Advertisement
ಭರತನಾಟ್ಯ, ಯಕ್ಷಗಾನ, ಭಜನೆ, ಕ್ರೀಡೆ ಹಾಗೂ ಕರ್ನಾಟದ ವಿವಿಧ ಕಲಾ ಪ್ರಕಾರಗಳನ್ನು ಬೋಧಿಸುವ ತಜ್ಞ ಗುರುಗಳು ಶ್ರೀ ದೇವಿ ಯಕ್ಷಕಲಾ ನಿಲಯದಲ್ಲಿದ್ದಾರೆ . ಗುರು ಮಠದಲ್ಲಿ ವಿದ್ಯೆ ಕಲಿಯುವ ಶಿಷ್ಯರ ಸಂಖ್ಯೆ ಮೂರು ವರ್ಷದ ಅವಧಿಯಲ್ಲಿ 136 ದಾಟಿದೆ. ಸೂಕ್ಷ್ಮ ಮನೋಭಾವನೆಯ ಮಕ್ಕಳಿಗೆ ಸಂಸ್ಕಾರ, ಸಂಪ್ರದಾಯಗಳ ಅರಿವು ಮೂಡಿಸಿದಾಗ ಸನ್ಮಾರ್ಗದ ಸಮಾಜ ನಿರ್ಮಾಣ ಸಾಧ್ಯ ಎಂದು ಸಮಾಜ ಸೇವಕ, ಸಂಘಟಕ, ಉದ್ಯಮಿ, ಶ್ರೀ ದೇವಿ ಯಕ್ಷಕಲಾ ನಿಲಯ ನಲಸೋಪರ-ವಿರಾರ್ ಇದರ ಅಧ್ಯಕ್ಷ ಶಶಿಧರ ಕೆ. ಶೆಟ್ಟಿ ತಿಳಿಸಿದರು.
ಪ್ರತಿಭೆಗೆ ತಕ್ಕಂತೆ ಬೆಳೆಸಿದರೆ ಆತ್ಮಸ್ಥೆರ್ಯ ವಿಕಾಸನವಾಗಲಿದೆ ಎಂದು ಹೇಳಿದ ಅವರು ಈವರೆಗೆ ಸಹಕರಿಸಿದವರಿಗೆ ಮುಖ್ಯವಾಗಿ ಪೋಷಕರಿಗೆ ಕೃತಜ್ಞತೆ ಸಲ್ಲಿಸಿದರು. ಸಮಾರಂಭವನ್ನು ಉದ್ಘಾಟಿಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಮಾತನಾಡಿ, ಶಶಿಧರ ಕೆ. ಶೆಟ್ಟಿ ನೇತೃತ್ವದ ಹೊಟೇಲ್ ಗ್ಯಾಲಕ್ಸಿ ಸಭಾಂಗಣ ವಿವಿಧ ಸಮುದಾಯ ಸಂಘಟನೆಗಳನ್ನು ಒಗ್ಗೂಡಿಸುವ ವೇದಿಕೆಯಾಗಿದೆ. ನಾವೆಲ್ಲಾ ಬಂಧು, ನಾವೆಲ್ಲ ಒಂದೇ ಎಂಬ ಸಂದೇಶ ಇಲ್ಲಿ ಪ್ರತಿಧ್ವನಿಸುತ್ತಿದೆ. ಸಮಾನತೆಯಿಂದ ಕೂಡಿ ಬಾಳುವ ಕಲೆ ಶ್ರೀ ದೇವಿ ಯಕ್ಷಕಲಾ ನಿಲಯದಿಂದ ಶಾಶ್ವತವಾಗಲಿ ಎಂದು ಶುಭ ಹಾರೈಸಿದರು.
ಅತಿಥಿಯಾಗಿ ಪಾಲ್ಗೊಂಡ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ ಅವರು ಮಾತನಾಡಿ, ಮಕ್ಕಳ ದೈಹಿಕ, ಮಾನಸಿಕ ಮತ್ತು ಭಾವತ್ಮಕ ಅಂಶಗಳನ್ನು ಅಭಿವೃದ್ದಿ ಪಡಿಸಿ ಸೃಜನ ಶೀಲತೆ, ಸಂಶೋಧನೆ ಮತ್ತು ಕಾಲ್ಪನಿಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಸಾಂಸ್ಕೃತಿಕ ಚಟುವಟಿಕೆಗೆಗಿದೆ. ವಾರದ ನಾಲ್ಕು ದಿನವೂ ಭರಟನಾಟ್ಯ, ಭಜನೆ, ಕ್ರೀಡೆ, ಯಕ್ಷಗಾನ ಇತ್ಯಾದಿಗಳ ತರಭೇತಿ ನೀಡುವ ಈ ಸಂಸ್ಥೆಯು ಸಂಘಟನೆಗೆ ಮಾದರಿಯಾಗಿದೆ ಎಂದರು.
Related Articles
ಬಂಟ್ಸ್ ಸಂಘ ವಸಾಯಿ ಡಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಂತ್ ಆರ್. ಪಕ್ಕಳ ಅವರು ಮಾತನಾಡಿ, ಮಹಾಕಾವ್ಯ, ವೇದ. ಉಪನಿಷತ್ತು, ಪೌರಣಿಕ ಕಥೆಗಳನ್ನು ಸಾರಿದ ಯಕ್ಷಗಾನ ಜ್ಞಾನ ಮಂದಿರವಾಗಿದೆ. ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕೌಶಲ ಇದರಲ್ಲಿದೆ. ಸಂಸ್ಥೆಯ ಮಕ್ಕಳ ಪ್ರತಿಭೆಯನ್ನು ಕಂಡಾಗ ಸಂತೋಷವಾವಾಗುತ್ತಿದೆ. ಇಂತಹ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಅಗತ್ಯವಾಗಿದೆ ಎಂದರು.
Advertisement
ಉದ್ಯಮಿ ಅಶೋಕ್ ಶೆಟ್ಟಿ ಪೆರ್ಮುದೆ, ಬಿಲ್ಲವರ ಅಸೋಸಿಯೇಶನ್ ನಲಸೋಪರ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ದಯಾನಂದ ಬೊಂಟ್ರ, ಶ್ರೀ ಮಣಿಕಂಠ ಸೇವಾ ಸಮಿತಿಯ ಗೌರವಾಧ್ಯಕ್ಷ ಶಂಕರ್ ಕೆ. ಆಳ್ವ, ವಸಾಯಿ ಡಹಾಣೂ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಾ ಅಶೋಕ್ ಶೆಟ್ಟಿ, ಅವರು ಶುಭ ಹಾರೈಸಿ ಮಾತನಾಡಿದರು.
ಜತೆ ಕಾರ್ಯದರ್ಶಿ ಲಯನ್ ಕೃಷ್ಣಯ್ಯ ಹೆಗ್ಡೆ ಸ್ವಾಗತಿಸಿದರು. ಸಭಾ ಕಾರ್ಯಕ್ರಮವನ್ನು ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಕಣಂಜಾರು ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಲ್ಲಿಕಾ ಪೂಜಾರಿ ನಿರ್ವಹಿಸಿದರು. ಗೌರವ ಅಧ್ಯಕ್ಷ ಶ್ರೀನಿವಾಸ ನಾಯ್ಡು, ಉಪಾಧ್ಯಕ್ಷ ಗೋಪಾಲ್ ಕೋಟ್ಯಾನ್ ವಿರಾರ್, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ರಮೇಶ್ ವಿ. ಶೆಟ್ಟಿ, ಕೋಶಾಧಿಕಾರಿ ರಮೇಶ್ ಪೂಜಾರಿ, ಜತೆ ಕೋಶಾಧಿಕಾರಿ ಯಶವಂತ್ ಪೂಜಾರಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಗಣ್ಯರನ್ನು ಗೌರವಿಸಿದರು. ಸಮಾರಂಭದಲ್ಲಿ ಶ್ರೀ ದೇವಿ ಯಕ್ಷಕಲಾ ನಿಲಯ ನಲಸೋಪರ-ವಿರಾರ್ ಇದರ ಯಕ್ಷಗಾನ ಗುರು ನಾಗೇಶ್ ಕುಮಾರ್ ಪೊಳಲಿ, ಭರತನಾಟ್ಯ ಗುರು ವಿದೂಷಿ ಸುಕನ್ಯಾ ಭಟ್, ಕನ್ನಡ ಗುರುಗಳಾದ ವಿನುತಾ ಬಿ. ಶೆಟ್ಟಿ, ಮತ್ತು ವಿಜಯಾ ಸಾಲ್ಯಾನ್, ಪುಟ್ಬಾಲ್ ಕೋಚ್ ನಾಗೇಶ್ ಕೋಟ್ಯಾನ್ ಮತ್ತು ಭಜನೆಯ ಗುರು ಲೀಲಾವತಿ ಆಳ್ವ ಅವರನ್ನು ಗುರು ವಂದನೆಯೊಂದಿಗೆ ಗೌರವಿಸಲಾಯಿತು.
ವೇದಿಕೆಯಲ್ಲಿ ಅನಿತಾ ದೇವೇಂದ್ರ ಬುನ್ನನ್, ಉದ್ಯಮಿ ದಯಾನಂದ ಪೂಜಾರಿ ಇನ್ನ, ಬಿಲ್ಲವರ ಅಸೋಸಿಯೇಶನ್ ವಸಾಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಕರುಣಕರ ಜಿ. ಅಮೀನ್, ಉದ್ಯಮಿ ಮೋಹನ್ ಬಿ. ಶೆಟ್ಟಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶ್ರೀ ದೇವಿ ಭರಟನಾಟ್ಯ ಮತ್ತು ಶ್ರೀ ದೇವಿ ಕನ್ನಡ ಕಲಿಕಾ ಕೇಂದ್ರದ ವಿದ್ಯಾರ್ಥಿಗಳಿಂದ ಪುಣ್ಯಕೋಟಿ ನೃತ್ಯ ರೂಪಕ, ನೃತ್ಯ ವೈಭವ, ಯಕ್ಷಗುರು ನಾಗೇಶ್ ಪೊಳಲಿ ಅವರ ನಿರ್ದೇಶನದಲ್ಲಿ ಶ್ರೀ ದೇವಿ ಯಕ್ಷಕಲಾ ನಿಲಯದ ಕಲಾವಿದರಿಂದ ಶ್ರೀ ಮಂದಾರ್ತಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. -ಚಿತ್ರ-ವರದಿ: ರಮೇಶ ಅಮೀನ್