Advertisement

ಮದ್ಯಪಾನ ನಿರ್ಮೂಲನೆಯೇ ನಮ್ಮ ಉದ್ದೇಶ

11:59 AM Apr 04, 2022 | Team Udayavani |

ಹುಬ್ಬಳ್ಳಿ: ಮದ್ಯಪಾನದಿಂದ ಬಹಳಷ್ಟು ಸಂಸಾರಗಳು ಬೀದಿಪಾಲಾಗಿವೆ, ಆಗುತ್ತಲೇ ಇವೆ. ಇದನ್ನು ನಿರ್ಮೂಲನೆ ಮಾಡುವುದೇ ನಮ್ಮ ಉದ್ದೇಶ ಎಂದು ಶ್ರೀ ಜಡೆಯ ಶಾಂತಲಿಂಗ ಸ್ವಾಮೀಜಿ ಹೇಳಿದರು.

Advertisement

ಸರ್‌ ಸಿದ್ದಪ್ಪ ಕಂಬಳಿ ರಸ್ತೆಯ ಬುಳ್ಳಾ ಪ್ರೆಸ್ ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೌನ ತಪಸ್ವಿ ಶ್ರೀ ಜಡೆಯೊಡೆಯ ಶಾಂತಲಿಂಗ ಸ್ವಾಮಿಗಳ ಯುಗಾದಿ ಮತ್ತು ಅಷ್ಟ ದಶಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮದ್ಯಪಾನದಿಂದ ಶರೀರ, ಸಂಸಾರ ಹಾಳಾಗುವುದರ ಜೊತೆಗೆ ಹಣ, ಮರ್ಯಾದೆ ಹೋಗುತ್ತದೆ. ಎಲ್ಲ ರೀತಿಯಿಂದಲೂ ಹಾನಿಯಾಗಿದೆ. ಇದನ್ನು ಸಾಧ್ಯವಾದಷ್ಟು ದೂರ ಮಾಡಬೇಕು. ಸರಕಾರ ಈ ಬಗ್ಗೆ ಯೋಚಿಸಬೇಕು. ನಾವು ಮಾಡುವ ಯಾವುದೇ ಕೆಲಸದ ಉದ್ದೇಶ ಒಳ್ಳೆಯದಾಗಿರಬೇಕು. ಅಂದಾಗ ಮಾತ್ರ ಯಶಸ್ಸು ದೊರೆಯುತ್ತದೆ ಎಂದರು.

ಮಾಜಿ ಸಿಎಂ ಜಗದೀಶ ಶೆಟ್ಟರ ಮಾತನಾಡಿ, ಭಾರತದಲ್ಲಿ ಸಾಮರಸ್ಯ ವಾತಾವರಣ ಇರುವುದರಿಂದಲೇ ವಿಶ್ವದಲ್ಲಿ ತನ್ನದೆಯಾದ ವೈಶಿಷ್ಟ್ಯತೆ ಹೊಂದಿದೆ. ಇದಕ್ಕೆಲ್ಲ ನಮ್ಮಲ್ಲಿಯ ಧಾರ್ಮಿಕತೆ, ಸಂಸ್ಕೃತಿ ಪರಂಪರೆಯೇ ಮೂಲ ಕಾರಣ. ಸಾಮರಸ್ಯದಿಂದ ಬದುಕುವುದು ಆಗಬೇಕಾದರೆ ದುದನಿಯ ಜಡೆಯ ಶ್ರೀಗಳಂಥವರ ಆಶೀರ್ವಾದ ಮುಖ್ಯ. ಅವರ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಜಡೆ ಹಿರೇಮಠದ ಘನ ಬಸವ ಅಮರೇಶ್ವರ ಶಿವಾಚಾರ್ಯರು ಮಾತನಾಡಿ, ರಾಜ್ಯದಲ್ಲಿ ಸ್ವಾಮಿಗಳು ಹೆಚ್ಚಾಗಿದ್ದಾರೆ. ಆದರೆ ಸಂತರು, ಮಹಾಂತರು, ಸಾಧಕರು ಸಿಗುವುದು ಬಹಳ ಅಪರೂಪ. ಅಂಥವರಲ್ಲಿ ಜಡೆಯ ಶಾಂತಲಿಂಗ ಶ್ರೀಗಳು ಅಗ್ರಗಣ್ಯರಾಗಿದ್ದಾರೆ. ಮಹಾತ್ಮರು, ಸಂತರಿಗೆ ಕಷ್ಟಗಳು ತಪ್ಪಿಲ್ಲ. ಅದನ್ನು ಗೆದ್ದು ಬಂದವರೇ ಯೋಗಿಗಳು ಎಂದರು.

Advertisement

ಗೊಗ್ಗೆಹಳ್ಳಿಯ ಪಂಚಸಂಸ್ಥಾನ ಮಠದ ಶ್ರೀ ಸಂಗಮೇಶ್ವರ ಶಿವಾಚಾರ್ಯರು, ಮೂಡಿಯ ಸದಾಶಿವ ಸ್ವಾಮೀಜಿ, ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಶಾಸಕ ಡಿ.ಆರ್‌. ಪಾಟೀಲ ಮಾತನಾಡಿದರು.

ಶಾಸಕ ಶ್ರೀನಿವಾಸ ಮಾನೆ, ವಿಆರ್‌ಎಲ್‌ ಸಮೂಹ ಸಂಸ್ಥೆ ಚೇರ್ಮೆನ್‌ ಡಾ| ವಿಜಯ ಸಂಕೇಶ್ವರ, ಕೆಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಅಣ್ಣಿಗೇರಿಯ ಆರ್‌.ಎ. ದೇಸಾಯಿ, ಮಲ್ಲಿಕಾರ್ಜುನ ಸಾವಕಾರ, ವೀರಣ್ಣ ಮಳಗಿ, ಬುಳ್ಳಾ ಕುಟುಂಬದ ಸದಸ್ಯರು ಮೊದಲಾದವರಿದ್ದರು.

ಯುಗಾದಿಗೆ ಒಮ್ಮೆ ಮಾತ್ರ ಮಾತನಾಡುವ ಮೌನತಪಸ್ವಿ ಶ್ರೀಗಳ ಆಶೀರ್ವಚನ ಕೇಳಲು ಬೆಂಗಳೂರು, ಕಲಬುರಗಿ, ಸೊಲ್ಲಾಪುರ, ದುದನಿ, ವಿಜಯಪುರ, ಬಾಗಲಕೋಟೆ, ಗದಗ, ಶ್ಯಾಗೋಟಿ, ಹುಬ್ಬಳ್ಳಿ-ಧಾರವಾಡ ಹಾಗೂ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು. ಪಿ.ಡಿ. ಶಿರೂರ ಪ್ರಾಸ್ತಾವಿಕ ಮಾತನಾಡಿದರು.

ಎಲ್ಲ ಧರ್ಮಗಳ ಗುರಿ ಒಂದೇ ಆಗಿದೆ. ಅವರವರ ಆಚರಣೆಯ ಮಾರ್ಗ ಬೇರೆ ಬೇರೆ ಆಗಿದೆ. ಅವರ ಧರ್ಮ ಅವರಿಗೆ ಶ್ರೇಷ್ಠ. ಅವರಿಗೆ ಅನುಕೂಲವಾಗುವ ದಾರಿಯಲ್ಲಿ ಅವರು ಹೋಗುತ್ತಾರೆ. ಆದರೆ ನಿಮ್ಮ ಗುರುಗಳು ಹೇಳಿದ ಮಾರ್ಗ ಮಾತ್ರ ಬಿಡಬೇಡಿ. –ಶ್ರೀ ಜಡೆಯ ಶಾಂತಲಿಂಗ ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next