Advertisement

ಎಟಿಎಂ ವ್ಯವಹಾರಕ್ಕೂ ಇನ್ನು ಒಟಿಪಿ ವ್ಯವಸ್ಥೆ

09:53 AM Aug 18, 2019 | Suhan S |

ಹುಬ್ಬಳ್ಳಿ: ಎಟಿಎಂ ಕೇಂದ್ರಗಳಲ್ಲಿನ ವ್ಯವಹಾರಗಳಿಗೆ ಮತ್ತಷ್ಟು ಸುರಕ್ಷತೆ ಒದಗಿಸಲು ಕೆನರಾ ಬ್ಯಾಂಕ್‌ ಮುಂದಾಗಿದ್ದು, ಇನ್ಮುಂದೆ ಎಟಿಎಂನಿಂದ ಹಣ ಪಡೆಯಲು ಒಟಿಪಿ ಸಂಖ್ಯೆ ಕಡ್ಡಾಯವಾಗಿದೆ.

Advertisement

ಎಟಿಎಂ ಕೇಂದ್ರಗಳಲ್ಲಿನ ವ್ಯವಹಾರಗಳಿಗೆ ಸೂಕ್ತ ರಕ್ಷಣೆ ಇಲ್ಲ ಎನ್ನುವ ಭಾವನೆ ಗ್ರಾಹಕರಲ್ಲಿ ಮೂಡಿತ್ತು. ಇದಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆದರೂ ವಂಚಕರು ತಮ್ಮದೇ ಕರಾಮತ್ತು ತೋರಿಸಿ ಎಟಿಎಂ ಕಾರ್ಡ್‌ನ ಸಮಗ್ರ ಮಾಹಿತಿಯನ್ನೇ ದೋಚುತ್ತಿದ್ದ ಪ್ರಕರಣಗಳು ನಡೆಯುತ್ತಿದ್ದವು. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೆನರಾ ಬ್ಯಾಂಕ್‌ ಮೊದಲ ಬಾರಿಗೆ ಎಟಿಎಂ ವ್ಯವಹಾರಕ್ಕೂ ಒಟಿಪಿ ವ್ಯವಸ್ಥೆ ಜಾರಿಗೆ ತಂದಿದ್ದು, ಆ. 17ರಿಂದ ಎಟಿಎಂ ವ್ಯವಹಾರ ಮತ್ತಷ್ಟು ವಿಶ್ವಾಸ ಗಳಿಸಲಿದೆ.

ಐದು ಸಾವಿರಕ್ಕಷ್ಟೇ ಒಟಿಪಿ: ಕೆನರಾ ಬ್ಯಾಂಕ್‌ ಗ್ರಾಹಕರು ಕೆನರಾ ಬ್ಯಾಂಕ್‌ ಎಟಿಎಂಗಳಲ್ಲಿ ಹಣ ಡ್ರಾ ಮಾಡಿದರೆ ಮಾತ್ರ ಈ ಒಟಿಪಿ ಅನ್ವಯಿಸಲಿದೆ. ಅಲ್ಲದೆ ಐದು ಸಾವಿರ ರೂ. ಮೇಲಿನ ವ್ಯವಹಾರಕ್ಕೆ ನಿಗದಿ ಮಾಡಲಾಗಿದೆ. ದಿನದಲ್ಲಿ ಎರಡು ಅಥವಾ ಮೂರು ವ್ಯವಹಾರಗಳಿಂದ ಐದು ಸಾವಿರ ಮೀರಿದರೂ ಒಟಿಪಿ ಕಡ್ಡಾಯವಾಗಲಿದೆ. ಒಂದು ದಿನದಲ್ಲಿ ಐದು ಸಾವಿರಕ್ಕಿಂತ ಕಡಿಮೆಯಿರುವ ವ್ಯವಹಾರಕ್ಕೆ ಇದು ಅನ್ವಯಿಸುವುದಿಲ್ಲ. ಬೇರೆ ಬ್ಯಾಂಕ್‌ ಗ್ರಾಹಕರ ಕೆನರಾ ಬ್ಯಾಂಕ್‌ ಎಟಿಎಂಗಳಲ್ಲಿನ ವ್ಯವಹಾರಕ್ಕೂ ಇದು ಅನ್ವಯಿಸುವುದಿಲ್ಲ.

ಕಾರ್ಯ ಹೇಗೆ: ಈಗಿನ ಎಟಿಂಎ ವ್ಯವಹಾರ ಹಂತಗಳೇ ಇರಲಿದ್ದು, ಹೆಚ್ಚುವರಿಯಾಗಿ ಒಟಿಪಿ ಆಯ್ಕೆ ಇರುತ್ತದೆ. ಎಟಿಎಂ ಕಾರ್ಡ್‌ ಪಿನ್‌ ಸಂಖ್ಯೆ ಒತ್ತಿದ ನಂತರ ಐದು ಸಾವಿರ ಮೇಲಿನ ಹಣ ಆಯ್ಕೆ ಮಾಡಿದ ನಂತರ ಗ್ರಾಹಕರ ಖಾತೆಗೆ ನೀಡಿದ ಮೊಬೈಲ್ ಒಟಿಪಿ ಬರಲಿದೆ. ಅದನ್ನು ಎಟಿಎಂ ಯಂತ್ರದ ಮೇಲೆ ನಮೂದಿಸಬೇಕು. ಇದಕ್ಕೆ 30 ಸೆಕೆಂಡ್‌ ಸಮಯ ನೀಡಿದ್ದು, ತಪ್ಪಿದರೆ ವ್ಯವಹಾರ ಅರ್ಧಕ್ಕೆ ಕಡಿತಗೊಳ್ಳಲಿದೆ.

ಮೊಬೈಲ್ ಕಡ್ಡಾಯ: ಕೆನರಾ ಬ್ಯಾಂಕ್‌ ಗ್ರಾಹಕರು ಆರ್‌ಎಂಎನ್‌ ಸಂಖ್ಯೆಯ ಮೊಬೈಲ್ನ್ನು ಜತೆಗೆ ತೆಗೆದುಕೊಂಡು ಹೋಗಲೇಬೇಕು. ಇಲ್ಲದಿದ್ದರೆ ಆ ದಿನ ಐದು ಸಾವಿರಕ್ಕಿಂತ ಕಡಿಮೆ ವ್ಯವಹಾರ ಮಾಡಬೇಕಾಗುತ್ತದೆ. ಡೆಬಿಟ್ ಕಾರ್ಡ್‌ ನೀಡಲು ಮೊಬೈಲ್ ಸಂಖ್ಯೆ ಕಡ್ಡಾಯವಾಗಿರುತ್ತದೆ. ಒಂದು ವೇಳೆ ಖಾತೆಗೆ ನೀಡಿದ ಮೊಬೈಲ್ ಸಂಖ್ಯೆ ಬಳಕೆ ಮಾಡದೆ ಇನ್ನೊಬ್ಬರಿಗೆ ಹೋಗಿದ್ದರೆ ಬ್ಯಾಂಕ್‌ಗೆ ತೆರಳಿ ಹೊಸ ಸಂಖ್ಯೆ ನೀಡಲೇಬೇಕು. ಇಲ್ಲದಿದ್ದರೆ ಎಟಿಎಂ ವ್ಯವಹಾರ ಅಸಾಧ್ಯವಾಗಲಿದೆ.

Advertisement

ಹಣ ತೆಗೆಯುತ್ತಿದ್ದಾಗಲೇ ಒಟಿಪಿ ಕೇಳತೊಡಗಿತು. ಈ ಕುರಿತು ಬ್ಯಾಂಕ್‌ ಅಧಿಕಾರಿಗಳ ಬಳಿ ವಿಚಾರಿಸಿದಾಗ ಹೊಸ ವ್ಯವಸ್ಥೆ ಅಳವಡಿಸಿರುವುದು ಗೊತ್ತಾಯಿತು. ಮನೆಗೆ ಹೋಗಿ ಮೊಬೈಲ್ ತಂದು ಹಣ ಡ್ರಾ ಮಾಡಿಕೊಂಡಿದ್ದೇನೆ. ಆರಂಭದಲ್ಲಿ ಒಂದಿಷ್ಟು ಕಷ್ಟ ಅನಿಸುತ್ತೆ. ಆದರೆ ಸುರಕ್ಷತಾ ದೃಷ್ಟಿಯಿಂದ ಒಳ್ಳೆಯ ಕಾರ್ಯ. ಈ ವ್ಯವಸ್ಥೆಯನ್ನು ಎಲ್ಲ ಬ್ಯಾಂಕ್‌ಗಳು ಜಾರಿಗೆ ತಂದರೆ ಇನ್ನೂ ಸೂಕ್ತ.•ಅಕ್ಷಯ ಕಿಣಿ, ಬ್ಯಾಂಕ್‌ ಗ್ರಾಹಕ

ಎಟಿಎಂ ಕಾರ್ಡ್‌ ದುರ್ಬಳಕೆಯಾಗುತ್ತಿರುವ ದೂರುಗಳು ಬಂದಿದ್ದವು. ಕೆಲ ದೂರುಗಳನ್ನು ಆಧರಿಸಿ ಸಿಸಿ ಕ್ಯಾಮೆರಾ ವಿಡಿಯೋ ನೋಡಿದಾಗ ಗುರುತು ಸಿಗದ ಹಿನ್ನೆಲೆಯಲ್ಲಿ ಅದೆಷ್ಟೋ ಪ್ರಕರಣಗಳು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಒಟಿಪಿ ಸುರಕ್ಷಾ ವ್ಯವಸ್ಥೆಯಿಂದ ಆದಷ್ಟು ದುರ್ಬಳಕೆ ಹಾಗೂ ವಂಚನೆಗಳನ್ನು ತಡೆಗಟ್ಟಬಹುದಾಗಿದೆ. ಈ ಬಗ್ಗೆ ಗ್ರಾಹಕರು ಯಾವುದೇ ಮಾಹಿತಿಯನ್ನು ಅನ್ಯರೊಂದಿಗೆ ಹಂಚಿಕೊಳ್ಳಬಾರದು.•ಮನೋಜ ರೇವಣಕರ, ಹಿರಿಯ ಪ್ರಬಂಧಕ, ಕೆನರಾ ಬ್ಯಾಂಕ್‌

 

•ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next