Advertisement

Role: ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ನಮ್ಮ ಪಾತ್ರ

05:12 PM Apr 24, 2024 | Team Udayavani |

ಜನನಿ ಜನ್ಮ ಭೂಮಿಶ್ಚ ಸ್ವರ್ಗದಪಿ ಗರೀಯಸಿ

Advertisement

ಜನ್ಮ ಕೊಟ್ಟ ತಾಯಿ, ಮಡಿಲು ಕೊಟ್ಟ ಜನ್ಮ ಭೂಮಿ, ಸ್ವರ್ಗಕ್ಕಿಂತಲೂ ಮಿಗಿಲು ಎಂದು ವೇದ ಸಾರಿವೆ. ಆ ತಾಯಿ ಹಾಗೂ ಜನ್ಮಭೂಮಿಯಿಂದ ಪ್ರತಿಯೊಬ್ಬ ವ್ಯಕ್ತಿಯು ತೀರಿಸಲಾರದಷ್ಟು ಸಾಲವನ್ನು ಪಡೆದಿರುತ್ತಾನೆ. ಆ ಸಾಲಕ್ಕೆ ಅವನ ಇಡೀ ಜೀವನವನ್ನೇ ಮುಡಿಪಾಗಿಟ್ಟರೂ ಸಾಲದು. ಆ ಪ್ರಯತ್ನವೆಲ್ಲವೂ ಶಿಖರದ ಮುಂದಿರುವ ಇರುವೆಯಂತೆ.

21ನೇ ಶತಮಾನವನ್ನು ತಲುಪಿದ ನಾವು ಆಕಾಶದಲ್ಲಿ ಹಕ್ಕಿಯಂತೆ ಹಾರಿದೆವು, ಮೀನಿನಂತೆ ಕಡಲಾಳದಲ್ಲಿ ಈಜಿದೆವು, ಮಂಗಳನಂಗಳದಲ್ಲಿ ನೀರನ್ನು ಹುಡುಕಿದೆವು, ಆದರೆ ವಿಪರ್ಯಾಸವೆಂದರೆ ಅಭಿವೃದ್ಧಿಯ ಕುದುರೆಯ ನಾಗಲೋಟದಲ್ಲಿ ನಮ್ಮ ಖುಷಿ, ಸುಖ ಎಲ್ಲವನ್ನು ಸರಕು ಮಾಡಿ, ಶಾಂತಿ ಸೌಹಾರ್ದತೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ವಿರಾಜಿಸುವ ಗಗನಕುಸುಮವನ್ನಾಗಿಸಿದ್ದೇವೆ. ಯಾವುದೋ ಮಾಲಕನಿರದ ಅಂಗಡಿಯಲ್ಲಿ ಭಿಕರಿ ಆಗುವ ಕೃತಕ ಗೊಂಬೆಗಳಂತೆ ಬದುಕು ಸಾಗಿದೆ.

ಧರ್ಮೋ ರಕ್ಷತಿ ರಕ್ಷಿತಃ

ನಾವು ಧರ್ಮವನ್ನು ಕಾಪಾಡಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ. ಆದರೆ ನಮ್ಮಿಂದ ಆಗುತ್ತಿರುವುದಾದರೂ ಏನು? ಮಾನವೀಯತೆಯ ಗುಣಗಳನ್ನು ಮರೆತು ನೈತಿಕತೆಯನ್ನು ಗಾಳಿಗೆ ತೂರಿ, ಸಮಾಜದ ಸ್ವಾಸ್ಥ್ಯವನ್ನು ನೆಲಸಮ ಮಾಡುತ್ತಿದ್ದೇವೆ. ಹೇಗೆ ಪ್ರತಿಯೊಂದು ಜೀವಿಗೂ ಆರೋಗ್ಯ ಎನ್ನುವುದು ಮುಖ್ಯವಾಗಿರುತ್ತದೆಯೋ ಅದೇ ರೀತಿ ಸಮಾಜದಲ್ಲೂ ಸ್ವಾಸ್ಥ್ಯ ಅತ್ಯವಶ್ಯ. ‌

Advertisement

ಇದರ ತಳಹದಿ ಶಾಂತಿ, ಸಾಮರಸ್ಯ ಹಾಗೂ ಸೌಹಾರ್ದತೆ. ಆದರೆ ವಿಷಾದನೀಯ ಸಂಗತಿ ಎಂದರೆ ನಮ್ಮ ಯಾಂತ್ರಿಕ ಬದುಕಿನ ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್, ಕಾಮೆಂಟ್ಸ್‌ಗಾಗಿ ಒಂದು ವ್ಯಕ್ತಿಯ ದೇಹವು ನಡುರಸ್ತೆಯಲ್ಲಿ ಎರಡು ಪಾಲಾಗಿ ಕಂಡ ಜನರು ಸಹಾಯದ ಬದಲು ವೀಡಿಯೋ ಮಾಡುವುದರಲ್ಲಿ ಮುಳುಗಿರುತ್ತಾರೆ ಎನ್ನುವುದಕ್ಕೆ ಕೆಲವು ವರ್ಷಗಳ ಹಿಂದೆ ನಡೆದ ಹರೀಶ್‌ ಪ್ರಕರಣವೇ ನಿದರ್ಶನ.

ಜೀವ ಹೋಗುವ ಸಮಯದಲ್ಲೂ ಕೂಡ ಅಂಗಾಂಗ ದಾನ ಮಾಡುವುದಕ್ಕಾಗಿ ಕೇಳಿಕೊಂಡ ಹರೀಶ ಅವರನ್ನು ಮಾನವೀಯ ನೆಲೆಯಲ್ಲಿ ನೆನೆಯಲೇಬೇಕು. ಅಷ್ಟೇ ಅಲ್ಲದೆ ಇಂದು ಭ್ರಷ್ಟಾಚಾರ ಎನ್ನುವ ಕ್ರಿಮಿ ಸಮಾಜವನ್ನು ಕಿತ್ತು ತಿನ್ನುತ್ತಿದೆ. ಅತಿಯಾದ ದುರಾಸೆ ವ್ಯಾಮೋಹಗಳಿಂದ ಅಧಿಕಾರ ಹಿಡಿದವರು ಅಮಾಯಕರ ಬಲಿ ಕೇಳುತ್ತಿದ್ದಾರೆ. ಈ ಭ್ರಷ್ಟಾಚಾರದ ಕಬಂಧ ಬಾಹುವಿನಿಂದ ತಪ್ಪಿಸಿಕೊಳ್ಳುವುದು ಮರೀಚಿಕೆಯಾಗಿದೆ.

ಅರ್ಹತೆಗೆ ತಕ್ಕಂತೆ ವಿದ್ಯಾ ಸಂಸ್ಥೆಯಲ್ಲಿ ವಿದ್ಯೆ ಸಿಗುತ್ತಿಲ್ಲ, ಯೋಗ್ಯತೆಗೆ ತಕ್ಕಂತೆ ಉದ್ಯೋಗ ಸಿಗುತ್ತಿಲ್ಲ, ಇನ್ನೂ ಜೀವ ಉಳಿಸಬೇಕಾಗಿದ್ದ ಆಸ್ಪತ್ರೆಗಳು ದವಾಖಾನೆ ಎನಿಸಿಕೊಳ್ಳುವ ಬದಲು ಪ್ರಸ್ತುತ ನರಬಲಿ ಪಡೆಯುತ್ತಿರುವ ಕಸಾಯಿಖಾನೆಗಳು ಆಗುತ್ತಿವೆ. ಕಾರ್ಖಾನೆಯ ಅಭಿವೃದ್ಧಿಯ ಹೆಸರಿನಲ್ಲಿ ಪ್ರಾಣವಾಯುವಿನ ಸೊ§àತŒವಾದಂತಹ ಅದೆಷ್ಟು ಮರಗಳ ಮಾರಣಹೋಮವಾಗಿದೆ.

ನೆರಳಾಗಿ ಪೊರೆದ ಮರಗಳು ಇಂದು ಧರೆಗೆ ಉರುಳುತ್ತಿವೆ. ಪ್ರಾಣಿ-ಪಕ್ಷಿಗಳಿಗೆ ಸೇರಿದ ಕಾಡಿನಲ್ಲಿ ಇಂದು ನಾಡು ಬೆಳೆದು ಕೋಟ್ಯಾಂತರ ಜೀವಸಂಕುಲಗಳು ಇಂದು ಅನಾಥರಾಗಿದ್ದಾರೆ. ಯಾವ ಪುಣ್ಯನದಿಗಳಲ್ಲಿ ಪಾಪಗಳ ತೊಳೆದು ಪುಣ್ಯ ಸಂಪಾದನೆ ಆಗುತ್ತದೆ ಎಂದು ನಂಬಲಾಗಿದ್ದ  ತೀರ್ಥ ಕುಂಡಗಳು ಇಂದು ಕಾರ್ಖಾನೆಗಳಿಂದ ಹೊರಬಿಡಲಾಗುತ್ತಿರುವ ರಾಸಾಯನಿಕದಿಂದ ಕೂಡಿ ವಿವಿಧ ಚರ್ಮದ ಕಾಯಿಲೆಗಳನ್ನು ಹರಡುತ್ತಿವೆ.

“ಅಂತರಂಗಶುದ್ಧಿಯೇ ಬಹಿರಂಗ ಶುದ್ಧಿ’ ಆದರೆ ತನ್ನ ಮನಸನ್ನಲ್ಲಿಯೇ ಅರಿಷಡ್ವರ್ಗಗಳನ್ನು ಕೂಡಿರುವ ಮನುಷ್ಯನ ಮನ್ನಸ್ಸು ಶುದ್ಧವಿಲ್ಲದೆ ಹೋದರೆ ಬಾಹ್ಯ ಶುದ್ಧಿಗೆ ಬೆಲೆ ಇಲ್ಲ. ತಮ್ಮ ಸ್ವಾರ್ಥ ಜೀವನದಲ್ಲಿ ಸಮಾಜದ ಹಿತಾಸಕ್ತಿಯನ್ನು ಪೂರ್ತಿಯಾಗಿ ಮರೆತು ಬಿಟ್ಟಿದ್ದೇವೆ.  ಧರ್ಮದ ಅಂಧ ವಿಶ್ವಾಸದಿಂದ ಕುರುಡರಾಗಿ ರಕ್ತಪಾತವನ್ನು ಹರಿಸಿ ಮನುಷ್ಯನನ್ನು ಮನುಷ್ಯನೇ ಕೊನೆಗಳಿಸುವಂತಹ ಪ್ರಕರಣಗಳು ಮನವನ್ನು ಛಿದ್ರವನ್ನಾಗಿಸಿದೆ.

ಮಗುವಾಗಿ ಹುಟ್ಟಿದ ಮನುಷ್ಯ ಮೃಗವಾಗಿರುವುದನ್ನು ಸಾರಿ ಹೇಳುತ್ತಿವೆ. ಸಿರಿವಂತರು ಮತ್ತಷ್ಟು ಕಾಲಧನದಿಂದ ಸಿರಿವಂತರೇ ಆದರೆ ಹೊರತು ಹೃದಯವಂತರಾಗಲಿಲ್ಲ. ಬಡವನ ಮನೆಯ ಹೊಸಲನ್ನು ಲಕ್ಷ್ಮೀ ತುಳಿಯಲೇ ಇಲ್ಲ. 2020ಕ್ಕೆ ಬೀಸಿದ ಕೊರೋನಾ ಮಾರಿಗೆ ಎಷ್ಟು ಸಂಸಾರವು ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ.

ನಮ್ಮ ಪಾತ್ರ

ನಾಗರಿಕ ಸಮಾಜದಲ್ಲಿ ನಾವು ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಒಳಪಡದೆ ಅದರ ವಿರುದ್ಧ ಹೋರಾಡಬೇಕಾಗಿದೆ. ಮನುಷ್ಯ ಮೃಗವಾಗದೆ ಮೊದಲು ಮಾನವನಾಗಬೇಕಿದೆ. ಕುವೆಂಪು ಅವರು ಹೇಳಿದ ಜಾತಿ ಮತ ಧರ್ಮಗಳಲ್ಲಿ ಒಡೆಯದೇ ವಿಶ್ವಮಾನವನಾಗಬೇಕಿದೆ. ಒಂದು ಮಗುವನ್ನು ತಂತ್ರಜ್ಞಾ ನ ಲೋಕದಲ್ಲಿ ನಡೆಸುವ ಮೊದಲು ನೈತಿಕ ಮೌಲ್ಯಗಳ ಜ್ಞಾನವನ್ನು ತಿಳಿಸಬೇಕಾಗಿದೆ. ಆ ಮಗುವಿಗೆ ನಮ್ಮ ಶ್ರೀಮಂತ ಸಂಸ್ಕೃತಿ, ಪುರಾಣ, ಎಲ್ಲ ಧರ್ಮ ಗಂಥಗಳ ಅರಿವನ್ನು ಕೊಡಬೇಕಾಗಿದೆ. ಪುಸ್ತಕದ ಗಿಳಿ ಪಾಠವನ್ನು ಹೇಳಿಕೊಟ್ಟು ಮಕ್ಕಳನ್ನು ಸರಕುಗಳನ್ನಾಗಿಸುವ ಬದಲು ವೈಚಾರಿಕ ಜ್ಞಾನವನ್ನು ನೀಡಿ ಉತ್ತಮ ಪ್ರಜೆಯನ್ನಾಗಿ ರೂಪಿಸಬೇಕಿದೆ.

“ಇಂದಿನ ಮಕ್ಕಳೇ ನಾಳಿನ ಪ್ರಜೆಗಳು” ಎನ್ನುವಂತೆ ಮಕ್ಕಳ ಕೈಯಲ್ಲಿ ಲೇಖನಿ ಕೊಟ್ಟು ಸಮಾಜ ನಿರ್ಮಿಸಬೇಕೇ ಹೊರತು ಖಡ್ಗವನ್ನಲ್ಲ. ಒಬ್ಬರಿಂದ ಇನ್ನೊಬ್ಬರಿಗೆ ಮಿಠಾಯಿ ಕೊಟ್ಟು ಸಾಮರಸ್ಯದಿ, ಸಂತಸದಿ ಇರಬೇಕಾದ ಸಮಯದಲ್ಲಿ ರಕ್ತ ಹರಿಸಿ, ಚೂರಿ ಹಿಡಿದು ಕಾದಾಡುವಂತೆ ಮಾಡುವ ಧರ್ಮಾಂಧತೆಯನ್ನು ಬೇರುಸಮೇತ  ಕೀಳಬೇಕಾಗಿದೆ. ವಿವೇಕಾನಂದರ ಮಾತಿನಂತೆ ಮನುಷ್ಯ ಧರ್ಮವನ್ನು ಜಗತ್ತಿನಾದ್ಯಂತ ಪಸರಿಸಬೇಕಾಗಿದೆ. ಅದರ ಕಂಪು ಜಗದಿ ಮೆರೆಯಬೇಕಿದೆ.

ಪಾಶ್ಚಿಮಾತ್ಯರ ಜಂಕ್‌ ಫುಡ್‌ಗಳಿಗೆ ಮಾರುಹೋಗುತ್ತಿರುವ ಯುವಜನತೆಗೆ ಮತ್ತೆ ದೇಸಿ ಅಡುಗೆಯ ಸೊಗಡು ತಿಳಿಸಿ ಆರೋಗ್ಯವಂತರನ್ನಾಗಿಸಬೇಕಿದೆ. ಪ್ರಕೃತಿಯಿಂದಲೇ ಸರ್ವವನ್ನು ಪಡೆದುಕೊಂಡು ಅನಂತರ ಪ್ರಕೃತಿಯನ್ನು ನಾಶ ಮಾಡುವುದು ನಿಲ್ಲಬೇಕಿದೆ. “ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲಿ ಬೇಡಿ ಹುಚ್ಚಪ್ಪಗಳಿರಾ!’ ಎನ್ನುವ ದಾಸರ ಪದದಂತೆ ಇರುವಷ್ಟು ದಿನ ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕಾಗಿದೆ.

ಸಮಾಜ ಎನ್ನುವುದು ನಿನ್ನೆ ಮೊನ್ನೆಯದಲ್ಲ, ದಶಕಗಲ್ಲದಲ್ಲ, ಬದಲಾಗಿ ಶತಮಾನಗಳದ್ದು. ಒಬ್ಬರಿಂದ ಸಮಾಜವಿಲ್ಲ, ಈ ಸಮಾಜವು ಪ್ರತಿಯೊಂದು ವ್ಯಕ್ತಿಯಿಂದ, ಮನೆಗಳಿಂದ, ಗ್ರಾಮಗಳಿಂದ, ಜಿಲ್ಲೆಗಳಿಂದ, ರಾಜ್ಯಗಳಿಂದ ಸೇರಿಯಾಗಿದೆ. ನಮ್ಮ ಸಮಾಜವನ್ನು ಪ್ರೀತಿ ಶಾಂತಿ ನೆಮ್ಮದಿ ಹಾಗೂ ಸ್ನೇಹದಿಂದ ತುಂಬಿರುವ ಸುಂದರಕಾಂಡವನ್ನಾಗಿ ಮಾಡುತ್ತೇವೆಯೋ, ಅಸಮಾನತೆಯಿಂದ ಶ್ಮಶಾನವನ್ನಾಗಿಸುತ್ತೇವೆಯೋ ಎನ್ನುವುದು ಪ್ರತಿಯೊಬ್ಬ ನಾಗರಿಕನ ಆಯ್ಕೆಯ ಮೇಲಿದೆ. ನವ ಸ್ವಸ್ಥ ಸಮಾಜಕ್ಕಾಗಿ ಪ್ರತಿಯೊಬ್ಬ ನಾಗರಿಕನು ಕಂಕಣ ತೊಡಲೇಬೇಕಾಗಿದೆ.

-ಅಭಿನಯ ಎ. ಶೆಟ್ಟಿ

ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next