Advertisement

ಅಪ್ರತಿಮ ಸಾಧಕರನ್ನು ರೂಪಿಸಿದ ಬೆಳ್ತಂಗಡಿಯ ಮಾದರಿ ಹಿ.ಪ್ರಾ. ಶಾಲೆ

09:45 AM Nov 06, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಶ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1905 ಶಾಲೆ ಆರಂಭ
ಮಾಜಿ ಸಚಿವರು, ಮಾಜಿ ಶಾಸಕರನ್ನು ಸಮಾಜಕ್ಕೆ ನೀಡಿದ ಹೆಮ್ಮೆ

ಬೆಳ್ತಂಗಡಿ: ತಾಲೂಕಿನ ಕೇಂದ್ರ ಸ್ಥಳದ ಕೋಟ್ಲಾಯ ಗುಡ್ಡೆ ಕೆಳಭಾಗದಲ್ಲಿ ಸ್ವಾತಂತ್ರ್ಯಪೂರ್ವ ನಿರ್ಮಾಣಗೊಂಡ ತಾಲೂಕಿನ 2ನೇ ಶಾಲೆ ದ.ಕ. ಜಿ.ಪಂ. ಮಾ.ಹಿ.ಪ್ರಾ. ಶಾಲೆ ಬೆಳ್ತಂಗಡಿ ಅಪ್ರತಿಮ ಸಾಧಕರ ಶಿಕ್ಷಣ ದೇಗುಲ. ಅಧಿಕೃತ ಮಾಹಿತಿ ಪ್ರಕಾರ 1905ರಲ್ಲಿ ಆರಂಭವಾಗಿರುವ ಶಾಲೆಗೆ ಈಗ 114 ವರ್ಷ. ಅಂದು ಕೊರಂಜ ಅಥವಾ ಪುತ್ತೂರು ಬೋರ್ಡ್‌ ಶಾಲೆಗೆ ತೆರಳಬೇಕಾಗಿತ್ತು. ಇದನ್ನು ಮನಗಂಡು ಅಂದಿನ ಶಿಕ್ಷಣ ಪ್ರೇಮಿಗಳ ಒತ್ತಾಸೆಯಿಂದ ಬ್ರಿಟಿಷ್‌ ಆಡಳಿತಾವಧಿಯಲ್ಲಿ ಈ ಶಾಲೆ ಆರಂಭಗೊಂಡಿತ್ತು. ಶಾಲಾ ವ್ಯಾಪ್ತಿಗೊಳಪಟ್ಟಂತೆ 1 ಸ.ಕಿ.ಪ್ರಾ. ಶಾಲೆ, 6 ಸ.ಹಿ.ಪ್ರಾ. ಶಾಲೆಗಳಿವೆ. 106 ವಿದ್ಯಾರ್ಥಿಗಳು, 6 ಶಿಕ್ಷಕರಿದ್ದಾರೆ. ಯುನಿಸೆಫ್‌ ಮಾದರಿ ಶಿಕ್ಷಣ ಮೂಲಕ ಪ್ರಾಯೋಗಿಕ ಶಿಕ್ಷಣ ಒದಗಿಸುತ್ತಿದೆ.

ಮಾಜಿ ಸಚಿವರು, ಮಾಜಿ ಶಾಸಕರು
ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌, ಮಾಜಿ ಶಾಸಕ ವಸಂತ ಬಂಗೇರ, ಅಂತಾರಾಷ್ಟ್ರೀಯ ಖ್ಯಾತಿಯ ಯಕ್ಷಿಣಿಗಾರ ಪ್ರೊ| ಶಂಕರ್‌, ಹೆಸರಾಂತ ಇತಿಹಾಸ ತಜ್ಞ ಡಾ| ಸೂರ್ಯನಾಥ ಕಾಮತ್‌, ಸ್ವಾತಂತ್ರ್ಯ ಹೋರಾಟಗಾರ ಭೋಜರಾಜ ಹೆಗ್ಡೆ ಪಡಂಗಡಿ, ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಯು. ರವೀಂದ್ರ ರಾವ್‌, ವಾಯುಸೇನೆಯ ಮಾಜಿ ಯೋಧ ಎಂ. ರತ್ನವರ್ಮ ಜೈನ್‌ ಸಹಿತ ನೂರಾರು ಸಾಧಕರು ಇದೇ ಶಿಕ್ಷಣ ದೇಗುಲದಲ್ಲಿ ಅಕ್ಷರಾಭ್ಯಾಸ ಮಾಡಿದ್ದರು. ಶಾಲೆಯ ಅಭಿವೃದ್ಧಿಗೆ ಕೃಷ್ಣ ಪಡ್ವೆಟ್ನಾಯ, ವೆಂಕಟಕೃಷ್ಣ ಹೆಬ್ಟಾರ್‌, ಅಣ್ಣಪ್ಪಯ್ಯ ಮಾಸ್ಟರ್‌ 4.57 ಎಕ್ರೆ ಜಾಗವನ್ನು ದಾನವಾಗಿ ನೀಡಿದ್ದಾರೆ. ಎಲ್‌.ಕೆ.ಜಿ., ಯು.ಕೆ.ಜಿ. ಹಾಗೂ ಆಂಗ್ಲ ಮಾಧ್ಯಮವನ್ನು 1ನೇ ತರಗತಿಗೆಯಿಂದ ಪ್ರಾರಂಭಿಸಲಾಗಿದೆ.

ಶಾಸಕರ ಮಾದರಿ ಶಾಲೆ
ಶಾಲೆಯ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳ ಕೊಡುಗೆ ಅಪಾರ. ಶಾಸಕ ಹರೀಶ್‌ ಪೂಂಜ ಮಾದರಿ ಶಾಲೆಯಾಗಿ ನಿರ್ಮಿಸುವ ಕನಸು ಹೊಂದಿದ್ದು, ತಾಲೂಕಿನ ಶಾಸಕರ ಮಾದರಿ ಶಾಲೆಯಾಗಿದೆ. ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ನರಸಿಂಹ ಕೃಷ್ಣ ಭಿಡೆ, ಡಾ| ಬಿ. ನಾರಾಯಣ್‌ ರಾವ್‌, ಕೆ.ಬಿ. ಮಲ್ಲ, ಎನ್‌. ಶಂಕರ ನಾರಾಯಣ ರಾವ್‌, ರಾಮದಾಸ ಬಾಳಿಗಾ ಅವರ ಕೊಡುಗೆ ಅಪಾರ.
ಶಾಲೆಯಲ್ಲಿ 5 ಸಾವಿರ ಪುಸ್ತಕ ಹೊಂದಿರುವ ವಾಚನಾಲಯವಿದ್ದು, ಕಂಪ್ಯೂಟರ್‌ ಕೊಠಡಿ, ಉತ್ತಮ ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಮೇಕರ್‌ ಸ್ಪೇಸ್‌, ಸಿ.ಸಿ. ಟಿ.ವಿ ವ್ಯವಸ್ಥೆ ಇದೆ. ಲೈಫ್ ಲ್ಯಾಬ್‌ ಹೊಂದಿದೆ.


ಮುಖ್ಯೋಪಾಧ್ಯಾಯರು
ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ, ಹಿರಿಯ ಶಿಕ್ಷಕರಾಗಿ ಡಿ. ಮಹದೇವ ಭಟ್‌, ಉಮೇಶ್‌ ರಾವ್‌, ಶೇಷಗಿರಿ ರಾವ್‌, ಉಪೇಂದ್ರ ಭಟ್‌, ಗಣಪತಿ ವಿಷ್ಣು ಹೊಳ್ಳ, ಕಲ್ಲಡ್ಕ ಶಂಕರನಾರಾಯಣ ರಾವ್‌, ಬೋಳಂಗಡಿ ಮಂಗೇಶ್ವರ ರಾವ್‌, ಲಿಲ್ಲಿ ಬಾಯಿ, ಚಿನ್ನಪ್ಪ, ಶ್ರೀಧರ ಪ್ರಭು, ಕೃಷ್ಣಪ್ಪ ಗೌಡ, ಎಸ್‌.ರಾಮಚಂದ್ರ ರಾವ್‌, ರಾಧಾ ಎಸ್‌. ಕದ್ರಿಕರ್‌, ಪೌಲಿನ್‌, ಎ.ಬಿ. ಪಾರ್ವತಿ, ಮೀರಾಬಾಯಿ, ಚಂದು ಶೆಟ್ಟಿ, ಹೂವಯ್ಯ ಶೆಟ್ಟಿ, ಸುಬ್ರಾಯ ಉಪಾಧ್ಯಾಯ, ಸುಗುಣಾ ಪೈ, ಸುಧಾಕರ ಪೈ, ಕಮಲಾಕ್ಷ ಆಚಾರ್‌, ನೇಮಿರಾಜ ಹೆಗ್ಡೆ ಮತ್ತಿತರರು ಸೇವೆ ಸಲ್ಲಿಸಿದ್ದಾರೆ.

Advertisement

ಹಳೆ ವಿದ್ಯಾರ್ಥಿಗಳು, ಅಧಿಕಾರಿಗಳು, ಶಾಸಕರ ನೆರವಿನಿಂದ ಶಾಲೆಯ ಗತ ವೈಭವವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ಜತೆಗೆ ಗುಣಾತ್ಮಕ ಶಿಕ್ಷಣ ಒದಗಿಸುವ ಮಹದಾಸೆ ಹೊಂದಿದ್ದು, ಅದಕ್ಕೆ ಪೂರಕ ಪ್ರಯತ್ನ ಪ್ರಾರಂಭಿಸಲಾಗಿದೆ.
-ಸುರೇಶ್‌ ಎಂ., ಮುಖ್ಯೋಪಾಧ್ಯಾಯರು

ಹಳೆ ವಿದ್ಯಾರ್ಥಿಗಳು, ಅಧಿಕಾರಿಗಳು, ಶಾಸಕರ ನೆರವಿನಿಂದ ಶಾಲೆಯ ಗತ ವೈಭವವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ಜತೆಗೆ ಗುಣಾತ್ಮಕ ಶಿಕ್ಷಣ ಒದಗಿಸುವ ಮಹದಾಸೆ ಹೊಂದಿದ್ದು, ಅದಕ್ಕೆ ಪೂರಕ ಪ್ರಯತ್ನ ಪ್ರಾರಂಭಿಸಲಾಗಿದೆ.
-ಸುರೇಶ್‌ ಎಂ., ಮುಖ್ಯೋಪಾಧ್ಯಾಯರು

-  ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next