ಬೆಂಗಳೂರು: ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಈಗಿನಿಂದಲೇ ಸಿದ್ಧತೆ ಆರಂಭಿಸಿದೆಯಾದರೂ ಸಂಸದರಿಗೆ ಟಿಕೆಟ್ ಇಲ್ಲವೆಂಬ ಪಕ್ಷದ ರಾಷ್ಟ್ರೀಯ ನಾಯಕರ ನಿರ್ಧಾರ ವಿಧಾನಸಭೆ ಪ್ರವೇಶಿಸಿ ಮಂತ್ರಿಯಾಗಲು ಬಯಸಿದ್ದ ಕೆಲವು ಸಂಸದರಿಗೆ ನಿರಾಶೆ ಉಂಟುಮಾಡಿದೆ.
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಒಟ್ಟಿಗೆ ನಡೆಸುವ ಮೂಲಕ ದೇಶದಲ್ಲಿ ಚುನಾವಣಾ ವೆಚ್ಚ ಕಡಿಮೆ ಮಾಡಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಕ್ಕೆ ದನಿಗೂಡಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಉಪ ಚುನಾವಣೆಗಳನ್ನು ತಡೆಯುವ ಉದ್ದೇಶದಿಂದ ಸಂಸದರಿಗೆ ವಿಧಾನಸಭೆ ಚುನಾವಣೆಯಲ್ಲಿ ಅವಕಾಶ ನೀಡದೇ ಇರಲು ತೀರ್ಮಾನಿಸಿದ್ದಾರೆಂದು ಹೇಳಲಾಗುತ್ತಿದೆ.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆಂಬ ನಿರೀಕ್ಷೆಯೊಂದಿಗೆ ಹಲವು ಸಂಸದರು ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿದು ಗೆದ್ದುಬಂದು ಮಂತ್ರಿಯಾಗುವ ಆಸೆ ಹೊಂದಿದ್ದರು. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಶೋಭಾ ಕರಂದ್ಲಾಜೆ, ಬಳ್ಳಾರಿಯ ಶ್ರೀರಾಮುಲು, ಉತ್ತರ ಕನ್ನಡದ ಅನಂತಕುಮಾರ್ ಹೆಗಡೆ, ಬೆಳಗಾವಿಯ ಸುರೇಶ್ ಅಂಗಡಿ, ಚಿಕ್ಕೋಡಿಯ ರಮೇಶ್ ಜಿಗಜಿಣಗಿ, ಬಾಗಲಕೋಟೆಯ ಪಿ.ಸಿ.ಗದ್ದಿಗೌಡರ್, ಬೆಂಗಳೂರು ಕೇಂದ್ರದ ಪಿ.ಸಿ.ಮೋಹನ್ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಸಂಸದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಬಿ.ಎಸ್.ಯಡಿಯೂರಪ್ಪ ಅವರನ್ನು ಈಗಾಗಲೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರುವುದರಿಂದ ಅವರಿಗೆ ಮಾತ್ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ರಾಷ್ಟ್ರೀಯ ನಾಯಕರು ಅನುಮತಿ ನೀಡಿದ್ದಾರೆ. ಇನ್ನುಳಿದಂತೆ ಯಾರೂ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದು ಬೇಡವೆಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಕೊನೇ ಕ್ಷಣದಲ್ಲಿ ಬದಲಾವಣೆ: ಆದರೆ, ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಆಗಿನ ಪರಿಸ್ಥಿತಿ ನೋಡಿಕೊಂಡು ರಾಷ್ಟ್ರೀಯ ನಾಯಕರು ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಬಹುದು. ಯಡಿಯೂರಪ್ಪ ಅವರನ್ನು ಈಗಾಗಲೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರುವುದರಿಂದ ಅವರು ಯಾರನ್ನಾದರೂ ಬೇಕೇ ಬೇಕು ಎಂದು ಹೇಳಿದರೆ ಅದಕ್ಕೆ ಒಪ್ಪಬಹುದು ಎಂದು ಹೇಳಲಾಗುತ್ತಿದೆ.
ಆ ರೀತಿ ಆದರೆ, ಬಳ್ಳಾರಿ ಸೇರಿ ಸುತ್ತಲಿನ ಜಿಲ್ಲೆಗಳಲ್ಲಿ ಪ್ರಭಾವ ಹೊಂದಿರುವ ಮತ್ತು ರಾಜ್ಯಾದ್ಯಂತ ನಾಯಕ ಸಮುದಾಯದ ಮುಖಂಡ ಎಂದು ಪರಿಗಣಿಸಿರುವ ಬಳ್ಳಾರಿ ಸಂಸದ ಶ್ರೀರಾಮುಲು ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ವಿಧಾನಸಭೆ ಪ್ರವೇಶಿಸಲು ಅವಕಾಶ ಮಾಡಿಕೊಡಬಹುದೆಂದು ಬಿಜೆಪಿ ಮೂಲಗಳು ಹೇಳುತ್ತವೆ.