Advertisement

ಸಮವಸ್ತ್ರವಿಲ್ಲದೆ ಕಾಡಿದ ಅನಾಥಭಾವ

10:44 PM May 19, 2019 | mahesh |

ಒಮ್ಮೊಮ್ಮೆ ಇಂಥದ್ದೊಂದು ನಡೆಯಲಿ ಎಂದು ನಾವು ನಿರೀಕ್ಷಿಸುವುದಿದೆ. ಅದು ಕೆಲವೊಮ್ಮೆ ಫ‌ಲಿಸುವುದೂ, ಒಮ್ಮೊಮ್ಮೆ ಕೈಕೊಡುವುದೂ ಬಲು ಅಚ್ಚರಿಯ ವಿಷಯ.
ಯಾವುದೇ ದೊಡ್ಡ ಕಾರ್ಯಕ್ರಮಗಳ ಯಶಸ್ಸಿನಲ್ಲಿ ಸ್ವಯಂ ಸೇವಕರ ಶ್ರಮ ಪ್ರಮುಖ ಪಾತ್ರ ವಹಿಸುತ್ತದೆ. ಆಳ್ವಾಸ್‌ ನುಡಿಸಿರಿಯಲ್ಲಿ ಸ್ವಯಂ ಸೇವಕರ ದಂಡು ದೊಡ್ಡದು. ನಾವೂ ಅದರ ಭಾಗವಾಗಬೇಕು ಎಂಬುದು ನಮ್ಮ ಕನಸಾಗಿತ್ತು.

Advertisement

ನಮ್ಮ ರೋವರ್ ರೇಂಜರ್ ಘಟಕಕ್ಕೆ ಅದಾಗಲೇ ಹಲವು ಉತ್ಸಾಹಿ ಸದಸ್ಯರು ಸೇರಿಕೊಂಡಿದ್ದರು. ಎನ್ನೆಸ್ಸೆಸ್‌ ಘಟಕದೊಂದಿಗೆ ನಮಗೂ ಹೋಗಲು ಅನುಮತಿ ನೀಡಲಾಯಿತು. ಅವರ ಜತೆಗೆ ಇರಬೇಕು ಎಂಬ ಸೂಚನೆಯೂ ಬಂತು. ಈ ನಡುವೆ ನಮ್ಮ ಘಟಕ ನಾಯಕನಿಗೆ ಪ್ರಾಯೋಗಿಕ (ಬಿ.ಎಸ್ಸಿ.) ಪರೀಕ್ಷೆ. ನಾಯಕತ್ವ ಉಪನಾಯಕರ ಸ್ಥಾನದಲ್ಲಿದ್ದ ನನ್ನ ಹಾಗೂ ಈರ್ವರು ಸಹಪಾಠಿಗಳ ಹೆಗಲೇರಿತು. ನಾನು ತಂಡವನ್ನು ಮುನ್ನಡೆಸಿದರೆ, ಉಳಿದವರು ಬೆಂಬಲವಾಗಿ ನಿಂತರು. ಹೊರಡುವ ಮುನ್ನಾದಿನ ಸಂಪೂರ್ಣ ಸಮವಸ್ತ್ರವನ್ನು ಜತೆಗೆ ತರಬೇಕೆಂದು ಸಂಗಡಿಗರಿಗೆ ಸೂಚಿಸಿದೆ. ಕಾಲೇಜು ಬಸ್‌ ಹತ್ತಿ ಹೊರಟಿದ್ದಾಯಿತು. ಸೂಚಿಸಿದ್ದಂತೆಯೇ ಎನ್ನೆಸ್ಸೆಸ್‌ ಘಟಕದೊಂದಿಗೇ ಕೆಲಸಕ್ಕೆ ತೊಡಗಿದೆವು. ಮರುದಿನ ಕಾರ್ಯಕ್ರಮ ಆರಂಭಗೊಳ್ಳಲಿತ್ತು. ಈ ನಡುವೆ, ಎನ್ನೆಸ್ಸೆಸ್‌ ಘಟಕದೊಂದಿಗೆ ನಾವು ಇರಬೇಕು ಸರಿ, ಕೆಲಸ ಯಾವುದಾದರೂ ಸರಿ. ಆದರೆ ನಾವು ನಮ್ಮ ಐಡೆಂಟಿಟಿ ಬಿಟ್ಟು ಕೆಲಸ ಮಾಡುವುದು ಸರಿಯಿಲ್ಲ ಎನಿಸಿತು. ಸಮವಸ್ತ್ರವಿಲ್ಲದೆ ಎಂದು ಒಂದು ರೀತಿಯ ಅನಾಥಭಾವ ಮನಸಿನಲ್ಲಿ ಇದ್ದೇ ಇತ್ತು. ಸಂಗಡಿಗರ ಮನಸ್ಸಲ್ಲೂ ಇದೇ ಭಾವನೆ ಇತ್ತು. ಸಂಜೆ ಕೆಲಸ ಮುಗಿದ ಕೂಡಲೇ ತಂಡವನ್ನು ಒಟ್ಟು ಸೇರಿಸಿದೆ. ಮರುದಿನ ಕರ್ತವ್ಯಕ್ಕೆ ಪೂರ್ಣ ಸಮವಸ್ತ್ರಧಾರಿಗಳಾಗಿ ಹಾಜರಾಗಬೇಕೆಂದು ಸೂಚಿಸಿದೆ. ಅದರಂತೆಯೇ, ಮರುದಿನ ಮತ್ತೆ ಎನ್ನೆಸ್ಸೆಸ್‌ ಘಟಕದ ಜತೆಗೆ ಕರ್ತವ್ಯದಲ್ಲಿ ತೊಡಗಿದ್ದಾಗ, ಯಾರೋ ದೊಡ್ಡವರು ಸ್ಥಳಕ್ಕೆ ಬಂದು, “ನಿಮಗೆ ಇಲ್ಲಲ್ಲ ಕೆಲಸ, ಬನ್ನಿ ನನ್ನ ಜತೆ’ ಎಂದು ಕರೆದುಕೊಂಡು ಹೋದರು. ಟ್ರಾಫಿಕ್‌ ನಿಯಂತ್ರಣದ ಕೆಲಸ ವಹಿಸಿದರು. ಇತರ ರೋವರ್ ರೇಂಜರ್ ಕೂಡ ಅದೇ ಕೆಲಸದಲ್ಲಿ ವ್ಯಸ್ತರಾಗಿದ್ದರು. ಅತ್ಯಂತ ಜನಜಂಗುಳಿಯಿರುವ ಮುಖ್ಯ ಪ್ರವೇಶ ದ್ವಾರದಲ್ಲಿ ನನ್ನ ತಂಡ ಕರ್ತವ್ಯಕ್ಕೆ ತೊಡಗಿತು. ಕೆಲವೇ ನಿಮಿಷಗಳಲ್ಲಿ ಅಲ್ಲಿನ ಟ್ರಾಫಿಕ್‌ ನಮ್ಮ ನಿಯಂತ್ರಣಕ್ಕೆ ಬಂತು. ಇದನ್ನು ನಾನು ನಿರೀಕ್ಷಿಸಿದ್ದೆನಾದರೂ ಫ‌ಟಾಫ‌ಟ್‌ ನಡೆದ ಈ ಎಲ್ಲ ಬೆಳವಣಿಗೆಗಳ ಕುರಿತು ಅಚ್ಚರಿಯಾಯಿತು. ನಮ್ಮ ಕೇರ್‌ ಟೇಕರ್‌ಗಳ ಮುನಿಸಿಗೆ ಕಾರಣವಾದೆವೋ ಏನೋ ಎಂಬ ಅಳುಕೂ ಮನಸ್ಸಿನಲ್ಲಿ ಮೂಡಿತಾದರೂ, ಕರ್ತವ್ಯದ ಯಶಸ್ಸಿನ ಮುಂದೆ ಎಲ್ಲವೂ ಗೌಣವೆನಿಸಿತು.

ಕುದ್ಯಾಡಿ ಸಂದೇಶ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next