Advertisement
21ನೆಯ ಶತಮಾನದ ಆರಂಭದಿಂದಲೇ ಇಂಗ್ಲಿಷ್ ಭಾಷೆಯ ಅಟ್ಟಹಾಸಕ್ಕೆ ಸರಕಾರಿ ಕನ್ನಡ ಶಾಲೆಗಳು ನಲುಗುತ್ತಾ ಬಂದಿವೆ. ಇಂದಿನ ಪರಿಸ್ಥಿತಿಯನ್ನು ನೋಡಿದಾಗ ಕವಿಯೊಬ್ಬರ ಮಾತು ನೆನಪಿಗೆ ಬರುತ್ತಿದೆ.“ತೋಟದ ಅಂಚಿನಲ್ಲೆಲ್ಲೋ ಬೆಳೆದಿದ್ದ ಕಳೆಹುಲ್ಲು ಕಣ್ಣ ನೋಟವನು ತಪ್ಪಿಸಿ ನುಗ್ಗುತಿಹುದಲ್ಲೋ’ ಎಂಬಂತೆ ಇಂಗ್ಲಿಷ್ ಎನ್ನುವುದು ತನ್ನ ಕಬಂಧಬಾಹುವನ್ನು ಜಗತ್ತಿನಾದ್ಯಂತ ವಿಸ್ತರಿಸುತ್ತಿದ್ದು ಅದಕ್ಕೆ ನಮ್ಮ ಕನ್ನಡವು ಬಲಿಯಾಗುತ್ತಿದೆ. ಇಂಗ್ಲಿಷ್ ಕಲಿಯುವುದು ತಪ್ಪಲ್ಲ, ಆದರೆ ಈ ವೇಳೆಯಲ್ಲಿ ಕನ್ನಡದ ಕಡೆಗಣನೆ ಅಗುತ್ತಿರುವುದು ವಿಪರ್ಯಾಸ.
ಕನ್ನಡ ಶಾಲೆಗಳ ವಿಚಾರ ಅಂದರೆ, ಅದು ಕನ್ನಡ ಭಾಷೆಯ ವಿಚಾರ. ರಾಷ್ಟ್ರಕವಿ ಗೋವಿಂದ ಪೈ ಅವರು ಒಂದು ಮಾತನ್ನು ಹೇಳಿದ್ದರು.
Related Articles
Advertisement
ಕನ್ನಡ ಜ್ಞಾನದ ಮಾಧ್ಯಮವಾಗಲು ರಾಜಕಾರಣ ಮತ್ತು ಅಧಿಕಾರಶಾಹಿ ಕೂಡ ತಡೆಯುತ್ತವೆ. “”ಜನಭಾಷೆಯ ವಿನಾ ಜನತಾ ಸ್ವರಾಜ್ಯ ಸಾಧ್ಯವೇ ಇಲ್ಲ” ಎಂದು ಡಾ|| ರಾಮ ಮನೋಹರ ಲೋಹಿಯಾ ಹೇಳಿದ ಮಾತು ಪ್ರಜಾಪ್ರಭುತ್ವದ ಕೇಂದ್ರ ತತ್ವವಾಗಿದೆ. ಜನಭಾಷೆ (ಇಲ್ಲಿ ಕನ್ನಡ) ಸತ್ತರೆ ಪ್ರಜಾಪ್ರಭುತ್ವ ಸಾಯುತ್ತದೆ.
ಹಿಂದೆ ಏನಾಯಿತೆಂದರೆ, ನಮ್ಮಲ್ಲಿನ ಸರಕಾರಗಳು ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಪಠ್ಯ ಕ್ರಮದಲ್ಲೇನೋ ಸೇರಿಸಿತು. ಆದರೆ ಕನ್ನಡ ಶಾಲೆಗಳಲ್ಲಿ ಅದನ್ನು ಸರಿಯಾಗಿ ಕಲಿಸುವ ತಯಾರಿಯನ್ನು ಸರಕಾರ ಮಾಡಲಿಲ್ಲ. ಈ ಪ್ರಕ್ರಿಯೆಯಿಂದ ಪ್ರಾಥಮಿಕ ಶಾಲೆಯಿಂದ ಇಂಗ್ಲಿಷ್ ಕಲಿತರೂ ಹತ್ತನೆಯ ತರಗತಿಯ ಮಕ್ಕಳಿಗೆ ಒಂದೆರಡು ವಾಕ್ಯಗಳನ್ನು ಇಂಗ್ಲಿಷ್‌ನಲ್ಲಿ ಬರೆಯಲು ಸಾಧ್ಯವಿಲ್ಲದಂತಾಯಿತು. ಆದ್ದರಿಂದ ಪಾಲಕರು ಅಂದುಕೊಂಡಿದ್ದು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಓದಿದರೆ ಮಾತ್ರ ನಮ್ಮ ಮಕ್ಕಳ ಉದ್ಧಾರ ಸಾಧ್ಯ. ಜಾಗತೀಕರಣದ ಸಂದರ್ಭದಲ್ಲಿ ಈ ನಂಬಿಕೆ ಹಳ್ಳಿ ಹಳ್ಳಿಗೂ ಹಬ್ಬಿತು.
ಮಗು ಮಾತೃಭಾಷೆಯಲ್ಲಿ ಪ್ರಭುತ್ವ ಸಾಧಿಸದೇ ಇದ್ದರೆ ಅನ್ಯಭಾಷೆ ಕಲಿಯಲು ಸಾಧ್ಯವಿಲ್ಲ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ. ಆಂಗ್ಲಮಾಧ್ಯಮ ಶಿಕ್ಷಣ ಆರಂಭಿಸಿದ ಮಾತ್ರಕ್ಕೆ ಮಕ್ಕಳಿಗೆ ಆ ಭಾಷೆಯಲ್ಲಿ ಪ್ರಭುತ್ವ ಬರುವುದಿಲ್ಲ. ಮಾತೃ ಭಾಷೆ ಶಿಕ್ಷಣದಿಂದ ವಂಚಿತರಾಗಿ ಸೃಜನಶೀಲತೆ, ಜೀವಂತಿಕೆ ನಾಶವಾದ ಬಗ್ಗೆ ಸಾಕಷ್ಟು ಸಂಶೋಧನೆಗಳಿವೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.
ಇಂದು ನಮ್ಮ ಇಂಗ್ಲಿಷ್ ಮೋಹಕ್ಕೆ ಅಥವಾ ಇಂಗ್ಲಿಷ್ ಕಾನ್ವೆಂಟುಗಳು ಬೀಸಿದ ಬಲೆಗಳ ಜಾಲಕ್ಕೆ ಮತ್ತು ಜಾಗತೀಕರಣದ ಮೋಹದ ಬಲೆಗೆ ಬಿದ್ದ ಪಾಲಕರ ಸ್ಥಿತಿಯನ್ನು ಗಮನಿಸಿದಾಗ ಈ ಸ್ತರಗಳಲ್ಲಿ ಕನ್ನಡ ಭಾಷೆ ನಾಶವಾಗಲಿರುವ ಹಂತದಲ್ಲಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಇಂಗ್ಲಿಷ್ ಮಾಧ್ಯಮ ಶಾಲೆಗಳ ಪ್ರಾರಂಭಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸರಕಾರ ಆದೇಶ ಹೊರಡಿಸಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಬೆಂಗಳೂರಿನ ಸಮಾರಂಭವೊಂದರಲ್ಲಿ ತಿಳಿಸಿದ್ದಾರೆ. ಅವರ ಅಭಿಪ್ರಾಯದಂತೆ ಸರಕಾರಿ ಶಾಲೆಗಳಲ್ಲಿ ಪ್ರಸ್ತುತ ವಿದ್ಯಾರ್ಥಿಗಳ ಸರಾಸರಿ ಸಂಖ್ಯೆ 88 ಮಾತ್ರ. ಆದರೆ ಖಾಸಗಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳ ಸರಾಸರಿ ಸಂಖ್ಯೆ 210 ರಷ್ಟಿದೆ. ರಾಜ್ಯದಲ್ಲಿ 48 ಸಾವಿರ ಸರಕಾರಿ ಶಾಲೆಗಳಿದ್ದು, ಅಂದಾಜು 15 ಸಾವಿರ ಶಾಲೆಗಳಲ್ಲಿ ಶೇಕಡಾ 50ಕ್ಕಿಂತ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿದ್ದಾರೆ ಎಂದು ಅಂಕಿ-ಅಂಶಗಳನ್ನು ನೀಡಿದ್ದಾರೆ. ಈ ಸ್ಥಿತಿಗೆ ಯಾರು ಹೊಣೆ? ಸರ್ಕಾರ ಸರ್ಕಾರಿ ಶಾಲೆಗಳ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತ ಹಾಗೂ ಗುಣಮಟ್ಟದ ಶಿಕ್ಷಣ ನೀಡುವತ್ತ ಗಮನ ಹರಿಸಿದರೆ ಸರ್ಕಾರಿ ಶಾಲೆಗಳಿಗೆ ಈ ಸ್ಥಿತಿ ಬರುತ್ತಿರಲಿಲ್ಲವೇನೋ? ರಾಜ್ಯದ ಕೆಲವು ಕಡೆಗಳಲ್ಲಿ ಖಾಸಗಿ ಶಾಲೆಗಳಿಗೆ ಸರ್ಕಾರಿ ಶಾಲೆಗಳು ಸೆಡ್ಡು ಹೊಡೆದು ಪ್ರಗತಿಪಥದತ್ತ ಮುನ್ನಡೆದಿರುವ ಉದಾಹರಣೆಯನ್ನು ನಾವು ಕಾಣುತ್ತೇವೆ. ಆದರೆ ಇವುಗಳ ಸಂಖ್ಯೆ ಬಹಳ ಕಡಿಮೆಯಿದೆ. ಇಡೀ ಜಗತ್ತಿನ ಬೇರೆ ಬೇರೆ ದೇಶಗಳ ಸಂದರ್ಭಗಳಲ್ಲಿ ಜ್ಞಾನವೆಲ್ಲವೂ ಇಂಗ್ಲಿಷ್ ಭಾಷೆಯ ಮೂಲಕವೇ ಉತ್ಪನ್ನಗೊಳ್ಳುತ್ತಿದೆಯೇ? ಜಪಾನ್, ಜರ್ಮನಿ, ಚೀನಾ ಮೊದಲಾದ ದೇಶಗಳೂ ಇದರಿಂದ ಹೊರತಾಗಿಲ್ಲವೆ? ವಿದ್ವಾಂಸರೇ ಇದನ್ನು ವಿವೇಚಿಸಿಕೊಳ್ಳಬೇಕು. ಕನ್ನಡ ಮಾಧ್ಯಮ, ಇಂಗ್ಲಿಷ್ ಮಾಧ್ಯಮ ಅನ್ನೋ ಮುಖವಾಡ ಕಳಚಬೇಕಾಗಿದೆ. ಹೀಗೇ ಮುಂದುವರೆದರೆ ಮುಂದೊಂದು ದಿನ ಕನ್ನಡ ಶಾಲೆಗಳು ಅಳಿದುಳಿದ ಅವಶೇಷಗಳಾಗಿ ಸಿಗೋದು ಖಂಡಿತವಾಗುತ್ತದೆ. ಕನ್ನಡ ಶಾಲೆಗಳನ್ನು ಉಳಿಸೋದು ನಮ್ಮೆಲ್ಲರ ಕರ್ತವ್ಯ. ಕನ್ನಡ ಶಾಲೆಗಳು ಉಳಿಯಬೇಕು ಹಾಗೂ ಬೆಳೆಯಬೇಕು. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ. – ಸುರೇಶ ವೀ, ರಾಮದುರ್ಗ