Advertisement

ಪೀಠೊಪಕರಣಗಳನ್ನು ವ್ಯವಸ್ಥಿತವಾಗಿ ಜೋಡಿಸಿ

09:46 PM Jun 07, 2019 | mahesh |

ಮನೆ ಚಿಕ್ಕದಾದರೂ ಚೊಕ್ಕದಾಗಿರಲಿ ಎಂಬ ಮಾತಿದೆ. ಯಾಕೆಂದರೆ ಮನೆ ಆಕರ್ಷಕ ಮತ್ತು ಸುಂದರವಾಗಿ ಕಾಣುವುದು ಅದರ ಗಾತ್ರದಿಂದಲ್ಲ. ಬದಲಾಗಿ ಸ್ವಚ್ಛವಾಗಿ ಇಟ್ಟುಕೊಳ್ಳುವುದು, ಪೀಠೊಪಕರಣ, ಕರ್ಟನ್‌ ಇತ್ಯಾದಿಗಳನ್ನು ವ್ಯವಸ್ಥಿತವಾಗಿ ಜೋಡಿಸಿಡುವುದರಿಂದ.

Advertisement

ಹಣ ಕೊಟ್ಟು ಏನನ್ನು ಬೇಕಾದರೂ ಕೊಂಡುಕೊಳ್ಳಬಹುದು, ಆದರೆ ಅದನ್ನು ಬಳಸುವಲ್ಲಿ ಎಡವಿದರೆ ವ್ಯಯಿಸಿದ ಹಣ ವ್ಯರ್ಥವಾಗುತ್ತದೆ. ಮನೆಯವರಿಗೆ ಟೇಬಲ್‌, ಟೀಪಾಯಿ ಯಾವುದಕ್ಕೆ ಉಪಯೋಗಿಸುತ್ತೇವೆ ಎನ್ನುವ ಬಗ್ಗೆ ಚೆನ್ನಾಗಿ ಗೊತ್ತಿದ್ದರೆ ಉತ್ತಮ. ಇಲ್ಲದಿದ್ದರೆ ಅತಿಥಿಗಳು ಬಂದಾಗ ಮುಜುಗರ ಕ್ಕೊಳಗಾಗಬೇಕಾಗುತ್ತದೆ.

ಡೈನಿಂಗ್‌ ಟೇಬಲ್‌ಗ‌ಳು ಅಲಂಕಾರಿಕವಾಗಿದ್ದಷ್ಟೂ ಚೆನ್ನಾಗಿ ಕಾಣಿಸುತ್ತವೆ. ಆದರೆ ಅದಕ್ಕೆ ಜೋಡಿಸಿದ ಕುರ್ಚಿಗಳು ಹೊಂದುವಂತಿರಬೇಕು. ಯಾವ ಬಣ್ಣ ಮತ್ತು ವಿನ್ಯಾಸದ ಟೇಬಲ್‌ ಕ್ಲೋತ್‌ ಬಳಸಬೇಕು ಎಂಬ ಬಗ್ಗೆಯೂ ಸೂಕ್ಷ್ಮವಾಗಿ ಗಮನಿಸಬೇಕಿದೆ. ಹಾಗೇ ಟೀಪಾಯಿ, ಸೋಫಾ, ಕುರ್ಚಿ ಇತ್ಯಾದಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡಬೇಕು. ಅದರ ಬದಲು ಒಂದಿಷ್ಟು ಪೇಪರ್‌, ಪುಸ್ತಕ, ಬಟ್ಟೆ ಬರೆ ಮೊದಲಾದವುಗಳನ್ನು ರಾಶಿ ಹಾಕುವುದು ಮನೆಯ ಆಕರ್ಷಣೆ ಮಂಕಾಗಿಸುತ್ತವೆ.

ಆಕರ್ಷಕವಾಗಿ ಜೋಡಿಸಿ
ನಮಗೆ ಸರಿ ಹೊಂದುವ ಗಾಜು, ಲೋಹ ಅಥವಾ ಮರದಿಂದ ತಯಾರಿಸಲಾದ ಕಲಾಕೃತಿಗಳನ್ನು ಗೋಡೆಗಳ ಅಲಂಕಾರಕ್ಕೆ ಬಳಸುವುದರಿಂದ ಅಂದ ವೃದ್ಧಿಯಾಗುತ್ತದೆ. ಕಲಾತ್ಮಕ ಪೀಠೊಪಕರಣ ಗಳ ಬಳಕೆ ಇಂದು ಹೆಚ್ಚಾಗಿದ್ದು, ಅದು ಆಸನದ ಜತೆಗೆ ಮನೆಗೆ ಹೊಸ ಅಲಂಕಾರ ಕೂಡ ನೀಡುತ್ತವೆ. ಆದರೆ ಅವುಗಳನ್ನು ಮನೆಯ ಸ್ಥಳಾವಕಾಶವನ್ನು ನೋಡಿಕೊಂಡು ನೀಟಾಗಿ ಮತ್ತು ಆಕರ್ಷಕವಾಗಿ ಜೋಡಿಸಿಡಬೇಕಿರುವುದು ಅತೀ ಅಗತ್ಯ.

ಮುತ್ತಿನ ಮಣಿಗಳು, ಉಣ್ಣೆ ವಸ್ತುಗಳು, ಗಾಜಿನಿಂದ ತಯಾರಿಸಿದ ವಾಲ್‌ ಪೀಸ್‌, ಚಿಕ್ಕ ಚಿಕ್ಕ ಮಣಿಗಳಿಂದ ತಯಾರಿಸಿದ ತೊಟ್ಟಿಲು, ಅಲಂಕಾರಿಕ ಬೆಣ್ಣೆ ಗಡಿಗೆ, ಮಣಿಸರ, ಉಣ್ಣೆಯಿಂದ ತಯಾರಿಸಿದ ಬಾಗಿಲು ಪರದೆ, ಬಾಗಿಲಿನ ತೋರಣ, ವಿವಿಧ ಪಕ್ಷಿಗಳ ಗರಿ, ಓಲೆ, ಭತ್ತದ ತೆನೆ, ಹುಲ್ಲು ಕಡ್ಡಿಗಳಿಂದ ತಯಾರಿಸಿದ ತೋರಣಗಳ ಬಳಕೆ ಆಕರ್ಷಕವಾಗಿರುತ್ತವೆ.

Advertisement

ಸೂಕ್ತ ಬೆಳಕಿನ ವ್ಯವಸ್ಥೆ ಅಳವಡಿಸಿ
ಮನೆಯ ಅಲಂಕಾರ ಪರಿಪೂರ್ಣವಾಗಲು ಸೂಕ್ತ ಬೆಳಕಿನ ವ್ಯವಸ್ಥೆ ಅಳವಡಿಕೆ ಅಗತ್ಯ. ಆದ್ದರಿಂದ ನಿಮ್ಮ ಕೋಣೆಗಳಲ್ಲಿ ವಿವಿಧ ವಿನ್ಯಾಸಗಳ ದೀಪಗಳನ್ನು ಅಳವಡಿಸಿ. ಇದರಿಂದ ಕೋಣೆಯ ಸೌಂದರ್ಯ ವೃದ್ಧಿಸುತ್ತದೆ.

ನೈರ್ಮಲ್ಯಕ್ಕೆ ಆದ್ಯತೆ ನೀಡಿ
ವಿವಿಧ ರೀತಿಯ ಐಷಾರಾಮಿ ಆಲಂಕಾರಿಕ ವಸ್ತುಗಳನ್ನು ಬಳಸುವುದರಿಂದ ಮನೆ ಕೇವಲ ಮೇಲ್ನೋಟಕ್ಕೆ ಅಂದವಾಗಿ ಕಾಣುವುದು. ಆದರೆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿಯಿಂದಿರಲು ನೈರ್ಮಲ್ಯಕ್ಕೆ ಆದ್ಯತೆ ನೀಡುವುದು ಕೂಡ ಅಗತ್ಯ. ಸ್ವಚ್ಛತೆ ಮನೆಯ ನಿಜವಾದ ಶಕ್ತಿ ಇದ್ದ ಹಾಗೆ. ಯಾಕೆಂದರೆ ಅದೊಂದಿದ್ದರೆ ಮನೆಯವರ ಆರೋಗ್ಯವು ಚೆನ್ನಾಗಿರುತ್ತದೆ, ವಾತಾವರಣವು ಸಂತೋಷಕರವಾಗಿರುತ್ತದೆ. ಮನೆ ಸ್ವಚ್ಛಗೊಳಿಸಲು ವಿವಿಧ ರೀತಿಯ ರಾಸಾಯನಿಕ ಪದಾರ್ಥಗಳು ಮಾರುಕಟ್ಟೆಗಳಲ್ಲಿ ಲಭಿಸುತ್ತವೆ. ಆದರೆ ಅವುಗಳ ಬಳಕೆಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯಗಳು ಹೆಚ್ಚು. ಹಾಗಾಗಿ ರಾಸಾಯನಿಕ ವಸ್ತುಗಳನ್ನು ಆದಷ್ಟು ಕಡಿಮೆ ಬಳಕೆ ಮಾಡುವುದು ಉತ್ತಮ.

– ಜಿ.ಕೆ.

Advertisement

Udayavani is now on Telegram. Click here to join our channel and stay updated with the latest news.

Next