Advertisement

ನಮ್ಮ ಬಲ ಕಾಲುಗಳೆಂಬ ಬೇರುಗಳಲ್ಲಿವೆ..

01:08 AM Apr 08, 2021 | Team Udayavani |

ನಾನು ಎಂದಾಕ್ಷಣ ಅದನ್ನು “ಅಹಂ’ ಎಂದೇ ಅರ್ಥೈ ಸಬೇಕಿಲ್ಲ. ಅಹಂ ಇಲ್ಲದೆ ನಮ್ಮ ವ್ಯಕ್ತಿತ್ವ ಪರಿಪೂರ್ಣ ಎಂದೆನಿಸಿಕೊಳ್ಳದು. ಹಾಗೆಂದು ಈ ಅಹಂ ಅತಿಯಾದರೆ ಅದು ದುರಹಂಕಾರ. ಇದು ನಮ್ಮನ್ನು ವಿನಾಶದತ್ತ ತಳ್ಳುತ್ತದೆ. ಹಾಗಾದರೆ ಅಹಂಕಾರ ಪಡು ವಂತಿಲ್ಲವೇ? ಎಂಬ ಪ್ರಶ್ನೆ ನಮ್ಮನ್ನು ಕಾಡು ವುದು ಸಹಜ. ಅಹಂ ಇರಲೇಬೇಕು. ಆದರೆ ಈ ಅಹಂ ನಮ್ಮ ಇತಿಮಿತಿಯೊಳಗೆ ಇದ್ದರಷ್ಟೇ ಚೆನ್ನ. ಇಂತಹ ಅಹಂ ನಮ್ಮ ಜೀವನದ ಗುರಿಯನ್ನು ತಲುಪಲು ಏಣಿಯಾಗಬಹುದು.

Advertisement

ಸ್ವಾವಲಂಬನೆಯಲ್ಲಿಯೇ ಅವಲಂಬನೆ ಸಮ್ಮಿಳಿತವಾಗಿದೆ. ಸ್ವಾವಲಂಬನೆಯಿಂದ ನಾವು ಸದೃಢಗೊಳ್ಳಬಹುದು. ಅವಲಂಬನೆ ನಮ್ಮನ್ನು ಸ್ವಾವಲಂಬನೆಯ ಹಾದಿಯಲ್ಲಿ ಕೊಂಡೊಯ್ಯಬಹುದು. ಇಲ್ಲೂ ಹಾಗೆ ಅವಲಂಬನೆಗೂ ಮಿತಿ ಇದೆ. ಇದು ಹೆಚ್ಚಾದಲ್ಲಿ ಅದು ನಮ್ಮನ್ನು ಬಡಮೇಲು ಗೊಳಿಸಬಹುದು. ಒಂದು ಚೌಕಟ್ಟಿನಲ್ಲಿ ಅವಲಂಬನೆ ಕೇವಲ ನಮ್ಮನ್ನು ಮಾತ್ರವಲ್ಲದೆ ನಾವು ಅವಲಂಬಿಸಿರುವವರನ್ನು ಸ್ವಾವಲಂಬಿಗಳನ್ನಾಗಿ ಮಾಡಬಲ್ಲುದು.

ಅಮೆರಿಕದ ನದಿ ತೀರಗಳಲ್ಲಿ ಹಲವಾರು ವರ್ಷಗಳಿಂದ ಗಾಳಿ ಮಳೆಗೆ ಅಂಜದೆ ಗಟ್ಟಿಯಾಗಿ ನಿಂತಿರುವ ಮರಗಳನ್ನು ನೋಡಿದ ವಿಜ್ಞಾನಿಗಳಿಗೆ ಇದಕ್ಕೆ ಕಾರಣವೇನು? ಎಂಬ ಕುತೂಹಲ ಉಂಟಾಯಿತು. ಈ ಕೌತುಕದ ಹಿಂದಿನ ಕಾರಣವನ್ನು ಸಂಶೋಧಿಸಲು ಅವರು ಆ ಬಗ್ಗೆ ಅಧ್ಯಯನ ನಡೆಸಲು ಮುಂದಾದರು. ಮೊದಲು ಅದರ ಮರದ ಬುಡವನ್ನು ಅಗೆದು ಬೇರುಗಳನ್ನು ಪರೀಕ್ಷಿಸಿದರು. ಬೇರುಗಳು ಭೂಮಿಯೊಳಗೆ ಆಳವಾಗಿ ಚಾಚದೆ ಮೇಲಿನ ಪದರದಲ್ಲಿತ್ತು. ಅವರಿಗೆ ಮತ್ತಷ್ಟು ಆಶ್ಚರ್ಯವಾಯಿತು. ಆಳವಾಗಿ ಬೇರೂರಿದ್ದರೆ ತಾನೇ ಮರಗಳು ಗಟ್ಟಿಯಾಗಿ ನಿಲ್ಲುವುದು. ಹಾಗಾದರೆ ಈ ಮರಗಳು ಸಾವಿರಾರು ವರ್ಷ ಗಾಳಿ, ಮಳೆ, ಬಿರುಗಾಳಿಯನ್ನು ಎದುರಿಸಿ ನಿಂತಿದ್ದಾದರೂ ಹೇಗೆ ಎಂಬ ಪ್ರಶ್ನೆ ಅವರನ್ನು ಕಾಡತೊಡಗಿತು. ಕುತೂಹಲ ತಡೆಯಲಾರದೆ ಅವರು ಸಂಶೋಧನೆಯನ್ನು ಮುಂದುವರಿಸಿದಾಗ ಅವರಿಗೆ ಅಚ್ಚರಿಯ ದೃಶ್ಯ ಕಂಡು ಬಂತು. ಅದೇನೆಂದರೆ ಮರಗಳ ಬೇರುಗಳು ಅದೇ ಜಾತಿಯ ಇನ್ನೊಂದು ಮರದ ಬೇರಿಗೆ ಸುತ್ತಿಕೊಂಡಿದ್ದವು. ಮತ್ತೂ ಪರೀಕ್ಷಿಸಿದಾಗ ಅವೆರಡರ ಬೇರುಗಳು ಅದೇ ಜಾತಿಯ ಮಗದೊಂದು ಮರಕ್ಕೆ ಸುತ್ತಿಕೊಂಡಿವೆ. ಹೀಗೆ ಪ್ರತಿಯೊಂದೂ ಮರದ ಬೇರುಗಳು ಒಂದಕ್ಕೊಂದು ಸುತ್ತಿಕೊಂಡಿರುವುದರಿಂದ ಅವುಗಳಿಗೆ ಸಾವಿರಾರು ವರ್ಷಗಳಿಂದ ಯಾವುದೇ ಬಿರುಗಾಳಿಗೂ ನೆಲಕಚ್ಚದೆ ಸದೃಢವಾಗಿ ನಿಲ್ಲಲು ಸಾಧ್ಯವಾಗಿದೆ ಎಂಬುದು ವಿಜ್ಞಾನಿಗಳಿಗೆ ದೃಢಪಟ್ಟಿತು.

ನಮ್ಮ ಜೀವನವೂ ಅಷ್ಟೇ. ನಾವು ಎಲ್ಲ ಕಷ್ಟಗಳನ್ನು ಎದುರಿಸಿ ಗಟ್ಟಿಯಾಗಿ ಆತ್ಮ ಬಲದಿಂದ ನಿಲ್ಲಬೇಕು. ಯಾವುದಕ್ಕೂ ಹೆದರಬಾರದು. ನಮ್ಮ ಕಾಲುಗಳು ಭೂಮಿಯ ಮೇಲೆ ಬಲವಾಗಿ ಬೇರೂರಿ ಬೀಳದ ಹಾಗೆ ನಿಲ್ಲಬೇಕು. ಜೀವ ಅಮೂಲ್ಯ. ಮರಗಳಿಗೆ ಜೀವ ಇದ್ದಂತೆ ನಮಗೂ ಜೀವ ಇದೆ ತಾನೇ. ಹಾಗಾದರೆ ಭಯವೇಕೆ. ನಾವೆಲ್ಲರೂ ಒಗ್ಗಟ್ಟಾಗಿ ನಿಂತರೆ ಶತ್ರುಗಳೂ ನಮ್ಮ ಹತ್ತಿರ ಸುಳಿಯಲಾರರು. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದು ಇದಕ್ಕೇ ತಾನೆ. ಒಗ್ಗಟ್ಟು ನಮ್ಮ ಶಕ್ತಿಯನ್ನು ನೂರ್ಮಡಿ ಹೆಚ್ಚಿಸಬಲ್ಲುದು.

ನಮ್ಮನ್ನು ನಾವು ಮೊದಲು ಪರೀಕ್ಷಿಸಿಕೊಳ್ಳಬೇಕು. ನಮ್ಮಲ್ಲಿರುವ ಶಕ್ತಿಯನ್ನು ನಾವು ಹೊರಹಾಕಬೇಕು. ಮಾತ್ರವಲ್ಲ ಅದನ್ನು ಸರಿಯಾದ ಸಮಯದಲ್ಲಿ ಉಪಯೋಗಿಸಬೇಕು. ಈ ಮೂಲಕ ನಾವು ಕೂಡ ಬಲಿಷ್ಠರು ಎಂದು ಸಮಾಜಕ್ಕೆ ತೋರಿಸಿ ಕೊಡಬೇಕು.
ನಮ್ಮ ಬಲ ನಮ್ಮ ಕಾಲಲ್ಲಿ ಇರುವಾಗ ಇನ್ನೊಬ್ಬರ ಸಹಾಯ ನಮಗೆ ಬೇಕಿಲ್ಲ. ಅದುವೇ ಆತ್ಮನಿರ್ಭರ. ನಾವು ನಮ್ಮ ಕಾಲಲ್ಲಿ ಗಟ್ಟಿಯಾಗಿ ನಿಂತು ಎಲ್ಲವನ್ನು ಆತ್ಮ ಬಲದಿಂದ ಎದುರಿಸೋಣ.

Advertisement

- ಕೆ.ಪಿ.ಎ. ರಹೀಮ…, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next