Advertisement
ಟ್ರಿನಿಟಿ ನಿಲ್ದಾಣದ ಬಳಿ “ಹನಿಕಾಂಬ್’ ಪತ್ತೆಯಾದ ಜಾಗದಲ್ಲಿ ಅತ್ಯಾಧುನಿಕ ಸೆನ್ಸರ್ ಆಧಾರಿತ ಎಲೆಕ್ಟ್ರಿಕ್ ಮಾಪನಗಳನ್ನು ಅಳವಡಿಸಿ, ಆ ಉಪಕರಣಗಳಲ್ಲಿ ದಾಖಲಾಗುವ ದತ್ತಾಂಶಗಳನ್ನು ಕಂಪ್ಯೂಟರ್‌ನಲ್ಲಿ ವಿಶ್ಲೇಷಣೆ ಮಾಡಿ, ಮೆಟ್ರೋ ಮಾರ್ಗದ ಕಾಂಕ್ರೀಟ್ ಸ್ಟ್ರಕ್ಚರ್ (ವಯಾಡಕ್ಟ್, ಬೀಮ್ ಮತ್ತು ಗರ್ಡರ್)ಗಳ ಸಾಮರ್ಥ್ಯವನ್ನು ನಿಖರವಾಗಿ ಕಂಡುಹಿಡಿಯಲು ಐಐಎಸ್ಸಿ ತಜ್ಞರು ಮುಂದಾಗಿದ್ದಾರೆ. ಈ ಸಂಬಂಧ ಈಗಾಗಲೇ ಉಪಕರಣಗಳನ್ನು ಅಳವಡಿಸುವ ಕಾರ್ಯ ನಡೆದಿದೆ.
Related Articles
Advertisement
ನಮ್ಮ ಮೆಟ್ರೋದಲ್ಲಿ ನಾವು ಬಳಸುತ್ತಿರುವುದು ಸ್ಟ್ರೈನ್ ಗೇಜ್ ಮೂಲಕ ಅಳೆಯುವ ಪದ್ಧತಿ. ಈ ಪರೀಕ್ಷೆ ಒಂದು ತಿಂಗಳ ಕಾಲ ನಡೆಯಲಿದೆ. ನಿರಂತರವಾಗಿ ಕಾಂಕ್ರೀಟ್‌ನಲ್ಲಾಗುವ ಚಲನವಲನ ವಿಶ್ಲೇಷಿಸಲಾಗುವುದು. ಈ ರೀತಿಯ ಪರೀಕ್ಷೆಗಳು ನಮ್ಮ ಪ್ರಯೋಗಾಲಯಗಳಲ್ಲಿ ನಡೆಯುತ್ತಲೇ ಇರುತ್ತವೆ. ಅಷ್ಟೇ ಅಲ್ಲ, ಭಾರತೀಯ ರೈಲ್ವೆಯಲ್ಲೂ ಈ ಮಾದರಿಯ ಪರೀಕ್ಷೆ ನಡೆಸಿದ್ದಿದೆ. ಮೆಟ್ರೋದಲ್ಲಿ ಮಾತ್ರ ಇದೇ ಮೊದಲು ಎಂದು ಅವರು ಸ್ಪಷ್ಟಪಡಿಸಿದರು.
ಕೊಂಕಣ ರೈಲ್ವೆ ಸೇತುವೆಯಲ್ಲಿ ನಡೆದಿತ್ತು ಪರೀಕ್ಷೆ: ದೂದ್‌ಸಾಗರ್ ಮುಂದೆ ಹಾದುಹೋಗುವ ಕೊಂಕಣ ರೈಲ್ವೆ ಸೇತುವೆಯ ಸಾಮರ್ಥ್ಯ ಪರೀಕ್ಷೆಗೆ ಇದೇ ಪರೀಕ್ಷೆ ನಡೆಸಲಾಗಿತ್ತು ಎನ್ನಲಾಗಿದೆ. ಉದ್ದೇಶಿತ ಸೇತುವೆ ನಿರ್ಮಿಸಿ 120 ವರ್ಷ ಕಳೆದಿದ್ದು, ರೈಲ್ವೆ ಇಲಾಖೆಯು ಆ ಮಾರ್ಗದಲ್ಲಿ ಸರಕು-ಸಾಗಣೆ ಹೆಚ್ಚಿಸಲು ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಅದರ ಸಾಮರ್ಥ್ಯ ಪರೀಕ್ಷೆ ನಡೆಸಬೇಕಾಗಿತ್ತು.
ಆಗ ಇದೇ ಐಐಎಸ್ಸಿ ತಂಡ ಸೆನ್ಸರ್ ಆಧಾರಿತ ಉಪಕರಣಗಳನ್ನು ಅಳವಡಿಸಿ ಪರೀಕ್ಷಿಸಿತ್ತು. ಮೂಲತಃ 16 ಟನ್‌ಗಳಷ್ಟು ಸರಕು ಸಾಗಿಸುವ ಉದ್ದೇಶದಿಂದ ಆ ಸೇತುವೆ ನಿರ್ಮಿಸಲಾಗಿತ್ತು. ಆದರೆ, ಪರೀಕ್ಷೆ ನಂತರ 35 ಟನ್‌ನಷ್ಟು ಸಾಗಿಸುವ ಸಾಮರ್ಥ್ಯವನ್ನು ಆ ಸೇತುವೆ ಹೊಂದಿರುವುದು ಗೊತ್ತಾಗಿತು!
ಸ್ಟ್ರೈನ್ ಗೇಜ್ ಎಷ್ಟು ಸೂಕ್ಷ್ಮ?: ಬೀಮ್ ಒಳಗಿನ ಸಂಪೂರ್ಣ ಚಿತ್ರಣವನ್ನು ನೀಡುವ ಈ ಸ್ಟ್ರೈನ್ ಗೇಜ್ (sಠಿrಚಜಿn ಜಚಜಛಿ), ಕಾಂಕ್ರೀಟ್‌ನಲ್ಲಿನ ಸಣ್ಣ ಚಲನವಲನವನ್ನೂ ಪತ್ತೆ ಮಾಡುತ್ತದೆ. ಅಂದರೆ, 1 ಮಿ.ಮೀ. ಅನ್ನು ಹತ್ತು ಲಕ್ಷ ತುಂಡುಗಳನ್ನಾಗಿ ಮಾಡಿ, ಅದರಲ್ಲಿ ಯಾವುದೇ ಸಣ್ಣ ಚಲನೆ ಕಂಡುಬಂದರೂ ಅದನ್ನು ದಾಖಲಿಸುತ್ತದೆ. ಇದರ ಬೆಲೆ ಅಂದಾಜು 40ರಿಂದ 50 ಲಕ್ಷ ರೂ.!
ಫೋಟೋದಲ್ಲೂ ಸೆರೆಹಿಡಿಯಬಹುದು ಬಿರುಕು!: ವಿವಿಧ ಭಂಗಿಯಲ್ಲಿ ಫೋಟೋಗಳನ್ನು ಸೆರೆಹಿಡಿಯುವ ಮೂಲಕವೂ ಬಿರುಕುಗಳನ್ನು ಕಂಡುಹಿಡಿಯುವ ತಂತ್ರಜ್ಞಾನ ಕೂಡ ಬಂದಿದೆ! ವಯಾಡಕ್ಟ್ ಮತ್ತು ಬೀಮ್‌ಗೆ ಬಣ್ಣ ಬಳಿದು, ಅದರ ಮೇಲೆ ರೈಲು ಹಾದುಹೋಗುವಾಗ ಆ ಬಣ್ಣಬಳಿದ ಜಾಗದ ಹತ್ತಾರು ಚಿತ್ರಗಳನ್ನು ಕ್ಷಣಾರ್ಧದಲ್ಲಿ ಸೆರೆಹಿಡಿಯಲಾಗುತ್ತದೆ. ನಂತರ ಆ ಫೋಟೋಗಳನ್ನು ಕಂಪ್ಯೂಟರ್‌ನಲ್ಲಿ ಹಾಕಿ, ಅದನ್ನು ವಿಶ್ಲೇಷಿಸಿದಾಗ ಬಿರುಕುಗಳನ್ನು ಪತ್ತೆಮಾಡಲು ಸಾಧ್ಯವಿದೆ. ಆದರೆ, ಸದ್ಯಕ್ಕೆ ಈ ಪ್ರಯೋಗವನ್ನು “ನಮ್ಮ ಮೆಟ್ರೋ’ದಲ್ಲಿ ಮಾಡುತ್ತಿಲ್ಲ.
ದೆಹಲಿಯಲ್ಲಿ ಅಳವಡಿಸಲು ಚಿಂತನೆ?: ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿಎಲ್) ಈ ಸೆನ್ಸರ್ ಆಧಾರಿತ ಉಪಕರಣಗಳನ್ನು ಕಾಯಂ ಆಗಿ ಅಳವಡಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಹಾಗೊಂದು ವೇಳೆ ಎಲ್ಲ ನಿಲ್ದಾಣಗಳಲ್ಲೂ ಈ ಉಪಕರಣಗಳನ್ನು ಅಳವಡಿಸಿದರೆ, ಕುಳಿತ ಸ್ಥಳದಿಂದಲೇ ಮೆಟ್ರೋ ಸ್ಟ್ರಕ್ಚರ್‌ಗಳ ಚಲನವಲನವನ್ನು ಗಮನಿಸಬಹುದು. ಯಾವುದೇ ಸ್ಪ್ಯಾನ್‌ನಲ್ಲಿ ಏರುಪೇರು ಕಂಡುಬಂದರೆ, ಮೊಬೈಲ್‌ಗೆ ಸಂದೇಶ ಬರುವ ವ್ಯವಸ್ಥೆಯೂ ಇದರಲ್ಲಿ ಇರುತ್ತದೆ ಎಂದು ತಜ್ಞರೊಬ್ಬರು ತಿಳಿಸಿದರು.
* ವಿಜಯಕುಮಾರ್ ಚಂದರಗಿ