ಶ್ರೀವಿಜಯ ಪ್ರಧಾನ ವೇದಿಕೆ: ಮಹಿಳೆಯರಿಂದ ಈಗ ಆಗಬೇಕಿರುವುದು ದೇಗುಲ ಪ್ರವೇಶ ಅಲ್ಲ; ಕಾನೂನು ರೂಪಿಸಿರುವ ಸಂಸತ್ ದೇಗುಲದ ಪ್ರವೇಶ ಎಂದು ಲೇಖಕಿ ಪ್ರೊ. ಶಿವಗಂಗಾ ರುಮ್ಮಾ ಅಭಿಪ್ರಾಯಪಟ್ಟರು. “ಸ್ತ್ರೀಲೋಕ ತಲ್ಲಣಗಳು’ ಕುರಿತ ಗೋಷ್ಠಿಯಲ್ಲಿ “ಮಹಿಳೆ ಮತ್ತು ಲೋಕ ಗ್ರಹಿಕೆ’ ವಿಷಯದ ಮೇಲೆ ಬೆಳಕು ಚೆಲ್ಲಿದ ಅವರು, ಇವತ್ತು ಶಬರಿಮಲೈ ಪ್ರವೇಶ ಸೇರಿ ಹಲವು ದೇಗುಲಗಳ ಪ್ರವೇಶಕ್ಕೆ ಕೆಲವು ಮಹಿಳೆಯರಿಂದ ಹೋರಾಟ ನಡೆಯುತ್ತಿದೆ.
ಆದರೆ, ಅದಕ್ಕಿಂತ ಮುಖ್ಯವಾಗಿ ಮಹಿಳೆಯರು ನಾಯಕತ್ವ ರೂಢಿಸಿ ಕೊಂಡು, ಬೆಳೆಯಬೇಕಿದೆ. ಆಳುವವರ ಸಾಲಿನಲ್ಲಿ ನಿಲ್ಲಬೇಕಿದೆ. ಹೆಣ್ಣು ಮಕ್ಕಳು ಹುಟ್ಟಿದರೆ ಅದೃಷ್ಟ ಎನ್ನುವ ಕಾಲ, ಈಗ ಬದಲಾಗಿದೆ. ಗಂಡು ಸಂತಾನವೇ ಪುಣ್ಯ ಎನ್ನುವ ಭಾವ ಎಲ್ಲೆಡೆ ಮೂಡಿದೆ. ಹೆಣ್ತನದ ಬಗ್ಗೆ ಇಂಥ ಗ್ರಹಿಕೆಗಳು ಬದಲಾಯಿಸದೆ ಹೋದರೆ, ಮಹಿಳಾ ಅಸ್ತಿತ್ವಕ್ಕೆ ಉಳಿಗಾಲವಿಲ್ಲ. ಲೋಕದ ಗ್ರಹಿಕೆಯನ್ನು ಬದಲಿಸುವ ಕೆಲಸ ಆಗಬೇಕಿದೆ ಎಂದು ಕರೆಕೊಟ್ಟರು.
ಈ ಹಿಂದೆ ಕೂಡಿ ಬಾಳುವುದು ಹೈದ್ರಾಬಾದ್ ಕರ್ನಾ ಟಕ ಜನರ ಜೀವನದ ಭಾಗವಾಗಿತ್ತು. ಆದರೆ, ಪ್ರಭುತ್ವಶಾಹಿ ವ್ಯವಸ್ಥೆ ಇದಕ್ಕೆ ಅವಕಾಶ ನೀಡುತ್ತಿಲ್ಲ. ಅಭಿವ್ಯಕ್ತಿ ಸ್ವಾತಂತ್ರಕ್ಕೆ ಪೆಟ್ಟು ನೀಡುವ ಕೆಲಸ ಆಗುತ್ತಿದೆ. ಜತೆಗೆ ಸಮನ್ವಯತೆ ಬಾಳ್ವೆಗೆ ಕೊಡಲಿ ಪೆಟ್ಟು ನೀಡುತ್ತಿದೆ. ಅತ್ಯಾಚಾರಿಗಳ ಮೇಲಿನ ಕೇಸ್ ವಾಪಸ್ ಪಡೆಯಲಾಗುತ್ತಿದೆ. ಇದು ವಿಷಾದದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಬೇಟಿಯ ಬೇಟೆ ನಿಲ್ಲಬೇಕು: “ಮಹಿಳೆ ಮತ್ತು ಪ್ರಭುತ್ವ’ದ ಬಗ್ಗೆ ಮಾತನಾಡಿದ ಹಿರಿಯ ಪತ್ರಕರ್ತೆ ಆರ್. ಪೂರ್ಣಿಮಾ, ಹೆಣ್ಣಿಗೆ ಮೊದಲು ಹುಟ್ಟುವ ಹಕ್ಕು ಇತ್ತು. ಆದರೆ, ವಿಜ್ಞಾನ ತಂತ್ರಗಳ ಆವಿಷ್ಕಾರ ದಿಂದ ಅವಳ ಹುಟ್ಟನ್ನೇ ಹೊಟ್ಟೆಯಲ್ಲಿ ಹತ್ತಿಕ್ಕಲಾಗುತ್ತಿದೆ ಎಂದು ಭ್ರೂಣಹತ್ಯೆ ಅಪರಾಧದ ಕುರಿತು ಬೇಸರ ಸೂಚಿಸಿದರು. ಮಹಿಳೆಗೆ ಶೌಚಾಲಯ ನೀಡಿ ದರಷ್ಟೇ ಸಾಲದು. ಅದರ ಜತೆಗೆ ಶೌಚಾಲಯಗಳನ್ನು ನಿರ್ಮಿಸುವ ಹಕ್ಕನ್ನು ನೀಡಬೇಕು.
ವಿನಾಯ್ತಿ, ರಿಯಾಯ್ತಿಗಳು ಮಹಿಳೆಗೆ ಬೇಕಿಲ್ಲ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮಾನತೆ ಜತೆಗೆ ರಾಜಕೀಯ ಸಮಾನತೆ ಕೂಡ ನೀಡಬೇಕು ಎಂದು ಹೇಳಿದರು. ಬ್ರಿಟಿಷರನ್ನು ಭಾರತದಿಂದ ತೊಲಗಿಸುವಲ್ಲಿ ಹಲವು ಮಹಿಳೆಯರು ದಿಟ್ಟವಾಗಿ ಹೋರಾಡಿದ್ದಾರೆ. ರಾಜ- ಮಹಾರಾಜ ರೀತಿಯಲ್ಲಿ ಯುದ್ಧಾಂಗಣದಲ್ಲಿ ಕತ್ತಿ ಬೀಸಿದ್ದಾರೆ. ಆದರೆ, ಚರಿತ್ರೆಯಲ್ಲಿ ಪುರುಷನ ಶೌರ್ಯವನ್ನು ಮಾತ್ರ ವರ್ಣಿಸಲಾಗಿದೆ ಎಂದು ವಿಷಾದಿಸಿದರು.
ಗುರಿ ಮರೆತಿವೆ…: ಲೇಖಕಿ ತಾರಿಣಿ ಶುಭದಾಯಿನಿ ಮಾತನಾಡಿ, ಪ್ರಭುತ್ವ ವ್ಯವಸ್ಥೆ ಮಹಿಳೆಯ ಚೆಂದವನ್ನು ಮಾರಾಟದ ಸರಕಾಗಿ ಬಳಸಲಾಗುತ್ತಿದೆ. ಮಹಿಳೆಯ ಸಬಲೀಕರಣ ಮಾಡಬೇಕಾಗಿದ್ದ ಸ್ತ್ರೀ ಶಕ್ತಿ ಸಂಘ ಗಳಲ್ಲೂ ರಾಜಕೀಯ ಪ್ರಭುತ್ವ ನುಸುಳಿದೆ ಎಂದು ದೂರಿದರು.
* ದೇವೇಶ ಸೂರಗುಪ್ಪ