿಗೆ ಏರಿಸಲಾಗುತ್ತದೆ. ಇದೇ ಶುಲ್ಕ ಪ್ರಮಾಣ ಲಂಡನ್‌ನಲ್ಲಿ ಇನ್ನೂ ಹೆಚ್ಚಳವಿದೆ. ಅಲ್ಲಿ ಕಾರಿಗೆ 11.50 ಯುರೋಗಳನ್ನು ವಿಧಿಸಲಾಗುತ್ತದೆ. 

ನಗರಗಳ ಪ್ರವೇಶ ದ್ವಾರದಲ್ಲಿ ವಿದ್ಯುನ್ಮಾನ ಗೇಟುಗಳನ್ನು ಅಳವಡಿಸ ಲಾಗುತ್ತದೆ. ಆನ್‌ಲೈನ್‌ ಪಾವತಿಸಿದರೆ ಮಾತ್ರ ಅವು ತೆರೆದುಕೊಳ್ಳುತ್ತವೆ. ಇಲ್ಲದಿದ್ದರೆ ಇಲ್ಲ. ಇಲ್ಲಿಗೇ ಮುಗಿಯುವುದಿಲ್ಲ. ಯಾರು ಸೈಕಲ್‌ಗ‌ಳಲ್ಲಿ ಹಾಗೂ ಕಾರ್‌ ಪೂಲ್‌ ವ್ಯವಸ್ಥೆ ಯಲ್ಲಿ ಹೋಗಲು ಇಚ್ಛಿಸುತ್ತಾರೋ, ಬಳಸುತ್ತಾರೋ ಅವರಿಗೆ 400 ಯುರೋ ಟ್ಯಾಕ್ಸ್‌ ಬೋನಸ್‌ ಅನ್ನು ನೀಡಲು ಸರಕಾರ ನಿರ್ಧರಿಸಿದೆ. ಪ್ಯಾರಿಸ್‌ ಸೇರಿದಂತೆ ಫ್ರಾನ್ಸ್‌ನ ಹಲವು ನಗರಗಳನ್ನು ಟ್ರಾಫಿಕ್‌ ಜಾಮ್‌ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ.
 
ಇವೆಲ್ಲವೂ ಅನುಕೂಲವಾಗಲಿದೆಯೇ ಎಂಬ ಪ್ರಶ್ನೆ ನಮ್ಮೊಳಗೆ ಹುಟ್ಟಬಹುದು. ಎಲ್ಲವೂ ಸಾಧ್ಯ ಎಂಬುದಕ್ಕೆ ಹಲವು ಉದಾಹರಣೆಗಳಿವೆ. ಸಣ್ಣದೊಂದು ಉದಾಹರಣೆಯೆಂದರೆ, ಲಂಡನ್‌ನಲ್ಲಿ ಇಂಥದೊಂದು ಶುಲ್ಕ ಪದ್ಧತಿ ಬರುವ ಮೊದಲು ಪರಿಸ್ಥಿತಿ ಚಿಂತಾಜನಕವಾಗಿತ್ತು. ಆದರೆ ಇಂದು ಅಲ್ಲಿ ಬಹಳಷ್ಟು ಮಂದಿ ಕಾರುಗಳೊಂದಿಗೆ ರಸ್ತೆಗಿಳಿಯುವುದನ್ನೇ ಮರೆತಿದ್ದಾರೆ. ನಮಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೇ ಅನುಕೂಲ ಹಾಗೂ ಕ್ಷೇಮ ಎಂಬ ಅಭಿಪ್ರಾಯಕ್ಕೆ ಬರತೊಡಗಿದ್ದಾರೆ. ಇದು ನಿಜವಾದ ಸುಸ್ಥಿರ ಬದುಕಿನತ್ತ ಸಾಗುವ ಹಾದಿ.

ಅದರಲ್ಲೂ ಲಂಡನ್‌ನಲ್ಲಿ ಈ ಪದ್ಧತಿ ಎಷ್ಟರಮಟ್ಟಿಗೆ ಕಟ್ಟುನಿಟ್ಟಾಗಿದೆಯೆಂದರೆ, ನಿಗದಿತ ಪ್ರದೇಶಗಳ ರಸ್ತೆಗಳನ್ನು ಪ್ರವೇಶಿಸುವ ಪ್ರತಿ ವಾಹನಗಳ ನೋಂದಣಿ ಸಂಖ್ಯೆಗಳನ್ನು ಡಿಜಿಟಲ್‌ ಕ್ಯಾಮೆರಾಗಳು ಕಣ್ಣಾವಲು ಕಾಯುತ್ತಿರುತ್ತವೆ. ಈ ನಿರ್ಬಂಧಿತ ಪ್ರದೇಶಗಳಲ್ಲಿ ಸುಮಾರು 200 ಕ್ಕೂ ಹೆಚ್ಚು ಹಣ ಪಾವತಿ ಕೇಂದ್ರಗಳನ್ನು ತೆರೆದಿದೆ. ಒಂದುವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ದಂಡ ವಿಧಿಸಲಾಗುತ್ತದೆ. ಅದೂ ಕಡಿಮೆ ಪ್ರಮಾಣದಲ್ಲಲ್ಲ.

ಇಷ್ಟೆಲ್ಲಾ ಮಾಡಿದ್ದಕ್ಕೆ ಒಂದು ಅಂದಾಜಿನ ಪ್ರಕಾರ, ವಾಹನ ಸಂಚಾರ ಪ್ರಮಾಣದಲ್ಲಿ ಶೇ. 25 ರಷ್ಟು ಇಳಿಕೆಯಾಗಿತ್ತು. ಈ ಪ್ರಯೋಗ ನಡೆದದ್ದು 15 ವರ್ಷಗಳ ಹಿಂದೆಯೇ. ಆಗಲೇ ಒಂದು ವರ್ಷದಲ್ಲಿ ಸುಮಾರು 60 ಸಾವಿರ ಕಾರುಗಳು ರಸ್ತೆಗೆ ಇಳಿಯಲೇ ಇಲ್ಲ. 

ಮತ್ತೆ ನಮ್ಮ ದೇಶಕ್ಕೆ ಬರೋಣ. ನಾವಿಲ್ಲಿ ಕಿಕ್ಕಿರಿದ ನಗರಗಳ ಮಧ್ಯೆ ಇಂಚಿಂಚು ಜಾಗವನ್ನು ಹುಡುಕಿಕೊಂಡು ಓಡಾಡಬೇಕು. ಒಂದು ಕ್ಷಣ ರಸ್ತೆಯಲ್ಲಿ ಒಂದು ವಾಹನ ತಾಂತ್ರಿಕ ಸಮಸ್ಯೆಯಿಂದ ನಿಂತುಕೊಂಡಿ ತೆಂದರೆ, ಮರುಕ್ಷಣದಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಎಲ್ಲರ ವಾಹನಗಳೂ ಕೂಗತೊಡಗುತ್ತವೆ. ಟ್ರಾಫಿಕ್‌ ಜಾಮ್‌ ಎಂಬ ತಲೆನೋವು ಶುರವಾಗುತ್ತದೆ. 

ಹಾಗಾದರೆ ನಾವು ಏನು ಮಾಡಬೇಕು? ವಾಹನ ನೋಂದಣಿಯೂ ಬೊಕ್ಕಸ ತುಂಬುವ ಆದಾಯದ ಮೂಲವೆಂದು ಪರಿಗಣಿಸಿ ಹೆಚ್ಚೆಚ್ಚು ವಾಹನಗಳಿಗೆ ಅವಕಾಶ ನೀಡುತ್ತಾ ಸಾಗಬೇಕೋ ಅಥವಾ ವಾಹನ ದಟ್ಟಣೆ ಕಡಿಮೆ ಮಾಡುವ ನಾನಾ ವಿಧಾನಗಳನ್ನು ಶೋಧಿಸಬೇಕೋ? ಎಂಬುದು ನಿಜಕ್ಕೂ ಚರ್ಚೆಯಾಗಬೇಕಾದ ಸಂಗತಿ. ಆಗ ಒಂದಿಷ್ಟು ನಮ್ಮ ನಗರಗಳ ಸ್ಥಿತಿ ಸುಧಾರಿಸಬಹುದು. ಇಲ್ಲವಾದರೆ ಎಲ್ಲವೂ ಒಂದು ದಿನ ಇಂದಿನ ದಿಲ್ಲಿಯಾಗಲಿವೆ. 

Advertisement

Udayavani is now on Telegram. Click here to join our channel and stay updated with the latest news.

Next