Advertisement

ಒಟಿಸಿ ಸಮೀಕ್ಷೆ ಗ್ರಾಮೀಣದಲ್ಲಿ ಪೂರ್ಣ

12:03 PM Dec 14, 2019 | Suhan S |

ಧಾರವಾಡ: ಸಾರ್ವಜನಿಕರು ತಮಗೆ ಅಗತ್ಯವಿರುವ ಜಾತಿ, ಆದಾಯ ಮತ್ತು ರಹವಾಸಿ ಪ್ರಮಾಣಪತ್ರವನ್ನು ತಕ್ಷಣ ಪಡೆಯಲು ಅನುಕೂಲವಾಗುವಂತೆ ಸಾರ್ವಜನಿಕರಿಂದ ದಾಖಲೆ ಸಂಗ್ರಹಿಸಿ ಒಟಿಸಿ (ಓವರ್‌ ದಿ ಕೌಂಟರ್‌) ಸಮೀಕ್ಷೆ ಮಾಡಲಾಗುತ್ತಿದೆ.

Advertisement

ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ನೀಡಿ ಒಟಿಸಿ ಎಂಟ್ರಿ ಮಾಡಿಸಿ ಯೋಜನೆ ಯಶಸ್ವಿಗೊಳಿಸಬೇಕು ಎಂದು ಡಿಸಿ ದೀಪಾ ಚೋಳನ್‌ ಹೇಳಿದರು. ಡಿಸಿ ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್‌, ಗ್ರಾಮ ಲೆಕ್ಕಾಧಿಕಾರಿಗಳ ಸಭೆ ಕೈಗೊಂಡು ಮಾತನಾಡಿದ ಅವರು, ನಾಗರಿಕರು ಒಟಿಸಿ ಮಾಡಿಸುವುದರಿಂದ ಅನವಶ್ಯಕವಾಗಿ ಸಮಯ ಮತ್ತು ಹಣ ವೆಚ್ಚವಾಗುವುದನ್ನು ತಪ್ಪಿಸಬಹುದು. ಯಾವುದೇ ರೀತಿಯಿಂದ ಮದ್ಯಸ್ಥಗಾರರು, ಏಜೆಂಟರ ಹಾವಳಿ ಇರುವುದಿಲ್ಲ. ಈಗಿರುವ ವ್ಯವಸ್ಥೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯಲು 21 ದಿನ ಕಾಯಬೇಕು. ಆದರೆ ಪ್ರತಿ ಕುಟುಂಬದ ಸದಸ್ಯರು ಒಟಿಸಿ ಎಂಟ್ರಿ ಮಾಡಿಸುವುದರಿಂದ ತಮಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ಅಥವಾ ರಹವಾಸಿ ಪ್ರಮಾಣಪತ್ರ ಅಗತ್ಯವಿದ್ದಾಗ ತಮ್ಮ ಆಧಾರ ಸಂಖ್ಯೆಅಥವಾ ಪಡಿತರ ಚೀಟಿ ಸಂಖ್ಯೆ ನಮೂದಿಸಿ, ಅರ್ಜಿ ಸಲ್ಲಿಸಿದರೆ ಕ್ಷಣ ಮಾತ್ರದಲ್ಲಿ ಪ್ರಮಾಣಪತ್ರ ದೊರೆಯುತ್ತದೆ ಎಂದು ತಿಳಿಸಿದರು.

ನಗರ ಪ್ರದೇಶಗಳಲ್ಲಿ ಕರ ವಸೂಲಿಗಾರರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಮನೆಮನೆಗೆ ತೆರಳಿ ಒಟಿಸಿ ಸಮೀಕ್ಷೆಗಾಗಿ ಕುಟುಂಬದವರ ಆಧಾರ ಕಾರ್ಡ್‌, ರೇಷನ್‌ ಕಾರ್ಡ್‌, ಜಾತಿ ಮತ್ತು ಆದಾಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಸಾರ್ವಜನಿಕರು ಒಟಿಸಿ ಸಮೀಕ್ಷೆಗೆ ಅಗತ್ಯವಿರುವ ದಾಖಲೆಗಳನ್ನು ಸಮೀಕ್ಷೆದಾರರು (ಬಿಲ್‌ ಕಲೆಕ್ಟರ್‌ ಮತ್ತು ಗ್ರಾಮಲೆಕ್ಕಾಧಿಕಾರಿ) ತಮ್ಮ ಮನೆಗೆ ಭೇಟಿ ನೀಡಿದಾಗ ತಕ್ಷಣ ಸಲ್ಲಿಸಬೇಕು.

ಧಾರವಾಡ ಹಾಗೂ ಹುಬ್ಬಳ್ಳಿ ತಹಶೀಲ್ದಾರ್‌ ಕಚೇರಿಯಲ್ಲಿ ಪ್ರತ್ಯೇಕವಾಗಿ ಒಟಿಸಿ ಕೌಂಟರ್‌ಗಳನ್ನು ತೆರೆಯಲಾಗಿದ್ದು, ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಬಂದು ಅಲ್ಲಿಯೂ ಸಹ ಮಾಹಿತಿ ಸಲ್ಲಿಸಿ, ಒಟಿಸಿ ಎಂಟ್ರಿ ಮಾಡಿಸಬಹುದು ಎಂದರು. ಒಟಿಸಿ ಸಮೀಕ್ಷೆ ಮಾಡುವಾಗ ಕುಟುಂಬ ಸದಸ್ಯರು ನೀಡುವ ದಾಖಲೆಗಳೊಂದಿಗೆ ಅವರ ಮಾಹಿತಿಯನ್ನು ದಾಖಲಿಸಿ, ಪರಿಶೀಲನೆ ಅಗತ್ಯವಿದ್ದಲ್ಲಿ ಆ ಕುರಿತು ಸಮೀಕ್ಷೆದಾರರು ಷರಾ ಬರೆಯಬೇಕು. ಒಟಿಸಿ ಸಮೀಕ್ಷೆ ಪೂರ್ಣಗೊಂಡ ನಂತರ ಸಾರ್ವಜನಿಕರು ತಮಗೆ ಅಗತ್ಯವಿರುವ ಜಾತಿ, ಆದಾಯ ಮತ್ತು ರಹವಾಸಿ ಪ್ರಮಾಣಪತ್ರಗಳನ್ನು ಕ್ಷಣ ಮಾತ್ರದಲ್ಲಿ ಪಡೆಯಬಹುದಾಗಿದ್ದು, ಈ ಕ್ಷಣ ಯೋಜನೆಯನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಒಟಿಸಿ ಸಮೀಕ್ಷೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಿರು ಪ್ರಕಟಣೆ, ರೇಡಿಯೊ ಸಂದೇಶ ಮತ್ತು ಪಾಲಿಕೆಯಿಂದ ತ್ಯಾಜ್ಯ ಸಂಗ್ರಹಿಸುವ ವಾಹನಗಳಲ್ಲಿನ ಧ್ವನಿವರ್ಧಕಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ. ಹುಬ್ಬಳ್ಳಿ ಮತ್ತು ಧಾರವಾಡ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಒಟಿಸಿಗೆ ಅಗತ್ಯವಿರುವ ದಾಖಲಾತಿಗಳು ಮತ್ತು ಒಟಿಸಿ ಪ್ರಯೋಜನ ಕುರಿತು ಮಾಹಿತಿ ಫಲಕಗಳನ್ನು ಅಳವಡಿಸಲಾಗುತ್ತಿದೆ ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಧಾರವಾಡ ತಹಶೀಲ್ದಾರ್‌ ಸಂತೋಷಕುಮಾರ ಬಿರಾದಾರ, ಮಹಾನಗರ ಪಾಲಿಕೆ ಜಂಟಿ ಆಯುಕ್ತ ಅಜೀಜ ದೇಸಾಯಿ, ಅಟಲಜೀ ಜನಸ್ನೇಹಿ ಕೇಂದ್ರದ ಜಿಲ್ಲಾ ಸಮಾಲೋಚಕ ವಿಕಾಸ ಪೂಜಾರ, ಉಪತಹಶೀಲ್ದಾರ್‌ ಪ್ರದೀಪ ಪಾಟೀಲ, ಕಂದಾಯ ನಿರೀಕ್ಷಕ ಪಿ.ಎಂ. ಹಿರೇಮಠ, ಆಹಾರ ನಿರೀಕ್ಷಕ ಎಂ.ಎಸ್‌. ಬಿರಾದಾರ ಸೇರಿದಂತೆ ಮಹಾನಗರ ಪಾಲಿಕೆಯ ಅಧಿಕಾರಿಗಳು, ಹು-ಧಾ ತಹಶಿಲ್ದಾರ್‌ ಕಚೇರಿ ಸಿಬ್ಬಂದಿ, ಗ್ರಾಮಲೆಕ್ಕಾಧಿಕಾರಿಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next