ಹಗರಿಬೊಮ್ಮನಹಳ್ಳಿ: ಕ್ರೀಡೆಯಲ್ಲಿ ತಾಲೂಕಿಗೆ ಪ್ರಸಿದ್ಧಿಯಾದ ಕಿತ್ತೂರು ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿವೆ. ಕಿತ್ತೂರು ಶಾಲೆಯ ಮಕ್ಕಳು ಕ್ರೀಡೆ ಹಾಗೂ ಶಿಕ್ಷಣದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದರೂ ಸಹ ಶಿಕ್ಷಣ ಇಲಾಖೆ ಮಾತ್ರ ಇದಕ್ಕೆ ಪೂರಕವಾಗಿ ಸ್ಪಂದಿಸಿಲ್ಲ. ತಾಲೂಕಿನ ಕೆಲ ಶಾಲೆಗಳಲ್ಲಿ ಎಲ್ಲಾ ಸೌಲಭ್ಯಗಳು ವಿಶೇಷವಾಗಿ ಲಭ್ಯವಾಗುತ್ತಿದ್ದರೂ ಯಾವುದೇ ಗಮನಾರ್ಹ ಸಾಧನೆಗೈಯಲು ಮುಂದಾಗಿಲ್ಲ. ಇಲ್ಲಿ ಮಾತ್ರ ಉಲ್ಟಾ ವಾತಾವರಣವಿದೆ. ಮಕ್ಕಳ ವಿಶೇಷ ಸಾಧನೆಗೆ ಸರ್ಕಾರವೇ ಕೊಕ್ಕೆ ಹಾಕುತ್ತಿದೆ.
ಶಾಲೆ ಪ್ರಾರಂಭವಾಗಿನಿಂದ ಈವರೆಗೂ ಶಾಲೆಯಲ್ಲಿ ದೈಹಿಕ ಶಿಕ್ಷಕರನ್ನು ನೇಮಿಸಿಲ್ಲ. ದೈಹಿಕ ಶಿಕ್ಷಕರು ಇಲ್ಲದಿದ್ದರೂ ಸಹ ಇಲ್ಲಿನ ಮಕ್ಕಳು ಪ್ರತಿವರ್ಷ ರಾಜ್ಯಮಟ್ಟ ಹಾಗೂ ವಿಭಾಗ ಮಟ್ಟದ ಕ್ರೀಡೆಯಲ್ಲಿ ಪ್ರತಿನಿಧಿಸುತ್ತಾರೆ. ಶಾಲೆಯ ಹಳೇಯ ವಿದ್ಯಾರ್ಥಿಗಳು ಹಾಗೂ ವಿಷಯದ ಶಿಕ್ಷಕರು ಮಕ್ಕಳ ಕ್ರೀಡೆಗೆ ತರಬೇತುದಾರರಾಗಿದ್ದು, ಮಕ್ಕಳಿಗೆ ಶಾಲಾ ಆವರಣವೇ ಮೈದಾನವಾಗಿದೆ.
ಕೊಠಡಿ ಕೊರತೆ: 1956ನೇ ವರ್ಷದಲ್ಲಿ ಪ್ರಾರಂಭವಾದ ಈ ಶಾಲೆ ಮೊದಲಿಗೆ ಕೇವಲ ಎರಡು ಕೊಠಡಿಗಳನ್ನು ಮಾತ್ರ ಹೊಂದಿತ್ತು. ನಂತರ ಮಕ್ಕಳ ಸಂಖ್ಯೆ ಹೆಚ್ಚುತ್ತಿದ್ದಂತೆ ಏಳು ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಆದರೆ, 7 ಕೊಠಡಿಗಳಲ್ಲಿ ಎರಡು ಕೊಠಡಿಗಳ ಶೀಟ್‌ಗಳು ಕಿತ್ತು ಹೋಗಿರುವುದರಿಂದ ಕೇವಲ 5 ಕೊಠಡಿಗಳಲ್ಲಿ ಮಾತ್ರ 290ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದರಿಂದ ಮಳೆಗಾಲದಲ್ಲಿ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ಗೈರಾಗುತ್ತಾರೆ. ಕೊಠಡಿಗಳ ಕೊರತೆಯನ್ನು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಶಾಸಕರು ಒಂದು ಶಾಲಾ ಕೊಠಡಿ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದು, ಶಾಲಾ ಕೊಠಡಿ ಕಾಮಗಾರಿ ಭರದಿಂದ ಸಾಗಿದೆ.
ಸ್ವತ್ಛತೆ ಮಾಯ: ಶಾಲೆಯ ಮುಂಭಾಗದಲ್ಲಿಯೇ ಸುತ್ತುಗೋಡೆಗೆ ಹೊಂದಿಕೊಂಡಿರುವ ಚರಂಡಿ ತುಂಬಿ ತುಳುಕುತ್ತಿದ್ದರೂ ಗ್ರಾಪಂನವರು ಸ್ವತ್ಛತೆಗೆ ಮುಂದಾಗಿಲ್ಲ. ಇದರಿಂದ ಶಾಲೆ ಹಾಗೂ ಶಾಲೆಯ ಮುಂಭಾಗದ ಮನೆಯವರು ಸೊಳ್ಳೆಗಳ ಹಾವಳಿಯನ್ನು ನಿರಂತರವಾಗಿ ಎದುರಿಸುವಂತಾಗಿದೆ. ಮಕ್ಕಳಿಗೆ ಕುಡಿಯುವ ನೀರಿನ ಸೌಲಭ್ಯ ಇದ್ದರೂ ಫ್ಲೋರೈಡ್‌ಯುಕ್ತ ನೀರು ದೊರಕುತ್ತಿರುವುದ ರಿಂದ ಶುದ್ಧ ಕುಡಿಯುವ ನೀರಿನ ಅಗತ್ಯತೆ ಇದೆ. ಶಾಲೆಯ ಶೌಚಾಲಯ ಸಂಪೂರ್ಣ ದುಸ್ಥಿತಿಯಲ್ಲಿದ್ದು ನಿರುಪಯುಕ್ತವಾಗಿದೆ. ಶೌಚಾಲಯಕ್ಕೆ ನೀರಿನ ಸೌಲಭ್ಯವಿಲ್ಲದೆ ಕೊಳೆತು ದುರ್ವಾಸನೆ ಬೀರುತ್ತಿದೆ.
ಮೈದಾನವಿಲ್ಲದ ಶಾಲೆಗಳಿಗೆ ದೈಹಿಕ ಶಿಕ್ಷಕರ ನೇಮಕಾತಿ ಮಾಡುವಂತಿಲ್ಲ. ಶಾಲೆ ಸುತ್ತುಗೋಡೆ ಮುಂಭಾಗದ ಸ್ವತ್ಛತೆ ಗ್ರಾಪಂನವರಿಗೆ ಸಂಬಂಧಪಟ್ಟಿದ್ದು, ಈ ಬಗ್ಗೆ ತಾಪಂ ಇಒ ಗಮನಕ್ಕೆ ತಂದು ಸರಿಪಡಿಸಲಾಗುವುದು. ಶಾಲಾ ಶೌಚಾಲಯ ಬಳಕೆ ಹಾಗೂ ಸ್ವತ್ಛತೆ ಕಾಪಾಡಿಕೊಳ್ಳುವಂತೆ ಶಿಕ್ಷಕರಿಗೆ ಮಾರ್ಗದರ್ಶನ ಮಾಡಲಾಗುವುದು.
ಶೇಖರಪ್ಪ ಹೊರಪೇಟೆ, ಕ್ಷೇತ್ರ ಶಿಕ್ಷಣಾಧಿಕಾರಿ. ಹೈಕ ಯೋಜನೆಯಡಿ ಶಾಸಕರು ಒಂದು ಕೊಠಡಿ ನಿರ್ಮಾಣಕ್ಕೆ ಅನುದಾನ ಒದಗಿಸಿರುವುದರಿಂದ ಕಟ್ಟಡ ಕಾಮಗಾರಿ ನಡೆದಿದೆ. ಹಳೇ ಕೊಠಡಿಗಳ ರಿಪೇರಿ ಸರಿಯಾಗಿ ಆಗದಿರುವುದರಿಂದ ಕೊಠಡಿಗಳ ಸಮಸ್ಯೆಯಾಗಿದೆ.
ಶಾಲೆಯಲ್ಲಿ ಮೈದಾನ, ದೈಹಿಕ ಶಿಕ್ಷಕರ ಕೊರತೆ ಇದ್ದರೂ ಕೂಡ ಶಾಲಾ ಮಕ್ಕಳು ಕ್ರೀಡಾಸಕ್ತಿಯಿಂದ ವಿಶೇಷ ಸಾಧನೆಗೈಯುತ್ತಾರೆ. ಶಾಲಾ ಮೈದಾನಕ್ಕೆ ಭೂಮಿ ದಾನವಾಗಿ ನೀಡಲು ಗ್ರಾಮಸ್ಥರು ಆಸಕ್ತಿ ತೋರಿದ್ದಾರೆ. ಶಾಲಾ ಮುಂಭಾಗದಲ್ಲಿನ ಚರಂಡಿ ಸ್ವತ್ಛತೆಗೊಳಿಸಿ ಎಂದು ಶಾಲಾ ವಿದ್ಯಾರ್ಥಿಗಳೇ ರಸ್ತೆತಡೆ ನಡೆಸಿದ್ದರಿಂದ ಗ್ರಾಪಂನವರು ಸ್ವತ್ಛತೆಗೊಳಿಸಿದ್ದಾರೆ. ಚರಂಡಿ ನಿರ್ಮಾಣ ಅವೈಜ್ಞಾನಿಕವಾಗಿರುವುದರಿಂದ ಚರಂಡಿ ನೀರು ಪುನಃ ಸ್ಥಗಿತಗೊಂಡಿದೆ.
ಮಂಜುಳಾ ಹವಲ್ದಾರ್, ಶಾಲಾ ಮುಖ್ಯ ಶಿಕ್ಷಕಿ
ಸುರೇಶ ಯಳಕಪ್ಪನವರ