Advertisement

ನಾವು ಪರಿಭಾವಿಸಿದಂತೆ ನಮ್ಮ ಬದುಕು

12:48 AM Sep 23, 2020 | mahesh |

ಒಂದು ಶುಭ್ರ ಶ್ವೇತ ವರ್ಣದ ಕಾಗದ ಹಾಳೆಯ ನಡುವೆ ಒಂದು ಕಪ್ಪು ಚುಕ್ಕಿ ಇದೆ ಎಂದಿಟ್ಟುಕೊಳ್ಳಿ. ನೂರಕ್ಕೆ 90ರಷ್ಟು ಮಂದಿಗೆ ಕಪ್ಪು ಚುಕ್ಕೆ ಕಣ್ಣಿಗೆ ಬೀಳುತ್ತದೆ. ಕಾಗದದ ಬಹುಭಾಗ ಸ್ವಚ್ಛವಾಗಿದೆ ಎಂಬುದನ್ನು ಗ್ರಹಿಸುವವರು ಕೆಲವೇ ಜನರು.

Advertisement

ವಸ್ತುವೊಂದು ನಮ್ಮ ಕಣ್ಣಿಗೆ ಕೆಂಪು ಬಣ್ಣದಲ್ಲಿ ಕಾಣಿಸುತ್ತಿದೆ ಎಂದರೆ ಅದರರ್ಥ ಆ ವಸ್ತು ಕೆಂಪಗಿದೆ ಎಂದಲ್ಲ. ಬೆಳಕಿನ ಏಳು ವರ್ಣಗಳಲ್ಲಿ ಉಳಿದೆಲ್ಲವನ್ನೂ ಆ ವಸ್ತು ಹೀರಿಕೊಂಡು ಕೆಂಬಣ್ಣವನ್ನು ಮಾತ್ರ ಪ್ರತಿಫ‌ಲಿಸುತ್ತಿದೆ ಎಂದು! ಅಂದರೆ ಯಾವುದು ನಮ್ಮ ಕಣ್ಣಿಗೆ ಕೆಂಪಾಗಿ ಕಾಣಿಸು ತ್ತದೆಯೋ ಅದು ನಿಜವಾಗಿಯೂ ಕೆಂಪು ಬಣ್ಣವನ್ನು ತಿರಸ್ಕರಿಸುತ್ತಿರುತ್ತದೆ! ಬದುಕು ಕೂಡ ನಾವು ನೋಡುವ ನೋಟದಲ್ಲಿದೆ. ಸೌಂದರ್ಯ ಅದನ್ನು ನೋಡುವವನ ಕಣ್ಣುಗಳಲ್ಲಿದೆ ಎಂಬ ಆಂಗ್ಲ ಉಕ್ತಿ ಇದೇ ಅರ್ಥದ್ದು. ಬದುಕನ್ನು ನಾವು ಸಕಾರಾತ್ಮಕ ಅರ್ಥದಲ್ಲಿ ಪರಿಭಾವಿಸಿದರೆ ಅದು ಹಾಗೆಯೇ ನಮ್ಮ ಪಾಲಿಗೆ ದಕ್ಕುತ್ತದೆ. ಅಯ್ಯೋ ಎಷ್ಟು ಕಷ್ಟ ಎಂದು ಬೆಳಗಾತ ಎದ್ದ ಕೂಡಲೇ ಮನಸ್ಸಿನಲ್ಲಿ ಅಂದುಕೊಂಡರೆ ಆ ದಿನವನ್ನು ಭಗವಂತನೂ ನಮ್ಮ ಪಾಲಿಗೆ ಚೆನ್ನಾಗಿಸಲಾರ.

ಮುಲ್ಲಾ ನಾಸರುದ್ದೀನರ ಬಳಿಗೊಬ್ಬ ಬಂದು ಕೇಳಿ ದನಂತೆ, “ನಾನು ಜ್ಞಾನಾರ್ಥಿ ಯಾಗಿ ಹಲವು ಗುರುಗಳ ಬಳಿಗೆ ಹೋಗಿ ದ್ದೇನೆ. ಪ್ರತಿಯೊಬ್ಬರೂ ಒಂದೊಂದು ವಿಧ ವಾಗಿ ಬೋಧಿಸುತ್ತಾರೆ. ಒಂದೇ ಉತ್ತರ ಇಲ್ಲವೇ?’

ಮುಲ್ಲಾ ನಾಸರುದ್ದೀನ ಆತನನ್ನು ಮಾರುಕಟ್ಟೆಗೆ ಕರೆದುಕೊಂಡು ಹೋದರು. ಅದು ಬೆಳಗ್ಗಿನ ಹೊತ್ತು. ಅಲ್ಲಿ ತರಕಾರಿ ಮಾರುವವನನ್ನು ಮುಲ್ಲಾ “ಈಗ ಯಾವ ಪ್ರಾರ್ಥನೆಯ ಹೊತ್ತು’ ಎಂದು ಪ್ರಶ್ನಿಸಿದರು. “ಬೆಳಗಿನ ಪ್ರಾರ್ಥನೆಯದು’ ಎಂದನಾತ. ಮುಲ್ಲಾ ತರಕಾರಿಯವನೊಂದಿಗೆ ಮಧ್ಯಾಹ್ನದ ತನಕ ಮಾತನಾಡುತ್ತ ಕಾಲ ಕಳೆದರು. ಆ ಬಳಿಕ ಕೊಂಚ ದೂರ ಹೋಗಿ ಮೆಣಸು ಮಾರುವವನೊಂದಿಗೆ ಅದೇ ಪ್ರಶ್ನೆ ಕೇಳಿದರು. ಆತ “ಈಗ ಮಧ್ಯಾಹ್ನದ ಪ್ರಾರ್ಥನೆಯ ಹೊತ್ತು’ ಎಂದ. ಮುಲ್ಲಾ ಆತನೊಂದಿಗೆ ಸಂಜೆಯ ತನಕ ಕಾಲಕಳೆದರು. ಬಳಿಕ ಮುಂದಕ್ಕೆ ಸಾಗಿ ಹಣ್ಣು ಮಾರು ವವನೊಂದಿಗೆ ಈಗ ಯಾವ ಪ್ರಾರ್ಥನೆಯ ಹೊತ್ತು ಎಂದು ಕೇಳಿದರು. ಆತ “ಈಗ ಸಂಜೆಯದು’ ಎಂದ. ರಾತ್ರಿಯ ವರೆಗೂ ಹೀಗೆಯೇ ಕಳೆಯಿತು.

ಇವೆಲ್ಲವೂ ಆದ ಬಳಿಕ ಮನೆಗೆ ಹಿಂದಿ ರುಗುವಾಗ ಮುಲ್ಲಾ ತನ್ನೊಂದಿಗೆ ಬಂದ ಜ್ಞಾನಾರ್ಥಿಯನ್ನು ಉದ್ದೇಶಿಸಿ ಹೇಳಿದರು, “ಅರ್ಥವಾಯಿತಲ್ಲ, ನಿನ್ನ ಪ್ರಶ್ನೆಗೆ ಉತ್ತರ ಸಿಕ್ಕಿತಲ್ಲ!’

Advertisement

ಬದುಕು ಕೂಡ ಪ್ರತಿಯೊಬ್ಬರ ಪಾಲಿಗೂ ವಿಭಿನ್ನವಾಗಿ ಅನುಭವಕ್ಕೆ ಬರುತ್ತದೆ. ಸತ್ಯ, ಪ್ರಾಮಾಣಿಕತೆ, ಸದಾ ಲೋಚನೆ, ಸಾಮರಸ್ಯ, ಸಕಾರಾತ್ಮಕ ನಿಲುವು, ಧನಾತ್ಮಕ ಆಲೋಚನೆ, ಸದಾ ಒಳಿತೇ ಆಗುತ್ತದೆ ಎಂಬ ವಿಶ್ವಾಸದೊಂದಿಗೆ ನಮ್ಮ ನಮ್ಮ ಬದುಕನ್ನು ನಾವು ಮುನ್ನಡೆಸಬೇಕು ಎಂಬುದಷ್ಟೇ ಪರಮ ಸತ್ಯ. ಅದಕ್ಕೆ ಬೇಕಾದ ಋಜುಮಾರ್ಗವನ್ನು ಕೂಡ ನಾವೇ ಕಂಡುಕೊಳ್ಳಬೇಕು. ನಮಗೆ ಈಗ ಲಭ್ಯವಿರುವ ಅದೆಷ್ಟೋ ಸುಖ-ಸೌಲಭ್ಯಗಳು ಇಲ್ಲದೆ ನಮ್ಮ ಹಿರಿಯರು ಹೇಗೆ ಬದುಕು ಸಾಗಿಸಿದ್ದರು ಎಂಬುದನ್ನು ಕಲ್ಪಿಸಿಕೊಳ್ಳಿ. ಹಾಗೆಯೇ ಬಾಳುವೆಯಲ್ಲಿ ಎದುರಾದ ಎಲ್ಲವನ್ನೂ ಸ್ವೀಕರಿಸುವುದಷ್ಟೇ ಸಾಧ್ಯ, ಅದರಿಂದ ಪಲಾಯನ ಸಾಧ್ಯವಿಲ್ಲ ಅಥವಾ ಅದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂಬ ಪರಮ ಸತ್ಯವನ್ನು ಅರ್ಥೈಸಿಕೊಂಡರೆ ಅಪಾರ ಆತ್ಮವಿಶ್ವಾಸ, ಸವಾಲನ್ನು ಎದುರಿಸಲು ಮಾರ್ಗೋಪಾಯ ಹುಡುಕುವ ಸ್ಥೈರ್ಯ ಉಂಟಾಗುತ್ತದೆ.

(ಸಂಗ್ರಹ)

ಲೇಖನಗಳನ್ನು ಈ ವಿಳಾಸಕ್ಕೆ ಕಳುಹಿಸಿ
ಬರಹಗಾರರು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಲೇಖನಗಳನ್ನು edit@udayavani.comಗೆ ಕಳುಹಿಸಬಹುದು.
ಸೂಕ್ತವಾದವುಗಳನ್ನು ಪ್ರಕಟಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next