Advertisement

ನಾಳಿನ ಬಂದ್‌ಯಶಸ್ವಿಗೆ ಸಂಘಟನೆಗಳ ಸಿದ್ಧತೆ

01:35 PM Sep 27, 2020 | Suhan S |

ದೊಡ್ಡಬಳ್ಳಾಪುರ: ರಾಜ್ಯದಲ್ಲಿ ರೈತ ಸಂಘಟನೆಗಳು ಕರೆ ನೀಡಿರುವ ಸೆ.28ರ ಬಂದ್‌ಗೆ ತಾಲೂಕಿನ ಕನ್ನಡಪರ ಸಂಘಟನೆಗಳು, ರೈತ, ಕಾರ್ಮಿಕ, ದಲಿತ ಸಂಘಟನೆಗಳ ಒಕ್ಕೂಟ ಬೆಂಬಲ ನೀಡಿದ್ದು ದೊಡ್ಡಬಳ್ಳಾಪುರ ಬಂದ್‌ ಯಶಸ್ವಿಗೆ ಮುಖಂಡರು ಮನವಿ ಮಾಡಿದರು.

Advertisement

ನಗರದಕನ್ನಡ ಜಾಗೃತ ಭವನದಲ್ಲಿ ನಡೆದ ರೈತ, ಕಾರ್ಮಿಕ, ದಲಿತ, ಕನ್ನಡಪರ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ್‌ ನಾಯಕ್‌, ಕರವೇ ಪ್ರವೀಣ್‌ ಕುಮಾರ್‌ ಶೆಟ್ಟಿ ಬಣದ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ ಮಾತನಾಡಿ, ಸೆ.28ರಂದು ಸಂಪೂರ್ಣ ಬಂದ್‌ ಆಚರಿಸಲಾಗುತ್ತಿದ್ದು ರೈತರು, ಕಾರ್ಮಿಕರು, ವರ್ತಕರು, ಉದ್ಯೋಗಸ್ಥರು, ನೇಕಾರರು ಮೊದಲಾಗಿ ಎಲ್ಲಾ ವರ್ಗದ ಜನರಿಗೆ ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ಅರಿವು ಮೂಡಿಸಿ ಬಂದ್‌ ಯಶಸ್ವಿಗೊಳಿಸಲಾಗುವುದು. ಈ ಕುರಿತು ಆಟೋ ಪ್ರಚಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ವಿರೋಧ: ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ, ಕನ್ನಡ ಜಾಗೃತ ಪರಿಷತ್ತಿನ ಕಾರ್ಯದರ್ಶಿ ಟಿ.ಎನ್‌ಪ್ರಭುದೇವ್‌ ಮಾತನಾಡಿ, ರೈತ ವಿರೋಧಿ ಕಾಯ್ದೆಗಳ ಜಾರಿ ಮೂಲಕ ರೈತರು ಕೃಷಿಯಿಂದ ತಾವಾಗಿಯೇ ವಿಮುಖರಾಗುವಂತೆ ಮಾಡಲಾಗುತ್ತಿದೆ. ವಿದ್ಯುತ್‌ ಕಂಪನಿಗಳನ್ನು ಸಂಪೂರ್ಣವಾಗಿ ಖಾಸಗಿ ಕಂಪನಿಗಳಿಗೆ ವಹಿಸುವ ಮೂಲಕ  ಕೃಷಿಗೆ ಉಚಿತ ವಿದ್ಯುತ್‌ ಪೂರೈಕೆ ನಿಲ್ಲಿಸಲು ಸರ್ಕಾರ ಸಿದ್ಧತೆಗಳನ್ನು ನಡೆಸಿದೆ. ಎಪಿಎಂಸಿ ನ್ಯೂನತೆ ಸರಿಪಡಿಸಿ, ರೈತರ ಹಿತ ಕಾಯುವ ಬದಲು, ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕಾರ್ಪೋರೇಟ್‌ ಕಂಪನಿಗಳಿಗೆ ಲಾಭ ಮಾಡಿಕೊಡಲು ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕಜಾರಿಗೆ ತರಲಾಗುತ್ತಿದೆ ಎಂದು ದೂರಿದರು.

ಕೇಂದ್ರ-ರಾಜ್ಯ ಸರ್ಕಾರಗಳ ರೈತ ವಿರೋಧಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ, ಹೋರಾಟ ಮಾಡುವುದು ಅನಿವಾರ್ಯ ಎಂದರು. ಸೆ.28ರಂದು ಬಂದ್‌: ಎಲ್ಲಾ ವರ್ಗದ ಜನ ಸೆ.28ರ ಬಂದ್‌ನಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು. ಅಂದು ಬೆಳಗ್ಗೆ 7 ಗಂಟೆಯಿಂದ ಬೈಕ್‌ ರ್ಯಾಲಿ ಮೂಲಕ ಬಂದ್‌ ಆಚರಿಸಲು ಮನವಿ ಮಾಡಲಾಗುವುದು. ಆ ನಂತರ ನೆಲದಾಂಜನೇಯಸ್ವಾಮಿ ದೇವಾಲಯದ ಡಾ.ರಾಜ್‌ಕುಮಾರ್‌ ವೃತ್ತದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಮುಖಂಡರ ಆಗ್ರಹ: ಕೇಂದ್ರ-ರಾಜ್ಯ ಸರ್ಕಾರಗಳು ಜಾರಿ ಮಾಡಲುಹೊರಟಿರುವ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಯಾವುದೇ ಕಾರಣಕ್ಕೂತರಬಾರದು ಎಂದು ವಿವಿಧ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ. ಅಲ್ಲದೇ, ವಿದ್ಯುತ್‌ ಖಾಸಗೀಕರಣ, ಕಾರ್ಮಿಕ ಕಾಯ್ದೆ ತಿದ್ದುಪಡಿ ಜಾರಿ ಮಾಡುವ ಕ್ರಮವನ್ನು ವಿರೋಧಿಸಿದ್ದು ಯಾವುದೇ ಕಾರಣಕ್ಕೂ ಮಸೂದೆ ಜಾರಿಯಾಗಬಾರದು ಎಂದು ಆಗ್ರಹಿಸಿದ್ದಾರೆ.

Advertisement

ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸತೀಶ್‌, ತಾಲೂಕು ಅಧ್ಯಕ್ಷ ಹನುಮೇಗೌಡ, ವಸಂತ್‌ ಕುಮಾರ್‌, ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ರಾಮಕೃಷ್ಣ, ಮುಖಂಡ ವಿಜಯ ಕುಮಾರ್‌, ಸಿಐಟಿಯು ಮುಖಂಡ ರೇಣುಕಾರಾಧ್ಯ,ನಗರಸಭೆ ಮಾಜಿ ಸದಸ್ಯ ಕೆಂಪರಾಜ್‌, ಕನ್ನಡ ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ, ರಾಜ್ಯ ರೈತ ತಾಲೂಕು ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸು.ನರಸಿಂಹಮೂರ್ತಿ, ಶಿವರಾಜ್‌ಕುಮಾರ್‌ ಸೇನಾ ಸಮಿತಿ ಅಧ್ಯಕ್ಷ ರಮೇಶ್‌,ದಸಂಸ ಜಿಲ್ಲಾ ಸಂಚಾಲಕ ರಾಜು ಸಣ್ಣಕ್ಕಿ, ಕರವೇ ತಾಲೂಕು ಗೌ.ಅಧ್ಯಕ್ಷ ಪು.ಮಹೇಶ್‌, ಅಗ್ನಿ ವೆಂಕಟೇಶ್‌, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಚರಣ್‌ ರಾಜ್‌ ಮತ್ತಿತರರಿದ್ದರು. ಇದೇ ವೇಳೆ ಶುಕ್ರವಾರ ನಿಧನರಾದ ಖ್ಯಾತ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next