Advertisement

Osteoporosis: ನೀವು ಭಾವಿಸಿದ್ದಕ್ಕಿಂತಲೂ ಹೆಚ್ಚು ವ್ಯಾಪಕವಾದುದು!

03:14 PM Dec 03, 2023 | Team Udayavani |

ನಮಗೆ ವಯಸ್ಸಾಗುತ್ತಿದ್ದಂತೆ ಎಲುಬುಗಳು ದುರ್ಬಲವಾಗುತ್ತ ಬರುತ್ತವೆ – ಇದನ್ನು ಆಸ್ಟಿಯೊಪೊರೋಸಿಸ್‌ ಎನ್ನುತ್ತಾರೆ. ಅನೇಕರು ಇದನ್ನು ಸಂಧಿಗಳು ನಶಿಸುವ ಅಥವಾ ಹಾನಿಗೀಡಾಗುವ “ಆರ್ಥೈಟಿಸ್‌’ ಎಂದು ತಪ್ಪಾಗಿ ಭಾವಿಸುತ್ತಾರೆ. ಹಾಗೆಯೇ ವಯಸ್ಸಾಗುತ್ತಿದ್ದಂತೆ ಬೆನ್ನುಮೂಳೆ ಮಾತ್ರ ದುರ್ಬಲವಾಗುತ್ತದೆ ಮತ್ತು ಬಾಗುತ್ತದೆ ಎಂಬ ತಪ್ಪು ಕಲ್ಪನೆಯೂ ಇದೆ. ಮೇಲೆ ಹೇಳಲಾದ ತಪ್ಪು ಮಾಹಿತಿಗಳನ್ನು ಸರಿಪಡಿಸುವುದಷ್ಟೇ ಅಲ್ಲದೆ, ಆಸ್ಟಿಯೊಪೊರೋಸಿಸ್‌ (ನಿಶ್ಶಬ್ದ ಕಳ್ಳ) ಬೀರುವ ವಿಶಾಲ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು ಕೂಡ ಈ ಲೇಖನದ ಉದ್ದೇಶವಾಗಿದೆ.

Advertisement

ಯುವಜನರೂ ಆಸ್ಟಿಯೊಪೊರೋಸಿಸ್‌ಗೆ ತುತ್ತಾಗಬಹುದು ಎಂಬುದು ನಿಮಗೆ ಗೊತ್ತೇ?

ಬದುಕಿನ ಬೆಳವಣಿಗೆಯ ವರ್ಷಗಳಲ್ಲಿ ಮೂಳೆಗಳು ಸಾಂದ್ರಗೊಳ್ಳುವುದು ಸಹಜ. ಮೂಳೆ ಸಾಂದ್ರತೆಯು 30-35 ವರ್ಷ ವಯಸ್ಸಿನಲ್ಲಿ ಉಚ್ಛ್ರಾಯ ಸ್ಥಿತಿಗೆ ತಲುಪಿ ಆ ಬಳಿಕದ ವರ್ಷಗಳಲ್ಲಿ ಕ್ರಮೇಣ ಕಡಿಮೆಯಾಗುತ್ತ ಹೋಗುತ್ತದೆ.

ನಗರಗಳಲ್ಲಿ ವಾಸಿಸುವ ನಮ್ಮ ಯುವಜನರಲ್ಲಿ ಶೇ. 50ರಷ್ಟು ಮಂದಿ ಸಾಕಷ್ಟು ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ, ಜತೆಗೆ ಸಂಪೂರ್ಣವಾದ, ಸಮತೋಲಿತ ಆಹಾರ ಸೇವನೆಯನ್ನೂ ಮಾಡುವುದಿಲ್ಲ; ಬದಲಾಗಿ ಆಹಾರ ಸೇವನೆಯ ಹೆಚ್ಚು ಪಾಲು ಜಂಕ್‌ ಆಹಾರವೇ ಆಗಿರುತ್ತದೆ. ಇದರಿಂದಾಗಿ ಅವರಲ್ಲಿ ಮೂಳೆ ಸಾಂದ್ರತೆ ಪೂರ್ಣ ಪ್ರಮಾಣದಲ್ಲಿ ಸಾಧನೆಯಾಗುವುದಿಲ್ಲ. ಮೂಳೆ ಸಾಂದ್ರತೆಯು ಕಡಿಮೆಯಾಗಿದ್ದಾಗ ಯುವ ಜನರು ಸುಲಭವಾಗಿ ಮೂಳೆ ಮುರಿತಕ್ಕೆ ತುತ್ತಾಗಬಹುದಾಗಿದೆ. ಮಹಿಳೆಯರು ಋತುಚಕ್ರಬಂಧವಾದ ಬಳಿಕ ಮೂಳೆ ದೌರ್ಬಲ್ಯಕ್ಕೆ ಒಳಗಾಗುತ್ತಾರೆ.

ಅವರಲ್ಲಿ ಋತುಚಕ್ರ ಸರಿಯಾಗಿ ಆಗುತ್ತಿರುವ ವರೆಗೆ ನಿಯಮಿತವಾದ ಹಾರ್ಮೋನ್‌ ಸ್ರಾವದಿಂದಾಗಿ ಮೂಳೆಗಳ ಸಾಮರ್ಥ್ಯ ಚೆನ್ನಾಗಿರುತ್ತದೆ; ಋತುಚಕ್ರ ಅನಿಯಮಿತಗೊಳ್ಳುವುದು, ಸ್ಥಗಿತಗೊಳ್ಳುವುದು ಹಾಗೂ ಇದಕ್ಕೆ ಸಂಬಂಧಿಸಿದ ಔಷಧಗಳಿಂದಾಗಿ ಮೂಳೆಗಳು ದುರ್ಬಲಗೊಳ್ಳುತ್ತವೆ.

Advertisement

ಹಾಗೆಯೇ ಗರ್ಭಧಾರಣೆ ಮತ್ತು ಶಿಶುವಿಗೆ ಎದೆಹಾಲು ಉಣಿಸುವುದರಿಂದ ತಾಯಿಯ ದೇಹದಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆಯಾಗಿ ಮೂಳೆಗಳಿಗೆ ತೊಂದರೆಯಾಗುತ್ತದೆ. ಇದನ್ನು ಸರಿಯಾದ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ, ಕ್ಯಾಲ್ಸಿಯಂ ಪೂರಕ ಆಹಾರಗಳು ಮತ್ತು ಮಕ್ಕಳ ನಡುವೆ ಸರಿಯಾದ ವರ್ಷಗಳ ಅಂತರ ಹೊಂದುವ ಮೂಲಕ ಸರಿಪಡಿಸಿಕೊಳ್ಳಬೇಕಾಗಿರುತ್ತದೆ.

ಬೆನ್ನೆಲುಬಲ್ಲದೆ ಬೇರೆ ಯಾವ ಎಲುಬುಗಳು ಬಾಧಿತವಾಗುತ್ತವೆ?

ಬೆನ್ನೆಲುಬಿನ ನಿಶ್ಶಬ್ದ ಮುರಿತಗಳಿಂದಾಗಿ ಎತ್ತರ ಕಡಿಮೆಯಾಗುವುದು ಮತ್ತು ಮುಂದಕ್ಕೆ ಬಾಗುವುದು ಸಾಮಾನ್ಯ, ಅಂತಿಮವಾಗಿ ವ್ಯಕ್ತಿ ಕುಸಿಯುತ್ತಾನೆ. ಮಧ್ಯ ವಯಸ್ಸಿನ ಮಹಿಳೆಯರಲ್ಲಿ ಚಿಕ್ಕಪುಟ್ಟ ಬೀಳುವಿಕೆಯಲ್ಲಿಯೂ ಮಣಿಕಟ್ಟು ಮುರಿತಕ್ಕೊಳಗಾಗುವುದು ಸಾಮಾನ್ಯವಾಗಿದ್ದರೆ ಅದು ಭವಿಷ್ಯದಲ್ಲಿ ಆಸ್ಟಿಯೊಪೊರೋಸಿಸ್‌ ಉಂಟಾಗುವುದರ ಎಚ್ಚರಿಕೆಯ ಕರೆಘಂಟೆಯಾಗಿರುತ್ತದೆ.

ವಯೋವೃದ್ಧರು ಮನೆಯಲ್ಲಿ ಜಾರಿ ಬಿದ್ದು ಸೊಂಟದ ಮೂಳೆ ಮತ್ತು ತೊಡೆ ಮೂಳೆ ಮುರಿತಕ್ಕೆ ಒಳಗಾದ ಬಳಿಕ ಗುಣ ಹೊಂದುವುದು ನಿಧಾನವಾಗುತ್ತದೆ ಮತ್ತು ಜೀವನದ ಅಂತ್ಯಕ್ಕೆ ಕಾರಣವಾಗುತ್ತದೆ. ಇವೆಲ್ಲವೂ ಆಸ್ಟಿಯೊಪೊರೋಸಿಸ್‌ನ ಪರಿಣಾಮಗಳೇ ಎಂದು ಹೇಳಬಹುದಾಗಿದೆ.

ಮೂಳೆ ಗಡುಸಾಗುವುದು ಅಥವಾ ಆರ್ಥೈಟಿಸ್‌ನಿಂದಾಗಿ ಒಂದು ಭಾಗ ಉರಿಯೂತಕ್ಕೆ ಒಳಗಾಗುವುದು ಯಾ ನಿಶ್ಚಲಗೊಳ್ಳುವುದು ಅಥವಾ ಇಡೀ ಅಸ್ಥಿಪಂಜರವನ್ನು ಆಸ್ಟಿಯೊಪೊರೋಸಿಸ್‌ ಒಳಗೊಳ್ಳಬಹುದಾಗಿದೆ.

ಅಲ್ಲದೆ, ದೀರ್ಘ‌ಕಾಲೀನ ಆಸ್ಟಿಯೊಪೊರೋಸಿಸ್‌ನಿಂದಾಗಿ ಕ್ರೀಡಾ ಗಾಯಗಳು ಗುಣ ಹೊಂದುವುದು ಮತ್ತು ಸಂಧಿ ಬದಲಾವಣೆ ಶಸ್ತ್ರಚಿಕಿತ್ಸೆಗಳು ಮಾಯುವುದು ವಿಳಂಬವಾಗುತ್ತವೆ, ಜತೆಗೆ ಕಸಿ ಮಾಡಲಾದ ಲೋಹ ಭಾಗಗಳು ವಿಫ‌ಲಗೊಳ್ಳಬಹುದಾಗಿದೆ. ಆದ್ದರಿಂದಲೇ ಆಗಾಗ ಸಣ್ಣಪುಟ್ಟ ಮೂಳೆ ಮುರಿತಕ್ಕೆ ಒಳಗಾಗುತ್ತಿದ್ದರೆ ಅದನ್ನು ಎಚ್ಚರಿಕೆಯ ಕರೆಘಂಟೆಯಾಗಿ ಭಾವಿಸಬೇಕು ಮತ್ತು ಭಾರೀ ಮೂಳೆ ಮುರಿತವೊಂದು ಸಂಭವಿಸುವ ಮುನ್ನವೇ ಆಸ್ಟಿಯೊಪೊರೋಸಿಸ್‌ ಗೆ ಚಿಕಿತ್ಸೆಯನ್ನು ಆರಂಭಿಸಬೇಕು.

ಯಾವ ಪರಿಹಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ?

ಯಾವತ್ತೂ ಹೇಳುವ ಹಾಗೆ, ತೊಂದರೆ ಉಂಟಾದ ಮೇಲೆ ಚಿಕಿತ್ಸೆಗಿಂತ ತೊಂದರೆ ಆಗದಂತೆ ತಡೆಗಟ್ಟುವುದೇ ಉತ್ತಮ. ಆದ್ದರಿಂದಲೇ ಸರಿಯಾದ ವ್ಯಾಯಾಮದಲ್ಲಿ ತೊಡಗುವಂತೆ ಮತ್ತು ಉತ್ತಮ ದೇಹಭಂಗಿಯನ್ನು ಕಾಪಾಡಿಕೊಳ್ಳುವಂತೆ ನಾವು ನಮ್ಮ ಯುವ ಜನತೆಗೆ ಶಿಕ್ಷಣ ನೀಡಬೇಕಾಗಿದೆ.

ಜತೆಗೆ ನಮ್ಮ ಮಕ್ಕಳು ಸಾಕಷ್ಟು ಸಕ್ರಿಯವಾಗಿ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಬೇಕಾಗಿದೆ. ಈ ಎಲುಬು ಕಾಯಿಲೆಯ ತಳಪಾಯ ಹದಿಹರಯದಲ್ಲಿ ನಿರ್ಮಾಣವಾಗುತ್ತದೆ. ಕುಳಿತು ಮಾಡುವ ಉದ್ಯೋಗಗಳಿಂದಾಗಿ ಉಂಟಾಗುವ ಮೂಳೆ-ಸ್ನಾಯು ಬಿಗಿತಗಳಿಗೆ ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಒದಗಿಸಬೇಕು.

ಇದಕ್ಕೆ ಸಹಾಯ ಮಾಡಬಲ್ಲ ಔಷಧಗಳಿವೆ; ಆದರೆ ಮೂಳೆ ಮುರಿತವುಂಟಾದ ಬಳಿಕ ಆಸ್ಟಿಯೊಪೊರೋಸಿಸ್‌ ಇರುವುದು ಪತ್ತೆಯಾದ ಬಳಿಕ ಅದು ಅಂತಿಮ ಆಯ್ಕೆಯಾಗಿರುತ್ತದೆ. ಆಸ್ಟಿಯೊಪೊರೋಸಿಸ್‌ ಗುಣಪಡಿಸಬಹುದಾದ ಇತ್ತೀಚೆಗಿನ ಔಷಧಗಳ ಜತೆಗೆ ತಜ್ಞ ವೈದ್ಯರ ಸಲಹೆ ಪಡೆಯುವುದು ಪ್ರಾಮುಖ್ಯವಾಗಿದೆ. ಹಾಗೆಯೇ ಜಂಕ್‌ ಫ‌ುಡ್‌, ಸಪ್ಲಿಮೆಂಟ್‌ ಔಷಧಗಳ ಮೊರೆ ಹೋಗುವುದರ ಬದಲಾಗಿ ಆರೋಗ್ಯಪೂರ್ಣವಾದ ಸಮತೋಲಿತ ಆಹಾರ ಸೇವನೆಯ ಮಹತ್ವವನ್ನು ಅರಿತು ಪಾಲಿಸಬೇಕು.

ಡಾ| ಯೋಗೀಶ್‌ ಕಾಮತ್‌,

ಕನ್ಸಲ್ಟಂಟ್‌ ಹಿಪ್‌, ನೀ ಆ್ಯಂಡ್‌ ನ್ಪೋರ್ಟ್ಸ್ ಇಂಜುರಿ ಸ್ಪೆಶಲಿಸ್ಟ್‌

ಕೆಎಂಸಿ ಆಸ್ಪತ್ರೆ, ಡಾ| ಅಂಬೇಡ್ಕರ್‌ ಸರ್ಕಲ್‌, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆರ್ಥೋಪೆಡಿಕ್‌ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next