Advertisement
ಹೆಮ್ಮಾಡಿ/ ತ್ರಾಸಿ: ರಾಷ್ಟ್ರೀಯ ಹೆದ್ದಾರಿ 66 ರ ಸಮಸ್ಯೆಗಳು ಹೇಳಿದ್ದಷ್ಟೂ ಮುಗಿಯುವುದಿಲ್ಲ. ಈಗಾಗಲೇ ಹೇಳಿದಂತೆ ಊರಿನ ಜನರಿಗೆ ಅನುಕೂಲ ಕಲ್ಪಿಸುವ ದಿಸೆಯಲ್ಲಿ ಈ ರಸ್ತೆ ಚತುಷ್ಪಥವಾಗಿ ಅಗಲಗೊಳಿಸುವಾಗ ಆಸಕ್ತಿ ನೀಡಿದ್ದು ಕಡಿಮೆ ಎಂಬುದು ಪ್ರತಿ ಹಂತದಲ್ಲೂ ಸಾಬೀತಾಗುತ್ತಿದೆ. ಅದಕ್ಕೆ ಮತ್ತೂಂದು ಸೇರ್ಪಡೆ ಸರ್ವೀಸ್ ರಸ್ತೆಗಳ ಕೊರತೆ.
Related Articles
Advertisement
ಶಿರೂರು, ಬೈಂದೂರು, ಉಪ್ಪುಂದ, ನಾಯ್ಕನಕಟ್ಟೆ, ಕಿರಿಮಂಜೇಶ್ವರ, ತ್ರಾಸಿ (ಗಂಗೊಳ್ಳಿ ಠಾಣೆ ಎದುರು) ಅಂಡರ್‌ಪಾಸ್‌ಗಳು ಹಾಗೂ ಹೇರಿಕುದ್ರುವಿನಲ್ಲಿ ಅಂಬ್ಯಾಕ್‌ವೆುಂಟ್ ನಿರ್ಮಾಣಗೊಂಡಿದೆ. ಇಲ್ಲಿ ಅನಿವಾರ್ಯವಾಗಿ ಸರ್ವೀಸ್ ರಸ್ತೆ ರೂಪಿಸಲಾಗಿದೆ. ಉಪ್ಪುಂದದಲ್ಲಿ ಒಂದು ಬದಿ ಬಾಕಿ ಇದೆ. ಶಿರೂರು ಅಂಡರ್‌ಪಾಸ್ ಬಳಿ ಬೈಂದೂರು ಕಡೆಯಿಂದ ಹೋಗುವಾಗ ಎಡಗಡೆಗೆ ಇರುವ ಸರ್ವಿಸ್ ರಸ್ತೆ ಹಾಗೂ ಅಂಡರ್‌ಪಾಸ್ ರಸ್ತೆ ಒಂದೇ ಮಟ್ಟದಲ್ಲಿದ್ದು, ಇಲ್ಲಿ ಕಕ್ಕಾಬಿಕ್ಕಿ ಖಚಿತ. ಇನ್ನು ಶಿರೂರಿನಿಂದ ಕುಂದಾಪುರ ಕಡೆಗೆ ಬರುವಾಗ ಎಡ ಬದಿಯಲ್ಲಿ ಸರ್ವಿಸ್ ರಸ್ತೆಯೇ ಇಲ್ಲ.
ಇನ್ನೂ ಈಡೇರಿಲ್ಲಹೆಮ್ಮಾಡಿಯಿಂದ ಜಾಲಾಡಿಯವರೆಗೆ, ಮತ್ತೂಂದು ಕಡೆ ಕನ್ನಡ ಕುದ್ರುವರೆಗೆ ಸರ್ವಿಸ್ ರಸ್ತೆಗಾಗಿ ಜನ ಹೋರಾಟ ಮಾಡುತ್ತಿದ್ದರೂ, ಇನ್ನೂ ಈಡೇರಿಲ್ಲ. ಹೇರಿಕುದ್ರು ಬಲಭಾಗ, ತಲ್ಲೂರು ಕಲ್ಕೇರಿಯಿಂದ ಜಂಕ್ಷನ್ ಆಗಿ ಪ್ರವಾಸಿ ಹೋಟೆಲ್‌ವರೆಗೆ, ತ್ರಾಸಿಯಲ್ಲಿಯೂ ಆಗಬೇಕಿದೆ. ನಾವುಂದದಲ್ಲಿ ಕಾಲೇಜು ಬಳಿಯಿಂದ ಬಡಾಕೆರೆ ಕ್ರಾಸ್‌ವರೆಗೆ ಸರ್ವಿಸ್ ರಸ್ತೆ ಬೇಡಿಕೆಯಿದೆ. ಕಿರಿಮಂಜೇಶ್ವರದಲ್ಲಿ ಆಗಿಲ್ಲ. ಶಿರೂರು ಕೆಳಪೇಟೆಯ ಎರಡೂ ಕಡೆಗಳಲ್ಲಿ ಸರ್ವಿಸ್ ರಸ್ತೆ ಬೇಡಿಕೆಯಿದ್ದು, ಈ ಬಗ್ಗೆ ಸಂಸದರ ನೇತೃತ್ವದಲ್ಲಿ ನಡೆದ ಸಭೆಯಲ್ಲಿಯೂ ಗಮನಕ್ಕೆ ತರಲಾಗಿತ್ತು. ಆದರೂ ಪ್ರಯೋಜನವಾಗಿಲ್ಲ. ಪ್ರಸ್ತಾವನೆಗೆ ಮನ್ನಣೆಯಿಲ್ಲ
ತಲ್ಲೂರು, ಹೆಮ್ಮಾಡಿ, ಮುಳ್ಳಿಕಟ್ಟೆ, ತ್ರಾಸಿಯಲ್ಲಿ ಸರ್ವೀಸ್ ರಸ್ತೆ ನಿರ್ಮಾಣವಾಗಬೇಕು ಎನ್ನುವುದು ಆರಂಭದಿಂದಲೂ ಜನ ಬೇಡಿಕೆಯಿಡುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಪ್ರತಿಭಟನೆಗಳು ನಡೆದು, ಸ್ಥಳೀಯ ಪಂಚಾಯತ್‌ನಿಂದ 4-5 ಬಾರಿ ಹೆ.ಪ್ರಾಧಿಕಾರಕ್ಕೆ ಪ್ರಸ್ತಾವನೆ ಕಳುಹಿಸಿದರೂ ಉಪಯೋಗವಾಗಿಲ್ಲ. ಕಾಮಗಾರಿ ನಿರ್ವಹಿಸುವ ಐಆರ್‌ಬಿಯವರಲ್ಲಿ ಕೇಳಿದರೆ ಪ್ರಾಧಿಕಾರದವರು ರೂಪಿಸಿದ ಯೋಜನೆಯಂತೆ ಮಾಡುತ್ತಿದ್ದೇವೆ. ಹೆಚ್ಚುವರಿ ಸರ್ವೀಸ್ ರಸ್ತೆಗೆ ಅವರಿಂದಲೇ ಸೂಚನೆ ಬಂದರೆ ಮಾಡಲಾಗುವುದು ಎನ್ನುತ್ತಾರೆ. ಆದರೆ ಪ್ರಾಧಿಕಾರದವರು ಮಾತ್ರ ಕ್ಯಾರೇ ಮಾಡುತ್ತಿಲ್ಲ. ಏನು ಸಮಸ್ಯೆ? ಯಾಕೆ ಆಗಬೇಕು
ಸಂಗಮ್‌ನಿಂದ ಶಿರೂರುವರೆಗಿನ ಪ್ರಮುಖ ಜಂಕ್ಷನ್‌ಗಳಲ್ಲಿ ಎಲ್ಲಿಯೂ ಸರ್ವಿಸ್ ರಸ್ತೆ ಇಲ್ಲದಿರುವ ಕಾರಣ ಸ್ಥಳೀಯರು ಅನ್ಯ ದಾರಿಯಿಲ್ಲದೆ ವಿರುದ್ಧ ದಿಕ್ಕಿನಲ್ಲಿಯೇ ಸಂಚರಿಸುತ್ತಿದ್ದಾರೆ. ಜತೆಗೆ ಸುರಕ್ಷಿತವಾಗಿ ರಸ್ತೆ ದಾಟುವುದೂ ಕಷ್ಟವಾಗುತ್ತಿದೆ. ಇದರೊಂದಿಗೆ ಜಂಕ್ಷನ್ ರಸ್ತೆಗಳು ಒಂದೇ ಮಟ್ಟದಲ್ಲಿಲ್ಲದ ಕಾರಣ, ಕೆಲವೊಮ್ಮೆ ಎದುರಿನ ರಸ್ತೆಯಲ್ಲಿ ಬರುತ್ತಿರು ವವನಿಗೆ ಪಕ್ಕದ ಅಡ್ಡ ರಸ್ತೆಯಲ್ಲಿ ಬರುವ ವಾಹನ ಕಾಣುವುದೇ ಇಲ್ಲ. ಮತ್ತೂಂದು ಬದಿಯಿಂದ ರಸ್ತೆ ದಾಟಲು ಜನರು ರಸ್ತೆ ಮಧ್ಯೆ ಬಂದು ಬಿಡುತ್ತಾರೆ. ಏನೂ ಮಾಡಲಾಗದೆ ಕೈ ಚೆಲ್ಲಿ ಬಿಡಬೇಕಾಗುತ್ತದೆ. ರಸ್ತೆ ಅಪಘಾತಗಳು ಹೆಚ್ಚಾಗಿದ್ದು, ಪ್ರಾಣಹಾನಿ ತಪ್ಪಿಸಲು ಸರ್ವೀಸ್ ರಸ್ತೆಗಳಾಗಬೇಕಿದೆ. ಸರ್ವೀಸ್ ರಸ್ತೆ ನಿರ್ಮಾಣ: ವಿಳಂಬ ಧೋರಣೆ
ಹೇರಿಕುದ್ರು, ತಲ್ಲೂರು, ಹೆಮ್ಮಾಡಿ, ಮುಳ್ಳಿಕಟ್ಟೆ, ತ್ರಾಸಿ, ನಾವುಂದ, ನಾಗೂರು, ಉಪ್ಪುಂದ, ಶಿರೂರಲ್ಲಿ ಸರ್ವೀಸ್ ರಸ್ತೆಗೆ ಸ್ಥಳೀಯಾಡಳಿತ, ಸ್ಥಳೀಯರು ಹೆದ್ದಾರಿ ಕಾಮಗಾರಿ ಆರಂಭವಾದಾಗಲೇ ಶಾಸಕರು, ಸಂಸದರು ಸಹಿತ ಸ್ಥಳೀಯರು ಮನವಿ ಸಲ್ಲಿಸಿದ್ದರು. ಆದರೆ ಈ ಬಗ್ಗೆ ವಿಚಾರಿಸಿದಾಗ ಐಆರ್‌ಬಿಯವರು, “ನಮಗೆ ಅಂಡರ್‌ಪಾಸ್ ಇರುವಲ್ಲಿ ಮಾತ್ರ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರ ಯೋಜನೆ ರೂಪಿಸಿಕೊಟ್ಟಿದೆ. ಬೇಡಿಕೆ ಇರುವಲ್ಲೆಲ್ಲ ನಾವು ಪ್ರಸ್ತಾವನೆ ಸಲ್ಲಿಸಿದ್ದೇವೆ’ ಎನ್ನುತ್ತಾರೆ. ಈ ಬಗ್ಗೆ ಪ್ರಾಧಿಕಾರದ ಅಧಿಕಾರಿಗಳ ಬಳಿ ಕೇಳಿದರೆ “ಎಲ್ಲೆಲ್ಲ ಹೊಸದಾಗಿ ಸರ್ವೀಸ್ ರಸ್ತೆಗಳಿಗೆ ಬೇಡಿಕೆ ಬಂದಿವೆಯೋ ಅದರ ಕರಡು ತಯಾರಿಸಿ, ದಿಲ್ಲಿ ಕಚೇರಿಗೆ ಕಳುಹಿಸಲಾಗಿದೆ. ಅಲ್ಲಿಂದ ಅನುಮೋದನೆ ಬಂದ ಬಳಿಕ ಮಾಡ ಲಾಗುವುದು’ ಎನ್ನುತ್ತಾರೆ. ಇದರಿಂದಲೇ ಯೋಜನೆಯ ಆರಂಭದಲ್ಲಿ ಸರ್ವೀಸ್ ರಸ್ತೆಗೆ ಅವಕಾಶ ಕಲ್ಪಿಸಿಲ್ಲ ಎನ್ನುವುದು ಸ್ಪಷ್ಟ. ಈಗಲಾದರೂ ಮುಂದಿನ ದಿನಗಳಲ್ಲಿನ ಅನಾಹುತ ತಪ್ಪಿಸಲು ಸಂಸದರು, ಶಾಸಕರು ಗಮನಹರಿಸಿ ಸರ್ವೀಸ್ ರಸ್ತೆಗಳನ್ನು ಕಲ್ಪಿಸಿಕೊಡಲೇಬೇಕು.