ನಮ್ಮದು, `ಟೀಚರ್, ಟೀಚರ್’ ಜಮಾನ. ಇಂದು “ಮ್ಯಾಮ…, ಮಿಸ್’ ಎಂದೆಲ್ಲ ಅಪ್‌ಡೇಟ್ ಆಗಿದೆ. ಅಂದು ಐದು ವರ್ಷ ಕಳೆಯುತ್ತಲೇ ಬಾಲವಾಡಿ, ಅಂಗನವಾಡಿಯ ಆ ದಿನದಿಂದಲೇ ಶುರು ಈ ಟೀಚರ್. ಮನೆಗೆ ಬಂದ ಮೇಲೆ ಬೇರೆ ವಿಚಾರಗಳಿಗಿಂತ ಟೀಚರ್‌ರ ಗುಣಗಾನವೇ ಹೆಚ್ಚಿರುತ್ತಿತ್ತು. ಕ್ರಮೇಣ ಹೈಸ್ಕೂಲ್ ನಂತರ ಮ್ಯಾಮ್ ಎಂದು ಬದಲಾಗುತ್ತಿತ್ತು. ಆ ಟೀಚರ್ ಅಥವಾ ಸರ್‌ಗಳ ಹೆಸರೂ ಕೆಲವೊಮ್ಮೆ ಗೊತ್ತಿರುತ್ತಿರಲಿಲ್ಲ. ಬರೀ ಕನ್ನಡ ಟೀಚರ್, ಇಂಗ್ಲಿಷ್ ಸರ್, ಡ್ಯಾನ್ಸ್ ಟೀಚರ್, ಡ್ರಾಯಿಂಗ್ ಸರ್, ಪೀಟಿ ಟೀಚರ್, ಕ್ರಮೇಣ ಮ್ಯಾತ್ಸ್ ಮ್ಯಾಮ…, ಫಿಸಿಕ್ಸ್ ಸರ್ ಅಂತ ಹೀಗೆ ಹಲವಾರು ಗುರುಗಳು ನಮ್ಮ ಶಾಲಾ-ಕಾಲೇಜು ದಿನಗಳಲ್ಲಿದ್ದರು.
ಹೌದು! ಆ “ಗುರು’ ಎಂಬ ಪದಕ್ಕೆ ಅಷ್ಟೇ ಗೌರವವಿದೆ. ತಂದೆ, ತಾಯಿ ಮಗುವಿನ ಮೊದಲ ಗುರುವಾದರೆ, ನಂತರ ಬಳಪ ಹಿಡಿಸಿ ಅ, ಆ, ಇ, ಈ, ಕಲಿಸಿ ಪದ, ವಾಕ್ಯ, ಕಥೆ ಹೀಗೆ ಪುಟಗಟ್ಟಲೆ ಬರೆಯಲು ಕಲಿಸಿದವರು ಗುರುಗಳು. ತೊದಲು ಮಾತುಗಳನ್ನು ಅರ್ಥೈಸಿಕೊಂಡು ಸ್ಪಷ್ಟತೆಯ ಚೌಕಟ್ಟಿನಲ್ಲಿ ಮಾತನ್ನು ಆಟದ ನಿಯಮದಂತೆ ಆಡಲು ಅಲ್ಲದೆ ಆಧುನಿಕ ತಂತ್ರಜ್ಞಾನವನ್ನೂ ಕಲಿಸಿದವರವರು. ಸುಮ್ಮನೆ ನಡೆಯುವ ಕಾಲುಗಳಿಗೆ ಗೆಜ್ಜೆಯ ತೊಡಿಸಿ, ರಾಗದ ಸದ್ದಿಗೆ ನಾಟ್ಯವ ಕಲಿಸಿದವರವರು, ಗಡಸು ದನಿಗೆ ಸಂಗೀತವ ಕಲಿಸಿದವರವರು. ಗೀಚುವ ಕೈಗಳಲಿ ಚಿತ್ರವನ್ನು ಮೂಡಿಸಿದವರವರು. ಹೇಳುತ್ತ ಹೋದರೆ ಗುರುಗಳ ವರ್ಣಿಸಲು ಪುಟಗಳು ಸಾಲದು. ನಾವು ಕಲಿಯುತ್ತೇವೋ ಬಿಡುತ್ತೇವೋ ಅದು ನಂತರ ಸಿಗುವ ಉತ್ತರ. ಆದರೆ, ಮಕ್ಕಳು ಬೇರೆ ಬೇರೆ ವಿದ್ಯೆಯನ್ನು ಕಲಿಯಬೇಕೆಂದು ಆಯಾ ತರಗತಿಯ ಬಾಗಿಲಿನ ಬಳಿ ಬಿಡುವ ತಂದೆ-ತಾಯಿಗಳ ಪಡೆದ ಮಕ್ಕಳು ಅದೃಷ್ಟವಂತರೇ ಸರಿ. ಏನೂ ಅರಿಯದ ಮಕ್ಕಳಿಗೆ ಕಲಿಸುವ ಪಣ ತೊಡುವ ಗುರುಗಳೂ ಪುಣ್ಯವಂತರು. ಕೈಗೆಟಕಿದ ವಿದ್ಯೆ ಕರಗತವಾದರೆ ಕಳುಹಿಸಿದ ಪೋಷಕರಿಗೂ ಸಂತಸ, ಕಲಿಸಿದ ಗುರುಗಳಿಗೂ ಸಂತಸ ಹಾಗೂ ಕಲಿತ ಮಕ್ಕಳಿಗೂ ಸಂತಸ. ಯಾವುದೇ ವಿದ್ಯೆಗೆ ಕೊನೆ ಎಂಬುದಿಲ್ಲವಾದರೂ ಒಂದು ಮಟ್ಟದ ಪ್ರೌಢಿಮೆ ಅದರಲ್ಲಿ ಬರಬೇಕು. ನಾವು ಏನೇ ಒಂದು ಮಾಡುತ್ತಿದ್ದೇವೆ ಅಂದರೆ ಅದರ ಹಿಂದೆ ಗುರುಗಳ ಶ್ರಮವಿದ್ದೇ ಇರುತ್ತದೆ. `ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ದಾಸರು ಅದಕ್ಕಾಗಿಯೇ ಹೇಳಿರಬೇಕು!
ಸಾಮಾನ್ಯವಾಗಿ ಪ್ರಾಥಮಿಕ ಶಾಲೆಯ ಟೀಚರ್‌ಗಳ ಮೇಲೆ ವಿದ್ಯಾರ್ಥಿಗಳಿಗೆ ಒಲವು ಹೆಚ್ಚು. ಹೌದು, ಅಂದು ಕೊನೆಗೆ ನಮ್ಮ ಟೀಚರ್ ಕೂಡ ಒಂದು ಮಾತು ಹೇಳಿದ್ದರು, “ಮಕ್ಕಳೇ, ಮುಂದೆ ನಾವು ನಿಮಗೆ ಎದುರಾದರೆ ಮಾತನಾಡಿಸಿ, ಮಾತನಾಡಿಸದಿದ್ದರೂ ಪರವಾಗಿಲ್ಲ ನಮಸ್ತೆ ಹೇಳಿ. ಆದೂ ಬೇಡ, ಕಡೇ ಪಕ್ಷ ಒಂದು ಮುಗುಳುನಗೆ ಆದರೂ ಕೊಡಿ’ ಅಂತ. ಒಬ್ಬ ಬುದ್ಧಿಜೀವಿಯಾದವನು ಗುರುಗಳನ್ನು ಎಂದೂ ಮರೆಯಲಾರ. ನಮ್ಮ ಜೀವನದ ದಾರಿದೀಪವಾದ ಗುರುಗಳು ಮುಂದೊಂದು ದಿನ ಎದುರಾದಾಗ ಕನಿಷ್ಠ ಪಕ್ಷ ಒಂದು ಮುಗುಳುನಗೆಯನ್ನೂ ಬೀರದವ ವಿದ್ಯಾವಂತ ಎನಿಸಿಕೊಂಡರೂ ವ್ಯರ್ಥ. ಸಾಧ್ಯವಾದರೆ ಒಂದು ನಿಮಿಷ ಮಾತನಾಡಿಸುವುದು, ಇಲ್ಲವಾದಲ್ಲಿ ಮುಗುಳುನಗೆಯನ್ನು ನೀಡಲೇಬೇಕು, ನೀಡುತ್ತೇವೆ. ಆಗ ಗುರುವೂ ತನ್ನ ವಿದ್ಯಾರ್ಥಿ ಎಂದು ಹೆಮ್ಮೆ ಪಡುತ್ತಾರೆ.
ಇಂದು ವಾಟ್ಸಾಪ್ ಜಮಾನ. ಮೊಬೈಲ್ ನಂಬರ್, ಫೇಸ್‌ಬುಕ್‌ಗಳಲ್ಲಾದರೂ ಗುರುಗಳೊಂದಿಗೆ ಅಪರೂಪವಾಗಿಯಾದರೂ ಮಾತನಾಡಿಸಬಹುದಲ್ಲವೆ? ನಾವು ಎಷ್ಟೇ ಎತ್ತರದ ಸ್ಥಾನಕ್ಕೆ ಏರಿದರೂ ಗುರುಗಳೆದುರು ಶಿಷ್ಯರಾಗಿಯೇ ವರ್ತಿಸಬೇಕು. ನಾವೇರುವ ಎತ್ತರಕ್ಕೆ ಅವರೇ ಕಾರಣಕರ್ತರು. ಅವರ ಸೇವೆ ಮಾಡುವ ಅವಕಾಶ ಸಿಕ್ಕರೆ ನಾವು ಮತ್ತೂ ಪುಣ್ಯವಂತರು. ಒಂದು ವಿಚಾರವನ್ನು ನಾವು ಇನ್ನೊಬ್ಬರಿಂದ ಕಲಿತೆವು ಎಂದರೆ ಅವರೂ ನಮ್ಮ ಗುರುಗಳೇ. ಗುರುವಾಗಿ ಸ್ವೀಕರಿಸಲು ವಯಸ್ಸಿನ ಬೇಲಿಯಿಲ್ಲ. ಅರಿವು, ಮಾರ್ಗದರ್ಶನ ನೀಡುವವರೂ ಗುರುಗಳು. ತಾನು, ತನ್ನದು ಎಂಬ ಅಹಂಕಾರವೊಂದನ್ನು ಮರೆತರೆ ಎಲ್ಲರೂ ನಮ್ಮವರಾಗುವರು. ನಮ್ಮ ಜೀವನ ದೀಪ ಬೆಳಗಲು ಸಹಕರಿಸಿದ ಆ ಟೀಚರ್, ಮ್ಯಾಮ…, ಸರ್, ಮಿಸ್ ಅಥವಾ ಆ ಗುರುಗಳೆಲ್ಲರ ನೆನಪು ಇದ್ದೇ ಇದೆ. ಅವರಿಗೆ ಗೌರವ ಮತ್ತು ಮುಗುಳುನಗೆಯಂತೂ ಸದಾ ನನ್ನಿಂದ ಇದ್ದೇ ಇರುತ್ತದೆ.
ಎಚ್. ಶ್ರಾವ್ಯಾ ಹಿರಿಯಡಕ
ಪ್ರಥಮ ಎಂ.ಎಸ್ಸಿ ,
ಎಂ.ಜಿ.ಎಂ ಕಾಲೇಜು, ಉಡುಪಿ