Advertisement

ಈಶ್ವರಪ್ಪ ಪ್ರಕರಣದಲ್ಲಿ ನಮ್ಮ‌ ಪಕ್ಷದ ಕಳ್ಳನ ಪಾತ್ರವಿದೆ : ಯತ್ನಾಳ್ ಬಾಂಬ್

05:33 PM Apr 15, 2022 | Team Udayavani |

ವಿಜಯಪುರ: ಸಚಿವ ಸ್ಥಾನಕ್ಕೆ ಈಶ್ವರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದಾರೆ. ಇದರ ಹಿಂದೆ ದೊಡ್ಡ ಕುತಂತ್ರ ನಡೆದಿದೆ. ಕಾಂಗ್ರೆಸ್ ಪಕ್ಷದ ಮಹಾನಾಯಕನ ಜತೆಗೆ ನಮ್ಮ ಪಕ್ಷದ ಯುವ ನಾಯಕನೊಬ್ಬ ಸೇರಿ ಕುತಂತ್ರ ಹಣೆದಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.

Advertisement

ಶುಕ್ರವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪರೋಕ್ಷವಾಗಿ ಬಿ.ವೈ. ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು. ರಾಜಕೀಯವಾಗಿ ಹತಾಶರಾಗಿರುವ ಕಾಂಗ್ರೆಸ್ ನಾಯಕರು ಇಂಥ ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಶಾಸಕ ರಮೇಶ ಜಾರಕಿಹೊಳಿ ಹೇಳಿಕೆಯಲ್ಲಿ ಸತ್ಯವಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ನಕಲಿ ಸಿ.ಡಿ., ಎಡಿಟ್ ಸಿ.ಡಿ. ರೂಪಿಸುವಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಲ್ಲೂ ಸಕ್ರಿಯ ತಂಡಗಳಿವೆ. ಎರಡೂ ಪಕ್ಷಗಳಲ್ಲಿ ಈ ನಾಯಕರ ನಕಲಿ ಸಿ.ಡಿ ತಯಾರಿಕೆ ಫ್ಯಾಕ್ಟರಿಯೇ ಇವೆ. ಬೆಂಗಳೂರಿನಲ್ಲಿ ಇಂಥ ಸಿ.ಡಿ ಗಳನ್ನು ಇಟ್ಡುಕೊಂಡು ಬ್ಲ್ಯಾಕ್ ಮೇಲ್ ಮಾಡುವಲ್ಲಿ ಈ ತಂಡಗಳು ಸಕ್ರಿಯವಾಗಿವೆ. ಈಶ್ವರಪ್ಪ ಪ್ರಕರಣದಲ್ಲೂ ಈ ಎರಡೂ ತಂಡಗಳ ಕೈವಾಡವಿದೆ ಎಂದು ಆರೋಪಿಸಿದರು.

ಸುಸಂಸ್ಕೃತ ರಾಜಕೀಯಕ್ಕೆ ಹೆಸರಾಗಿದ್ದ ಕರ್ನಾಟಕದಲ್ಲಿ ಇದೀಗ ವಿಕೃತ ರಾಜಕೀಯ ದ್ವೇಷದಿಂದ ಕೆಟ್ಟ ಹೆಸರು ಬರುತ್ತಿದೆ. ಇಂಥ ಬೆಳವಣಿಗೆ ರಾಜಕೀಯ ಅವನತಿಯ ಪ್ರತೀಕ ಎಂದು ಬೇಸರ ವ್ಯಕ್ತಪಡಿಸಿದರು.

ಬ್ಲ್ಯಾಕ್ ಸಂಸ್ಕೃತಿ ಹೆಚ್ಚಳ

Advertisement

ಸಚಿವ ಸ್ಥಾನಕ್ಕೆ ಈಶ್ವರಪ್ಪ ಅವರ ರಾಜೀನಾಮೆ ಕೊಡಿಸಿ, ಜೈಲಿಗೆ ಹಾಕಿಸುವುದಕ್ಕಿಂತ ಬ್ಲ್ಯಾಕ್ ಮೇಲ್ ಮಾಡುವವರನ್ನು ಜೈಲಿಗೆ ಹಾಕಬೇಕು. ರಾಜ್ಯದಲ್ಲೀಗ ಬ್ಲ್ಯಾಕ್ ಮೇಲ್ ಮಾಡುವ ಸಂಸ್ಕೃತಿ ಹೆಚ್ಚುತ್ತಿದೆ. ಇದು ರಾಜಕೀಯವಾಗಿ ದೊಡ್ಡ ಕೀರ್ತಿ ಹೊಂದಿದ್ದ ಕರ್ನಾಟಕಕ್ಕೆ ಕೆಟ್ಟ ಹೆಸರು ತರುವಲ್ಲಿ ನಿರವಾಗಿವೆ ಈ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಪೋಲಿಸ್ ಬ್ಯಾರಿಕೇಡ್ ಜಿಗಿದು ಹೋಗುವ ಡಿ.ಕೆ. ಶಿವಕುಮಾರ ಆರೋಗ್ಯವಾಗಿದ್ದಾರೆ. ಶಿವಕುಮಾರಗೆ ಈಗ ಆರೋಗ್ಯ ಸಮಸ್ಯೆ ಇಲ್ಲ ಎಂಬುದನ್ನು ನ್ಯಾಯಾಧೀಶರು ಗಮನಿಸಬೇಕು ಎಂದು ಶಾಸಕ ಯತ್ನಾಳ ಮನವಿ ಮಾಡಿದರು.

ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ನಡೆಸಿದ ಕಾಮಗಾರಿಗೆ ಅನುಮತಿಯೇ ನೀಡಿಲ್ಲ. ಅನುಮತಿ ನೀಡಿರುವ ಬಗ್ಗೆ ಏನಾದರೂ ದಾಖಲೆ ಇಲ್ಲ. ಗುತ್ತಿಗೆದಾರ ಕಾಂಗ್ರೆಸ್ ಶಾಸಕಿಯ ಕ್ಷೇತ್ರ ವ್ಯಾಪ್ತಿಯವನು. ಅವರಿಗೆ ಕಾಮಗಾರಿ ನಡೆಸಲು ಹೇಗೆ ಅನುಮತಿ ನೀಡಲಾಯಿತು ಎಂಬ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಯತ್ನಾಳ ಆಗ್ರಹಿಸಿದರು.

ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಕೈವಾಡ ಆರೋಪ ಇದೆ ಎಂದು ಸ್ಪಷ್ಟವಾಗಿ ಹೇಳಿರುವ ಶಾಸಕ ರಮೇಶ ಜಾರಕಿಹೊಳಿ ಅವರು ಆದಷ್ಟು ಬೇಗ ಇದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next