Advertisement

ಮಕ್ಕಳ ಪ್ರತಿಭೆಯ ಪೋಷಣೆ ನಮ್ಮ ಕರ್ತವ್ಯ: ಜಗದೀಶ್‌ ಹೆಗ್ಡೆ

11:43 AM Dec 22, 2021 | Team Udayavani |

ಮಲಾಡ್‌: ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ವಿಕಸನಕ್ಕೆ ಪ್ರತಿಭಾ ಸ್ಪರ್ಧೆ ಕಾರ್ಯಕ್ರಮಗಳು ಸಹಕಾರಿಯಾಗಿದ್ದು, ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳ ಗಮನ ಕೇಂದ್ರೀಕೃತಗೊಳ್ಳುವುದು. ಪಠ್ಯದ ಜತೆಗೆ ಇಂಥ ಕಾರ್ಯಕ್ರಮಗಳು ಮಕ್ಕಳ ಭವಿಷ್ಯಕ್ಕೂ ಸಹಕಾರಿಯಾಗುವುದು. ಭವಿಷ್ಯದಲ್ಲಿ  ಮಕ್ಕಳ ಈ ಪ್ರತಿಭಾ ಸ್ಪರ್ಧೆ ಕಾರ್ಯಕ್ರಮಕ್ಕೆ ದೂರದೃಷ್ಟಿ ಚಿಂತನೆಯ ಮೂಲಕ ಹೊಸ ರೂಪು ರೇಷೆ ನೀಡಲು ಪ್ರಯತ್ನಿಸಲಾಗುವುದು ಎಂದು ಮಲಾಡ್‌ ಕನ್ನಡ ಸಂಘದ ಅಧ್ಯಕ್ಷ ನ್ಯಾಯವಾದಿ ಜಗದೀಶ್‌ ಹೆಗ್ಡೆ ತಿಳಿಸಿದರು.

Advertisement

ಮಲಾಡ್‌ ಮಾರ್ವೇ ರೋಡ್‌ ಖಾರೋಡಿಯ ಸೈಂಟ್‌ ಜೂಡ್‌ ಹೈಸ್ಕೂಲ್‌ ಆಡಿಟೊರಿಯಂನಲ್ಲಿ  ಡಿ. 19ರಂದು ಮಲಾಡ್‌ ಕನ್ನಡ ಸಂಘ ಮಕ್ಕಳಿಗಾಗಿ ಆಯೋಜಿಸಿದ್ದ ಪ್ರತಿಭಾ ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಸಂಘದ ಮೇಲೆ ಎಲ್ಲರಿಗೂ ಅಭಿಮಾನ ಮುಖ್ಯ. ಸಂಘ ಇನ್ನಷ್ಟು ಕಾರ್ಯೋನ್ಮುಖವಾಗಿ ಕೆಲಸ ಮಾಡಲು ಜನಬಲ ಮುಖ್ಯ. ಇಲ್ಲಿ ಪದಾಧಿಕಾರಿಗಳೇ ಪ್ರಮುಖರೆಂದು ಪರಿಗಣಿಸಬಾರದು. ಎಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಾಲುದಾರರಾಗಬೇಕು. ಆಗ ಸಂಸ್ಥೆ ಯಶಸ್ವಿ ಯಾಗಿ ಬೆಳೆಯಲು ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿದ್ದ ಕಾರ್ಕಳ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿ ಯಾಗಿದ್ದು ಪ್ರಸಕ್ತ ಮಲಾಡ್‌ ಓರ್ಲೆಮ್‌ ಸೈಂಟ್‌ ಜೋಸೆಫ್‌ ಹೈಸ್ಕೂಲ್‌ನ ಪ್ರಾಧ್ಯಾ ಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಎಮಿಲಿಯ ಕ್ಯಾಸ್ಟಲಿನೋ ಮಾತನಾಡಿ, ಇಂತಹ ಕಾರ್ಯಕ್ರಮಗಳು ಮಕ್ಕಳ ಏಕಾಗ್ರತೆ ಬೆಳವಣಿಗೆಗೆ ಸಹಕಾರಿಯಾಗಿದೆ. ಚಿತ್ರಕಲೆಗಳ ದೃಶ್ಯ ಭಾವನೆಗಳು ಮಕ್ಕಳನ್ನು ಸದೃಢಗೊಳಿಸುವುದರ ಜತೆಗೆ ಮಕ್ಕಳ ಜ್ಞಾನ ಶಕ್ತಿಯು ಬೆಳವಣಿಗೆಯಾಗುವುದು. ನೃತ್ಯಕಲೆಯ ಹಾವಭಾವಗಳು ಮಕ್ಕಳಲ್ಲಿ ಆರೋಗ್ಯ ವೃದ್ಧಿ, ತಾಳ್ಮೆ, ಸೃಜನಶೀಲತೆಗೆ ಸಹಕಾರಿಯಾಗಿದೆ. ಇವೆಲ್ಲವೂ ಮಕ್ಕಳ ಜ್ಞಾನದ ವಿಕಸನಕ್ಕೆ ವಿಶೇಷ ಕೊಡುಗೆಯಾಗಿದೆ. ಸದಾ ಕಾರ್ಯಚಟುವಟಿಕೆಗಳ ತೊಡಗಿಸಿ ಕೊಂಡಿರುವ ಮಲಾಡ್‌ ಕನ್ನಡ ಸಂಘದಿಂದ ಭವಿಷ್ಯದಲ್ಲಿ ಇನ್ನೂ ಹತ್ತು ಹಲವಾರು ವಿನೂತನ ಕಾರ್ಯಕ್ರಮಗಳು ಜರಗುತ್ತಿರಲಿ ಎಂದು ಹಾರೈಸಿ, ಮಕ್ಕಳ ನೃತ್ಯಕಲೆಯಲ್ಲಿ ಕೆಲವೊಂದು ತಪ್ಪುಗಳನ್ನು ಮಕ್ಕಳು, ಪಾಲಕರು ಹೇಗೆ ಪರಿಹರಿಸಬೇಕು ಎಂಬ ಬಗ್ಗೆ ಕಿವಿಮಾತು ಹೇಳಿದರು.

ಅತಿಥಿ ಹಾಗೂ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕನ್ನಡ ಕಲಿಕೆ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಶಂಕರ ಡಿ. ಪೂಜಾರಿ ಸ್ವಾಗತಿಸಿದರು. ಜತೆ ಕೋಶಾಧಿಕಾರಿ ಶಂಕರ್‌ ಆರ್‌. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಈ ಸಂದರ್ಭ ಅತಿಥಿ ಎಮಿಲಿಯ ಕ್ಯಾಸ್ಟಲಿನೋ ಅವರನ್ನು ಸಂಘದ ವತಿಯಿಂದ ಶಾಲು ಹೊದೆಸಿ, ಫಲಪುಷ್ಪ ನೀಡಿ ಗೌರವಿಸಲಾಯಿತು.

ಪರಿಸರದ ಶಾಲಾ ಮಕ್ಕಳಿಗೆ ಆಯೋಜಿಸಿದ ಈ ಪ್ರತಿಭಾ ಸ್ಪರ್ಧೆ ಕಾರ್ಯಕ್ರಮದಲ್ಲಿ  ವಿದ್ಯಾರ್ಥಿಗಳಿಗೆ ಚಿತ್ರಕಲೆ, ಪ್ರಬಂಧ, ಸಾಮಾನ್ಯ ಜ್ಞಾನ, ನೃತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ತೀರ್ಪುಗಾರರಾಗಿ ಯಶೋದಾ ಅಮೀನ್‌, ಚೈತ್ರಾಲಿ, ಸಾಕ್ಷಿ ಶೆಟ್ಟಿ, ರಿತಿಕಾ ಕೆ. ಅಮೀನ್‌, ವಿಜಯಲಕ್ಷ್ಮೀ ಶೆಟ್ಟಿ, ಸಾರಿಕಾ ಶೆಟ್ಟಿ ಸಹಕರಿಸಿದರು.

Advertisement

ಜತೆ ಕಾರ್ಯದರ್ಶಿ ಅನಿಲ್‌ ಎಸ್‌. ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತಿ ಬಾಲಚಂದ್ರ ರಾಬ್‌, ಯುವ ವಿಭಾಗದ ಕಾರ್ಯದರ್ಶಿ ಸುಂದರ ಪೂಜಾರಿ ಉಪಸ್ಥಿತರಿದ್ದರು. ಕೋಶಾಧಿಕಾರಿ ಪ್ರಕಾಶ್‌ ಎಸ್‌. ಶೆಟ್ಟಿ, ಯುವ ವಿಭಾಗದ ಮಾಜಿ ಕಾರ್ಯಾಧ್ಯಕ್ಷ ಸೂರಪ್ಪ ಕುಂದರ್‌, ಸತೀಶ್‌ ಶೆಟ್ಟಿ, ವಿಶ್ವನಾಥ್‌ ಭಂಡಾರಿ, ಜಯಪ್ರಕಾಶ್‌ ಸಾಲ್ಯಾನ್‌, ಸುಧಾಕರ್‌ ಶೆಟ್ಟಿ, ಶಾರದಾ ಪೂಜಾರಿ ಹಾಗೂ ಇತರ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ಶಾಂಭವಿ ಬಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಹಾಗೂ ಪಾಲಕರಿಗೆ ಫಲಾಹಾರದ ವ್ಯವಸ್ಥೆ ಮಾಡಲಾಗಿತ್ತು.

-ಚಿತ್ರ-ವರದಿ: ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next