ನಲ್ಮೆಯ ಸ್ನೇಹಿತನಿಗೆ……
ಮರೆತರೂ ನೆನಪಿರುವ, ದೂರವಾದರೂ ಜತೆಗಿರುವ ನಲ್ಮೆಯ ಸ್ನೇಹಿತರಿಗೆ ನಿಮ್ಮ ಪ್ರೀತಿಯ ಶ್ರೀನಾಥನ ಆತ್ಮೀಯ ಅಪ್ಪುಗೆಗಳು. ನೀವು ಕ್ಷೇಮವಾಗಿದ್ದೀರಿ ಎಂದು ಭಾವಿಸುವೆ.
ನಾವೆಲ್ಲರೂ ಭೇಟಿಯಾಗಿ ಸುಮಾರು ವರ್ಷಗಳು ಕಳೆದಿವೆ. ಬದುಕಿನ ಅನಿವಾರ್ಯಕ್ಕಾಗಿ ನಾವೆಲ್ಲರೂ ದೂರವಿದ್ದರೂ ಅಕ್ಷರ ರೂಪದ ಈ ಪತ್ರ ನಮ್ಮನ್ನು ಹತ್ತಿರಗೊಳಿಸುತ್ತಿದೆ ಎಂದು ಭಾವಿಸಿದ್ದೇನೆ. ನೀವು ನನಗೆ ತುಂಬಾ ನೆನಪಾದಿರಿ ಎಂಬ ಕಾರಣಕ್ಕೆ ಈ ಪತ್ರ ಬರೆಯುತ್ತಿದ್ದೇನೆ. ನನ್ನ ಭಾವನೆಗಳನ್ನು ನಿಮ್ಮೊಂದಿಗೆ
ಹಂಚಿಕೊಳ್ಳುತ್ತಿದ್ದೇನೆ.
ನಾವು ಕಾಲೇಜಿನ ದಿನಗಳಲ್ಲಿ ಎಲ್ಲ ಗೆಳೆಯರು ಯಾವುದೇ ಬೇಧ-ಭಾವವಿಲ್ಲದೇ ವಿಜೃಂಭಣೆಯಿಂದ ಆಚರಿಸುತ್ತಿದ್ದ ಸ್ನೇಹಿತರ ದಿನ (ಫ್ರೆಂಡ್‌ಶಿಪ್ ಡೇ) ನನಗೆ ಸದಾ ಕನಸ್ಸಿನಲ್ಲಿ ಕಾಡುತ್ತದೆ. ಆ ದಿನ ಶುಭ್ರವಾದ ಹೊಸ ಬಟ್ಟೆ ತೊಟ್ಟು, ಹೊಳೆಯುತ್ತಿದ್ದ ಆ ಮುಗ್ಧ ಮನಸ್ಸುಗಳು ಈಗಲೂ ನನ್ನ ಕಣ್ಮುಂದೆ ಬರುತ್ತಿವೆ. ಅಂಗೈಯಿಂದ ಮೊಣಕೈ ವರೆಗೂ ಕಟ್ಟಿಸಿಕೊಳ್ಳುವ ಫ್ರೆಂಡ್‌ಶಿಪ್ ಬ್ಯಾಂಡ್‌ಗಳು ನಮ್ಮ ಸ್ನೇಹ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿವೆ. ಅದ್ರಲ್ಲೂ ನನಗೆ ಮಲ್ಲಿಕಾರ್ಜುನನನ್ನು ನನ್ನ ಜೀವನದಲ್ಲಿ ಮರೆಯಲಾಗದಂತ ವ್ಯಕ್ತಿತ್ವ. ಅವರನ್ನು ನೆನೆದರೆ ಸಾಕು ಕಣ್ಣಂಚಲಿಯ ನೀರು ಹಾಗೇ ಜಾರುತ್ತವೆ. ಅವರಿಗಾಗಿಯೇ ಈ ಪತ್ರವನ್ನು ಬರೆಯುತ್ತಿದ್ದೇನೆ.
“ಸ್ನೇಹವಿಲ್ಲದೇ ಸಂಬಂಧವೇ ಇಲ್ಲ’ ಎಂಬ ಮಾತಿದೆ. ನನ್ನ ಬದುಕಿನ ಬಾಂಧವ್ಯದಲ್ಲಿ ಅಪರೂಪದ ವ್ಯಕ್ತಿಯಾಗಿ ನಾ ಪಡೆದ ಗೆಳೆಯ ನೀನು. “ಅಣ್ಣ ನೀನೇನ್ ಚಿಂತಿ ಮಾಡಬ್ಯಾಡ ಸದಾ ನಿನ್ ಜತಿಗೆ ಇರ್ತಿನಿ ನಾ’. ಎನ್ನುವ ನಿನ್ನ ಮಾತು ನಿರಂತರವಾದದ್ದು. “ಆಪತ್ತಿಗಾದವನೇ ಆಪ್ತ’ ಎಂಬ ಮಾತಿನಂತೆ ಬದುಕಿದೀಯಾ. ಜೀವನದಲ್ಲಿ ನೋವನ್ನುಂಡ ನನಗೆ ಪರಿಹಾರದ ಮಾರ್ಗವನ್ನು ತೋರಿದವನು ನೀನು.
ನಾವಿಬ್ಬರು ಒಂದೇ ಊರಲ್ಲಿದ್ದರೂ ನಮ್ಮಿಬ್ಬರ ಸ್ನೇಹದ ಕೊಂಡಿ ಬೆಸೆದಿದ್ದು ಕೇವಲ ನಾಲ್ಕೈದು ವಸಂತದ ಹಿಂದೆಯಷ್ಟೆ. ಜತೆಗೆ ಓಡಾಡಿಕೊಂಡಿದ್ದ ನಮ್ ಸ್ನೇಹವೃಂದದಲ್ಲಿ ಎಳ್ಳಷ್ಟು ಕಪ್ಪುಚುಕ್ಕೆಗಳಿಗೆ ಇಂದಿಗೂ ಪ್ರವೇಶ ನಿಷೇಧ. ನೆನಪಿದೆಯಾ, ಒಮ್ಮೆ ಮೊಹರಂ ಸಡಗರದಲ್ಲಿ ಬೇರೆ ಊರಿಗೆ ತೆರಳಿದ್ದಾಗ ನನ್ನ ದೊಡ್ಡಪ್ಪ ಕರೆಮಾಡಿ “ನಿನ್ನ ತಂದೆಗೆ ಹುಷಾರಿಲ್ಲ, ಊರಲ್ಲೇ ಇರುವ ಆಸ್ಪತ್ರೆಗೆ ಕರೆತಂದಿದಿವಿ’ ಎಂದಾಗ ತಕ್ಷಣವೇ “ನೀನು ನನ್ನ ಬೈಕ್ ತೆಗೆದುಕೊಂಡು ತೆರಳು, ನಾವೇನಾದರೂ ನಿಭಾಯಿಸಿ ಬತೇìವೆ, ವಾಪಸ್ ಬರದೆ ಆಸ್ಪತ್ರೆಗೆ ಹೋಗು’ ಎಂದು ಕಳಿಸಿಕೊಟ್ಟೆ. ಆದರೆ, ದೂರದ ಊರಿಂದ ಯಾರಧ್ದೋ ಸಹಾಯ ಬೇಡಿ ಬೇರೆ ಬೈಕಲ್ಲಿ ಬಂದೆ. ನನಗೂ ನನ್ನ ತಂದೆಯ ಹತ್ತಿರ ಬಂದಾಗ ನಿರಾಳ, ಅವರು ಚೇತರಿಕೆ ಕಂಡರು.
ಕಣ್ಣೊರೆಸುವ ಮತ್ತು ತಲೆ ಸವರುವ ಕೈಗಳು, ಬಿದ್ದಾಗ ಮೇಲೆತ್ತುವ ಭುಜಗಳು, ಉತ್ತೇಜಿಸುವ, ಸಂತೈಸುವ ಮನಸ್ಸು ನಿಮ್ಮದು. ಗೆಳೆಯ ಎದ್ದಾಗ ಸಂಭ್ರಮಿಸುವ, ದಾರಿ ತಪ್ಪಿದಾಗ ಕೈ ಹಿಡಿದು ತಿದ್ದುವ, ದೇಹ ಎರಡು, ಅತ್ಮವೊಂದೇ ಎಂಬಷ್ಟರ ಮಟ್ಟಿಗೆ ನಮ್ಮ ಸ್ನೇಹ ಇದು. ಜೀವನ ಅದೆಷ್ಟು ಸುಂದರ ಎಂಬ ಭಾವನೆಯನ್ನು ನಮಗೆ ಬೊಗಸೆಯಲ್ಲಿ ಕಟ್ಟಿಕೊಡುವ ನೆರಳು ಪಡೆದು ನೆರಳು ನೀಡುವ ಆ ಗೆಳೆತನದ ವೃಕ್ಷಗಳು ನಮ್ಮ ಸ್ನೇಹ. ಯಾರೇ ಬಂದರೂ ಯಾರೇ ಹೋದರೋ ಚಿರಕಾಲ ಹೀಗೆ ಇರಲಿ ನಮ್ಮ ಸ್ನೇಹ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ.
ಹೀಗೆ ನಿನ್ನ ಸ್ನೇಹಿತನಾಗಿ ಪಡೆದ ನಾನು ಧನ್ಯ. ನಿನ್ನಂಥ ಗೆಳೆಯ ಪ್ರತಿಯೊಬ್ಬರಿಗೂ ಸಿಕ್ಕರೆ ಎಲ್ಲವೂ ಒಳಿತು.
ಇಂತಿ ನಿನ್ನ ಪ್ರೀತಿಯ ಗೆಳೆಯ……
ಶ್ರೀನಾಥ ಮರಕುಂಬಿ, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು