ಬೆಂಗಳೂರು: ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾನ ತುಂಬಾ ಪ್ರಮುಖ. ಆದ್ದರಿಂದ ಯಾವುದೇ ಆಮಿಷಗಳಿಗೆ ಒಳಗಾಗದೇ ಸೂಕ್ತ ಅಭ್ಯರ್ಥಿಗಳಿಗೆ ಮತ ಚಲಾಯಿಸಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾ| ಸಂತೋಷ್ ಹೆಗ್ಡೆ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಮತವು ಅಮೂಲ್ಯವಾದದ್ದು. ಧರ್ಮ, ಸಮುದಾಯದವರನ್ನು ನೋಡಿಕೊಂಡು ಮತ ಚಲಾಯಿಸುವುದು ಸಮಾಜಕ್ಕೆ ಒಳಿತಲ್ಲ. ಆದ್ದರಿಂದ ಜನರಲ್ಲಿ ಜಾಗೃತಿ ಮೂಡಿಸಲು ಸಲುವಾಗಿ, “ನಮ್ಮ ಮತವನ್ನು ನಾವು ಮಾರಿಕೊಳ್ಳುವುದು ಬೇಡ’ ಎಂಬ ಮತದಾರರ ಸ್ವಾಭಿಮಾನದ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಯಾರಿಗೆ, ಯಾಕೆ ಮತ ಚಲಾಯಿಸಬೇಕು ಎಂಬ ಅರಿವನ್ನು ಮತದಾರರಲ್ಲಿ ಮೂಡಿಸುವುದು, ಮತದಾನದಲ್ಲಿ ಪ್ರಜೆಗಳ ಜವಾಬ್ದಾರಿ ಎಷ್ಟು ಮುಖ್ಯ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಾರಣವೇನು, ಅದನ್ನು ತಡೆಗಟ್ಟುವುದು ಹೇಗೆ ಎಂಬುದನ್ನು ತಿಳಿಸುವುದೇ ಈ ಅಭಿಯಾನದ ಮುಖ್ಯ ಉದ್ದೇಶ ಎಂದರು.
ಇದನ್ನೂ ಓದಿ:ಸಿ.ಎಂ. ಇಬ್ರಾಹಿಂ ಭೇಟಿಯಾದ ಹೆಚ್ ಡಿಕೆ: ಮಹತ್ವದ ಚರ್ಚೆ
ಅಂದು ಜನರಿಂದ-ಜನರಿಗಾಗಿ-ಜನರಿಗೋಸ್ಕರ ಸರಕಾರ ಎಂಬ ಮಾತು ಪ್ರಸ್ತುತ ದಿನಗಳಲ್ಲಿ ಕೆಲವರಿಂದ-ಕೆಲವರಿಗಾಗಿ-ಕೆಲವರಿಗೋಸ್ಕರ ಸರಕಾರ ಎಂಬಂತಾಗಿದೆ. ಜತೆಗೆ ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಬಹುತೇಕ ಬದಲಾವಣೆಗಳು ಆಗಬೇಕಿವೆ ಎಂದರು. ಅಭಿಯಾನದ ಸಂಚಾಲಕ ಕೆ.ಎಂ. ಜಯರಾಮಯ್ಯ ಉಪಸ್ಥಿತರಿದ್ದರು.