Advertisement

KPCC: ಸಂಘಟನೆ ಪಣ; ಗ್ಯಾರಂಟಿ ಯಶಸ್ಸಿನ ಮಂತ್ರ ಪಠಣ

10:10 PM Aug 13, 2023 | Team Udayavani |

ಬೆಂಗಳೂರು: ಕೆಪಿಸಿಸಿ ಸರ್ವಸದಸ್ಯರ ಸಭೆಗೆ ಕ್ಷಣಗಣನೆ ಆರಂಭವಾಗಿದ್ದು, ಸೋಮವಾರ (ಆ. 14) ನಡೆಯಲಿರುವ ಸಭೆಯಲ್ಲಿ ಚುನಾವಣೆಗೆ ಪಕ್ಷ ಸಂಘಟನೆ, ಗೃಹಲಕ್ಷ್ಮೀ ಸೇರಿದಂತೆ ಸರ್ಕಾರದ ಐದು ಗ್ಯಾರಂಟಿಗಳ ಯಶಸ್ಸಿನ ಮಂತ್ರ ಪಠಣ ಆಗುವ ನಿರೀಕ್ಷೆ ಇದೆ.

Advertisement

ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಮತ್ತು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದಿರಾಗಾಂಧಿ ಭವನದ “ಭಾರತ್‌ ಜೋಡೋ’ ಸಭಾಂಗಣದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಲೋಕಸಭೆ, ಜಿಲ್ಲಾ ಮತ್ತು ತಾಪಂ, ಬಿಬಿಎಂಪಿ ಚುನಾವಣೆ ಸಿದ್ಧತೆ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಅವುಗಳನ್ನು ಎದುರಿಸಲು ಮಾನಸಿಕವಾಗಿ ಸಜ್ಜುಗೊಳ್ಳುವುದರ ಜತೆಗೆ ಪಕ್ಷ ಸಂಘಟನೆ ಇನ್ನಷ್ಟು ಪರಿಣಾಮಕಾರಿಯಾಗಿ ಆಗಬೇಕು. ಅದಕ್ಕೆ ಪದಾಧಿಕಾರಿಗಳು ಒತ್ತುನೀಡಬೇಕು. ಸರ್ಕಾರ ನೀಡಿದ ಯೋಜನೆಗಳು ಜನರನ್ನು ತಲುಪಲು ಸೇತುವೆಗಳಾಗಿವೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಆ ಮೂಲಕ ತಳಮಟ್ಟದಲ್ಲಿ ಯುವಕರ ಪಡೆಗಳನ್ನು ತಯಾರು ಮಾಡಲು ಸೂಚಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಅದೇ ರೀತಿ, ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಹಲವು ಸುಳ್ಳು ಆರೋಪಗಳ ಅಬ್ಬರದ ನಡುವೆ ಗ್ಯಾರಂಟಿಗಳು ಮಂಕಾಗಬಾರದು. ಅಧಿಕಾರಕ್ಕೆ ಬಂದ ಅಲ್ಪಾವಧಿಯಲ್ಲೇ ಬಹುತೇಕ ಗ್ಯಾರಂಟಿಗಳಿಗೆ ಚಾಲನೆ ನೀಡಲಾಗಿದೆ. ಆ ಮೂಲಕ ಕಾಂಗ್ರೆಸ್‌ ನುಡಿದಂತೆ ನಡೆದಿದೆ. ಐದೂ ಯೋಜನೆಗಳ ಜತೆಗೆ ಈ ಸ್ಪಷ್ಟ ಸಂದೇಶವನ್ನು ಮನೆ-ಮನೆಗೆ ತಲುಪಿಸುವ ಕೆಲಸ ಪರಿಣಾಮಕಾರಿಯಾಗಿ ಆಗಬೇಕು. ಈ ನಿಟ್ಟಿನಲ್ಲಿ ಪಕ್ಷದ ರಾಜ್ಯ ಮತ್ತು ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ.
ಅದರಲ್ಲೂ ಆಗಸ್ಟ್‌ 27ರಂದು ಬೆಳಗಾವಿಯಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ “ಗೃಹಲಕ್ಷ್ಮೀ’ಗೆ ಚಾಲನೆ ದೊರೆಯಲಿದೆ. ಇದಕ್ಕೆ ಖುದ್ದು ಪ್ರಿಯಾಂಕ ಗಾಂಧಿ, ರಾಹುಲ್‌ ಗಾಂಧಿ ಸೇರಿದಂತೆ ಪಕ್ಷದ ರಾಷ್ಟ್ರೀಯ ನಾಯಕರು ಆಗಮಿಸಲಿದ್ದಾರೆ. ಇದರ ಭಾರಿ ಯಶಸ್ಸಿಗೆ ಸಿದ್ಧತೆ ಮಾಡಿಕೊಳ್ಳಬೇಕು. ಗ್ರಾಮ ಪಂಚಾಯ್ತಿ, ನಗರಸಭೆ, ಪುರಸಭೆ ಸೇರಿ ರಾಜ್ಯದಲ್ಲಿ 11 ಸಾವಿರ ಕಡೆ ಏಕಕಾಲಕ್ಕೆ ಯೋಜನೆಗೆ ಅಂದು ಚಾಲನೆ ದೊರೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಫ‌ಲಾನುಭವಿಗಳ ನೋಂದಣಿ ಮಾಡಿಸಬೇಕು ಎಂದು ಸದಸ್ಯರಿಗೆ ನಾಯಕರು ನಿರ್ದೇಶನ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗ್ಯಾರಂಟಿ ತಲುಪಿರುವ ಬಗ್ಗೆಯೂ “ಗ್ಯಾರಂಟಿ’!
ಚುನಾವಣೆ ಪೂರ್ವದಲ್ಲಿ ಮನೆ-ಮನೆಗೆ ಗ್ಯಾರಂಟಿ ಕಾರ್ಡ್‌ಗಳನ್ನು ತಲುಪಿಸುವ ಕೆಲಸವನ್ನು ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಯಶಸ್ವಿಯಾಗಿ ಪೂರೈಸಿದ್ದಾರೆ. ಈಗ ಅದರ ಮುಂದುವರಿದ ಭಾಗವಾಗಿ ಸೌಲಭ್ಯಗಳು ಮನೆ-ಮನೆಗೆ ತಲುಪಿರುವ ಬಗ್ಗೆ ಪಕ್ಷಕ್ಕೆ ಗ್ಯಾರಂಟಿ ನೀಡುವ ಕೆಲಸ ಅದೇ ಕಾರ್ಯಕರ್ತರಿಂದ ಆಗಬೇಕಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಸೂಚನೆ ನೀಡುವ ಸಾಧ್ಯತೆ ಇದೆ.

ಅಂದಹಾಗೆ, ಪಕ್ಷದ ಪದಾಧಿಕಾರಿಗಳ ಕೊನೆಯ ಸರ್ವಸದಸ್ಯರ ಸಭೆ ಇದಾಗಿದೆ. ಇದರ ಬೆನ್ನಲ್ಲೇ ಜಿಲ್ಲಾ ಘಟಕಗಳಲ್ಲೂ ಪದಾಧಿಕಾರಿಗಳ ಬದಲಾವಣೆ ಆಗಲಿದೆ. ಇದಕ್ಕೆ ಸಂಬಂಧಿಸಿದಂತೆಯೂ ಚರ್ಚೆ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next