Advertisement
ಬರಬರುತ್ತಾ ಅದೇ ಪ್ರಭುತ್ವ ತಮ್ಮ ಆಳ್ವಿಕೆ ಪುನರಾವರ್ತನೆ ಯಾಗಬೇಕೆಂಬ ಉತ್ಕಟತೆಯಿಂದ ಜನಪ್ರಿಯ ಪ್ರಣಾಳಿಕೆಗೆ ಜೋತು ಬಿದ್ದದ್ದು ಕಣ್ಣೆದುರಿನ ಸತ್ಯ. ಹೆಚ್ಚಿನ ರಾಜಕೀಯ ಪಕ್ಷಗಳು ಬೇಕಾಬಿಟ್ಟಿ ಯಾಗಿ ವರ್ತಿಸಿ ಬಿಟ್ಟಿ ಭಾಗ್ಯಗಳ ಮೆರವಣಿಗೆ ನಡೆಸಿದವು. ಸೈದ್ಧಾಂತಿಕ ವಾಗಿ, ನೈತಿಕವಾಗಿ, ಸಾಮಾಜಿಕವಾಗಿ ಹೊಸ ಪೀಳಿಗೆಗೆ ಉತ್ತರ ದಾಯಿತ್ವ ಹೊಂದಿರಬೇಕಾದ ರಾಜಕೀಯ ಪಕ್ಷಗಳ ದೊಂಬರಾಟ ಮುಂದಿನ ಜನಾಂಗಕ್ಕೆ ಕೇವಲ ಪ್ರಶ್ನೆಯನ್ನು ಮಾತ್ರ ಉಳಿಸಿಬಿಟ್ಟವು.
Related Articles
Advertisement
ಪ್ರಜಾಪ್ರಭುತ್ವದಲ್ಲಿ ದೇಶದ ಕಟ್ಟಕಡೆಯ ಪ್ರಜೆಯ ಜೀವನದ ಸರ್ವಾಂಗ ಕ್ಷೇಮವನ್ನು ಕಾಪಿಡುವಲ್ಲಿ ತ್ರಿಕರಣಶುದ್ಧರಾಗಿ, ಕಟಿಬದ್ಧರಾಗಿ ದುಡಿಯಬೇಕಾದ ಕೈಂಕರ್ಯ ಚುನಾಯಿತ ಪ್ರತಿನಿಧಿಗಳದ್ದು ಅಲ್ಲವೇ? ಗ್ರಾಮೀಣ ಜನರ ಬದುಕು ಬವಣೆ, ಕಷ್ಟ ಕಾರ್ಪಣ್ಯಗಳನ್ನು ಅರಿತು ಜನಪರವಾದ ರೀತಿಯಲ್ಲಿ ದೂರಗಾಮಿ ಫಲ ನೀಡುವ ಕಾರ್ಯದಲ್ಲಿ ತೊಡಗಬೇಕಲ್ಲವೇ? ಜನಪ್ರತಿನಿಧಿಗಳು ಮೊದಲು ಜನರ ಮೂಲಭೂತ ಅನಿವಾರ್ಯ ಅಗತ್ಯತೆಗಳಿಗೆ ಕಿವಿಯಾಗಬೇಕು, ಜನತೆಯ ದೂರು ದುಮ್ಮಾನಗಳಿಗೆ ಸಕಾಲಿಕವಾಗಿ ಸ್ಪಂದಿಸಬೇಕು, ಆ ಸ್ಪಂದನೆ ಜನರ ಜೀವನಮಟ್ಟವನ್ನು ಉನ್ನತೀಕರಿಸಬೇಕು.
ತರಹೇವಾರಿ ಸರ್ವೇ ನಡೆಸುವಲ್ಲಿ ನಮ್ಮ ರಾಜಕೀಯ ಪಕ್ಷಗಳು ಡಾಕ್ಟರೆಟ್ ಮಾಡಿವೆಯಲ್ಲ, ಒಮ್ಮೆ ಸರ್ವೇ ಮಾಡಿಬಿಡಲಿ ನೋಡೋಣ ನಮ್ಮ ನಗರ, ಗ್ರಾಮೀಣ, ಪಟ್ಟಣವಾಸಿಗಳ ನಾಡಿ ಮಿಡಿತವನ್ನು. ಅದು ಚುನಾವಣಾತೀತ, ಪಕ್ಷಾತೀತ ಮತ್ತು ಪೂರ್ವಗ್ರಹ ಇಲ್ಲದ ಪಾರದರ್ಶಕ, ಜನಪರ ಕಾಳಜಿ ಕಳಕಳಿಯ ಸರ್ವೇಯಾಗಿರಲಿ. ಅಧ್ಯಯನ ಮಾಡಿ ಅವರ ಅಂತರಂಗದ ದುಃಖ-ದುಮ್ಮಾನ, ನೋವು-ನಿಟ್ಟುಸಿರು, ಒದ್ಧಾಟ-ನರಳಾಟ ವನ್ನು. ಗ್ರಾಮ ಪಂಚಾಯತ್‌ನಿಂದ ಹಿಡಿದು ಸರಕಾರದ 42ಕ್ಕೂ ಹೆಚ್ಚು ಇಲಾಖೆಗಳಲ್ಲಿ ಪ್ರತೀ ಹಂತದಲ್ಲೂ ಅಡಿಗಡಿಗೆ ಎದುರಿಸುವ ಕಷ್ಟಕೋಟಲೆಗಳನ್ನು ಸರ್ವೇ ಮಾಡಲಿ.
ಎಲ್ಲೆಲ್ಲಿ ಹೇಗೆ ಕೆಲಸ ಆಗುತ್ತದೆ ಎಂದು ನೋಡಲಿ. ಜನರನ್ನು ಕಾಡಿಸುವ, ಪೀಡಿಸುವ ಸಿಬಂದಿ, ಅಧಿಕಾರಿಗಳ ಪಟ್ಟಿ ಮಾಡಿ. ಅವರವರ ಕಚೇರಿಯಲ್ಲಿ ನಿರ್ದಿಷ್ಟ ಸ್ಥಾನಗಳಿಗೆ ನೇಮಕಾತಿ ಆಗಿದೆಯಾ ಎಂದು ತಿಳಿಯಿರಿ. ಸಕಾಲ ಎಂದು ತೂಗುಹಾಕಿದ ಬೋರ್ಡಿನಂತೆ ಒಂದಾದರೂ ಕೆಲಸವಾಗುತ್ತಾ ಎಂದು ಜನರಿಂದ ಕೇಳಿನೋಡಲಿ. ಸಿಬಂದಿಯಿಲ್ಲ, ಡೆಪ್ಯೂಟೇಶನ್ ಡ್ನೂಟಿ, ಮೀಟಿಂಗ್, ಬಾಸ್ ಬಂದಿದಾರೆ… ಹೀಗೆ ಹತ್ತಾರು ಸಬೂಬುಗಳನ್ನು ಹೇಳುತ್ತಾರಲ್ಲ, ನಿಜವೇ ಪರೀಕ್ಷಿಸಿ. ಬುನಾದಿಯಿಂದ ಭವನವನ್ನು ನಿರ್ಮಿಸ ಬಹುದೇ ವಿನಾ ಮೇಲೆ ಕೂಳಿತು ತಮ್ಮ ಮೂಗಿನ ನೇರಕ್ಕೆ ಅಳತೆ ಮಾಡುವುದಲ್ಲ. ಆಗಲಿ ಒಮ್ಮೆ ಇಂತಹ ಸರ್ವೇ ಸರಕಾರಿ ಖರ್ಚಿ ನಲ್ಲಿ, ಆಡಳಿತ ಪಕ್ಷದ ಮುಂದಾಳತ್ವದಲ್ಲಿ, ವಿಪಕ್ಷದ ಸಂಪೂರ್ಣ ಸಹಕಾರದಲ್ಲಿ, ನಾವು ನಿಮ್ಮೊಂದಿಗೆ ಹೆಗಲು ಕೊಡುತ್ತೇವೆ. ಇದು ಜರೂರಾಗಿ ಜಾರಿಯಾಗಬೇಕಾದ ತಲಸ್ಪರ್ಶಿ ಅಧ್ಯಯನ ಮತ್ತು ಪರಿಹಾರೋಪಾಯ ಕ್ರಮ, ಉಚಿತದ ಖಚಿತತೆಯಲ್ಲ.
ಒಟ್ಟಾರೆ ಆನೆ ಇಟ್ಟಿದ್ದೇ ಹೆಜ್ಜೆ ನಡೆದಿದ್ದೇ ದಾರಿ ಎಂಬಂತಾಗಿದೆ ಸರಕಾರ ನಡೆಸುವವರ ನಡೆ. ತಪ್ಪನ್ನು ತಪ್ಪು ಎಂದು ಗಟ್ಟಿ ಸ್ವರದಲ್ಲಿ ಹೇಳುವವರಿಲ್ಲದ ನಮ್ಮ ನಿಷ್ಕ್ರಿಯತೆ, ಉಡಾಫೆ ಮತ್ತು ಉದಾಸೀನತೆ ಮುಂದಿನ ಪೀಳಿಗೆಗೆ ನಾವೆಸಗುವ ದ್ರೋಹ. ಆಡಳಿತ ಎಂದರೇನು ಎನ್ನುವ ಮೂಲ ಪ್ರಶ್ನೆಯನ್ನು ಎದುರಿಗಿಟ್ಟು ಕೊಂಡು ಯೋಚಿಸಬೇಕು. ಇರುವ ವ್ಯವಸ್ಥೆಯನ್ನು ಸಮಂಜಸ ವಾಗಿ ನಿಭಾಯಿಸುವ ಪ್ರಕ್ರಿಯೆ ಒಂದಾದರೆ ಅದನ್ನು ಇನ್ನೂ ಹತ್ತು ಹಲವು ಮಜಲುಗಳಲ್ಲಿ ಮೇಲ್ದರ್ಜೆಗೇರಿಸುವುದು ಹೇಗೆಂಬ ಯೋಜನೆ-ಯೋಚನೆ ಇನ್ನೊಂದು.
ಜನಬಯಸುವುದು ಇದನ್ನೇ ಹೊರತು ಕ್ಷಣಿಕ ಲಾಲಸೆಗಳನ್ನಲ್ಲ. ಹೀಗಾದಲ್ಲಿ ಪ್ರತಿಯೊಬ್ಬ ಪ್ರಜೆ ಯ ನೆಮ್ಮದಿ ಮರಳುತ್ತದೆ, ನಿಟ್ಟುಸಿರು ಮಾಯವಾಗುತ್ತದೆ, ಜೀವನ ಸರಳವಾಗುತ್ತದೆ ಮತ್ತು ಸಂತೃಪ್ತ ಜನಗಳ ಹರಕೆ- ಹಾರೈಕೆಯಿಂದ ರಾಜ್ಯ ಸುಭಿಕ್ಷವಾಗುತ್ತದೆ. ಅಖಂಡ ರಾಷ್ಟ್ರ ನಿರ್ಮಾಣ, ನಿರ್ವಹಣೆ, ಬೆಳವಣಿಗೆ ಮತ್ತು ನಿಯಂತ್ರಣ ಮಾಡು ವಾಗಿನ ಎಚ್ಚರ ಎಷ್ಟಿರಬೇಡ, ಮಕ್ಕಳಾಟಿಕೆ ಅಲ್ಲವಲ್ಲ. ಬೇರು ಗಟ್ಟಿ ಯಾಗಿದ್ದರೆ ಮಾತ್ರ ವೃಕ್ಷ ವಿಶಾಲವಾಗಿ ಆಕಾಶದಲ್ಲಿ ಕೊಂಬೆಗಳನ್ನು ಚಾಚುತ್ತದೆ. ಹಾಗಾಗಿ ಬೇರಿಗೆ ಬೇಕಾದದ್ದನ್ನೆಲ್ಲವನ್ನು ಕೊಟ್ಟು ಗಟ್ಟಿ ಮಾಡಬೇಕೆ ವಿನಾ ತಲೆಯ ಎಲೆಗಳಿಗೆ ನೀರು ಚಿಮುಕಿಸುವುದಲ್ಲ.
ಜನರ ನಿರೀಕ್ಷೆ ದೊಡ್ಡದಿಲ್ಲ. ದುಡಿದು ತಿನ್ನಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ, ಕೌಶಲ ವೃದ್ಧಿಯಲ್ಲಿ, ನೌಕರಿಗೆ ಅರ್ಹತೆ ಗಿಟ್ಟಿಸುವಲ್ಲಿ, ಜೀವನ ಮಟ್ಟ ಸುಧಾರಣೆಗೆ ದಾರಿ ಕಲ್ಪಿಸಲು ಸರಕಾರ ನೆರವಾಗಬೇಕು. ಸ್ವಾಭಿಮಾನಿ ವ್ಯಕ್ತಿತ್ವ ರೂಪಿಸಿಕೊಳ್ಳಲು ಯುವಕರಿಗೆ ಸಹಾಯಧನ ನೀಡಲಿ. ಆದರೆ ಜನರನ್ನು ಉಚಿತಗಳ ಆಸೆ, ಲಾಲಸೆಗಳ ಕೆಸರಿನಲ್ಲಿ ಕೆಡಹಿ ಭ್ರಷ್ಟರನ್ನಾಗಿ ಮಾಡಬೇಡಿ. ದುಷ್ಟ ವ್ಯವಸ್ಥೆಯ ಹರಿಕಾರರಾಗಬೇಡಿ. ಆದರೆ ನಮಗೆ ನೆನಪಿರಬೇಕು…ಅವಶ್ಯಮೇವ ಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ ನ ಕ್ಷೀಯತೇ ಕರ್ಮಮ್ ಕಲ್ಪಕೋಟಿ ಶತೈರಪಿ…
ಡಾ| ಬುಡ್ನಾರು ವಿನಯಚಂದ್ರ ಶೆಟ್ಟಿ