Advertisement

ಆರ್ಥೋಗ್ನಾಥಿಕ್‌ ಶಸ್ತ್ರಚಿಕಿತ್ಸೆ

07:55 PM Dec 21, 2019 | mahesh |

ಈಗಿನ ಕಾಲಘಟ್ಟದಲ್ಲಿ ಸುಂದರ ಮತ್ತು ಆಕರ್ಷಕವಾಗಿ ಕಾಣಿಸಿಕೊಳ್ಳಬೇಕು ಎನ್ನುವ ಬಯಕೆ ಎಲ್ಲರಲ್ಲೂ ಹುಟ್ಟಿಕೊಳ್ಳುವುದು ಸಹಜ. ಇದಕ್ಕಾಗಿ ಪ್ರತಿಯೊಬ್ಬರಿಗೂ ಅವರದೇ ಆದ ರೋಲ್‌ ಮಾಡೆಲ್‌ಗ‌ಳು ಇರುತ್ತಾರೆ. ಅವರನ್ನು ಅನುಸರಿಸುವ ಆಸೆ ಪ್ರತಿಯೊಬ್ಬರದೂ. ಆದರೆ ಕೆಳಗಿನ ಅಥವಾ ಮೇಲಿನ ದವಡೆಯ ಅಸಮರ್ಪಕ ಹೊಂದಾಣಿಕೆಯಿಂದಾಗಿ ಕೆಲವರ ಮುಖ ಸೌಂದರ್ಯದಲ್ಲಿ ಕೊರತೆ ಇರುತ್ತದೆ. ಇದೇ ತಾನು ಸುಂದರವಾಗಿ ಕಾಣಿಸುವುದಕ್ಕೆ ದೊಡ್ಡ ಅಡ್ಡಿ ಎಂಬುದಾಗಿ ಅಂಥವರು ಭಾವಿಸುತ್ತಾರೆ. ಇದರಿಂದ ಆತ್ಮವಿಶ್ವಾಸದ ಕೊರತೆಯಾಗಿ ಖನ್ನತೆ ಉಂಟಾಗುವುದು ಕೂಡ ಸಾಧ್ಯ.

Advertisement

ಸೌಂದರ್ಯವನ್ನು ಬದಿಗಿಟ್ಟರೂ ಕೆಲವರಲ್ಲಿ ಇಂತಹ ಅಸಮರ್ಪಕ ಹೊಂದಾಣಿಕೆಯಿಂದ ಟೆಂಪರೊಮ್ಯಾಂಡಿಬ್ಯುಲಾರ್‌ ಸಂಧಿನೋವು, ರಾತ್ರಿ ಆಗಾಗ ಉಸಿರುಗಟ್ಟುವುದರಿಂದ
ಎಚ್ಚರವಾಗುವುದು, ಬ್ರೇಸ್‌ ಅಳವಡಿಸುವುದರಿಂದ ಸರಿ ಮಾಡಲಾಗದ ಓರೆಕೋರೆ ಹಲ್ಲುಗಳಂತಹ ಹಲ್ಲು ಮತ್ತು ದವಡೆಗಳ ಕಾರ್ಯಚಟುವಟಿಕೆಗಳ ಸಮಸ್ಯೆ ಉಂಟಾಗುತ್ತದೆ. ಇಂತಹ ಸಮಸ್ಯೆಯನ್ನು ಹೊಂದಿರುವವರಿಗೆ ಈಗ ಸಂತಸದ ಸುದ್ದಿಯಾಗಿ ಆರ್ಥೋಗ್ನಾಥಿಕ್‌ ಶಸ್ತ್ರಚಿಕಿತ್ಸೆ ಎಂಬ ಹೊಸ ಚಿಕಿತ್ಸಾ ವಿಧಾನ ಬಳಕೆಗೆ ಬಂದಿದೆ. ಈ ಶಸ್ತ್ರಚಿಕಿತ್ಸೆಯಿಂದ ಮೇಲಿನ ಮತ್ತು ಕೆಳಗಿನ ದವಡೆಗಳ ಅಸಮರ್ಪಕ ಹೊಂದಾಣಿಕೆಯನ್ನು ಸರಿಪಡಿಸಿ ತೊಂದರೆಗಳಿಂದ ಮುಕ್ತಿ ನೀಡಬಹುದಾಗಿದೆ.

ಆರ್ಥೋಗ್ನಾಥಿಕ್‌ ಶಸ್ತ್ರಚಿಕಿತ್ಸೆಯ ಮೂಲಕ ಯಾವೆಲ್ಲ ತೊಂದರೆಗಳನ್ನು ಸರಿಪಡಿಸಬಹುದು ಎಂಬುದನ್ನು ನೋಡೋಣ:

1. ಮೇಲ್ದವಡೆ ಮತ್ತು ಮೂಗಿನ ಸುತ್ತಲಿನ ಪ್ರದೇಶ (ಮ್ಯಾಕ್ಸಿಲಾ) ಹಾಗೂ ಕೆಳ ದವಡೆಯ ಎಲುಬು (ಮ್ಯಾಂಡಿಬಲ್‌)ಗಳ ಹೊಂದಾಣಿಕೆಯನ್ನು ಸರಿಪಡಿಸುವುದು. ವಿವಿಧ ಕಾರಣಗಳಿಂದಾಗಿ ಕೆಲವೊಮ್ಮೆ ವ್ಯಕ್ತಿಗಳು ಮ್ಯಾಕ್ಸಿಲಾ ಮತ್ತು ಮ್ಯಾಂಡಿಬಲ್‌ಗ‌ಳು ವಿರೂಪಗೊಂಡು ಜನಿಸಿರುತ್ತಾರೆ. ಮೇಲ್ದವಡೆಯು ಕೆಳ ದವಡೆಗಿಂತ ಮುಂಚಾಚಿರಬಹುದು ಅಥವಾ ಹಿಂದಕ್ಕೆ ಸರಿದಿರಬಹುದು; ಕೆಳದವಡೆಯು ಮೇಲ್ದವಡೆಗಿಂತ ಮುಂಚಾಚಿರಬಹುದು ಅಥವಾ ಹಿಂಚಾಚಿರಬಹುದು. ಇದು ವ್ಯಕ್ತಿಯ ಮುಖ ಕುರೂಪವಾಗಲು ಕಾರಣವಾಗಿ ಆತನ ಅಥವಾ ಆಕೆಯಲ್ಲಿ ಕುಗ್ಗಿದ ಆತ್ಮವಿಶ್ವಾಸವನ್ನು ಉಂಟು ಮಾಡಬಹುದು.

2. ಕೆಲವು ವ್ಯಕ್ತಿಗಳು ದೀರ್ಘ‌ಕಾಲದಿಂದ ಟೆಂಪರೊಮ್ಯಾಂಡಿಬ್ಯುಲಾರ್‌ ಸಂಧಿನೋವಿನಿಂದ ಬಳಲುತ್ತಿರುತ್ತಾರೆ. ಇದಕ್ಕೆ ಹಲ್ಲುಗಳ ಅಸಮರ್ಪಕ ಹೊಂದಾಣಿಕೆ ಕಾರಣವಾಗಿದ್ದು, ಇದನ್ನು ಬ್ರೇಸ್‌ಗಳ ಅಳವಡಿಕೆಯಿಂದ ಸರಿಪಡಿಸಲು ಸಾಧ್ಯವಾಗುವುದಿಲ್ಲ.

3. ಹಠಾತ್‌ ಆಗಿ ಉಸಿರುಗಟ್ಟುವ ತೊಂದರೆಯಿಂದಾಗಿ ಕೆಲವರಿಗೆ ನಿದ್ದೆಯ ಸಮಸ್ಯೆ ಉಂಟಾಗುತ್ತದೆ.
4. ಮ್ಯಾಕ್ಸಿಲಾದ ಅಸಮರ್ಪಕ ಬೆಳವಣಿಗೆಯನ್ನು ಹೊಂದಿರುವವರು, ಸೀಳುತುಟಿ, ಒಳಬಾಯಿಯ ತೊಂದರೆ ಹೊಂದಿರುವವರು.

Advertisement

5. ಗಲ್ಲ ಒಳಸರಿದಿರುವವರು. ಈ ಯಾವುದೇ ಸಮಸ್ಯೆಯನ್ನು ಹೊಂದಿರುವ ರೋಗಿಗಳಿಗೆ ಆಥೊìಗ್ನಾಥಿಕ್‌ ಶಸ್ತ್ರಚಿಕಿತ್ಸೆಯು ಉತ್ತಮ ಪರಿಹಾರವನ್ನು ಒದಗಿಸುತ್ತದೆ.

ಶಸ್ತ್ರಚಿಕಿತ್ಸೆಯಿಂದ ಏನನ್ನು ನಿರೀಕ್ಷಿಸಬಹುದು?
ಆಥೊìಗ್ನಾಥಿಕ್‌ ಶಸ್ತ್ರಚಿಕಿತ್ಸೆಗೆ ಮುನ್ನ ರೋಗಿಯ ಪ್ರಕರಣವನ್ನು ಆಧರಿಸಿ ಸರಿಹೊಂದಿಲ್ಲದ ಹಲ್ಲುಗಳನ್ನು ಸರಿಪಡಿಸುವುದಕ್ಕಾಗಿ ಆಥೊìಡಾಂಟಿಕ್‌ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. ರೋಗಿಯಲ್ಲಿರುವ ಹಲ್ಲುಗಳ ಅಸಮರ್ಪಕ ಹೊಂದಾಣಿಕೆ ಎಷ್ಟು ಪ್ರಮಾಣದ್ದು ಎಂಬುದನ್ನು ಆಧರಿಸಿ ಈ ಚಿಕಿತ್ಸೆಯ ಸಮಯ ನಿರ್ಧಾರವಾಗುತ್ತದೆ.

ಆರ್ಥೋಡಾಂಟಿಕ್‌ ಚಿಕಿತ್ಸೆ ನೀಡಿದ ಬಳಿಕ ಆರ್ಥೋ ಗ್ನಾಥಿಕ್‌ ಶಸ್ತ್ರಚಿಕಿತ್ಸೆಯ ಯೋಜನೆಯನ್ನು ಹಾಕಿಕೊಳ್ಳಲಾಗುತ್ತದೆ. ಅಣಕು ಶಸ್ತ್ರಚಿಕಿತ್ಸೆಯ ಮೂಲಕ ಚಿಕಿತ್ಸೆಯ ಹೆಜ್ಜೆಗಳನ್ನು ನಿರ್ಧರಿಸಲಾಗುತ್ತದೆ.
ಈ ಶಸ್ತ್ರಚಿಕಿತ್ಸೆಯನ್ನು ಸಾಮಾನ್ಯ ಅರಿವಳಿಕೆಯಡಿ ನಡೆಸಲಾಗುತ್ತದೆ. ಮೇಲ್ದವಡೆ ಅಥವಾ ಕೆಳದವಡೆಗಳನ್ನು ಎಷ್ಟು ಪ್ರಮಾಣದಲ್ಲಿ ಮುಂದಕ್ಕೆ ತರಬೇಕು ಅಥವಾ ಹಿಂದಕ್ಕೆ ಸರಿಸಬೇಕು ಎಂಬುದನ್ನು ಆಧರಿಸಿ ಕೆಳದವಡೆ ಯಾ ಮೇಲ್ದವಡೆಗಳಲ್ಲಿ ಗಾಯ ಮಾಡಬೇಕಾಗುತ್ತದೆ.

ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯು ಐದರಿಂದ ಏಳು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಐದು ಅಥವಾ ಏಳು ದಿನಗಳ ಕಾಲ ರೋಗಿಯನ್ನು ಆ್ಯಂಟಿಬಯಾಟಿಕ್‌ ಮತ್ತು ಅನಾಲೆಸಿಕ್‌ ಔಷಧಗಳಡಿ ಇರಿಸಬೇಕಾಗುತ್ತದೆ.ಇಂತಹ ಯಾವುದಾದರೂ ಸಮಸ್ಯೆಗಳಿಂದ ಬಳಲುತ್ತಿದ್ದಲ್ಲಿ ಆರ್ಥೋ ಗ್ನಾಥಿಕ್‌ ಶಸ್ತ್ರಚಿಕಿತ್ಸೆಯು ನಿಮಗೆ ಉತ್ತಮ ಪರಿಹಾರವನ್ನು ಒದಗಿಸಬಲ್ಲುದಾಗಿದೆ. ವೃಥಾ ಸಮಯ ಮುಂದೂಡಬೇಡಿ, ಓರಲ್‌ ಮತ್ತು ಮ್ಯಾಕ್ಸಿಲೊ ಫೇಶಿಯಲ್‌ ಶಸ್ತ್ರಚಿಕಿತ್ಸಾ ನಿಪುಣ ವೈದ್ಯರನ್ನು ಕೂಡಲೇ ಸಂಪರ್ಕಿಸಿ.

ಡಾ| ಆನಂದ್‌ದೀಪ್‌ ಶುಕ್ಲಾ,
ಓರಲ್‌ ಆ್ಯಂಡ್‌ ಮ್ಯಾಕ್ಸಿಲೊಫೇಶಿಯಲ್‌ ಸರ್ಜರಿ ವಿಭಾಗ, ಮಣಿಪಾಲ ದಂತವೈದ್ಯಕೀಯ ಕಾಲೇಜು, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next